For Quick Alerts
  ALLOW NOTIFICATIONS  
  For Daily Alerts

  ‘ಹೀಗೆಲ್ಲ ಕಾಡೋದು ಸರಿಯೇನೋ ಮಾದೇಸಾ’

  By Staff
  |
  ಹೌದು ಮಿಸ್ಟರ್‌. ತಿಂಗಳ ಹಿಂದಿನ ಮಾತು. ಅವತ್ತು ಸಮಾರಂಭವಿತ್ತು. ವೇದಿಕೆಯ ಮೇಲೆ ನೀವಿದ್ದಿರಿ. ವೇದಿಕೆಗೆ ಬಂದಳು. ಆಕೆ ಒಬ್ಬ ಲೆಕ್ಚರರ್‌. ‘ಎಕ್ಸ್‌ಕ್ಯೂಸ್‌ ಮಿ, ಎರಡೇ ನಿಮಿಷ’ ಎನ್ನುತ್ತಲೇ ಮಾತು ಶುರು ಮಾಡಿದ ಆಕೆ ಹೇಳಿದಳು: ‘ನನ್ನ ಮಗ ಎಷ್ಟೋ ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿದ್ದ. ಅವನಿಗಾಗಿ ಮಾಡದ ಪೂಜೆಯಿರಲಿಲ್ಲ. ಕಟ್ಟದ ಹರಕೆಯಿರಲಿಲ್ಲ. ಎರಡು ತಿಂಗಳ ಹಿಂದೆ ಅವನು ಅದೆಲ್ಲೋ ‘ಜೋಗಿ’ ಸಿನಿಮಾ ನೋಡಿದನಂತೆ. ಆವತ್ತೇ ಮನೆಗೆ ಬಂದ. ಈಗ ಜತೆಗಿದ್ದಾನೆ. ಪ್ರೇಮ್‌ ನನ್ನ ಪಾಲಿಗೆ ದೇವರಾಗಿ ಬಂದಿದ್ದಾರೆ. ಅವರಿಗೆ ಸಾವಿರ ನಮಸ್ಕಾರ...’ ಆಕೆಯ ಮಾತು ಮುಗಿಯುವುದರೊಳಗೆ ಅಲೆಯಲೆಯಾಗಿ ತೇಲಿಬಂತು -‘ಪ್ರೀತಿ ಏಕೆ ಭೂಮಿ ಮೇಲಿದೆ... ’.

  ಉದಯ್‌ ಜಾದೂಗಾರ್‌ ಒಂದೇ ಮಾತಲ್ಲಿ ಹೇಳಿದ್ರು- ‘ಜೋಗೀನಾ? ಅದು ಮಿಸ್ಸಿಂಗ್‌ ಸ್ಟೋರಿ ಕಣ್ರಿ. ಒಬ್ಬರನ್ನು ಒಬ್ಬರು ಹುಡುಕ್ತಾ ತಪ್ಪಿಕೊಳ್ತಾರಲ್ಲ -ಅದು ಸೂಪರ್ಬ್‌! ಅಲ್ಲೇ ಇದ್ದ ಇನ್ನೊಬ್ಬರು-‘ಅದು ಸೆಂಟಿಮೆಂಟ್‌ ಸ್ಟೋರಿ ಸ್ವಾಮೀ. ಕಡೆಗೂ ತಾಯಿ-ಮಗ ಒಂದಾಗೋದಿಲ್ಲ ನೋಡಿ.... ಅದು ನೆನಪಾದ್ರೆ ಸಾಕು, ಕಣ್ಣೀರು ಬರ್ತದೆ’ ಅಂದರು. ಮಚ್ಚು-ಮುಗ್ಧತೆ-ಮಮತೆ ಅಂದರು.

  ಒಬ್ಬಳಂತೂ ‘ಜೋಗಿ’ ಬಗ್ಗೆ ಮಾತಾಡ್ತಿದೀರಾ? ಫಿಲಂನಲ್ಲಿ ತೋರಿಸ್ತಾರಲ್ಲ-ಅಷ್ಟೇ ಪ್ರೀತಿಯಿಂದ ಪ್ರೇಮ್‌ ತನ್ನ ಅಮ್ಮನನ್ನೂ ನೋಡ್ಕೋತಾರೋ? ನಿಮ್ಗೆ ಗೊತ್ತೇನ್ರೀ? ಐ ಯಾಮ್‌ ಫಾಲ್‌ ಇನ್‌ ಲವ್‌ ವಿತ್‌ ಪ್ರೇಮ್‌ ಅಂದೇ ಬಿಟ್ಟಳು! ಮತ್ತೊಬ್ಬರು ನಿಂತ ನಿಲುವಿನಲ್ಲೇ ‘ಬೇಡುವೆನು ವರವನ್ನು ಕೊಡು ತಾಯಿ ಜನ್ಮವನು... ’ ಹಾಡಿಯೇ ಬಿಟ್ಟರು . ಅರೆ, ಒಂದು ಸಿನಿಮಾ ಒಬ್ಬೊಬ್ಬರನ್ನು ಒಂದೊಂದು ಬಗೆಯಲಿ ಕಾಡಿತಾ ಅಂದುಕೊಂಡಾಗಲೇ ಇನ್ಯಾರೋ ಹೇಳಿದರು: The Feel Never Ends!

  ಡಿಯರ್‌ ಪ್ರೇಮ್‌, ಈ ಎರಡೂ ಪ್ರಸಂಗಗಳನ್ನು ಅಂಗೈಲಿ ಹಿಡಿದುಕೊಂಡಿದ್ದಾಗಲೇ -ಇಪ್ಪತ್ತೈದು ದಿನಗಳ ಹಿಂದೆ ‘ಜೋಗಿ’ ವಿಜಯೋತ್ಸವ ರದ್ದಾಯಿತು. ನಿನ್ನೆ-ಮತ್ತೆ ಮಹದಾಸೆಯಿಂದ ನಡೆದು ಬಂದರೆ-ಆ ಜನಜಾತ್ರೆ ಕಂಡೇ ಭಯವಾಯಿತು. ಈ ಮಧ್ಯೆಯೇ ಹಲವರು ‘ಪ್ರೇಮ್‌’ ಮನೆ ಎಲ್ಲಿದೇರೀ? ಅಂದರು. ‘ಎಲ್ಲೋ ಜೋಗಪ್ಪ ನಿನ್ನ ಅರಮನೆ’ ಹಾಡೇ ಆ ಪ್ರಶ್ನೆಗೆ ಉತ್ತರವಾಯಿತು! ಯಾರ್ಯಾರನ್ನೋ ಹಿಡಿದು ಕಡೆಗೂ ನಿಮ್ಮ ಮೊಬೈಲ್‌ ನಂಬರ್‌ ‘ಸಂಪಾದಿಸಿ’ ಫೋನು ಮಾಡಿದರೆ-‘ನೀವು ಕರೆ ಮಾಡಿರುವ ಚಂದಾದಾರರು ಸ್ವಿಚ್‌ ಆಫ್‌ ಮಾಡಿದ್ದಾರೆ...’

  ಹೌದು. ‘ಹೀಗೆಲ್ಲ ಕಾಡೋದು ಸರಿಯೇನೋ ಮಾದೇಸಾ?’ ಎಂದು ನಿಮ್ಮನ್ನು ಕೆಣಕಬೇಕು ಅನಿಸಿದ್ದು, ಒಂದು ಅಮರಾಮಧುರ ಪತ್ರದೊಂದಿಗೆ ಕಾಡಬೇಕು ಅನಿಸಿದ್ದು ಆಗಲೇ...

  ***

  ಪ್ರೇಮ್‌, ಮೂರು-ಮೂರೇ ಮೂರು ಸಿನಿಮಾಗಳ ಮೂಲಕ ನೀವು ಬೆಂಗಳೂರಲ್ಲಿ ಮಾತ್ರವಲ್ಲ -ಇಡೀ ಕರ್ನಾಟಕದಲ್ಲೇ ‘ವರ್ಲ್ಡ್‌ ಫೇಮಸ್‌’ ಆಗಿದೀರಿ! ಒಂದೊಂದು ಸಿನಿಮಾದಲ್ಲಿ ಒಬ್ಬೊಬ್ಬರಿಗೆ ‘ಲೈಫ್‌’ ಕೊಡುವ ಮೂಲಕ ಗಾಡ್‌ಫಾದರ್‌ : ಜೂನಿಯರ್‌ ಪುಟ್ಟಣ್ಣ ಕಣಗಾಲ್‌ ಅನಿಸಿಕೊಂಡಿದ್ದೀರಿ. ವಿಪರೀತ ಅಂತಾರಲ್ಲ-ಆಪಾಟಿ ಪಬ್ಲಿಸಿಟಿ ಪಡ್ಕೊಂಡಿದೀರಿ. ಒಂದು, ಇನ್ನೊಂದು, ಮತ್ತೊಂದು ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಕೋಡು ಮೂಡಿಸಿದ್ದೀರಿ. ಗಾಂಧಿನಗರದಲ್ಲಿ ಪ್ರೇಮ್‌ ಪರ್ವ ಶುರುಮಾಡಿದ್ದೀರಿ. ಸಾಕಲ್ವ? ನಿಮ್ಮನ್ನ ಮೆಚ್ಚಲಿಕ್ಕೆ ಇಷ್ಟು ಸಾಕಲ್ವ ಪ್ರೇಮ್‌?

  ಇಲ್ಲ ಮಾರಾಯ. ಇದು ಹೊಗಳಿಕೆಯ ಮಾತಲ್ಲ. ಸಕ್ಸಸ್‌ ನಿಮ್ಮ ಕೈ ಹಿಡಿದಿದೆ. ಅದೃಷ್ಟ ಹೆಗಲೇರಿದೆ. ಜತೆಗೇ ಸಿನಿಮಾದ ಎಕನಾಮಿಕ್ಸು ಅರ್ಥ ಆಗಿಬಿಟ್ಟಿದೆ. ಎಲ್ರೂ ಮಸಾಲೆ ಸಿನಿಮಾ ಮಾಡ್ತಾರೆ ನಿಜ. ಆದ್ರೆ ಆದ್ರೆ ಚಟಾಕು ಪ್ರೀತಿ, ಅರೆಪಾವು ಸಿಡಿಮಿಡಿ, ಹಿಡಿ ಅನುಮಾನ, ಒಂದಿಷ್ಟು ಸಂಕೋಚ, ಇನ್ನಷ್ಟು ಸಲ್ಲಾಪದ ಐಟಂಗಳನ್ನು ಹಾಕಿ ಒಂದೊಳ್ಳೇ ಸಿನಿಮಾ ಮಾಡೋದು ಹೇಗೇಂತ-ಹೇಳಿ ಪ್ರೇಮ್‌, ಎಲ್ಲಿ, ಅದೆಲ್ಲಿ ಕಲಿತ್ರೀ ನೀವು? ಇವತ್ತು ನಿಮ್ಮ ಮಧುರ ಸಾಹಿತ್ಯಕ್ಕೆ ಹಾಡಿನ ಮಾಧುರ್ಯಕ್ಕೆ ಒಂದಿಡೀ ತಲೆಮಾರಿನ ಜನ ಕುಣೀತಿರೋದು ಕಂಡರೆ ಬೆರಗಾಗುತ್ತೆ. ಅಚ್ಚರಿಯಾಗುತ್ತೆ.

  ಹೌದಲ್ವ ಪ್ರೇಮ್‌? ನೀವು ಮೂರು ಸಿನಿಮಾದಲ್ಲೂ ತಾಯಿ ಸೆಂಟಿಮೆಂಟ್‌ಗೇ ಗಂಟು ಬಿದ್ದಿದೀರ. ಒಂದೆಳೆ ಕಥೇ ಇಟ್ಕೊಂಡು ಅದಕ್ಕೆ ಮಸಾಲೆ ಮಿಕ್ಸ್‌ ಮಾಡಿ, ಐಟಂ ಸಾಂಗ್‌ನ ಒಗ್ಗರಣೆ ಹಾಕಿ ಗೆದ್ದು ಬಿಟ್ಟಿದೀರ. ಇಷ್ಟಕ್ಕೇ ಅಬ್ಬಬ್ಬಬ್ಬಬ್ಬಾ ಅನ್ನುವಂಥ ಪಕ್ಕದ ಮನೆ ಹುಡುಗನ ಥರಾ ಕಾಣಿಸೋ ನೀವು -ಶುದ್ಧ ಅಹಂಕಾರಿ ಎಂಬ ಆರೋಪ ಕೇಳಿ ಬಂದಾಗ ಕೂಡ ತೆಪ್ಪಗೆ ಉಳಿದಿದೀರ. ಹೋಗ್ಲಿ, ‘ಜೋಗಿ’ ಸಿನಿಮಾ ನೋಡಿದ ನೂರೆಂಟು ಹುಡುಗೀರು- ‘ಪ್ರೇಮಜ್ವರ’ಕ್ಕೆ ತುತ್ತಾಗಿ ಪ್ರೇಮ್‌, ಪ್ರೇಮ್‌ ಅಂತ ಜಪ ಮಾಡ್ತಾ ಇದ್ರೂ ಫೋನಿಗೆ ಸಿಗ್ದೇ ತಪ್ಪಿಸಿಕೊಳ್ತಾ ಇದೀರ. ಯಾಕ್ರೀ? ಚೆಂದುಳ್ಳಿ ಹುಡುಗೀರ್ನ ಕಂಡ್ರೆ ಹೆದರಿಕೆ-ಗಿದರಿಕೆ ಏನಾದ್ರೂ....? ಮಾತಾಡ್ರೀ....

  ***

  ಸ್ವಾಮೀ, ತಪ್ಪು ತಿಳೀಬೇಡಿ. ನೀವು ‘ಜೋಗಿ’ಯಂಥ ಒಳ್ಳೇ ಫಿಲ್ಮ್‌ ಕೊಟ್ಟಿದೀರ. ಸರಿ. ರೌಡಿಜಂ ಬಿಡಿ ಅಂತ ಸಂದೇಶ ಹೇಳಿದೀರ. ಅದೂ ಸರಿ. ಆದ್ರೆ ಆ ಸಂದೇಶಕ್ಕಿಂತ ‘ಹೊಡಿ ಮಗ ಹೊಡಿಮಗ’ ಹಾಡೇ ಫೇಮಸ್‌ ಆಗೋ ಹಾಗೆ ನೋಡ್ಕೊಂಡಿದೀರ!! ಹೊಡೆದವನೇ ಧೀರ, ಅವನೇ ಶೂರ ಅಂತ ತೋರ್ಸಿದೀರ! ಹೀಗಿರೋವಾಗ ರೌಡಿಜಂ ನಿಲ್ಲೋದಾದ್ರೂ ಹ್ಯಂಗೆ ಶಿವಾ?

  ಹೌದು ಸಾರ್‌. ನಿಮಗೆ ಕೇಳಬೇಕಿರೋ ಪ್ರಶ್ನೆಗಳ ಪಟ್ಟಿ ದೊಡ್ಡದಿದೆ. ಹೇಳಿ : ನಿರ್ದೇಶಕ ಆಗಿ ವರ್ಲ್ಡ್‌ ಫೇಮಸ್‌ ಆಗಿದ್ರೂ ‘ಹೀರೊ ಆಗಬೇಕು ಅನ್ನೋ ದರ್ದು ನಿಮಗ್ಯಾಕೆ? ಮಣಿರತ್ನಂ ಥರದ ನಿರ್ದೇಶಕ ಕ್ಯಾಮರಾದ ಹಿಂದಿದ್ದೇ ಮೆರೆದದ್ದು ಕಂಡ ಮೇಲೂ, ಉಪೇಂದ್ರ ಹೀರೋ ಆಗಿ ಕ್ರಿಯೇಟಿವಿಟಿ ಕಳಕೊಂಡದ್ದು ನೋಡಿದ ಮೇಲೂ; ರವಿಚಂದ್ರನ್‌ ಸೈಕಲ್‌ ಹೊಡೀತಿರೋದು ಕಂಡಮೇಲೂ ‘ಹೀರೊ ಆಗೋದೇ ಸೈ ಅಂತ ನೀವು ರಚ್ಚೆ ಹಿಡಿದಿರೋದು ಯಾಕೆ? ನಿಮ್ಮಷ್ಟೇ ಪ್ರತಿಭಾವಂತರನ್ನು ನೀವು ಸಹಿಸೋದಿಲ್ವಂತಲ್ಲ, ಯಾಕೆ? ಯಾರ ಮಾತನ್ನೂ ಕೇಳೋದೇ ಇಲ್ವಂತಲ್ಲ, ಅದ್ಯಾಕೆ? ಇಲ್ಲ, ಇಲ್ಲ. ನಾನು ಯಾರನ್ನೂ ಲವ್‌ ಮಾಡ್ತಾ ಇಲ್ಲ ಅನ್ನೋ ನೀವು-ಹೆಸರಿನ ಪಕ್ಕ-ಲವ್‌ ಸಿಂಬಲ್‌ ಇಟ್ಕಂಡಿದೀರಲ್ಲ-ಯಾಕೆ?

  ಕೂಸೇ, ಅದೇ ದೊಡ್ಡ ಪ್ರೀತಿಯಿಂದಲೇ ಕೇಳ್ತಿದೀನಿ. ನಮ್ಮೆಲ್ಲ ಬದುಕಲ್ಲಿ ಒಂದೇ ಒಂದ್ಸಲ ರಜನಿಕಾಂತ್‌ ಜತೆ, ಚಾನ್ಸು ಸಿಕ್ಕಿದ್ರೆ ರಾಜ್ಕುಮಾರ್‌ ಜತೆ, ಜಾಕ್‌ಪಾಟ್‌ ಹೊಡೆದ್ರೆ ಅಮಿತಾಭ್‌ ಜತೆ ಮಾತಾಡಬೇಕು ಅಂತ ಆಸೆ. ಅಂಥ ಎಲ್ಲ ಛಾನ್ಸ್‌ಗಳನ್ನೂ ‘ಜೋಗಿ’ಮೂಲಕ ಹೊಡ್ಕೊಂಡ ಭೂಪ ನೀನು. ಹೇಳಪ್ಪಾ, ರಜನೀಕಾಂತ್‌ ಬಂದು ಕೈ ಕುಲುಕಿದಾಗ ಏನನ್ನಿಸ್ತು? ಅಣ್ಣಾವ್ರು ತಬ್ಕೊಂಡು ಮುತ್ತಿಟ್ಟಾಗ ಹೇಗನ್ನಿಸ್ತು? ದಶಕದ ಹಿಂದೆ ನಿನ್ನನ್ನು ದುಡಿಸಿಕೊಂಡವರು ಇವತ್ತು ಕೈ ಮುಗಿದು ನಿಂತಾಗ -ಏನೇನೆಲ್ಲ ನೆನಪಾಯ್ತು? ಪ್ರೀಸ್‌ ಮಾತಾಡಿ ಪ್ರೇಮ್‌...

  ಹೌದ್ರೀ, ನಿಮ್ಮ ಮೇಲೆ ಹುಡುಗೀರಿಗೆ ಪ್ರೇಮವಿದೆ. ಹುಡುಗಿರಿಗೆ ದೊಡ್ಡ ಪ್ರೀತಿಯಿದೆ. ಅದೇ ನೆಪದಿಂದ ಎಲ್ರೂ ಹೇಳ್ತಿದಾರೆ- ನಮ್ಮ ಪ್ರೇಮ್‌ಗೆ ಹೀರೋ ಫ್ರೇಮ್‌ ಬೇಡ. ಡೈರೆಕ್ಟರ್‌ ಫ್ರೇಮೇ ಇರ್ಲಿ.... ಈ ಮಾತು ಕೇಳ್ದೇ ಇದ್ರೆ ಬ್ಯಾಡ ಬಿಡಿ. ಆದ್ರೆ ಪ್ಲೀಸ್‌ ಮಿಸ್‌ ಮಾಡದೆ ಈ ಪ್ರಶ್ನೆಗೆ ಉತ್ತರ ಹೇಳಿ -ಪ್ರೀತಿ ಏಕೆ ಭೂಮಿ ಮೇಲಿದೇೕ ?

  ಯಾಕ್ರೀ?

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X