»   » ವಾಣಿಜ್ಯಮಂಡಳಿ ಅಧ್ಯಕ್ಷರಾಗಿ ಗಂಗರಾಜು

ವಾಣಿಜ್ಯಮಂಡಳಿ ಅಧ್ಯಕ್ಷರಾಗಿ ಗಂಗರಾಜು

Posted By: Staff
Subscribe to Filmibeat Kannada

ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನೂತನ ಅಧ್ಯಕ್ಷರಾಗಿ ನಿರ್ಮಾಪಕ ಹಾಗೂ ವಿತರಕ ಎಚ್‌.ಡಿ. ಗಂಗರಾಜು ಆಯ್ಕೆಯಾಗಿದ್ದಾರೆ.
ಶನಿವಾರ ನಡೆದ ಮಂಡಳಿಯ ಚುನಾವಣೆ ತೀವ್ರ ಕುತೂಹಲ ಕೆರಳಿಸಿತ್ತು. ತಮ್ಮ ಪ್ರತಿಸ್ಪರ್ಧಿ ಬಸಂತ್‌ಕುಮಾರ್‌ರನ್ನು, 216 ಮತಗಳ ಅಂತರದಿಂದ ಸೋಲಿಸಿ ಅವರು ಆಯ್ಕೆಗೊಂಡಿದ್ದಾರೆ. ಮಂಡಳಿಯ ಉಪಾಧ್ಯಕ್ಷರಾಗಿ ಸಾ.ರಾ.ಗೋ ವಿಂದು, ವಿತರಕರ ವಲಯದಿಂದ ಜಾನಕಿ ರಾಮ್‌, ಪ್ರದರ್ಶಕರ ವಲಯದಿಂದ ಕೆ.ಎನ್‌.ವಾಸುದೇವಮೂರ್ತಿ,

ಕಾರ್ಯದರ್ಶಿಯಾಗಿ ಬಿ.ಎನ್‌. ಗಂಗಾಧರ್‌, ವಿ.ಎಚ್‌.ಸುರೇಶ್‌,ಬಿ.ಎಸ್‌.ನಾಗರಾಜ್‌ ಆಯ್ಕೆಗೊಂಡಿದ್ದಾರೆ.
ಕಾರ್ಯಕಾರಿ ಸಮಿತಿ : ನಿರ್ಮಾಪಕರ ವಲಯದಿಂದ ರಮೇಶ್‌ ಯಾದವ್‌, ರಾಮು, ಮುನಿರತ್ನ, ಜಗ್ಗೇಶ್‌, ಎನ್‌. ಕುಮಾರ್‌, ಟಿ.ಎಸ್‌.ನಾಗಾಭರಣ, ಎ. ಗಣೇಶ್‌,ಜೈಜಗದೀಶ್‌ ಆಯ್ಕೆಯಾಗಿದ್ದಾರೆ.

ವಿತರಕರ ವಲಯದಿಂದ ಕಾರ್ಯಕಾರಿ ಸಮಿತಿಗೆ ಡಿ.ಎಚ್‌.ಭಾಷಾ, ವಿ.ಕುಪ್ಪು ಸ್ವಾಮಿ, ಕೆ.ಎಸ್‌.ನಂದಕುಮಾರ್‌, ಪಿ.ನಾರಾಯಣ ರೆಡ್ಡಿ, ಕೆ.ವಿ.ವಿಜಯಕುಮಾರ್‌, ಪ್ರದರ್ಶಕರ ವಲಯದಿಂದ ಎಸ್‌.ಟಿ. ಆನಂದ್‌, ಬಿ.ಪಿ. ಅಶೋಕ್‌, ಎನ್‌.ಆರ್‌. ಚಂದ್ರಶೇಖರ್‌, ವಿ.ಹನುಮಂತರಾಯ, ಥಾಮಸ್‌ ಡಿಸೋಜಾ ಆಯ್ಕೆಗೊಂಡಿದ್ದಾರೆ.

ನಿರ್ಬಂಧ : ಏಳು ವಾರಗಳ ನಂತರ ಪರಭಾಷಾ ಚಿತ್ರಗಳನ್ನು ರಾಜ್ಯದಲ್ಲಿ ಬಿಡುಗಡೆಮಾಡುವ ನಿರ್ಧಾರ ದುರದೃಷ್ಟಕರ. ಈ ನಿರ್ಧಾರದಿಂದ ಚಿತ್ರೋದ್ಯಮದಲ್ಲಿ ಪ್ರದರ್ಶಕರು, ವಿತರಕರು ಹೆಚ್ಚಿನ ನಷ್ಟ ಅನುಭವಿಸುವಂತಾಗಿದೆ ಎಂದು ನೂತನ ಅಧ್ಯಕ್ಷ ಎಚ್‌.ಡಿ.ಗಂಗರಾಜು ತಿಳಿಸಿದ್ದಾರೆ.

ಸರಕಾರ ರಚಿಸಿರುವ ಕೆ.ಪಿ.ಪಾಂಡೆ ಅಧ್ಯಕ್ಷತೆಯ ಉನ್ನತ ಮಟ್ಟದ ಸಮಿತಿಯು ಪರಭಾಷಾ ಚಿತ್ರಗಳನ್ನು, ಏಳು ವಾರಗಳ ನಂತರ ಬಿಡುಗಡೆಗೊಳಿಸುವಂತೆ ಎಲ್ಲೂ ಸಹಾ ಹೇಳಿಲ್ಲ. ಹೀಗಾಗಿ ಇದನ್ನು ಸರಕಾರದ ಆದೇಶ ಎಂದು ಪರಿಗಣಿಸುವ ಅವಶ್ಯಕತೆಯಿಲ್ಲ ಎಂದು ನೂತನ ಅಧ್ಯಕ್ಷ ಎಚ್‌.ಡಿ.ಗಂಗರಾಜು ಅಭಿಪ್ರಾಯಪಟ್ಟಿದ್ದಾರೆ.

ಮತ್ತೊಂದು ಸಮಿತಿ : ಚಿತ್ರರಂಗದ ಬಿಕ್ಕಟ್ಟು ಬಗೆಹರಿಸಲು ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಭಕ್ತವತ್ಸಲಂ ಅಧ್ಯಕ್ಷತೆ ಯಲ್ಲಿ ಉಪಸಮಿತಿಯನ್ನು ಭಾನುವಾರ ನಡೆದ ವಾಣಿಜ್ಯ ಮಂಡಳಿ ಸಭೆಯಲ್ಲಿ ರಚಿಸಲಾಗಿದೆ. ಚಿತ್ರೋದ್ಯಮದ ಪ್ರಮುಖರಾದ ಕೆ.ಸಿ.ಎನ್‌.ಚಂದ್ರಶೇಖರ್‌, ಎಸ್‌.ರಮೇಶ್‌, ಸಾ.ರಾ.ಗೋವಿಂದು, ಲಕ್ಷಣ್‌ ಸಮಿತಿಯ ಇತರ ಸದಸ್ಯರಾಗಿದ್ದಾರೆ. ಸೆ.28 ರಂದು ಸಭೆ ಸೇರಿ ಸಮಸ್ಯೆಯ ಪರಿಹಾರೋಪಾಯಗಳನ್ನು ಚರ್ಚಿಸಲಿದ್ದಾರೆ.

ಅಕ್ಟೋಬರ್‌ 2 ರಂದು ಕನ್ನಡ ಚಿತ್ರೋದ್ಯಮದ ಮೂರು ವಲಯಗಳ ಗಣ್ಯರ ಸಭೆ ನಡೆಯಲಿದೆ. ಚಿತ್ರ ಬಿಡುಗಡೆ ಯಾಗಿ, ನಾಲ್ಕು ವರ್ಷಗಳ ನಂತರ ಕಿರುತೆರೆಗೆ ಹಕ್ಕುಗಳನ್ನು ನೀಡುವ ಮಂಡಳಿಯ ಹಿಂದಿನ ಕಾರ್ಯಕಾರಿ ಸಭೆ ನಿರ್ಣಯಕ್ಕೆ ಬದ್ಧರಾಗಿರುವುದಾಗಿ ಗಂಗರಾಜು ತಿಳಿಸಿದ್ದಾರೆ.

ಕುತೂಹಲ : ಕನ್ನಡ ಚಿತ್ರೋದ್ಯಮದಲ್ಲಿನ ಸಮಸ್ಯೆ, ಈ ಚುನಾವಣೆಯ ಬೆನ್ನಲ್ಲಿ ಮುಂದೂಡಲ್ಪಟ್ಟಿತ್ತು. ಪರಭಾಷಾ ಚಿತ್ರಗಳ ವಿತರಕರೂ ಆಗಿರುವ ಗಂಗರಾಜು, ಈಗ ಮಂಡಳಿಯ ಅಧ್ಯಕ್ಷರಾದ ಬೆನ್ನಲ್ಲಿಯೇ ತಮ್ಮ ಧೋರಣೆಯನ್ನು ಪ್ರಕಟಿಸಿದ್ದಾರೆ. ಅಲ್ಲದೇ ಕರ್ನಾಟಕ ಚಲನ ಚಿತ್ರಪ್ರದರ್ಶಕರ ಮಹಾ ಮಂಡಲದೊಂದಿಗೆ ನಟ ಅಂಬರೀಷ್‌ ನಡೆಸಿ ದ್ದ ಸಂಧಾನ ಫಲಕಾರಿಯಾಗಿಲ್ಲ. ಅಕ್ಟೋಬರ್‌ 1 ರಿಂದ ರಾಜ್ಯದಲ್ಲಿ ಹೊಸ ಪರಭಾಷಾ ಚಿತ್ರಗಳ ಪ್ರದರ್ಶನಕ್ಕೆ ಸಿದ್ಧತೆಗಳು ನಡೆದಿವೆ. ರಾಜ್ಯದಲ್ಲಿ ಪರಭಾಷಾ ಚಿತ್ರಗಳ ಬಿಡುಗಡೆ ವಿವಾದ ಮುಂದೆ ಯಾವ ರೂಪ ಪಡೆಯಲಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.(ಇನ್ಫೋ ವಾರ್ತೆ)

English summary
H.D. Gangaraju elected as Karnataka Film Chamber of Commerce president

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada