»   » ಬೆಂಗಳೂರಿನಲ್ಲಿ ರಜನಿ ಸಿನಿಮಾ ‘ಶಿವಾಜಿ’ ಗುಟ್ಟಾಗಿ ಚಿತ್ರೀಕರಣ!

ಬೆಂಗಳೂರಿನಲ್ಲಿ ರಜನಿ ಸಿನಿಮಾ ‘ಶಿವಾಜಿ’ ಗುಟ್ಟಾಗಿ ಚಿತ್ರೀಕರಣ!

Posted By:
Subscribe to Filmibeat Kannada


ನಗರದ ಎಂ.ಎಸ್‌. ರಾಮಯ್ಯ ಆಸ್ಪತ್ರೆಯಲ್ಲಿ ಹಾಕಲಾಗಿರುವ 50 ಲಕ್ಷದ ಭವ್ಯ ಸೆಟ್‌ನಲ್ಲಿ ವಾರದಿಂದ ಚಿತ್ರೀಕರಣ. ಪತ್ರಕರ್ತರಿಗೆ ಮಾತ್ರ ನೋ ಎಂಟ್ರಿ.

ರಜನಿಕಾಂತ್‌ ಬೆಂಗಳೂರಿನಲ್ಲಿ ವೇಷ ಬದಲಿಸಿಕೊಂಡು ಸುತ್ತಾಡುತ್ತಾರಂತೆ ಎಂಬುದು ಸುದ್ದಿಯಾಗಿತ್ತು. ರಜನಿ ಬದುಕಿನ ಬಹುದಿನದ ಗುಟ್ಟು, ಪತ್ರಿಕೆಯಾಂದರ ಮೂಲಕ ರಟ್ಟಾಗಿತ್ತು. ಈ ಸಿಟ್ಟಿಗೋ ಏನೋ, ರಜನಿ ಪತ್ರಕರ್ತರನ್ನು ದೂರವಿಟ್ಟಿದ್ದಾರೆ. ಗುಟ್ಟಾಗಿ ಬೆಂಗಳೂರಿನಲ್ಲಿ ನಡೆಯುತ್ತಿರುವ ‘ಶಿವಾಜಿ’ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.

ನಗರದ ಎಂ.ಎಸ್‌.ರಾಮಯ್ಯ ಆಸ್ಪತ್ರೆಯಲ್ಲಿ ಕಳೆದ ಒಂದು ವಾರದಿಂದ, ಚಿತ್ರೀಕರಣ ಸದ್ದಿಲ್ಲದೇ ನಡೆಯುತ್ತಿದೆ. ಮುಂದಿನ 4-5ದಿನ ಚಿತ್ರೀಕರಣ ಮುಂದುವರೆಯಲಿದೆ. ಪತ್ರಕರ್ತರು ಮತ್ತು ಪತ್ರಿಕಾ ಛಾಯಾಗ್ರಾಹಕರು ಚಿತ್ರೀಕರಣದ ಸ್ಥಳಕ್ಕೆ ಬರಬಾರದು ಎಂಬ ರಜನಿ ಮಾತಿಗೆ, ಅಲ್ಲಿ ಆದ್ಯತೆ. ಪ್ರವೇಶದ ಮಾತೇ ಇಲ್ಲ.

ಹಿಂದೆ ಇದೇ ಆಸ್ಪತ್ರೆಯಲ್ಲಿ ಚಿತ್ರೀಕರಣ ನಡೆಸಿದ ‘ಶಿವಾಜಿ’ ತಂಡ ನಂತರ, ಕೋಲಾರಕ್ಕೆ ತೆರಳಿತ್ತು. ಈಗ ಚಿತ್ರದ ಕ್ಲೈಮ್ಯಾಕ್ಸ್‌ಗೆ ರಾಮಯ್ಯ ಆಸ್ಪತ್ರೆಯ ಮೇಲ್ಭಾಗವನ್ನು ಬಳಸಿಕೊಳ್ಳಲಾಗಿದೆ. ಅಲ್ಲಿ 40-50ಲಕ್ಷದ ಸೆಟ್‌ಗಳನ್ನು ಹಾಕಲಾಗಿದೆ ಎಂದು ಮೂಲಗಳು ಹೇಳಿವೆ.

ರಜನಿಕಾಂತ್‌, ಚಿತ್ರದ ಕ್ಲೈಮ್ಯಾಕ್ಸ್‌ಗಾಗಿ ತಲೆ ಬೋಳಿಸಿಕೊಂಡಿದ್ದಾರೆ. ನಿರ್ದೇಶಕ ಶಂಕರ್‌ ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರಂತೆ. ಸಿನಿಮಾದ ದೊಡ್ಡ ಕ್ಯಾಮೆರಾದಲ್ಲಿ ದೇಹಸಿರಿಯನ್ನು ಹೆಗ್ಗಿಲ್ಲದೇ ಪ್ರದರ್ಶಿಸುವ ಮಲ್ಲಿಕಾ ಶೆರಾವತ್‌, ಮೊನ್ನೆ ಪತ್ರಿಕಾ ಛಾಯಾಗ್ರಾಹಕರ ಕ್ಯಾಮೆರಾ ನೋಡಿ ಸಿಡಿಮಿಡಿಯಾಗಿದ್ದರು. ಈಗ ರಜನಿಕಾಂತ್‌ ಸರತಿ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada