ಕಲಾಸಿಪಾಳ್ಯದಿಂದ ಕಾಟನ್‌ಪೇಟೆಗೆ ಬಂದ ಓಂ ಪ್ರಕಾಶ್ ರಾವ್
ಊರು ಕೇರಿಗಳ ಹೆಸರಿಟ್ಟುಕೊಂಡು ಕತೆ ಹೆಣೆಯುವುದರಲ್ಲಿ ನಿರ್ದೇಶಕ ಎನ್ ಓಂಪ್ರಕಾಶ್ ರಾವ್ ಸಿದ್ಧಹಸ್ತರು. ಈಗವರು ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಚಿತ್ರದ ಹೆಸರು 'ಕಾಟನ್ ಪೇಟೆ'. ಆದರೆ ಈ ಬಾರಿ ಚಿತ್ರದ ನಾಯಕ ನಟ ದರ್ಶನ್ ಅಲ್ಲ ಡೆಡ್ಲಿ ಖ್ಯಾತಿಯ ಆದಿತ್ಯ. ಮುಂದೊಂದು ದಿನ ಓಂ ಪ್ರಕಾಶ್‌ರಿಂದ ಬಳೆಪೇಟೆ, ಅಕ್ಕಿಪೇಟೆ, ಕತ್ರಿಗುಪ್ಪೆ ಹೆಸರುಗಳನ್ನು ನಿರೀಕ್ಷಿಸಬಹುದು!
ಈ ಹಿಂದೆ ಕಲಾಸಿಪಾಳ್ಯ, ಮಂಡ್ಯ, ಹುಬ್ಬಳ್ಳಿ, ಬೆಳಗಾಂ ಎಂಬ ಶೀರ್ಷಿಕೆಗಳಲ್ಲಿ ಓಂ ಚಿತ್ರಗಳು ತೆರೆಕಂಡಿದ್ದವು. ಅವು ಕೊಂಚ ಮಟ್ಟಿಗೆ ಯಶಸ್ಸನ್ನು ಕಂಡಿವೆ. ಕಲಾಸಿಪಾಳ್ಯದಂತೆ ಇದು ರೌಡಿಸಂ ಚಿತ್ರವಲ್ಲ. ಇದೊಂದು ಅಪ್ಪಟ ಪ್ರೇಮಕತೆಯಂತೆ. ಪ್ರೀತಿಸಿದ ಹುಡುಗಿಗಾಗಿ ನಾಯಕ ಏನೆಲ್ಲ ಮಾಡುತ್ತಾನೆ ಎಂಬುದೇ ಚಿತ್ರದ ಕಥಾಹಂದರ.
ಹಲವಾರು ಚಿತ್ರಗಳಲ್ಲಿ ನಟಿಸಿದರೂ ಅದ್ಯಾಕೋ ಏನೋ ಆದಿತ್ಯನಿಗೆ ವಿಜಯಲಕ್ಷ್ಮಿ ಒಲಿಯಲಿಲ್ಲ. ಈ ಚಿತ್ರದ ಮೂಲಕವಾದರೂ ಹೇಗಾದರೂ ಗೆಲ್ಲಲೇ ಬೇಕು ಎಂದು ಹಠತೊಟ್ಟಂದಿದೆ ಆದಿತ್ಯ. ಚಿತ್ರದ ನಾಯಕಿಗಾಗಿ ಹುಡುಕಾಟ ನಡೆದಿದೆ. ಕಲಾವಿದರಾದ ಸ್ವಸ್ತಿಕ್ ಶಂಕರ್, ಶೋಭಾರಾಜ್ ಮತ್ತಿತರರು ಚಿತ್ರದ ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ಅಭಿಮಾನ್ ರಾಯ್ ಸಂಗೀತ ಹಾಗೂ ವೀನಸ್ ಮೂರ್ತಿ ಅವರ ಛಾಯಾಗ್ರಹಣವಿದೆ.


Click it and Unblock the Notifications











