»   » ಹೀಗೊಬ್ಬ ಚಿತ್ರಮಂದಿರಗಳ ಮೇಕಪ್ ಕಲಾವಿದ!

ಹೀಗೊಬ್ಬ ಚಿತ್ರಮಂದಿರಗಳ ಮೇಕಪ್ ಕಲಾವಿದ!

Subscribe to Filmibeat Kannada

ಚಿತ್ರಮಂದಿರ ತಲುಪುವ ವೇಳೆಗೆ ಸಿನಿಮಾ ಶುರುವಾಗಿರುತ್ತದೆ. ಕತ್ತಲಲ್ಲಿ ತಮ್ಮ ನಂಬರಿನ ಸೀಟನ್ನು ತಡಕಾಡಿಕೊಂಡು ಹೋಗಿ ಕುಳಿತರೆ ಮುಗೀತು. ಕಣ್ಣುಗಳು ಬೆಳ್ಳಿಪರದೆಗೆ ಅಂಟಿಕೊಳ್ಳುತ್ತವೆ. ಮಧ್ಯಂತರದಲ್ಲಿ ಝಗ್ಗನೆ ದೀಪಗಳು ಹೊತ್ತಿಕೊಂಡಾಗ ಕಾಲ ಬುಡದಲ್ಲಿನ ನರಕ ಗೋಚರವಾಗುವುದು. ನಮ್ಮ ಆಗನಕ್ಕಾಗಿಯೇ ಕಾದು ಕುಳಿತಿರುವ ಪರಾನ್ನ ಜೀವಿಗಳು ಸದ್ದಿಲ್ಲದಂತೆ ರಕ್ತ ಹೀರುತ್ತಿರುತ್ತವೆ. ಇನ್ನು ಕುರುಕಲು ತಿಂಡಿಗೆ ಅಂತ ಎದ್ದರೆ, ಕಾರ್ಮೋಡವನ್ನು ನಾಚಿಸುವ ಸಿಗರೇಟ್ ಹೊಗೆ ಆಹ್ವಾನಿಸುತ್ತದೆ. ಅಲ್ಲಿನ ಗೋಡೆಗಳ ಅಂದಚೆಂದ ಆ ದೇವರೇ ಬಲ್ಲ. ಇದಿಷ್ಟು ಸಿನಿಮಾ ಮಂದಿರ ಎಂದ ಕೂಡಲೆ ಕಣ್ಣಮುಂದೆ ಬಂದು ನಿಲ್ಲುವ ದೃಶ್ಯ.

ಕಾನೂನು ಕಟ್ಟಳೆಗಳನ್ನು ಗಾಳಿಗೆ ತೂರಿ ಸಿನಿಮಾ ಮಂದಿರಗಳು ಹೇಗೆ ಗಬ್ಬೆದ್ದು ಹೋಗಿವೆ ಎಂದರೆ ಮುಗುಮುಚ್ಚಿಕೊಂಡು ಸಿನಿಮಾ ನೋಡುವ ವಾತಾವರಣವನ್ನು ಸೃಷ್ಟಿಸಿವೆ. ಈ ರೀತಿಯ ನರಕಸದೃಶ ಸಿನಿಮಾ ಮಂದಿರಗಳನ್ನು ಗುತ್ತಿಗೆಗೆ ತೆಗೆದುಕೊಂಡು ಕಾಯಕಲ್ಪ ನೀಡಿ ಸರ್ವಾಂಗ ಸುಂದರವಾಗಿಸುವ ಕೆಲಸವನ್ನು ಕುಮಾರ್ ಅವರು ಬಹಳ ವರ್ಷಗಳಿಂದ ಮಾಡುತ್ತಾ ಬಂದಿದ್ದಾರೆ. ಇದೀಗ ಮತ್ತೊಂದು ಚಿತ್ರಮಂದಿರ ಒಪ್ಪಓರಣವಾಗಿ ನವವಧುವಿನಂತೆ ಸಿಂಗಾರವಾಗಿದೆ. ಅದೇ ಮೈಸೂರಿನ ಪದ್ಮಾ ಚಿತ್ರಮಂದಿರ.

ತೆಲುಗು ಚಿತ್ರಗಳೇ ಹೆಚ್ಚಾಗಿ ಪ್ರದರ್ಶನ ಕಾಣುತ್ತಿದ್ದ 'ಮೆಜೆಸ್ಟಿಕ್' ಚಿತ್ರಮಂದಿರವನ್ನು ಗುತ್ತಿಗೆ ತೆಗೆದುಕೊಂಡು ನವೀಕರಿಸಿ ಕನ್ನಡ ಚಿತ್ರಮಂದಿರವಾಗಿ ಮಾಡಿದ್ದು ಕುಮಾರ್. ಕಾರಣಾಂತರಗಳಿಂದ ಮೆಜೆಸ್ಟಿಕ್ ಚಿತ್ರಮಂದಿರ ಮುಚ್ಚುವ ಹಂತದಲ್ಲಿದೆ. ಕುಮಾರ್ ಇದುವರೆಗೂ ಗುತ್ತಿಗೆಗೆ ಪಡೆದು ಜೀರ್ಣೋದ್ಧಾರ ಮಾಡಿದ ಚಿತ್ರಮಂದಿರಗಳ ಸಂಖ್ಯೆ ಬರೋಬ್ಬರಿ ಇಪ್ಪತ್ತೊಂಬತ್ತು. ಈಗ 700 ಆಸನಗಳ ಮೈಸೂರಿನ ಪದ್ಮಾ ಚಿತ್ರಮಂದಿರವನ್ನು ಶುಚಿಯಾಗಿಡಲು 50 ಲಕ್ಷ ರು.ಗಳನ್ನು ತೆಗೆದಿಟ್ಟಿದ್ದಾರೆ.

ಚಿತ್ರ ವಿತರಕರೂ ಆಗಿರುವ ಕುಮಾರ್, ಒಂದು ತಿಂಗಳ ಕಾಲ ಅವರದೇ ಆದ ಚಿತ್ರೋತ್ಸವವನ್ನು ನಡೆಸಲಿದ್ದಾರೆ. ಅಂದರೆ ಈ ವಾರ ಬಿಡುಗಡೆಯಾಗಿರುವ 'ಅರಮನೆ', ಮುಂದಿನ ವಾರ 'ಜ್ಞಾನಜ್ಯೋತಿ ಶ್ರೀ ಸಿದ್ಧಗಂಗಾ' ನಂತರ ಬಿಡುಗಡೆಯಾಗುವ 'ಬಾಬಾ', 'ಜಿಂದಗಿ' ಚಿತ್ರಗಳು ಪ್ರದರ್ಶನ ಪದ್ಮ ಚಿತ್ರಮಂದಿರದಲ್ಲಿ ತೆರೆ ಕಾಣಲಿವೆ.

(ದಟ್ಸ್‌ಕನ್ನಡ ಸಿನಿವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada