twitter
    For Quick Alerts
    ALLOW NOTIFICATIONS  
    For Daily Alerts

    ಈ ಶುಕ್ರವಾರ ಎರಡು ಸಂಭ್ರಮಗಳು!

    By Staff
    |

    ರಾಜ್‌ ಕುಟುಂಬದ ಸದಸ್ಯರು, ಆಪ್ತರು, ನೆಂಟರು ಮತ್ತು ಇಷ್ಟ ಮಿತ್ರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ರತಿಮೆಯನ್ನು ಬಿಗಿದಪ್ಪಿಕೊಂಡ ಪಾರ್ವತಮ್ಮ ರಾಜ್‌ಕುಮಾರ್‌ ಗಳಗಳನೆ ಅತ್ತುಬಿಟ್ಟರು...

    • ಶಾಮ್‌
    ಬೆಂಗಳೂರು : ಬಹು ವರ್ಷದ ಎರಡು ಕನಸುಗಳು ಇಂದು ನನಸಾಯಿತು. ಒಂದು : ‘ಎರಡು ಕನಸು’ ಚಿತ್ರದ ನಾಯಕ, ನಿಮ್ಮೆಲ್ಲರ ಕಣ್ಮಣಿ ರಾಜಣ್ಣನ ಪ್ರತಿಮೆಯ ಅನಾವರಣ. ಇನ್ನೊಂದು : ಮೂವತ್ತೆಂಟು ವರ್ಷಗಳ ಕಾಲ ಗಜಗರ್ಭದಲ್ಲಿ ಸುರುಳಿಯಾಗಿದ್ದ ಪುಟ್ಟಣ್ಣ ಕಣಗಾಲರ ‘ಸಾವಿರ ಮೆಟ್ಟಿಲು’ ಚಿತ್ರಕ್ಕೆ ಮುಕ್ತಿ.

    ‘ಸಾವಿರ ಮೆಟ್ಟಿಲು’ ಚಿತ್ರ ಪ್ರದರ್ಶಿಸುತ್ತಿರುವ ಚಿತ್ರಮಂದಿರಗಳ ಪಟ್ಟಿ ಮತ್ತು ವಿವರ ಹೀಗಿವೆ:

    ಬೆಂಗಳೂರು : ಕೈಲಾಸ್‌ (ದಿನ 4 ಆಟಗಳು), ನಂದ ( ದಿನವಹಿ 3 ಆಟಗಳು ) ಮೈಸೂರು : ಒಲಂಪಿಯಾ (4 ಆಟಗಳು), ದಾವಣಗೆರೆ : ಗೀತಾಂಜಲಿ. ಚಿತ್ರದ ಇನ್ನಿತರ ವಿವರಗಳಿಗೆ ಇಲ್ಲಿ ಕ್ಲಿಕ್‌ ಮಾಡಿ:

    ಬೆಂಗಳೂರಿನ ಶಿವಾನಂದ ವೃತ್ತದ ಬಳಿಯಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಆವರಣದಲ್ಲಿ ಶುಕ್ರವಾರ ಬೆಳಗ್ಗೆ ಡಾ. ರಾಜ್‌ಕುಮಾರ್‌ ಅವರ ಪುತ್ಥಳಿಯನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅನಾವರಣಗೊಳಿಸಿದರು. ಸರಳ , ಸದ್ಭಾವನೆಗೆ ಇನ್ನೊಂದು ಪ್ರತೀಕವಾಗಿದ್ದ ಈ ಸಮಾರಂಭದಲ್ಲಿ ಚಿತ್ರರಂಗದ ಗಣ್ಯರು, ಕಲಾವಿದರು, ತಂತ್ರಜ್ಞರು ಪಾಲ್ಗೊಂಡು ಪುತ್ಥಳಿಗೆ ಸ್ವಾಗತ ಕೋರಿದರು.

    ಸಮಾರಂಭದಲ್ಲಿ ಭಾಗವಹಿಸಿದ್ದ ಸಾಹಸ ಸಿಂಹ ವಿಷ್ಣುವರ್ಧನ್‌ ಭಾವೋದ್ವೇಗಕ್ಕೆ ಒಳಗಾದವರಂತೆ ಮಾತನಾಡಿದರು. ರಾಜ್‌ಕುಮಾರ್‌ ಅವರನ್ನು ಭಾವಪೂರ್ಣವಾಗಿ ನೆನೆಪಿಸಿಕೊಳ್ಳುವಾಗ ಅವರ ಕಣ್ಣಂಚಿನಲ್ಲಿ ಎರಡು ಹನಿ ಒಸರಿತು. ರಾಜ್‌ ಅವರ ಕಲಾಪ್ರೌಢಿಮೆ, ಸರಳತೆ ಮತ್ತು ಕನ್ನಡ ಚಿತ್ರರಂಗಕ್ಕೆ ಅವರು ನೀಡಿದ ಕಾಣಿಕೆಯನ್ನು ವಿಷ್ಣು ಮನಸಾರೆ ಕೊಂಡಾಡಿದರು.

    ಇದೇ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು ಕನ್ನಡ ಚಿತ್ರರಂಗ ಎದುರಿಸುತ್ತಿರುವ ಬಿಕ್ಕಟ್ಟುಗಳ ಬಗ್ಗೆ ಪ್ರಸ್ತಾಪಿಸಿದರು. ಚಿತ್ರರಂಗಕ್ಕೆ ಸಂಬಂಧಪಟ್ಟವರೆಲ್ಲರೂ, ಅಂದರೆ, ಪ್ರದರ್ಶಕರು, ನಿರ್ದೇಶಕರು, ಕಲಾವಿದರು, ನಿರ್ಮಾಪಕರು, ತಂತ್ರಜ್ಞರು ಕಲೆತು ಚರ್ಚಿಸಿದರೆ ಎಂತಹ ಸಮಸ್ಯೆಗೂ ಪರಿಹಾರ ಸಿಗುತ್ತದೆ ಎಂದು ಸೂಚ್ಯವಾಗಿ ಹೇಳಿದರು. ತಮ್ಮ ಸರಕಾರ ಚಿತ್ರೋದ್ಯಮದ ಅಭಿವೃದ್ಧಿಗೆ ಅಗತ್ಯ ಎಲ್ಲ ಕ್ರಮಗಳನ್ನೂ ಕೈಗೊಳ್ಳುತ್ತದೆ ಎಂದು ಭರವಸೆ ಕೊಟ್ಟರು.

    ರಾಜ್‌ಕುಮಾರ್‌ ಅವರ ಪ್ರತಿಮೆ ಸ್ಥಾಪಿಸುವುದಕ್ಕೆ ಮುಂದಾದ ಮಂಡಳಿಯ ಉಮೇದು ಮತ್ತು ಶ್ರಮವನ್ನು ಕುಮಾರ್‌ ಮೆಚ್ಚಿದರು. ಇದೇ ವೇಳೆ, ಆವರಣದಲ್ಲಿ ನಿರ್ಮಿಸಲಾಗಿರುವ ಮಂಡಳಿಯ ವಿಸ್ತರಣೆಗೊಂಡ ಕಟ್ಟಡದ ಔಪಚಾರಿಕ ಪ್ರಾರಂಭೋತ್ಸವವನ್ನು ಅವರು ನೆರವೇರಿಸಿದರು.

    ರಾಜ್‌ ಕುಟುಂಬದ ಸದಸ್ಯರು, ಆಪ್ತರು, ನೆಂಟರು ಮತ್ತು ಇಷ್ಟ ಮಿತ್ರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ರತಿಮೆಯನ್ನು ಬಿಗಿದಪ್ಪಿಕೊಂಡ ಪಾರ್ವತಮ್ಮ ರಾಜ್‌ಕುಮಾರ್‌ ಗಳಗಳನೆ ಅತ್ತುಬಿಟ್ಟರು. ಭಾವುಕತೆ ಬಾಚಿತಬ್ಬಿಕೊಂಡದ್ದರಿಂದ ಮಾತುಗಳೇ ಹೊರಡಲಾರದಾದವು.

    ಮಂಡಳಿಯಿಂದ ಇದೀಗ ನಿರ್ಗಮಿಸುತ್ತಿರುವ ಅಧ್ಯಕ್ಷ ಗಂಗರಾಜು ಅವರು ಪ್ರತಿಮೆ ಮತ್ತು ಅದರ ಅನಾವರಣದ ವಿವರಗಳನ್ನು ನೀಡಿದರು. ಈ ಯೋಜನೆಗೆ ಕಲೆಹಾಕಿದ ಎಲ್ಲ ಹಣವನ್ನೂ ಸಮರ್ಪಕವಾಗಿ ವಿನಿಯೋಗಿಸಲಾಗಿದೆ ಎಂದು ನುಡಿದರು.

    ನಾಳೆ ಅ.28ರಂದು ಮಂಡಳಿಯ ಚುನಾವಣೆಗಳು ನಡೆಯುತ್ತವೆ. ಕಣದಲ್ಲಿರುವ ಸ್ಪರ್ಧಿಗಳು ಹಾಗೂ ಅವರ ಬೆಂಬಲಿಗರು ಈ ಸಮಾರಂಭದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಮಂಡಳಿಯ ಅಧ್ಯಕ್ಷರಾಗಿ ತಲ್ಲಂ ನಂಜುಂಡ ಶೆಟ್ಟಿ ಮತ್ತು ಉಪಾಧ್ಯಕ್ಷರಾಗಿ ಸಾ.ರಾ.ಗೋವಿಂದ್‌ ಅವರು ಅವಿರೋಧವಾಗಿ ಆಯ್ಕೆಗೊಂಡಿರುವುದನ್ನು ಇಲ್ಲಿ ಸ್ಮರಿಸಬಹುದು.

    Friday, April 19, 2024, 12:20
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X