»   » ಅಪ್ಪು ಮೂರನೇ ಇನ್ನಿಂಗ್ಸು ಜೋರು

ಅಪ್ಪು ಮೂರನೇ ಇನ್ನಿಂಗ್ಸು ಜೋರು

Posted By:
Subscribe to Filmibeat Kannada
  • ದಟ್ಸ್‌ಕನ್ನಡ ಬ್ಯೂರೋ
ಚಂದ್ರಬಾಬು ನಾಯ್ಡು ಅಲ್ಲಿ ಆಂಧ್ರದಲ್ಲಿ ಕೃಷ್ಣ ವಿರುದ್ಧ ತೋಳು ಮಡಿಸುತ್ತ ಜಯಲಲಿತಾ ಜೊತೆ ಜಲ ಕಾದಾಟದ ತಂತ್ರ ರೂಪಿಸುತ್ತಿದ್ದರೆ, ಗಾಂಧಿನಗರದಲ್ಲಿ ಆಂಧ್ರ- ಕರ್ನಾಟಕ ಭಾಯಿ ಭಾಯಿ ಎಂಬಂಥ ತಿಳಿನಗು. ಆಂಧ್ರದ ಅನೇಕ ತಂತ್ರಜ್ಞರು ಈಗ ಪುನೀತ್‌ ಅಭಿನಯದ ಮೂರನೇ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿ. ತಾರಾಬಳಗದ ಕೆಲವರನ್ನು ಬಿಟ್ಟರೆ ಇಡೀ ಟೀಂನಲ್ಲಿ ತೆಲುಗು ಬಿಡ್ಡರದ್ದೇ ದರಬಾರು. ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ.

ನಮ್ಮ ರಾಮು ಥರದ ತೆಲುಗಿನ ನಿರ್ಮಾಪಕ ಕೆ.ಎಸ್‌.ರಾಮರಾವ್‌ಗೆ ಅಪ್ಪು ತುಂಬಾ ಹಿಡಿಸಿಬಿಟ್ಟಿದ್ದಾರೆ. ಹೊಸ ಹುಡುಗರ ಪೈಕಿ ಈತ ಗೆಲ್ಲುವ ಕುದುರೆ ಅನ್ನೋದು ರಾಮರಾವ್‌ ಲೆಕ್ಕಾಚಾರ. ಅದಕ್ಕೇ ಅವರು ಕೋಟಿಗಟ್ಟಲೆ ಬಂಡವಾಳ ಹೊತ್ತು ಕಾವೇರಿ ನಾಡಿಗೆ ಬಂದಿರೋದು. ಒಂದೇ ನಡೆಯಲ್ಲಿ ಒಂದೇ ಚಿತ್ರಕತೆಯನ್ನು ತೆಲುಗು ಹಾಗೂ ಕನ್ನಡದಲ್ಲಿ ತೆಗೆಯುವುದು ಅವರ ವ್ಯಾಪಾರಿ ತಂತ್ರ. ತೆಲುಗಿನಲ್ಲಿ ಜೂನಿಯರ್‌ ಎಂಟಿಆರ್‌- ಕನ್ನಡದ ಹುಡುಗಿ ರಕ್ಷಿತಾ ಜೋಡಿ. ಕನ್ನಡದಲ್ಲಿ ಪುನೀತ್‌ ಜೊತೆಗೆ ಬಹುಭಾಷಾ ಬೆಡಗಿ ಅನಿತಾ ಮೋಡಿ. ತೆಲುಗು ಚಿತ್ರದ ಹೆಸರು ‘ಆಂಧ್ರವಾಲಾ’.

ಚಿತ್ರಕತೆ- ಕಥಾಪಾಕ ಪ್ರಕಾಂಡ ನಿರ್ದೇಶಕ ಪೂರಿ ಜಗನ್ನಾಥ್‌
ನಿರ್ದೇಶನ- ಜಗನ್ನಾಥ್‌ ಅಸಿಸ್ಟೆಂಟ್‌ ಆಗಿ ಪಳಗಿರುವ ಮೇವರ್‌ ರಮೇಶ್‌
ಸಂಗೀತ ನಿರ್ದೇಶನ- ಚಕ್ರಿ
ಛಾಯಾಗ್ರಹಣ- ವೆಂಕಟ್‌ ಆರ್‌. ಪ್ರಸಾದ್‌...
ಇವರೆಲ್ಲ ತೆಲುಗಿನ ಹೆಸರುವಾಸಿ ಕುಳಗಳು. ಚಿತ್ರದಲ್ಲಿ ಒಟ್ಟು ಆರು ಹಾಡುಗಳಿರುತ್ತವೆ. ಈ ಪೈಕಿ ಒಂದು ತೆಲುಗು ಹಾಗೂ ಕನ್ನಡ ಚಿತ್ರದಲ್ಲಿ ಕಾಮನ್ನು ಎನ್ನುತ್ತಾರೆ ರಾಮರಾವ್‌. ಒಂದು ವೇಳೆ ಅದು ‘ಕಂತೆಲುಗು’ ಗೀತೆಯಾದರೆ ಭಾಷಾಭಿಮಾನಿಗಳ ಪ್ರತಿಭಟನೆಗೆ ತೆರೆದುಕೊಳ್ಳಬೇಕಾಗುತ್ತೆ. ಇಂಗ್ಲಿಷ್‌ ಹಾಡಾದರೆ ಬಚಾವ್‌. ಕನ್ನಡದ ಚಿತ್ರಕ್ಕೆ ತೆಲುಗಿನ ತಂತ್ರಜ್ಞರ ಕೈಲಿ ಕೆಲಸ ಮಾಡಿಸಿದಂತೆ, ತೆಲುಗು ಚಿತ್ರಕ್ಕೆ ಕನ್ನಡದ ತಂತ್ರಜ್ಞರ ಕೈಲಿ ಕೆಲಸ ಮಾಡಿಸೋದು ರಾಮರಾವ್‌ ಬಯಕೆ.

ಕಳೆದ ವಾರ ಚಿತ್ರದ ಮುಹೂರ್ತ ನಡೆಯಿತು. ಡಾ.ರಾಜ್‌ ಹಾಗೂ ಮಕ್ಕಳ ಸಂಸಾರ ಯಥಾಪ್ರಕಾರ ಅಪ್ಪುಗೆ ಆಶೀರ್ವಾದ ಕೊಟ್ಟು, ಶುಭ ಕೋರಿತು. ಗಂಡನ ಮೂರನೇ ಚಿತ್ರದ ಶೂಟಿಂಗ್‌ ಸಂಭ್ರಮ ಹಂಚಿಕೊಳ್ಳೋಕೆ ಪುನೀತ್‌ ಹೆಂಡತಿ ಕೂಡ ಇದ್ದರು. ಆಂಧ್ರದಿಂದ ಜೂನಿಯರ್‌ ಎನ್‌ಟಿಆರ್‌ ಬಂದಿದ್ದರು. ನಾಯಕಿ ಅನಿತಾ ಇಂಗ್ಲಿಷ್‌ನಲ್ಲಿ ನಗುತ್ತಿದ್ದರು. ತೆಲುಗಿನಲ್ಲಿ ಅರ್ಧ ಡಜನ್‌ ಚಿತ್ರದಲ್ಲಿ ಅಭಿನಯಿಸಿರುವ ಅನಿತಾಗೆ, ಕುಚ್‌ ತೋ ಹೈ ಎಂಬ ಹಿಂದಿ ಚಿತ್ರದಲ್ಲೂ ನಟಿಸಿರುವ ಅನುಭವ ಇದೆ. ಮೆಗಾ ಧಾರಾವಾಹಿ ಮೂಲಕ ತೆರೆಗೆ ಪರಿಚಯಿಸಿದ ಏಕ್‌ತಾ ಕಪೂರ್‌ ಈಕೆಯ ಗಾಡ್‌ ಮದರ್ರು !

ಈಗಾಗಲೇ ಎರಡು ಹಾಡುಗಳ ಚಿತ್ರೀಕರಣ ಮುಗಿಸಿರುವ ಚಿತ್ರಕ್ಕೆ ಹೆಸರಿಡಲು ತೆರೆಮರೆಯಲ್ಲಿ ಮಂಥನ ನಡೆದಿದೆ. ಈ ಚಿತ್ರ ಪುನೀತ್‌ ಇಮೇಜನ್ನು ದುಪ್ಪಟ್ಟಾಗಿಸುತ್ತದೆ ಅನ್ನೋದು ರಾಮರಾವ್‌ ನಂಬಿಕೆ. ‘ನನ್ನದು ಫ್ರ್ಯಾಂಕ್‌ ಕ್ಯಾರೆಕ್ಟರ್‌. ಕಥೆ ಚೆನ್ನಾಗಿತ್ತು. ಟೀಂ ಚೆನ್ನಾಗಿತ್ತು. ಹೋಂ ಬ್ಯಾನರಲ್ಲೇ ಮೂರನೇ ಚಿತ್ರ ಮಾಡಬೇಕೆಂಬ ಅನೇಕರ ಆಸೆಯನ್ನು ಆ ಕಾರಣಕ್ಕೇ ಮೀರಬೇಕಾಯಿತು. ನನ್ನ ಇಮೇಜನ್ನು ಡಬ್ಬಲ್‌ ಮಾಡೋದು ನಿರ್ದೇಶಕರಿಗೆ ಬಿಟ್ಟ ಕೆಲಸ. ಒಟ್ಟಿನಲ್ಲಿ ಕಥೆಗೇ ನನ್ನ ಮೊದಲ ಪ್ರಿಫರೆನ್ಸ್‌. ಈ ಚಿತ್ರ ಕಾಮಿಡಿ ವಿತ್‌ ಥ್ರಿಲ್‌. ಕಥೆ- ಹೇಳೋಲ್ಲ, ಸಸ್ಪೆನ್ಸ್‌ ’ ಎಂದು ಪುನೀತ್‌ ನಕ್ಕರು.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada