»   » ಸರೋಜಾತಾರಾ ಮಂಡೋದರಿ ತಥಾ

ಸರೋಜಾತಾರಾ ಮಂಡೋದರಿ ತಥಾ

Subscribe to Filmibeat Kannada

ಒಂದು ಕಾಲದಲ್ಲಿ ಬೆಳ್ಳಿತೆರೆಯಲ್ಲಿ ಬೆಳಗಿದ ಅಭಿನೇತ್ರಿ ಡಾ.ಬಿ.ಸರೋಜಾದೇವಿ ಕಿರುತೆರೆಯ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆರ್.ಎನ್.ಜಯಗೋಪಾಲ್ ನಿರ್ಮಿಸಿ, ನಿರ್ದೇಶಿಸುತ್ತಿರುವ ಕಿರುತೆರೆಯ ಧಾರಾವಾಹಿ 'ರಾಮಾಯಣ'ದಲ್ಲಿ ರಾವಣನ ಹೆಂಡತಿ 'ಮಂಡೋದರಿ'ಯ ಪಾತ್ರ ನಿರ್ವಹಿಸುತ್ತಾರೆ. ಲಂಕಾಧಿಪತಿ ರಾವಣನ ಪಾತ್ರಧಾರಿಯಾಗಿ ಆರ್.ಎನ್.ಜಯಗೋಪಾಲ್ ಅವರ ಸೋದರ ಆರ್.ಎನ್.ಸುದರ್ಶನ್ ನಟಿಸುತ್ತಿದ್ದಾರೆ.

ಬಿ.ಸರೋಜಾದೇವಿ ಅಂದರೆ ಕನ್ನಡಿಗರಿಗೆ ನೆನಪಾಗುವುದು ಕಿತ್ತೂರು ರಾಣಿ ಚೆನ್ನಮ್ಮನ ಪಾತ್ರ.ಅರುವತ್ತರ ದಶಕದಲ್ಲಿ ಅವರು ನಟಿಸಿರುವ ಕಪ್ಪು-ಬಿಳುಪು ಚಿತ್ರಗಳು ಇಂದಿಗೂ ಪುಳಕ ಹುಟ್ಟಿಸುತ್ತವೆ. ಇತ್ತೀಚೆಗೆ 2006ರಲ್ಲಿ ಬಿಡುಗಡೆಯಾದ 'ತಿಮ್ಮ' ಚಿತ್ರದಲ್ಲಿ ಸರೋಜಾದೇವಿ ತಾಯಿಯ ಪಾತ್ರದಲ್ಲಿ ನಟಿಸಿದ್ದರು. ತಿಂಗಳ ಹಿಂದೆ ಖ್ಯಾತ ನಿರ್ದೇಶಕ ಕೆ.ಎಸ್.ಎಲ್.ಸ್ವಾಮಿ ಅವರು ಬಿ.ಸರೋಜಾದೇವಿ ಕುರಿತ ಸಾಕ್ಷ್ಯ ಚಿತ್ರವನ್ನು ಆರಂಭಿಸಿದ್ದಾರೆ. ಈಗ ಕಿರುತೆರೆಯ ಧಾರಾವಾಹಿಯಲ್ಲಿ ರಾವಣನ ಮಡದಿಯಾಗಿ ನಟಿಸುತ್ತಿದ್ದಾರೆ.

ಹಿಂದಿಯಲ್ಲಿ ಪ್ರಸಾರವಾದ ರಮಾನಂದ ಸಾಗರ್ ನಿರ್ದೇಶನದ ರಾಮಾಯಣಕ್ಕೂ ಆರ್.ಎನ್.ಜಯಗೋಪಾಲ್ ಅವರ ಕನ್ನಡ ರಾಮಾಯಣಕ್ಕೂ ಸಾಕಷ್ಟು ವ್ಯತ್ಯಾಸವಿರುತ್ತದೆ. ಆರ್.ಎನ್. ಜಯಗೋಪಾಲ್ ಅವರು ರಾಮಾಯಣದ ಬಗ್ಗೆ ತಮ್ಮದೇ ಆದ ಸಂಶೋಧನೆ ಮಾಡಿ ಧಾರಾವಾಹಿಯನ್ನು ನಿರ್ದೇಶಿಸಿದ್ದಾರೆ. ಮಾ.9ರಿಂದ ಕನ್ನಡದ ರಾಮಾಯಣ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

ಅರುವತ್ತರ ದಶಕದಲ್ಲಿ ದಕ್ಷಿಣ ಭಾರತ ಹಾಗೂ ಹಿಂದಿ ಚಿತ್ರರಂಗದಲ್ಲಿ ಬಿಡುವಿಲ್ಲದ ನಟಿ ಎನಿಸಿಕೊಂಡಿದ್ದ ಬಿ.ಸರೋಜಾದೇವಿ ಅವರು ಆ ಕಾಲದಲ್ಲೇ ಆರ್‌ಎನ್‌ಆರ್ ಪ್ರೊಡಕ್ಷನ್ಸ್ ನಿರ್ಮಾಣದ 'ವಿಜಯನಗರ ವೀರಪುತ್ರ' ಚಿತ್ರದಲ್ಲಿ ನಾಯಕಿಯ ಪಾತ್ರದಲ್ಲಿ ನಟಿಸಲು ಒಪ್ಪಿದ್ದರು. ಅಂದಿನಿಂದ ಇಂದಿನವರೆಗೂ ನಮ್ಮ ಸ್ನೇಹ ಸಂಬಂಧ ಹಳಸಿಲ್ಲ. ಆ ಕಾರಣಕ್ಕೆ 'ಮಂಡೋದರಿ'ಯ ಪಾತ್ರದಲ್ಲಿ ನಟಿಸಲು ಒಪ್ಪಿಕೊಂಡೆ. 'ರಾಮಾಯಣ' ಟೆಲಿ ಚಿತ್ರದಲ್ಲಿ ನಟಿಸುತ್ತಿರುವುದರಿಂದ ತನಗೆ ತುಂಬಾ ಸಂತೋಷವಾಗಿದೆ ಎಂದು ಅವರು ಇತ್ತೀಚೆಗೆ ಚಾಲನೆಗೊಂಡ ಆರ್‌ಎನ್‌ಆರ್ ಸ್ಟುಡಿಯೋ ಉದ್ಘಾಟನಾ ಸಮಾರಂಭದಲ್ಲಿ ತಿಳಿಸಿದರು.

(ದಟ್ಸ್‌ಕನ್ನಡ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada