twitter
    For Quick Alerts
    ALLOW NOTIFICATIONS  
    For Daily Alerts

    'ವಾಯುಪುತ್ರ'ನಾಗಿ ಕನ್ನಡಕ್ಕೊಬ್ಬ ಚಿರಂಜೀವಿ!

    By Super
    |

    Ambarish and Chiranjeevi Sarja
    ಹಳೆ ಬೇರು ಹೊಸ ಚಿಗುರು ಎಂಬಂತೆ ಸ್ಯಾಂಡಲ್‌ವುಡ್‌ ಹೊಸಹೊಸ ಪ್ರತಿಭೆಗಳನ್ನು ಆರ್ಕರ್ಷಿಸುತ್ತಲೇ ಇದೆ. ಹಾಗೆ ಬಂದವರಲ್ಲಿ ಚಿಗುರಿದ ಪ್ರತಿಭೆಗಳೆಷ್ಟೋ, ಬೇರೆ ಕಡೆ ಜಿಗಿದವರೆಷ್ಟೋ. ಹರಿದು ಬಂದ ಹೊಸ ನೀರಿನ ಜತೆ ಹಳೆ ನೀರು ಕಂಗೊಳಿಸುತ್ತಿದೆ. ಈಗ 'ವಾಯುಪುತ್ರ"ನಾಗಿ ಅರ್ಜುನ್ ಸರ್ಜಾರ ಸೋದರ ಅಳಿಯ ಚಿರಂಜೀವಿ ಸರ್ಜಾ ಹೊಸ ನೀರಾಗಿ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸುತ್ತಿದ್ದಾರೆ.

    'ಸಿಂಹದ ಮರಿ ಸೈನ್ಯ' ಮುಂತಾದ ಚಿತ್ರಗಳಲ್ಲಿ ಬಾಲನಟನಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ ಅರ್ಜುನ್ ಸರ್ಜಾ ತಮಿಳು ಚಿತ್ರರಂಗದಲ್ಲಿ ನೆಲೆ ಕಂಡುಕೊಂಡರು. ಈಗ ಅವರ ತಂಗಿಯ ಮಗ ಚಿರಂಜೀವಿ ಸರ್ಜಾ 'ವಾಯುಪುತ್ರ" ಚಿತ್ರದಲ್ಲಿ ಅಭಿನಯಿಸುವ ಮೂಲಕ ನಾಯಕ ನಟನಾಗಿ ಕನ್ನಡ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ.

    ಮಹಾಭಾರತ ಯುದ್ಧದಲ್ಲಿ ಅರ್ಜುನನ ಶಕ್ತಿಯ ದ್ಯೋತಕವಾಗಿ ನಿಂತಿದ್ದು ಚಿರಂಜೀವಿ. ಈಗ ಸಿನೆಮಾರಂಗದಲ್ಲಿ ಚಿರಂಜೀವಿಗೆ ಬೆಂಬಲವಾಗಿ ಚಿತ್ರದ ನಿರ್ಮಾಪಕ ಅರ್ಜುನ ನಿಂತಿದ್ದಾರೆ. ಚಿತ್ರಕತೆ, ನಿರ್ದೇಶನವನ್ನು ಕಿಶೋರ್ ಸರ್ಜಾ ಕೈಗೆತ್ತಿಕೊಂಡಿದ್ದಾರೆ. ಚಿತ್ರದ ನಾಯಕಿಯಾಗಿ ಮುಂಬೈ ಬೆಡಗಿ, 2006ರ ಮಿಸ್ ಇಂಡಿಯಾದಲ್ಲಿ ಸ್ಪರ್ಧಿಸಿದ್ದ ತಾನ್ಯಾ ವಕೀಲ್ ನಟಿಸಲಿದ್ದಾರೆ. ಪ್ರಸಿದ್ಧ ಸಂಗೀತ ನಿರ್ದೇಶಕ ಗಂಗೈ ಅಮರನ್‌ರ ಮಗನಾದ ಪ್ರೇಮ್ ಅಮರನ್‌ರನ್ನು ಸಂಗೀತ ನಿರ್ದೇಶಕರಾಗಿ ಚಿತ್ರಕ್ಕೆ ಪರಿಚಯಿಸಲಾಗುತ್ತಿದೆ. ನಕ್ಕುನಗಿಸಲು ಮುಖ್ಯಮಂತ್ರಿ ಚಂದ್ರು, ಸಾಧುಕೋಕಿಲಾರ ತಾರಾಗಣವಿದೆ.

    ಡಿ.15ರಿಂದ ಪ್ರಾರಂಭವಾಗುವ ಚಿತ್ರೀಕರಣ 80 ದಿನಗಳ ಕಾಲ ನಡೆಯಲಿದೆ. ಬೆಂಗಳೂರು, ಮಂಗಳೂರು ಸೇರಿದಂತೆ ವಿದೇಶಗಳಲ್ಲೂ ಚಿತ್ರೀಕರಣ ಮಾಡಲಾಗುತ್ತಿದೆ. ವಾಯು ಅಂದರೆ 'ಬಿರುಗಾಳಿ". ಮಗ ಅಪ್ಪನಷ್ಟೇ ಶಕ್ತಿವಂತ. ವಾಯು ಪಾತ್ರದಲ್ಲಿ ಅಂಬರೀಷ್, ಪುತ್ರನಾಗಿ ಚಿರಂಜೀವಿ ಸರ್ಜಾ ನಟಿಸುತ್ತಿದ್ದಾರೆ ಎಂದು ಕಿಶೋರ್ ಸರ್ಜಾ ಸುದ್ದಿಗಾರರಿಗೆ ತಿಳಿಸಿದರು.

    ಮೊದಲ ಬಾರಿಗೆ ಕ್ಯಾಮೆರಾ ಎದುರಿಸುತ್ತಿರುವ ಚಿರಂಜೀವಿ ಸರ್ಜಾ ಮಾತನಾಡುತ್ತಾ, ಸೋದರ ಮಾವ ಅರ್ಜುನ್ ಸರ್ಜಾ ಮತ್ತು ಕಿಶೋರ್ ಸರ್ಜಾ ನನ್ನ ಮಾರ್ಗದರ್ಶಕರು. ಅರ್ಜುನ್ ಸರ್ಜಾರ ಅಭಿನಯವನ್ನು ಗಮನಿಸಿದ್ದೇನೆ. ಅವರ ಜತೆ ಇದ್ದು ಬಹಳಷ್ಟು ಕಲಿತಿದ್ದೇನೆ. ಅಭಿನಯ ಅಷ್ಟು ಕಷ್ಟವಾಗಲ್ಲ ಅನ್ನಿಸುತ್ತೆ ಎಂದು ತಮ್ಮ ಆಶಾಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ಸೋದರಮಾವನ ಪಡಿಯಚ್ಚಿನಂತಿರುವ ಚಿರಂಜೀವಿ ಅಭಿನಯದಲ್ಲೂ ಅವರಿಗೆ ಸರಿಸಾಟಿಯಾಗಿ ನಿಲ್ಲುತ್ತಾರೋ ನೋಡಬೇಕು.

    ಅಂದ ಹಾಗೆ ಚಿರಂಜೀವಿ ಪದವೀಧರ. ಮುಂಬೈನ ಅಮಿತ್ ಕಿಶೋರ್ ಶಾಲೆಯಲ್ಲಿ ಅಭಿನಯ ಶಿಕ್ಷಣವನ್ನೂ ಪಡೆದಿದ್ದಾರೆ. ಅಭಿನಯದಲ್ಲಿ ಮತ್ತಷ್ಟು ಹಿಡಿತ ಸಾಧಿಸಲು ಮುಂಬೈನಲ್ಲಿ ಸ್ಟಂಟ್ ಕಲಿತೆ. ಭಾವನಾತ್ಮಕ ಸನ್ನಿವೇಶಗಳಲ್ಲಿ ಅಭಿನಯಿಸಲು ಬೇಕಾದ ತರಬೇತಿಯನ್ನೂ ಪಡೆದಿದ್ದೇನೆ ಎಂದು ತಮ್ಮ ನಟನೆಯ ಹಿಂದಿನ ಅನುಭವಗಳನ್ನು ಚಿರಂಜೀವಿ ಸರ್ಜಾ ಹೇಳಿಕೊಂಡರು.

    ಚಿತ್ರದ ನಿರ್ದೇಶಕರಾದ ಕಿಶೋರ್ ಸರ್ಜಾ, ಚಿರಂಜೀವಿಗೊಂದು ಒಳ್ಳೆಯ ಪಾತ್ರ ರೂಪಿಸಿದ್ದೇನೆ. ಹಾಗಾಗಿ ನನ್ನ ಮುಂದೆ ದೊಡ್ಡ ಸವಾಲೇ ಇದೆ. ಅವನಿಂದ ಯಾವ ರೀತಿಯ ಅಭಿನಯ ತೆಗೆಸಬೇಕು ಎಂದು ನನಗೆ ಚೆನ್ನಾಗಿ ಗೊತ್ತು. ಅವನು ಕ್ಯಾಮೆರಾ ಎದುರಿಸುವುದಕ್ಕೂ ಮುಂಚೆ ಮನೆಯಲ್ಲೇ ಅವನಿಗೆ ತರಬೇತಿ ಕೊಟ್ಟಿದ್ದೇನೆ ಎಂದರು.

    ಚಿತ್ರದ ಮೂಹೂರ್ತ ಸಮಾರಂಭವು ವಿಂಡ್ಸರ್ ಮ್ಯಾನರ್ ಹೋಟೆಲ್‌ನಲ್ಲಿ ಸೋಮವಾರ(ನ.26) ನಡೆಯಿತು. ಕಾರ್ಯಕ್ರಮದಲ್ಲಿ ಪಾರ್ವತಮ್ಮ ರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಡಾ. ವಿಷ್ಣುವರ್ಧನ್, ಅಂಬರೀಶ್, ಜಯಂತಿ, ಕ್ರೇಜಿ ಸ್ಟಾರ್ ರವಿಚಂದ್ರನ್, ಗಣೇಶ್ ಮುಂತಾದವರು ಭಾಗವಹಿಸಿ ಚಿರಂಜೀವಿಗೆ ಶುಭಕೋರಿದರು.

    (ದಟ್ಸ್‌ಕನ್ನಡ ಸಿನಿಮಾ)

    English summary
    Action hero Arjun Sarja's new film Vaayuputhra was launched amidst fan fare in the Windsor Manor Hotel where the big stars of the Kannada film industry had assembled to wish and bless the new star Chiranjevi Sarja who is being launched with this film. Chiranjeevi Sarja is the nephew of Arjun Sarja. Vaayuputhra is being directed by Arjun's younger brother Kishor Sarja.
    Tuesday, June 5, 2012, 17:00
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X