»   » ಮೆಗಾ ಸ್ಟಾರ್ ಚಿರಂಜೀವಿ ಚಿತ್ರನಿರ್ದೇಶಿಸುವ ಯೋಗ!

ಮೆಗಾ ಸ್ಟಾರ್ ಚಿರಂಜೀವಿ ಚಿತ್ರನಿರ್ದೇಶಿಸುವ ಯೋಗ!

Posted By:
Subscribe to Filmibeat Kannada

ಅವರೇ ಹೇಳುವ ಪ್ರಕಾರ ಯೋಗರಾಜ ಭಟ್ಟರು ಯಾರೂ ನಂಬಲಾರದಂಥ ಸಾಹಸಗಳಿಗೆ ಕೈ ಹಾಕುತ್ತಿದ್ದಾರೆ. ಅವುಗಳಲ್ಲಿ ಒಂದು ಸ್ಯಾಂಪಲ್ಲು: ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ಚಿತ್ರವನ್ನು ನಿರ್ದೇಶಿಸುವುದು!

ಇದು ನಿಜವೇ? ಸ್ವತಃ ಯೋಗರಾಜ ಭಟ್ಟರು ಉತ್ತರಿಸುತ್ತಾರೆ: "ನಿಮ್ಮಾಣೆಗೂ ನಿಜ. ಇಂಥದ್ದೊಂದು ಆಫರ್ ಬಂದಾಗ ನಂಬಲಾಗಲಿಲ್ಲ. ಆದರೆ ಚಿರಂಜೀವಿಯವರಿಗೆ ತೀರಾ ಆಪ್ತರಾದ ಅಶ್ವಿನಿದತ್ ಅವರು ಆಫರ್ ನೀಡಿದಾಗ ನಂಬದಿರುವುದಾದರೂ ಹೇಗೆ ಸಾಧ್ಯ ನೀವೇ ಹೇಳಿ?" ಎಂದು ನಗುತ್ತಾರೆ ಭಟ್ಟರು.

ಆದರೆ ಭಟ್ಟರಿಗೆ ತಮ್ಮದೇ ಆದ ಆತಂಕವಿದೆ, ಜೊತೆಗೆ ಭಯವೂ ಇದೆ. "ಏಕೆಂದರೆ ಒಂದರ್ಥದಲ್ಲಿ ಚಿರಂಜೀವಿ ತನ್ನದೇ ಇಮೇಜ್ ಬೆಳೆಸಿಕೊಂಡಿರುವ ನಟ. ಇಂಥ ನಟನಿಗೆ ಹೀಗೆ ಮಾಡು ಅಂತ ನಿರ್ದೇಶನ ನೀಡುವುದು ನನ್ನಿಂದಾಗುವ ಕೆಲಸವಾ? ಇಷ್ಟಕ್ಕೂ ಅವರ ಇಮೇಜ್ ಗೆ ತಕ್ಕುದಾದ ಕಥೆ ಹುಡುಕಬೇಕು. ನಿರ್ದೇಶನ ನೀಡಬೇಕು. ಹೊಸಬರಾದರೆ ಹೇಗೆ ಬೇಕಾದರೂ ನಿರ್ದೇಶಿಸಬಹುದು. ಆದರೆ ಒಂದು ಇಮೇಜ್ ಬೆಳೆಸಿಕೊಂಡಿರುವ ಮಹಾ ನಟರ ಬಗ್ಗೆ ಹೀಗೆ ಎಂದು ಹೇಳಲಾಗದು" ಎಂದು ಹೇಳಿ ತಮ್ಮ ಆತಂಕವನ್ನು ವ್ಯಕ್ತಪಡಿಸುತ್ತಾರೆ ಯೋಗರಾಜಭಟ್ಟರು.

ಆದರೂ ಅಶ್ವಿನಿದತ್ ಅವರ ಕಡೆಯಿಂದ ಒತ್ತಡ ಹೆಚ್ಚುತ್ತಿದೆ. 'ಗಾಳಿಪಟ' ಬಿಟ್ಟಾಗಿದೆ. ಮುಂದೇನು? ಚಿರಂಜೀವಿ ಚಿತ್ರನಾ? ಧರ್ಮಸ್ಥಳದಲ್ಲಿ ಪ್ರಕೃತಿ ಚಿಕಿತ್ಸೆಪಡೆದು ಹಿಂತಿರುಗಿದ ಬಳಿಕ ಭಟ್ಟರ ಮುಂದಿನ ಹೆಜ್ಜೆಗಳನ್ನು ನೋಡುವಾ.

ಕೊನೆ ಸಿಡಿ: ಮುಂಗಾರುಮಳೆಯ ಸೂಪರ್ ಡೂಪರ್ ಯಶಸ್ಸು , ಗಾಳಿಪಟದ ಸೂಪರ್ ಯಶಸ್ಸುಗಳು ಎಲ್ಲೋ ಇದ್ದ ಯೋಗರಾಜ ಭಟ್ಟರನ್ನು ಕೀರ್ತಿ ಶಿಖರಕ್ಕೆ ಏರಿಸಿದೆ.ಅವರಿಗೆ ಇನ್ನಷ್ಟು ಕೀರ್ತಿಗಳು ದಕ್ಕಲಿ. ಆದರೆ, ಕೀರ್ತಿ ಶನಿಯನ್ನು ಹೆಗಲಿಗೇರಿಸಿಕೊಂಡು ತಿರುಗುವ ಸಾಹಸದಲ್ಲಿ ಭಟ್ಟರು ಮುಗ್ಗರಿಸದಿರಲಿ. ಇಲ್ಲಾದರೆ ಕೈ ಹಿಡಿದು ಎತ್ತುವುದಕ್ಕೆ ಜನ ಸಿಕ್ಕರೂ ಸಿಕ್ಕಾರು. ಅಲ್ಲಿಗೆ ಹೋಗಿ ಅವಲಕ್ಷಣ ಅನ್ನಿಸಿಕೊಂಡರೆ ಏಮ್ ಚೇಷೇದಿ? ಬಾಬುಗಾರು, ಮೀರು ಏಮಂಟಾರು ?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada