twitter
    For Quick Alerts
    ALLOW NOTIFICATIONS  
    For Daily Alerts

    ಹಾಸ್ಯವನ್ನೇ ಕುಡಿಸಿ ನಕ್ಕುನಗಿಸಿದ ಜಾನಿ ವಾಕರ್

    By Staff
    |

    ಜೀವನದಲ್ಲೆಂದೂ ಷರಾಬು ಮುಟ್ಟದಿದ್ದ 50ರ ದಶಕದಲ್ಲಿ ಅನಭಿಷಿಕ್ತ ಕಾಮಿಡಿ ಸಾಮ್ರಾಟ್‌ನಂತಿದ್ದ ಜಾನಿ ವಾಕರ್ ಚಿತ್ರರಸಿಕರಿಗೆ ಹಾಸ್ಯಪೇಯ ಉಣಬಡಿಸುತ್ತಲೇ ಬಂದವರು. ಕಡುಬಡತನದಲ್ಲಿ ಹುಟ್ಟಿ, ಐಸ್ ಕ್ಯಾಂಡಿ ಮಾರುವವನಾಗಿ, ಹಿಂದಿ ಚಿತ್ರರಂಗದ ಹಾಸ್ಯಲೋಕವನ್ನಾಳಿ ನಂತರ ಅಶ್ಲೀಲ ಹಾಸ್ಯಕ್ಕೆ ಬೇಸತ್ತು ಚಿತ್ರರಂಗದಿಂದಲೇ ದೂರಸರಿದ ಜಾನಿ ಜೀವನ ಎಲ್ಲ ಹಾಸ್ಯ ನಟರಿಗೆ ಮಾದರಿ. ಅಂಥ ಜಾನಿ ತೀರಿಕೊಂಡಿದ್ದು ಜುಲೈ 29ರಂದು. ಅವರ ನೆನಪಲ್ಲಿ ಸಿಂಗಪುರದ ವಾಣಿ ರಾಮದಾಸ್ ಲೇಖನ.

    ***

    'ಸರ್ ಜೊ ತೆರಾ ಟಕರಾಯೆ ಯಾ ದಿಲ್ ಡೂಬ ಜಾಯೆ, ಆಜಾ ಪ್ಯಾರೆ, ಪಾಸ್ ಹಮಾರೆ..' ಕೇಳಿ ಬಂತು. ಸ್ವಲ್ಪ ವಾಲ್ಯೂಮ್ ಜಾಸ್ತಿ ಮಾಡಿ ಎಂದು ಅಡುಗೆ ಮನೆಯಿಂದ ಕೂಗಿದೆ. ಈ ಹಾಡು ಕೇಳಿದಂತೆ ಜಾನಿವಾಕರ್‌ನ ನೆನೆದು ನಗು ಮೂಡಿತು. ಹಾಸ್ಯ ತಕ್ಷಣ ಮೂಡಿಬರುವ ಪ್ರಕ್ರಿಯೆ. ನಗಿಸುವುದು ನಮ್ಮ ಧರ್ಮ ಎಂದು ನಟಿಸುತ್ತಿದ್ದ ದಶಕಗಳ ಹಿಂದಿನ ಹಿಂದಿ ಸಿನಿ ರಂಗದ ಮೆಹಮೂದ್, ಮುಖ್ರಿ, ರಾಜೇಂದ್ರನಾಥ್, ನಮ್ಮವರೇ ಆದ ನರಸಿಂಹರಾಜು, ಬಾಲಕೃಷ್ಣ, ದ್ವಾರಕೀಶ್, ಬಿ.ಜಯಾ, ರಮಾದೇವಿ, ಜಗಳಗಂಟಿ ಪಾಪಮ್ಮ, ಇವರುಗಳು ಇಂದಿಗೂ ನಮ್ಮ ನೆನಪಿನಂಗಳಂದ ಹೂದೋಟದಿಂದ ಹೊರಬಂದು ನಗೆ ಮೂಡಿಸುವ ನಗೆ-ಮಾಂತ್ರಿಕರು.

    "ಕಾಹೆ ಘಬರಾಯ್" ಎಂದರೂ ತಮ್ಮ ಹಾಸ್ಯಾಭಿನಯದಿಂದ 'ಆಜಾ ಪ್ಯಾರೆ ಪಾಸ್ ಹಮಾರೆ' ಎಂದು ಎಲ್ಲರನ್ನೂ ಹತ್ತಿರ ಸೆಳೆದಿದ್ದ ಕಾಮಿಡಿ ಕಿಂಗ್ ಜಾನಿವಾಕರ್. ಪೆನ್ಸಿಲ್ ಮೀಸೆ, ಸಣಕಲು ದೇಹ, ಬಾಗುವ ಮೈ, ತಲೆಗೆ ಟೊಪ್ಪಿ, ಕೀರಲು ದನಿಯ ಜಾನಿವಾಕರ್ ಉರುಫ್ ಬದ್ರುದ್ದೀನ್ ಜಮಾಲುದ್ದೀನ್ ಖಾಜಿಯ ಜನನ 1924, ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ. ಹುಟ್ಟಿದಾರಭ್ಯ ಕಾಡಿತ್ತು ಬಡತನ. ಸೇರಿದ್ದು ಸರಕಾರಿ ಶಾಲೆ ಓದಿದ್ದು 9ನೇ ಇಯತ್ತೆ, ಅದೂ ನಪಾಸು!. ಹೊಟ್ಟೆ, ವಿದ್ಯೆ ಎರಡಲಿ ಒಂದು ಆಯ್ಕೆ ಎಂದಾದಾಗ ಓದಿಗೆ ತಿಲಾಂಜಲಿ, ಹೊಟ್ಟೆ ಪಾಡಿಗಾಗಿ ಐಸ್‌ಕ್ಯಾಂಡಿ ಹಾಗೂ ತರಕಾರಿ ಮಾರುವ ಹೊಣೆ. ಜೊತೆಗೂಡಿ ಬಂದಿತು ಗ್ರಹಚಾರ, ತಂದೆ ಕೆಲಸ ಮಾಡುತ್ತಿದ್ದ ಮಿಲ್ ಮುಚ್ಚಿತು.

    ಹದಿನಾರರ ಹುಡುಗ ತಂದೆ, ತಾಯಿ, ಹತ್ತು ಜನ ಒಡಹುಟ್ಟಿದವರೊಡನೆ ಭವಿಷ್ಯದ ಚಿಂತೆ, ಆಸೆಗಳ ಹೊತ್ತು ವಲಸೆ ಹೊರಟನು ಕನಸುಗಳ ನಗರಿ ಮುಂಬೈನತ್ತ. 9ನೇ ಇಯತ್ತೆ ನಪಾಸಾದವನಿಗೆ ಕೆಲಸ ಸಿಗದೆ ಬೀದಿ, ಬೀದಿಗಳಲಿ ಐಸ್‌ಗಾಡಿ ತಿರುಗಾಟ ಮುಂದುವರೆದಿತ್ತು. 17ರ ವಯದಲಿ ದೊರೆಯಿತು ಮುಂಬೈ ಬಸ್ಸಿನಲ್ಲಿ ಕಂಡಕ್ಟರ್ ಕೆಲಸ. ಎರಡು ಹೊತ್ತಿನ ಕೂಳಿನ ಚಿಂತೆ ದೂರವಾದಾಗ ಮೂಡಿತು ನೆಮ್ಮದಿ, ಹೊರ ಹೊಮ್ಮಿತು ಅದುಮಿಟ್ಟಿದ್ದ ವಾಕ್ ಚಾತುರ್ಯ. ಕೆಲವೇ ದಿನಗಳಲ್ಲಿ ನಗಿಸುವುದು ಪರಧರ್ಮ ಎಂಬುದನು ಕರಗತ ಮಾಡಿಕೊಂಡ ಜಮಾಲುದ್ದೀನನಿಗೆ ಪಯಣಿಗರು ಹಸಾನೆವಾಲ ಕಂಡಕ್ಟರ್, ಜೋಕರ್ ಬಿರುದುಗಳನ್ನು ಕೊಟ್ಟರು.

    1950ರ ಇಸವಿ ಒಂದು ಬೆಳಿಗ್ಗೆ ಜಮಾಲುದ್ದೀನ್ ಎಂದಿನಂತೆ ಬಸ್ಸಿನಲ್ಲಿ 'ಸುಬಹ್, ಸುಬಹ್ ಹಸೀಯೇ ಭಾಯ್, ಆಪ್ ಕಾ ಥೋಪಡೆ ತೋ ಕೊಯಿ ದೇಖೇಗಾ' ಎಂದು ತನ್ನದೇ ವಿಶಿಷ್ಟ ರೀತಿಯಲಿ ಮಾತನಾಡಿ ಟಿಕೀಟ್ ಕೊಡುತ್ತಿದ್ದ. ಅಂದು ಆ ಬಸ್ಸನ್ನೇರಿದ ಓರ್ವ ವ್ಯಕ್ತಿ ಕಂಡಕ್ಟರನ ಜಮಾಲುದ್ದೀನನ ಮಾತನಾಡುವ ವೈಖರಿ, ನಗಿಸುವ ಪರಿಯ ಕಂಡು ನನ್ನೊಡನೆ ಬರುವೆಯಾ, ನಿನ್ನನ್ನು ಶೂಟಿಂಗ್ ನೋಡಲು ಕರೆದೊಯ್ಯುವೆ ಎಂದನು. ಶೂಟಿಂಗ್ ಎಂದಾಕ್ಷಣ ರಜೆ ಹಾಕಿ ಆತನೊಡನೆ ನಡೆದ ಜಮಾಲುದ್ದೀನನಿಗೆ ಕಾದಿತ್ತು ಆಶ್ಚರ್ಯ, ಖ್ಯಾತ ನಿರ್ದೇಶಕ, ನಟ ಗುರುದತ್ ಅವರೊಡನೆ ಸಂದರ್ಶನ. ಮನದಲ್ಲೇ ಟಿಸಿಲೊಡೆದಿತ್ತು ನಟನಾ ಆಕರ್ಷಣ.

    ಜಾನಿವಾಕರ್ ಆದದ್ದು ಹೇಗೆ? : ಓರ್ವ ಕಂಡಕ್ಟರನ ಪ್ರತಿಭೆ ಗುರುತಿಸಿ, ಆತನನ್ನು ಗುರುದತ್ ಅವರಿಗೆ ಪರಿಚಯಿಸಿದ ವ್ಯಕ್ತಿ ಯಾರೆಂದು ಊಹಿಸಬಲ್ಲಿರಾ? ಆತ ಹಿಂದಿ ಚಿತ್ರರಂಗದ ಮತ್ತೋರ್ವ ಉತ್ತಮ ನಟ ಬಲರಾಜ್ ಸಹಾನಿ. 1951ರ ಕಾಲ ಚಿತ್ರ ನಟರೂ ತಿಂಗಳು ಸಂಬಳ ಪಡೆಯುತ್ತಾ, ಬಸ್ಸು, ಟ್ರಾಮ್, ಟ್ರೈನ್‌ಗಳಲಿ ಸಾಮಾನ್ಯರಂತೆ ಸಂಚರಿಸುತ್ತಿದ್ದ ಕಾಲವದು. 'ಬಾಜಿ' ಚಿತ್ರಕ್ಕಾಗಿ ಗುರುದತ್ ಅವರ ತಯಾರಿ ನಡೆದಿತ್ತು. ಬಲರಾಜ್ ಸಹಾನಿ ಈ ಚಿತ್ರಕ್ಕಾಗಿ ಸಂಭಾಷಣೆ ಬರೆಯುತ್ತಿದ್ದರು. ಗುರುದತ್ ಅವರು ಸಹಾನಿ ಅವರೊಡನೆ ಬಂದ ಹೊಸ ಹುಡುಗನಿಗೆ "ನಟಿಸಲು ಬರುವುದಾ" ಎಂಬುದಕ್ಕೆ ಮುಂಚೆಯೇ ಬದ್ರುದ್ದೀನ್ ತೂರಾಡುತ್ತಾ, ತೊದಲುತ್ತಾ, ಕುಡುಕನಂತೆ ಮಾತನಾಡಿ, ನಟಿಸಿದನಂತೆ. ಬದ್ರುದ್ದೀನನ ವಾಕ್ ವೈಖರಿ, ನಟನೆ ಕಂಡು ಆ ಕ್ಷಣದಲ್ಲೇ ಬದ್ರುದ್ದೀನ್‌ಗೆ 'ಬಾಜಿ' ಚಿತ್ರದಲ್ಲಿ ಪಾತ್ರವೊಂದನ್ನಿತ್ತು, ಅಮಲು ಏರದೆಯೇ ಕುಡುಕನಂತೆ ನಟಿಸಿದ ಬದ್ರುದ್ದೀನನಿಗೆ ಖ್ಯಾತ ಸ್ಕಾಚ್ ಪೇಯದ ಹೆಸರು "ಜಾನಿವಾಕರ್" ಎಂದು ಹೆಸರನಿಟ್ಟರು.

    ಅಂದು ಚಿತ್ರರಂಗಕ್ಕೆ ಕಾಲಿಟ್ಟ ಜಾನಿವಾಕರ್- ಗುರುದತ್, ಅಶೋಕ್‌ಕುಮಾರ್, ರಾಜ್‌ಕಪೂರ್, ದೇವಾನಂದ್, ದಿಲೀಪ್ ಕುಮಾರ್, ಶಮ್ಮಿಕಪೂರ್, ರಾಜೇಶ್‌ಖನ್ನಾ, ಅಮಿತಾಭ್ ಅಲ್ಲದೆ ಇತ್ತೀಚಿನ ಗೋವಿಂದ ಅವರ ಜೊತೆಗೂ ಅಭಿನಯಿಸಿದ್ದರು. ಗುರುದತ್ ಚಿತ್ರಗಳಲ್ಲಿ, ನಯಾದೌರ್, ಆದ್ಮಿ ಔರ್ ಇನ್ಸಾನ್, ದೇವ್‌ದಾಸ್, ಚೌದ್ ವಿನ್ ಕ ಚಾಂದ್, ಚೋರಿ-ಚೋರಿ, ಆನಂದ್, ಮಧುಮತಿಯೇ ಅಲ್ಲದೆ ಇನ್ನೂ ಹಲವಾರು ಚಿತ್ರಗಳಲ್ಲಿ ಜಾನಿವಾಕರ್ ಅಭಿನಯ ಅವಿಸ್ಮರಣೀಯ. ಸುಮಾರು 300 ಚಿತ್ರಗಳಲ್ಲಿ ಅಸಂಖ್ಯಾತ ಚಿತ್ರ ರಸಿಕರಿಗೆ ಹಾಸ್ಯಪೇಯವನ್ನು ಉಣಿಸಿ ನಿರಂತರವಾಗಿ ರಸಿಕರ ಮನಗೆದ್ದಿದ್ದರು.

    ಒಮ್ಮೆ ಕೊಲ್ಕತ್ತಾದಲ್ಲೊಂದು ದಿನ ಬೆಳಿಗ್ಗೆ ಬೀದಿ ಹೋಟೆಲೊಂದರಲ್ಲಿ ತಿಂಡಿ ತಿನ್ನುತ್ತಿದ್ದ ಗುರುದತ್-ಜಾನಿ ಅಣತಿ ದೂರದಲ್ಲಿ ತೇಲ್ ಮಾಲೀಶ್ ಮಾಡುವವನ ಚಾಕಚಕ್ಯತೆ ಕಂಡು ದಂಗಾದರು. ಆ ಕ್ಷಣ ಗುರುದತ್ ಜಾನಿವಾಕರನಿಗೆ ಮಾಲೀಶ್ ಮಾಡುವವನ ಹಾವಭಾವಗಳನ್ನು ಗಮನಿಸಲು ಹೇಳಿ ಅದೇ ದೃಶ್ಯವನ್ನು 'ಪ್ಯಾಸಾ' ಚಿತ್ರದಲ್ಲಿ ಅಳವಡಿಸಿದರಂತೆ. ಆ ತೇಲ್ ಮಾಲೀಶ್ ಮಾಡುವವನ ಪಾತ್ರಕ್ಕೆ ಜೀವ ತುಂಬಿದರು ಜಾನಿವಾಕರ್. ಈ ಹಾಡು ಹಾಗೂ ಮಾಲೀಶ್ ಮಾಡುವವನ ಮಾತಿನ ವೈಖರಿಯಿಂದ ಅಂದಿನ ದಿನಗಳಲಿ ಮಾಲೀಶ್ ಮಾಡುವವರಿಗೆ ಬಹಳಷ್ಟು ಲಾಭ ದೊರೆಯಿತಂತೆ. ಸಿ.ಐ.ಡಿ. ಚಿತ್ರದ "ಯೆಹ್ ಹೈ ಬಾಂಬೆ ಮೆರಿ ಜಾನ್, ಟುನ್ ಟುನ್ ಜೊತೆ "ಜಾನೆ ಕಹಾ ಮೆರಾ ಜಿಗರ ಗಯಾಜಿ, ಅಭಿ ಅಭಿ ಯಹಿ ಥಾ ಕಿಧರ್ ಗಯಾಜಿ" ಎಂದು ನುಡಿಯುತ್ತಾ "ಜಾನಿ ಕಿ ಅದಾವೋಂ ಪೆ ಮರ್ ಗಯೆ ಜೀ" ಎಂಬಂತೆ ಹಿಂದಿ ಚಿತ್ರರಸಿಕರ ಮನಗಳನ್ನು ರಂಜಿಸಿದ್ದನಾತ.

    ಹೃಷಿಕೇಷ್ ಮುಖರ್ಜಿ ಅವರ ಜಿತ್ರ 'ಆನಂದ್'ದಲ್ಲಿ ರಾಜೇಶ್‌ಖನ್ನಾ ಮತ್ತು ಅಮಿತಾಭ್ ಬಚ್ಚನ್ ಅವರ ನಟನೆಯನ್ನು ಹೇಗೆ ಅಮರವಾಗಿಸಿತೋ, ಜಾನಿವಾಕರ್ ಅವರ ನಾಟಕ ಪಾತ್ರಧಾರಿ ನಟನೆಯನ್ನೂ ಚಿತ್ರರಸಿಕರು ಮರೆಯಲು ಸಾಧ್ಯವಿಲ್ಲ. ಆ ಚಿತ್ರದಲ್ಲಿ ಮುರಾರಿಲಾಲ್ (ಜಾನಿವಾಕರ್) ರಾಜೇಶ್‌ಖನ್ನನಿಗೆ ಹೇಳಿ ಕೊಡುವ "ಜಿಂದಗಿ ಔರ್ ಮೌತ್ ಊಪರ್ ವಾಲೆ ಕಿ ಹಾಥ್ ಹೈ ಜಹಾಂಪನಾ, ಹಮ್ ಸಬ್ ತೊ ರಂಗ್ ಮಂಚ್ ಕೆ ಕಟಪುತಲಿಯಾ ಹೈ. ಕೌನ್, ಕಬ್, ಕೈಸೆ ಉಠೇಗ ಕೊಯಿ ನಹಿ ಜಾನ್‌ತಾ. ಹ..ಹ..ಹ.." ಸಂಭಾಷಣೆ ಇಡೀ ಚಿತ್ರದ ತಿರುಳಿದೆ. ಜಾನಿವಾಕರ್ ಅದನ್ನು ನಾಟಕೀಯವಾಗಿ ಹೇಳುವ ರೀತಿಯನ್ನು ಮರೆಯುವಂತೆಯೇ ಇಲ್ಲ.

    ಚಾರ್ಲಿ ಚಾಪ್ಲಿನ್ ಆರಾಧಕ : ಕೆಲವು ಹಾಸ್ಯ, ಸಂಗೀತಮಯ ಚಿತ್ರಗಳಲಿ ನಾಯಕನಾಗಿ, ಕೆಲವು ಗಂಭೀರ ಪಾತ್ರಗಳಲಿಯೂ ಮಿಂಚಿ, ಸೈ ಎನಿಸಿಕೊಂದರೂ ಜಾನಿವಾಕರ್ ಜನಮನದಲ್ಲಿ ನಿಂತದ್ದು ಕಿಂಗ್-ಕಾಮಿಡಿಯನ್ ಎಂದೆನೆಸಿ ಮಾತ್ರ. ಇಂತಹ ವಿದೂಷಕನಿಗೆಂದೇ ಪಾತ್ರಗಳು ಸೃಷ್ಟಿಗೊಳ್ಳುತ್ತಿದ್ದುವಂತೆ. ಹಾಸ್ಯ ನಟನೆಯನ್ನೇ ಜೀವನವಾಗಿಸಿಕೊಂಡಿದ್ದ ಜಾನಿವಾಕರ್ ಖ್ಯಾತ ನಟ ಚಾರ್ಲಿ ಚಾಪ್ಲಿನ್‌ರ ಆರಾಧಕನಾಗಿದ್ದ. ಸಿ.ಐ.ಡಿ. ಚಿತ್ರದ ಸೆಟ್ಟಿನಲ್ಲಿ ನಟಿ ಶಕೀಲಾ ಅವರ ತಂಗಿ ನೂರ್ ಅವರ ಪ್ರೇಮಪಾಶದಲಿ ಸಿಲುಕಿದ ಜಾನಿವಾಕರ್ ಅವರನ್ನು ಮದುವೆಯಾಗಿ ಮೂರು ಹೆಣ್ಣು ಹಾಗೂ ಮೂವರು ಗಂಡು ಮಕ್ಕಳ ತಂದೆಯಾದರು. ಮಗ ನಾಸಿರ್ ಖಾನ್ ಹಿಂದಿ ಸೋಪ್ ಓಪೆರಾದ ಓರ್ವ ನಟ.

    70ರ ದಶಕದಲ್ಲಿ ಹಾಸ್ಯದಲ್ಲಿ ಅಶ್ಲೀಲ ಹೆಚ್ಚಾಯಿತೆಂದೆಣಿಸಿ ಹಾಗೂ ಸ್ನೇಹಿತ, ನಟ, ನಿರ್ದೇಶಕ ಗುರುದತ್ ಅವರ ಸಾವಿನಿಂದ ನೊಂದ ಜಾನಿವಾಕರ್ ನಟನೆಯಿಂದ ದೂರವಾದ. ಮುಂಬೈ ಹತ್ತಿರದಲಿ ತೋಟ ಖರೀದಿಸಿ ಮಾವು, ಪೇರು, ಆಲೀವ್ ಬೆಳೆಯುವುದರಲ್ಲಿ ತಲ್ಲೀನರಾದರು. 1997ರಲ್ಲಿ ನಿರ್ದೇಶಕ ಗುಲ್ಜಾರ್ ಹಾಗೂ ನಟ ಕಮಲಹಾಸನ್ ಅವರ ಒತ್ತಾಯದ ಮೇರೆಗೆ ಹದಿಮೂರು ವರುಷಗಳ ವನವಾಸದ ನಂತರ ಅಂದಿನ ಜಾನಿವಾಕರ್ ಇಂದಿನ ಸಿನಿ ರಸಿಕರಿಗೆ 'ಚಾಚಿ 420' ಚಿತ್ರದಲ್ಲಿ ಮತ್ತೆ ಪರಿಚಯಿಸಲ್ಪಟ್ಟರು. ಆ ಚಿತ್ರದಲ್ಲೂ ಕುಡುಕನ ಪಾತ್ರ ನಿರ್ವಹಿಸಿದ ಜಾನಿವಾಕರ್ ನಿಜ ಜೀವನದಲ್ಲಿ ಮದ್ಯದಿಂದ ದೂರವಿದ್ದರಂತೆ.

    ಪ್ರತಿಭೆ, ನಟನೆ, ವಾಕ್ಚಾತುರ್ಯಕ್ಕೆ ಪಂಡಿತ ಜವಹರಲಾಲ್ ನೆಹರು ಅವರಿಂದಲೂ ಶಹಭಾಷ್ ಎಂದೆನಿಸಿಕೊಂಡರು. ಹೆಸರು, ಹಣಗಳಿಸಿದ್ದರೂ ನಿಗರ್ವಿ ಎಂದು ಹೆಸರುಗಳಿಸಿದರು ಜಾನಿವಾಕರ್. 1958ರಲ್ಲಿ ತೆರೆಕಂಡ 'ಮಧುಮತಿ' ಚಿತ್ರಕ್ಕಾಗಿ 'ಉತ್ತಮ ಪೋಷಕ ನಟ' ಪ್ರಶಸ್ತಿ ಪಡೆದ ಸಂದರ್ಶನವೊಂದರಲ್ಲಿ "ನಾನು ಚಿತ್ರದಲಿ ನಟಿಸಲು ಒಪ್ಪಿಕೊಂಡದ್ದು ಹೆಚ್ಚಿನ ಸಂಬಳಕ್ಕಾಗಿ ಹಾಗು ಗುರುದತ್ ಅವರ ಕಟ್ಟಾ ಅಭಿಮಾನಿಯಾಗಿದ್ದಕ್ಕಾಗಿ. ನಾನೋರ್ವ ನಿರ್ದೇಶಕನ ಕೂಸು. ನಿರ್ದೇಶಕ ಹೇಳಿದಂತೆ ಕೇಳಿ, ಯಾರೋ ಬರೆದ ಸಾಲುಗಳನು ಪ್ರೇಕ್ಷಕರ ಮುಂದೆ ಇಡುತ್ತಿದ್ದೆ. ನಟನೆ, ಪ್ರತಿಭೆ ಇದು ಗೊತ್ತಿಲ್ಲ. ಹೆತ್ತವರ ಪುಣ್ಯ, ದೈವ ಕೃಪೆ ಬೀದಿಯಲಿ ಐಸ್‌ಕ್ಯಾಂಡಿ ಮಾರುತ್ತಿದ್ದವನನ್ನು ಈ ಚಿತ್ರರಂಗ ಕೈ ಬಿಡದೆ ಹಣ, ಹೆಸರುಗಳನ್ನು ಕೊಟ್ಟಿತು" ಎಂದು ನುಡಿದರಂತೆ.

    ಅಮರನಾದ ಜಾನಿ : 79 ವರುಷಗಳ ಪೂರ್ಣ ಜೀವನ ನಡೆಸಿದ ಜಾನಿವಾಕರ್ ಜುಲೈ 29, 2003ರಲ್ಲಿ ಆನಂದ್ ಚಿತ್ರದಲ್ಲಿ ತಾವೇ ಹೇಳಿದ ಸಂಭಾಷಣೆಯನ್ನು ನೆನಪಿಸುವಂತೆ ಇಹಲೋಕವನ್ನು ತ್ಯಜಿಸಿದರು. ಅವರು ಮಾಡಿದ ಪಾತ್ರಗಳು, ಸಂಭಾಷಣೆಯನ್ನು ಒಪ್ಪಿಸುವ ಶೈಲಿ ಇಂದಿಗೂ ಅಜರಾಮರ. ಮಾಲೀಶ್, ಸಿಐಡಿಯ ಬಾಂಬೆ ಮೆರಿ ಜಾನ್, ನಯಾದೌರ್ ಚಿತ್ರದ ರಿಪೋರ್ಟರ್, ಆನಂದ್ ಚಿತ್ರದ ಮುರಾರಿಲಾಲ್ ಅಲ್ಲದೇ ಅಂದಿನ ಅನೇಕ ಪಾತ್ರಗಳಿಗೆ ಜೀವ ತುಂಬಿದ ನಟ ಜಾನಿವಾಕರ್ ಚಿತ್ರ ರಸಿಕರ ನೆನಪಿನಂಗಳದಿ ಇಂದಿಗೂ "ಸರ್ ಜೊ ತೆರಾ ಟಕರಾಯ್, ಯಾ ದಿಲ್ ಡೂಬ ಜಾಯೆ" ಎನ್ನುತ್ತಾ ತಮ್ಮ ಹಾಸ್ಯಮಯ ರೀತಿಯಲಿ ರಸಿಕರ ನೆನಪಿನಂಗಳದಲಿ "ಝರಾ ಹಟ್ ಕೆ, ಝರಾ ಬಚ್ ಕೆ, ಮೆ ಹೂ ಜಾನಿ ಮೆರಿ ಜಾನ್" ಎನ್ನುತ್ತಿದ್ದಾರೆ. ಆ ಕಾಲದ ಚಿತ್ರಗಳಲ್ಲಿ ನಗೆನಟ/ನಟಿಯರು ನಾಯಕ-ನಾಯಕಿಯರೊಂದಿಗೆ ಚಿತ್ರದುದ್ದಕ್ಕೂ ಆಪ್ತರಂತೆ, ಆಪದ್ಚಾಂಧವರಂತೆ, ನೋವು-ನಲಿವುಗಳಲಿ ಭಾಗಿಯಾಗುತ್ತಿದ್ದರು. ಹಾಡು, ಹಾಸ್ಯ, ಸಂಭಾಷಣೆಗಳಲಿ, ಪಾತ್ರಗಳಿಗೆ ಜೀವತುಂಬಿ ರಸಿಕರ ಮೊಗದಲಿ ನಗೆಯ ನೀಡಿ, ಮನದಲಿ ತಮ್ಮ ಪಾತ್ರಗಳ ಛಾಪು ಮೂಡಿಸುತ್ತಿದ್ದರು.

    ಕಪ್ಪು ಬಿಳುಪು ಚಿತ್ರಗಳ ಕಾಲದಲಿ ರಾಜ್‌ಕುಮಾರ್, ನರಸಿಂಹರಾಜು, ಬಾಲಕೃಷ್ಣ ಅವರ ಕಾಂಬಿನೇಷನ್ನು ಇಲದ್ದಿದರೆ ಚಿತ್ರ ಕಳೆಗಟ್ಟುತ್ತಲೇ ಇರಲಿಲ್ಲ. ನಂತರ ಬಂದ ದ್ವಾರಕೀಶ್, ದಿನೇಶ್, ಮುಸುರಿ ಅವರ ಹಾಸ್ಯ ಕೂಡ ಸಾಕಷ್ಟು ಕಾಲ ಸಹನೀಯವಾಗಿತ್ತು. ಹಾಗೆಯೇ ಹಿಂದಿ ಚಿತ್ರದಲ್ಲೂ ಗುರುದತ್-ಜಾನಿವಾಕರ್, ದಿಲೀಪ್-ಜಾನಿವಾಕರ್, ಶಮ್ಮಿಕಪೂರ್-ರಾಜೇಂದ್ರನಾಥ್, ಕಾಂಬಿನೇಷನ್ ಸೂಪರ್ ಎನಿಸಿದ್ದರು. ಕಪ್ಪು-ಬಿಳುಪಿನ ಅಂದಿನ ಚಿತ್ರಗಳನ್ನು ಕುಳಿತು ನೋಡಿದರೆ ಇಂದೂ ಹಿತಾನುಭವ ಎನಿಸುತ್ತದೆ. ಅಂದಿನ ಚಿತ್ರಗಳು ನೆನಪಿನಲ್ಲಿ ಇರುವವರೆಗು ಜಾನಿವಾಕರ್ ಅಂಥ ಕಲಾವಿದ ಸಾಯುವುದೂ ಇಲ್ಲ.

    Friday, March 29, 2024, 4:06
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X