»   » ಇದೆಲ್ಲವೂ ‘ಮಲ್ಲ’ಪ್ಪನ ದಯೆ !

ಇದೆಲ್ಲವೂ ‘ಮಲ್ಲ’ಪ್ಪನ ದಯೆ !

Subscribe to Filmibeat Kannada
  • ಪಮ್ಮಿ
‘ಏಕಾಂಗಿ’ ಚಿತ್ರದ ಸೋಲಿನಿಂದ ವಿಷಣ್ಣರಾಗಿ ಏಕಾಂತವಾಸಿಯಾಗಿದ್ದ ರವಿಚಂದ್ರನ್‌ ಮುಖದಲ್ಲಿ ಉತ್ಸಾಹದ ಗೆರೆಗಳು ಮತ್ತೆ ಕಾಣಿಸುತ್ತಿವೆ. ಎಲ್ಲವೂ ‘ಮಲ್ಲ’ಪ್ಪನ ದಯೆ !

ರವಿಚಂದ್ರನ್‌ ಅವರ ಉತ್ಸಾಹಕ್ಕೆ ಒಂದಷ್ಟು ಕಾರಣಗಳೂ ಇವೆ. ಅವರೀಗ ಕತ್ತರಿ ಹಾಕುವುದನ್ನು ಕಲಿತಿದ್ದಾರೆ. ಅರ್ಥಾತ್‌ ಸಂಕಲನದ ಒಳಗುಟ್ಟು ಅರ್ಥಮಾಡಿಕೊಂಡಿದ್ದಾರಂತೆ. ಈ ಮುನ್ನವೇ ಎಡಿಟಿಂಗ್‌ ಕಲಿತಿದ್ದರೆ ‘ಏಕಾಂಗಿ’ ಇನ್ನಷ್ಟು ಚೆನ್ನಾಗಿ ಬರುತ್ತಿತ್ತೇನೊ ಎಂದು ರವಿ ಹೇಳುತ್ತಾರೆ. ಹೊಸದಾಗಿ ಕಲಿತಿರುವ ಕತ್ತರಿ ವಿದ್ಯೆಯನ್ನು ರವಿಚಂದ್ರನ್‌ ‘ಮಲ್ಲ’ ಚಿತ್ರದಲ್ಲಿ ಬಳಸುತ್ತಿದ್ದಾರೆ. ಅದು ಪ್ರಯೋಗಶೀಲತೆಯ ಖುಷಿ.

ರವಿಚಂದ್ರನ್‌ರ ಖುಷಿಯ ಮತ್ತೊಂದು ಕಾರಣ, ‘ಮಲ್ಲ’ ಚಿತ್ರ. ರವಿಚಂದ್ರನ್‌ ನೀಳಕೇಶಿಯಾಗಿ ಕಾಣಿಸಿಕೊಂಡಿರುವ ಈ ಚಿತ್ರ ಮತ್ತೊಂದು ‘ರಣಧೀರ’ ಆದರೂ ಆಗಬಹುದು ಎನ್ನುವ ಆಸೆ ಅವರಿಗಿದೆ. ಏಕೆಂದರೆ, ‘ಮಲ್ಲ’ ಚಿತ್ರದ ಹಾಡುಗಳು ಆ ಮಟ್ಟಿಗಿವೆ ಎಂದು ರವಿ ಬೆನ್ನು ಚಪ್ಪರಿಸಿಕೊಳ್ಳುತ್ತಾರೆ. ಕ್ಯಾಸೆಟ್‌ ವ್ಯಾಪಾರ ಜೋರಾಗಿದೆ. ಇದೇ ವೇಗ ಮುಂದುವರೆದಲ್ಲಿ ‘ಮಲ್ಲ’ ಕ್ಯಾಸೆಟ್‌ ಹೊಸದೊಂದು ವಿಕ್ರಮ ಸೃಷ್ಟಿಸಿದರೂ ಸೃಷ್ಟಿಸೀತು. ಕ್ಯಾಸೆಟ್‌ನ ಯಶಸ್ಸಿನಿಂದಾಗಿ ಚಿತ್ರ ಗೆಲ್ಲುವುದು ಈಗಾಗಲೇ ಪ್ರತಿಶತ 60ರಷ್ಟು ಖಾತ್ರಿಯಾಗಿದೆ ಎಂದು ರವಿಚಂದ್ರನ್‌ ಹೇಳುತ್ತಾರೆ.

ಮಲ್ಲ ಚಿತ್ರದ ನಾಯಕಿ ಶ್ರೀಮತಿ ಪ್ರಿಯಾಂಕ ಉಪೇಂದ್ರ. ಸಂಕ್ರಾಂತಿ ವೇಳೆಗೆ ‘ಮಲ್ಲ’ ಚಿತ್ರ ತೆರೆ ಕಾಣುತ್ತದಂತೆ. ಆ ವೇಳೆಗೆ ಉಪ್ಪಿ-ಪಿಂಕಿ ಹನಿಮೂನ್‌ ಮುನಿಸಿಕೊಂಡು ಗಾಂಧಿನಗರಕ್ಕೆ ವಾಪಸ್ಸಾಗಿರುತ್ತಾರೆ. ಪ್ರಿಯಾಂಕ ಅವರು ಪ್ರಸ್ತುತ ಶ್ರೀಮತಿ ಆಗಿರುವ ಪರಿಣಾಮ ‘ಮಲ್ಲ’ನಿಗೆ ಪ್ಲಸ್ಸಾಗುತ್ತೋ ಮೈನಸ್ಸಾಗುತ್ತೋ ಅನ್ನುವ ಲೆಕ್ಕಾಚಾರದ ಕುರಿತು ರವಿಚಂದ್ರನ್‌ ತಲೆ ಕೆಡಿಸಿಕೊಂಡಿಲ್ಲ . ಪ್ರಿಯಾಂಕ ಚಿತ್ರದುದ್ದಕ್ಕೂ ಗ್ಲಾಮರಸ್ಸಾಗಿ ಕಾಣಿಸಿಕೊಂಡಿದ್ದಾರೆ; ಆ ಗ್ಲಾಮರ್ರು ಈಗಾಗಲೇ ಬಿಡುಗಡೆಯಾಗಿರುವ ಪೋಸ್ಟರ್‌ಗಳಲ್ಲಿ ರಾರಾಜಿಸುತ್ತಿದೆ. ಆ ಕಾರಣದಿಂದಾಗಿ ಪ್ರೇಕ್ಷಕ ಕುಮಾರಿ ಅಥವಾ ಶ್ರೀಮತಿಯ ಕುರಿತು ತಲೆ ಕೆಡಿಸಿಕೊಳ್ಳುವುದಿಲ್ಲ ಎನ್ನುವುದು ಇನ್ನೊಂದು ಲೆಕ್ಕಾಚಾರ.

ರವಿಚಂದ್ರನ್‌ಗೆ ‘ಮಲ್ಲ’ ಚಿತ್ರದ ಕುರಿತು ಮತ್ತೊಂದು ಖುಷಿಯೂ ಇದೆ. ಅದು ಮರಿಮಲ್ಲಪ್ಪನ ಕುರಿತಾದ್ದು . ಮೂರನೇ ಕ್ಲಾಸಿನಲ್ಲಿ ಕಲಿಯುತ್ತಿರುವ ರವಿಪುತ್ರ- ವಿಕ್ರಂ ‘ಮಲ್ಲ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾನೆ. ಚೆನ್ನಾಗಿ ಅಭಿನಯಿಸಿದ್ದಾನೆ ಕಣ್ರೀ ಎಂದು ರವಿ ಮಗನಿಗೆ ಸರ್ಟಿಫಿಕೇಟ್‌ ನೀಡುತ್ತಾರೆ.

‘ಮಲ್ಲ’ ಗೆಲ್ಲಬೇಕು: ರವಿಚಂದ್ರನ್‌ ಉತ್ಸಾಹ ಉಳಿಯಲಿಕ್ಕಾದರೂ ಈ ಚಿತ್ರ ಗೆಲ್ಲಬೇಕು. ಶಿವರಾತ್ರಿ ಹೊತ್ತಿಗೆ ಫಲಿತಾಂಶ ಪಕ್ಕಾ ಆಗಿರುತ್ತದೆ. ಅದು ಒಣ ಜಾಗರಣೆ ಆಗದಿರಲಿ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada