twitter
    For Quick Alerts
    ALLOW NOTIFICATIONS  
    For Daily Alerts

    ಸಕಲಕಲಾವಲ್ಲಭ ಲಿಟ್ಲ್ ಚಾಂಪ್ ಮಾಸ್ಟರ್ ಸಚಿನ್

    By *ರಾಜೇಂದ್ರ ಚಿಂತಾಮಣಿ
    |

    ಸಾಧಾರಣವಾಗಿ ಬಾಲ್ಯವೆಂದರೆ ಹುಡುಗಾಟ, ತುಂಟಾಟಗಳು ಮಾಮೂಲು. ಆದರೆ ಅಪ್ಪಟ ಕನ್ನಡಿಗ ಸಚಿನ್(11) ಎಲ್ಲ ಹುಡುಗರಂತಲ್ಲ, ಬಹುಮುಖ ಪ್ರತಿಭಾಶಾಲಿ. ತುಂಟಾಟಗಳ ಜತೆಗೆ ಅದ್ಭುತವಾಗಿ ಹಾಡುತ್ತಾನೆ. ಈಜುವುದು, ಮಾಡೆಲಿಂಗ್,ಸೈಕಲ್ ಹೊಡೆಯುವುದು ಟಿವಿ, ಸಿನಿಮಾಗಳಲ್ಲಿ ಬಣ್ಣಹಚ್ಚುವುದು ಆತನ ಉಳಿದ ಹವ್ಯಾಸಗಳು. ಹಾಗಂತ ಓದನ್ನು ಕಡೆಗಣಿಸಿಲ್ಲ. ಓದು ತನ್ನ ಮೊದಲ ಆದ್ಯತೆ ಎನ್ನುವ ಪ್ರತಿಭಾವಂತ. ದಟ್ಸ್ ಕನ್ನಡ ಕಚೇರಿಗೆ ಅಪ್ಪನ ಜತೆ ಆಗಮಿಸಿದ್ದ ಬಾಲ ಪ್ರತಿಭೆ ಸಚಿನ್ ಅರಳು ಹುರಿದಂತೆ ಮಾತನಾಡಿದ. ಸಂದರ್ಶನದ ಆಯ್ದ ಭಾಗ ಇಲ್ಲಿದೆ.

    ಸಚಿನ್ ನಿನ್ನ ಹವ್ಯಾಸಗಳ ಬಗ್ಗೆ ತಿಳಿಸುತ್ತೀಯಾ?
    ಮಾಡೆಲಿಂಗ್, ಹಾಡುಗಾರಿಗೆ, ಟಿವಿ ಮತ್ತು ಸಿನಿಮಾಗಳಲ್ಲಿ ಅಭಿನಯ, ಈಜು, ಬೈಸಿಕಲ್ ರೈಡಿಂಗ್ ಮತ್ತು ಓದಿನಲ್ಲಿ ಅತಿಹೆಚ್ಚು ಅಂಕಗಳಿಸುವುದು.

    ನಿನ್ನ ಮೊದಲ ಆದ್ಯತೆ ಯಾವುದು?
    ನನ್ನ ಮೊದಲ ಆದ್ಯತೆ ಶಿಕ್ಷಣ. ಆನಂತರವೇನಿದ್ದರೂ ಹಾಡು, ಅಭಿನಯ ಉಳಿದ ಹವ್ಯಾಸಗಳು.

    ಇದುವರೆಗೂ ಯಾವ ಚಿತ್ರಗಳಲ್ಲಿ ಅಭಿನಯಿಸಿದ್ದೀಯಾ?
    ಆತ್ಮೀಯ, ಬಿರುಗಾಳಿ, ಒಲವೆ ಜೀವನ ಲೆಕ್ಕಾಚಾರ, ಮಿನುಗು, ಚೈತನ್ಯ (ಮುಖ್ಯಪಾತ್ರದ ಮಕ್ಕಳ ಚಿತ್ರ) ಚಿತ್ರಗಳಲ್ಲಿ ಅಭಿನಯಿಸಿದ್ದೇನೆ.

    'ಬಿರುಗಾಳಿ'ಚಿತ್ರದ ಅನುಭ ಹೇಗಿತ್ತು?
    ಬಿರುಗಾಳಿ ಚಿತ್ರದಲ್ಲಿ ನಟಿಸಿದ್ದು ಒಂದು ಅದ್ಭುತ ಅನುಭವ. ಚೇತನ್ (ಬಿರುಗಾಳಿ ಚಿತ್ರದ ನಾಯಕ ನಟ)ರೊಂದಿಗಿನ ನಟನೆ ಮರೆಯಲು ಸಾಧ್ಯವಿಲ್ಲ.

    'ಒಲವೆ ಜೀವನ ಲೆಕ್ಕಾಚಾರ'ದಲ್ಲಿ ಹೇಗಿತ್ತು?
    ನಾಗತಿಹಳ್ಳಿ ಚಂದ್ರಶೇಖರ್ ಅವರಂತಹ ಹಿರಿಯರೊಂದಿಗೆ ಕೆಲಸ ಮಾಡಿದರೆ ಹೆಚ್ಚು ಹೆಚ್ಚು ಕಲಿಯಲು ಬಹುದು.ಈ ಚಿತ್ರದಲ್ಲಿ ನಾನೊಂದು ಸಣ್ಣ ಪಾತ್ರದಲ್ಲಿ ಅಭಿನಯಿಸಿದ್ದೇನೆ.

    ಸಂಭಾವನೆ ಎಲ್ಲಾ ಹೇಗಿದೆ? ನೀವೆ ನಿರ್ಧರಿಸುತ್ತೀರಾ ಹೇಗೆ?
    ಸಂಭಾವನೆ ವಿಷಯವನ್ನೆಲ್ಲಾ ನಮ್ಮ ತಂದೆಯವರೇ ನೋಡಿಕೊಳ್ಳುತ್ತಾರೆ. ಚಿತ್ರದಲ್ಲಿನ ಪಾತ್ರಕ್ಕೆ ತಕ್ಕಂತೆ ಸಂಭಾವನೆಯನ್ನು ನಿರ್ಮಾಪಕರೇ ನಿರ್ಧರಿಸುತ್ತಾರೆ.

    ಕತೆ, ಚಿತ್ರಕತೆ ನಿನ್ನ ಪಾತ್ರದ ಆಯ್ಕೆ ಹೇಗೆ?
    ಈ ವಿಷಯವನ್ನೂ ನಮ್ಮ ತಂದೆಯವರೇ ನಿರ್ಧರಿಸುತ್ತಾರೆ. ನನಗೆ ಸೂಕ್ತ ಅನ್ನಿಸಿದರೆ ಮಾತ್ರ ಒಪ್ಪಿಗೆ ನೀಡುತ್ತಾರೆ. ಇದುವರೆಗೂ ನನ್ನ ವಯಸ್ಸಿಗೆ ತಕ್ಕಂತಹ ಪಾತ್ರಗಳಲ್ಲಿ ಮಾತ್ರ ಅಭಿನಯಿಸಿದ್ದೇನೆ. ಚಿತ್ರಕತೆ ಹಾಗೂ ನನ್ನ ಪಾತ್ರ ಉತ್ತಮವಾಗಿದ್ದರೆ ಮಾತ್ರ ಆಯ್ಕೆ ಮಾಡಿಕೊಳ್ಳುತ್ತೇನೆ.

    ನಿನ್ನ ನೆಚ್ಚಿನ ಕನ್ನಡದ ನಟ ಯಾರು?
    ಡಾ.ರಾಜ್ ಕುಮಾರ್ ಹಾಗೂ ಡಾ.ವಿಷ್ಣುವರ್ಧನ್ ಅವರ ದೊಡ್ಡ ಅಭಿಮಾನಿ ನಾನು. ಅವರಂತೆ ನಾನೂ ಆಗಬೇಕೆಂಬುದು ಕನಸು. ವಿಷ್ಣು ಸರ್ ಕೈಕಡಗ ಹಾಕಿಕೊಳ್ಳುತ್ತಾರೆ. ಅವರ ಮೇಲಿನ ಅಭಿಮಾನಕ್ಕಾಗಿ ನಾನು ಸಹ ಕೈಕಡಗ ತೊಡುತ್ತಿದ್ದೇನೆ.

    ಇಷ್ಟೆಲ್ಲಾ ಚಟುವಟಿಕೆಗಳಿಗೆ ಸಮಯ ಹೇಗೆ ಹೊಂದಿಸುತ್ತೀರಾ?
    ಮುಂಜಾನೆ 5.30ಕ್ಕೆಲ್ಲಾ ಎದ್ದುಬಿಡುತ್ತೇನೆ. ನಂತರ 6 ರಿಂದ 7.30ರ ತನಕ ಈಜಾಡುತ್ತೇನೆ. ಆದಾದ ಬಳಿಕ ಸ್ನಾನ, ಸಂಧ್ಯಾ ವಂದನೆ, ಉಪಹಾರ. ಶಾಲೆಯಿಂದ ಹಿಂತಿರುಗಿದ ಬಳಿಕ ಸಂಗೀತ ಅಭ್ಯಾಸ. ವಾರದಲ್ಲಿ ಎರಡು ದಿನ ಶಾಸ್ತ್ರೀಯ ಸಂಗೀತಕ್ಕೆ ಮೀಸಲು.

    ಮಾಡೆಲಿಂಗ್ ಅನುಭವಗಳನ್ನು ತಿಳಿಸುತ್ತೀರಾ?
    ನನ್ನ ಮತ್ತು ಕ್ಯಾಮೆರಾ ಮುಖಾಮುಖಿ 6ನೇ ವರ್ಷದಲ್ಲೇ ಆಯಿತು. ಆಗ 'ಮಳೆಬಿಲ್ಲು' ಎಂಬ ಟಿವಿ ಧಾರಾವಾಹಿಯಲ್ಲಿ ನಟಿಸಿದ್ದೆ. ಲೈಫ್ ಸ್ಪೈಲ್ ಮಳಿಗೆಯ ಮಕ್ಕಳ ಸಾಬೂನು ಕಿಸಾನ್, ಮಾರ್ಕ್ ಅಂಡ್ ಸ್ಪೆನ್ಸರ್ಸ್, ಕಾಸ್ಮೋಸ್ ಮಾಲ್, ಲಿಡೊ ಮಾಲ್ ಗಳಲ್ಲಿ ಪ್ರಸಾದ್ ಬಿದ್ದಪ್ಪ ಜತೆ ರ‌್ಯಾಂಪ್ ಮೇಲೆ ಹೆಜ್ಜೆ ಹಾಕಿದ್ದೇನೆ.

    ನಿನ್ನ ಸಹಪಾಠಿಗಳ ಪ್ರತಿಕ್ರಿಯೆ ಹೇಗಿದೆ?
    ನಾನು ಅಭಿನಯಿಸಿದ ಪಾತ್ರಗಳನ್ನು ಅವರು ಆಗಾಗ ಅನುಕರಿಸುತ್ತಾ ತಮಾಷೆ ಮಾಡುತ್ತ್ತಿರುತ್ತಾರೆ. ಉಳಿದಂತೆ ಗೆಳೆಯರ ಮೆಚ್ಚುಗೆ, ಬೆಂಬಲ ಇದ್ದೇ ಇದೆ.

    ಶಾಲೆಯಲ್ಲಿ ಪ್ರೋತ್ಸಾಹ ಹೇಗಿದೆ?
    ನನ್ನ ಚಟುವಟಿಕೆಗಳಿಗೆ ನಮ್ಮ ಶಾಲೆ ಸಂಪೂರ್ಣ ಸಹಕಾರ ನೀಡುತ್ತಿದೆ. ಶಾಲೆಯ ಮುಖ್ಯಸ್ಥರಿಂದ ಹಿಡಿದು ಹೆಡ್ ಮಿಸ್ಟ್ರೆಸ್, ಶಿಕ್ಷಕರು, ಸಹಪಾಠಿಗಳ ಪ್ರೋತ್ಸಾಹ ಇದೆ. ಉತ್ತಮ ಅಂಕಗಳನ್ನು ಗಳಿಸಿದರೆ ಮಾತ್ರ ನಿನ್ನ ಉಳಿದ ಚಟುವಟಿಕೆಗಳಿಗೆ ಒಪ್ಪಿಗೆ ನೀಡುತ್ತೇವೆ ಎಂದು ಶಾಲೆಯಲ್ಲಿ ತಾಕೀತು ಮಾಡಿದ್ದಾರೆ. ಧಾರಾವಾಹಿಗಳಲ್ಲಿ ಭಾಗವಹಿಸಬೇಕಾದರೆ ಶಾಲೆ ಮುಗಿದ ಬಳಿಕ ಹೋಗುತ್ತೇನೆ.

    ಯಾವ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದೀರಾ?
    ನಾಲ್ಕು ವರ್ಷದವನಿದ್ದಾಗಲೇ ಹಾಡುತ್ತ್ತಿದ್ದೆ. ಹಾಡುವುದೆಂದರೆ ನನಗೆ ತುಂಬಾ ಇಷ್ಟ. ಶಾಲೆಯ ಸ್ಪರ್ಧೆಗಳಲ್ಲಿ ಹಲವಾರು ಬಹುಮಾನಗಳನ್ನು ಪಡೆದಿದ್ದೇನೆ. ದೇವರನಾಮ, ಭಾವಗೀತೆ, ಚಿತ್ರಗೀತೆಗಳನ್ನು ಹಾಡುತ್ತಿದ್ದೆ. ಕಸ್ತೂರಿ ವಾಹಿನಿಯ 'ಸಪ್ತಸ್ವರ' ಕಾರ್ಯಕ್ರಮದಲ್ಲಿ 5 ನೇ ಸ್ಥಾನ ಪಡೆದಿದ್ದೆ. ಪ್ರಸ್ತುತ ಜೀ ಕನ್ನ್ನಡ ವಾಹಿನಿಯ 'ಸರಿಗಮಪ' ಕಾರ್ಯಕ್ರಮದ ಅಂತಿಮ ಸುತ್ತನ್ನು ಪ್ರವೇಶಿಸಿದ್ದೇನೆ. ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಕಲಿಯುತ್ತಿದ್ದೇನೆ.

    (ಸತೀಶ್ ಹಾಗೂ ನಂದಿನಿ ದಂಪತಿಗಳ ಏಕೈಕ ಪುತ್ರ ಸಚಿನ್. ವೃತ್ತಿಯಲ್ಲಿ ಸತೀಶ್ ಮತ್ತು ನಂದಿನಿ ಇಬ್ಬರೂ ಎಂಜಿನಿಯರ್ ಗಳು. ಬೆಂಗಳೂರು ಪದ್ಮನಾಭನಗರದ ಕಾರ್ಮೆಲ್ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದಾನೆ ಸಚಿನ್. ಏರೋನಾಟಿಕಲ್ ಎಂಜಿನಿಯರ್ ಆಗಬೇಕೆಂಬುದು ಈ ಪುಟ್ಟ ಪೋರನ ಬಹು ದೊಡ್ಡ ಕನಸು. ಎನ್ ಎಎಲ್ ನಲ್ಲಿ ವಿಜ್ಞಾನಿಯಾಗಿರುವ ಸಚಿನ್ ಸಂಬಂಧಿ ಡಾ.ಅರುಣ್ ಕುಮಾರ್ ಅವರು ಇದಕ್ಕೆ ಸ್ಫೂರ್ತಿ.)

    Tuesday, July 28, 2009, 16:24
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X