ಆಪ್ತಮಿತ್ರ ದ್ವಾರಕೀಶ್ ಗೆಳೆಯರ ಗುಂಪು ಅಸ್ತಿತ್ವಕ್ಕೆ
ನಟ, ನಟಿಯರಿಗೆ ಅಭಿಮಾನಳ ಸಂಘ ಇದ್ದಂತೆ ಹಾಸ್ಯ ನಟನೊಬ್ಬನಿಗೆ ಅಭಿಮಾನಿ ಸಂಘ ಇರುವುದು ಅಪರೂಪದ ಸಂಗತಿ. ಅಂತಹ ಒಂದು ಅಪರೂಪದ ಗೌರವ ಹಾಸ್ಯ ನಟ ದ್ವಾರಕೀಶ್ ಅವರಿಗೆ ಪ್ರಾಪ್ತವಾಗಿದೆ. ಚಲನಚಿತ್ರ ಕ್ಷೇತ್ರದ ಹಲವಾರು ಪ್ರಾಕಾರಗಳಲ್ಲಿ ಗುರುತಿಸಿಕೊಂಡಿರುವ ದ್ವಾರಕೀಶ್ ಅವರು ಹಾಸ್ಯ ನಟನಾಗಿ ಹೆಚ್ಚು ಚಿರಪರಿಚಿತ.
ಅಕ್ಟೋಬರ್ 2ರಂದು 'ದ್ವಾರಕೀಶ್ ಗೆಳೆಯರ ಗುಂಪು' ಅಸ್ತಿತ್ವಕ್ಕೆ ಬರಲಿದೆ. ಈ ಬಳಗವನ್ನು ಮಧೂಸೂದನ್ ಎಂಬ ಟೆಕ್ಕಿ, ವಕೀಲರಾದ ವೀರಭದ್ರಪ್ಪ, ನಿರ್ಮಾಪಕ ಸಂಜೀವ್ ಕುಮಾರ್ ಹಾಗೂ ಬರಹಗಾರ ಸ್ನೇಹಪ್ರಿಯ ನಾಗರಾಜ್ ಅವರು ಒಂದಷ್ಟು ಗೆಳಯರೊಂದಿಗೆ ಸೇರಿ ಕಟ್ಟಿದ್ದಾರೆ.
ನಾಲ್ಕು ದಶಕಗಳಿಗೂ ಅಧಿಕ ಕಾಲ ಹಾಸ್ಯ ನಟನಾಗಿ ಕನ್ನಡ ಬೆಳ್ಳಿಪರದೆ ಬೆಳಗಿದ ದ್ವಾರಕೀಶ್ ಅವರಿಗೆ ಇಷ್ಟು ವರ್ಷ ಅಭಿಮಾನಿಗಳ ಬಳಗ ಇಲ್ಲದ್ದು ಖೇದಕರ. ಇಷ್ಟು ವರ್ಷಗಳ ಬಳಿಕವಾದರೂ ದ್ವಾರಕೀಶ್ ಅವರಿಗೂ ಒಂದು ಅಭಿಮಾನಿ ಸಂಘ ಅಂತ ಹುಟ್ಟುಕೊಂಡಿತಲ್ಲಾ ಅದೇ ಸಮಾಧಾನದ ಸಂಗತಿ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
"ಈ ಸಂಘದ ಮೂಲಕ ಹಲವಾರು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿ ಎಂದು ಆಶಿಸುತ್ತೇನೆ. ನನ್ನ ಹೆಸರಿನಲ್ಲಿ ಬಳಗ ಕಟ್ಟಿದ್ದಕ್ಕೆ ಸಂತಸವಾಗಿದೆ" ಎಂದು ದ್ವಾರಕೀಶ್ ಪ್ರತಿಕ್ರಿಯಿಸಿದ್ದಾರೆ. "ನಾವೆಲ್ಲರೂ ಆದರ್ಶ ವ್ಯಕ್ತಿಗಳನ್ನು ಬಯಸುತ್ತೇವೆ. ದ್ವಾರಕೀಶ್ ಅವರು ಕನ್ನಡ ಚಿತ್ರರಂಗಕ್ಕೆ ತನ್ನದೇ ಆದಂತಹ ಸೇವೆ ಸಲ್ಲಿಸಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಹಲವು ಪ್ರಥಮಗಳನ್ನು ಕೊಟ್ಟ ಹೆಗ್ಗಳಿಕೆ ಅವರದು. ಅವರಿಗೆ ನಾವು ಸಲ್ಲಿಸುತ್ತಿರುವ ಕಿರುಕಾಣಿಕೆ ಇದು" ಎಂದಿದ್ದಾರೆ ಬಳಗದ ಮಧುಸೂದನ್. ನಮ್ಮಲ್ಲೂ ಉಂಟು ದ್ವಾರಕೀಶ್ ಅಭಿಮಾನಿ ಬಳಗ.


Click it and Unblock the Notifications











