»   » ಅಂಬರೀಷ್‌ ಈಗ ಸಿನಿಮಾದಲ್ಲೂ ಬೆಟ್ಟಪ್ಪ !

ಅಂಬರೀಷ್‌ ಈಗ ಸಿನಿಮಾದಲ್ಲೂ ಬೆಟ್ಟಪ್ಪ !

Posted By: Staff
Subscribe to Filmibeat Kannada

ಆಕಾರದಲ್ಲಿ ಬೆಟ್ಟದಂತಿರುವ ಅಂಬರೀಷ್‌ ಈಗ ಚಿತ್ರದಲ್ಲೂ ಬೆಟ್ಟಪ್ಪ ! ಪಾಳೆಗಾರ, ಗೌಡ್ರು, ಅಣ್ಣಾವ್ರು ಹೀಗೆ ಏನ್‌ ವೇಷ ಹಾಕಿದರು ಪ್ರೇಕ್ಷಕರು ಚಿತ್ರಮಂದಿರದವರೆಗೆ ಬಂದದ್ದು ಅಷ್ಟಕ್ಕಷ್ಟೇ. ಮಂಡ್ಯದ ಒಂದಷ್ಟು ಹೈಕಳು ನೋಡಿದ್ದು ಬಿಟ್ಟರೆ ರಾಜ್ಯಾದ್ಯಂತ ಅಂಬಿ ಸಿನಿಮಾ ಜಯಭೇರಿ ಬಾರಿಸಿ ಯಾವಕಾಲವಾಯಿತು.

ರಾಜಕೀಯದಲ್ಲಿ ಸದ್ಯಕ್ಕೆ ಪಾಸಾಗಿ, ಚಿತ್ರರಂಗದಲ್ಲಿ ಫೇಲಾಗುತ್ತಿರುವ(ಪರಭಾಷಾ ಚಿತ್ರಗಳ ಬಿಕ್ಕಟ್ಟಿಗೆ ಸಂಬಂಧಿಸಿದಂತೆಯೂ ಅಂಬಿ ಸೂತ್ರ ಮುರಿದು ಬಿದ್ದಿದೆ) ಅಂಬರೀಷಣ್ಣನಿಗೆ ಆ ಬಗ್ಗೆ ಬೇಸರವಿಲ್ಲ. ಚಿತ್ರಗಳ ಪಾಸುಫೇಲಿನ ವಿಚಾರ ಬಿಡಿ. ಅಂಬಿ ಅಂದ್ರೆ ಎಲ್ಲರಿಗೂ ಪ್ರಾಣ. ಅಂತಹ ತೂಕ ಅವರಿಗೆ ಇದ್ದೇ ಇದೆ. ಮುಂದೆಯೂ ಇರುತ್ತೆ!

ಸಿನಿಮಾ ಬದುಕಿನಲ್ಲಿ ನೂರು ಚಿತ್ರಗಳಲ್ಲಿ ನಾಯಕನಟನಾಗಿ ನಟಿಸುವುದು ಒಂದು ಸಾಧನೆಯೇ ಸರಿ. ಆದರೆ ನಮ್ಮ ಅಂಬರೀಷ್‌ ಡಬಲ್‌ ಸೆಂಚುರಿ ಕ್ರಾಸ್‌ ಮಾಡಿದ್ದಾರೆ. ಮೊನ್ನೆಯಷ್ಟೇ ಅವರ ಇನ್ನೂರು ಚಿತ್ರಗಳ ಸಂಭ್ರಮದ ಆಚರಣೆ ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಜರುಗಿತು. ಈ ಕಾರ್ಯಕ್ರಮದಲ್ಲಿ ಎಸ್ಪಿ ಬಾಲು ಎದೆತುಂಬಿ ಹಾಡಿ ಹೋದರು.

ಇನ್ನೂರಾಯ್ತು , ಮುಂದೇನಪ್ಪ ?

ಇದೋ 'ಬೆಟ್ಟಪ್ಪ" ಎನ್ನುತ್ತಿದ್ದಾರೆ ಅಂಬರೀಷ್‌. ಆರ್‌.ಎಸ್‌.ಗೌಡ ನಿರ್ಮಾಣದ ಬೆಟ್ಟಪ್ಪ ಚಿತ್ರದಲ್ಲಿ ಅಂಬರೀಷ್‌ಗೆ ಬೆಟ್ಟದಂಥ ಪಾತ್ರ. ಇದವರ 201 ನೇ ಚಿತ್ರ. ಅಂಬರೀಷ್‌ರ 200ನೇ ಚಿತ್ರ 'ಗೌಡ್ರು" ನಿರ್ದೇಶಿಸಿದ್ದ ಎಸ್‌.ಮಹೇಂದರ್‌ ಬೆಟ್ಟಪ್ಪ ಚಿತ್ರಕ್ಕೂ ನಿರ್ದೇಶಕರಾಗಿರುವುದು ಒಂದು ವಿಶೇಷ.

ಬೆಟ್ಟಪ್ಪ ತಮಿಳಿನ ಮುತ್ತಾಳ್‌ ಮರ್ಯಾದೈ ಚಿತ್ರದ ರಿಮೇಕ್‌. ಈ ಚಿತ್ರದಲ್ಲಿ ನ ಶಿವಾಜಿ ಗಣೇಶನ್‌ ರೋಲ್‌ಗೆ ವಿಷ್ಣುವರ್ಧನ್‌ರನ್ನು ಬಳಸಿಕೊಳ್ಳಬೇಕೆಂಬ ಐಡಿಯಾ ನಿರ್ಮಾಪಕ ಆರ್‌.ಎಸ್‌.ಗೌಡರ ತಲೆಯಲ್ಲಿತ್ತು. ಆದರೆ ನನಗಿಂತ ಈ ಪಾತ್ರಕ್ಕೆ ನನ್ನ ಕುಚುಕು ಫ್ರೆಂಡ್‌ ಅಂಬರೀಷೇ ಸೂಕ್ತ ಎಂದು ವಿಷ್ಣು ಸೂಚಿಸಿದರಂತೆ. ಹೀಗಾಗಿ ವಿಷ್ಣುವರ್ಧನ್‌ರ ಮತ್ತೊಂದು ಮೀಸೆ ಮುಖ ನೋಡೋ ಕಷ್ಟ ತಪ್ಪಿದೆ! ಚಿತ್ರದ ಮತ್ತೊಂದು ಆಕರ್ಷಣೆ ಸುದೀಪು. ಅಂಬಿ ಹಾಗೂ ಸುದೀಪು ಜೊತೆಯಾಗಿ ನಟಿಸುತ್ತಿರುವ ಮೊದಲ ಚಿತ್ರವಿದು.

ಕೆ.ಕಲ್ಯಾಣ್‌ ಸಾಹಿತ್ಯ ಮತ್ತು ಸಂಗೀತದ ಹೊಣೆಹೊತ್ತಿದ್ದಾರೆ. ನಿಖಿತಾ, ಅಶೋಕ್‌, ಸುಂದರ್‌ರಾಜ್‌ ಪ್ರಮುಖ ಪಾತ್ರದಲ್ಲಿದ್ದಾರೆ. ಬಹಳ ದಿನಗಳ ನಂತರ ಭಾರತಿ ವಿಷ್ಣುವರ್ಧನ್‌ ತೆರೆಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.

English summary
Ambarish acts in a new movie, 'Bettappa'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada