»   » ಕನಸುಗಾರ ರವಿ-ರೀಮೇಕು ತಜ್ಞ ಡಿ.ರಾ.ಬಾಬು ಬೆಸುಗೆ

ಕನಸುಗಾರ ರವಿ-ರೀಮೇಕು ತಜ್ಞ ಡಿ.ರಾ.ಬಾಬು ಬೆಸುಗೆ

Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೋ

ಅಣ್ಣಯ್ಯ, ರಾಮಾಚಾರಿ, ಶ್ರೀರಾಮಚಂದ್ರ, ನಾನು ನನ್ನ ಹೆಂಡ್ತೀರು, ಯಾರೇ ನೀನು ಚೆಲುವೆ- ಹೀಗೆ ರೀಮೇಕುಗಳಾದರೂ ಹಿಟ್‌ ಚಿತ್ರಗಳನ್ನು ಕೊಟ್ಟ ಜೋಡಿ ರವಿಚಂದ್ರನ್‌ ಹಾಗೂ ಡಿ.ರಾಜೇಂದ್ರ ಬಾಬು. ನಾನು ನನ್ನ ಹೆಂಡ್ತೀರು ಗಲ್ಲಾ ಪೆಟ್ಟಿಗೆಯಲ್ಲಿ ಡಲ್ಲಾದ ನಂತರ ರವಿ ಹಾಗೂ ಡಿ.ರಾ.ಬಾಬು ಕೂಡಿ ಕೆಲಸ ಮಾಡುವ ಸಾಹಸವನ್ನು ಕೈಬಿಟ್ಟಿದ್ದರು.

ಆ ನಂತರ ರವಿಚಂದ್ರನ್‌ ಮಟ್ಟುಗಾರ ಹಾಗೂ ಸಾಹಿತಿಯೂ ಆದದ್ದು, ಸಾಕಷ್ಟು ಸುರಿದು ‘ಏಕಾಂಗಿ’ ಮಾಡಿ ಕೈಸುಟ್ಟಿಕೊಂಡದ್ದು ಗೊತ್ತೇ ಇದೆ. ಏಕಾಂಗಿ ನಂತರ ‘ಶಕುನಿ’ ಕೆಲಸ ಯಾವ ಹಂತಕ್ಕೆ ಬಂದು ನಿಂತಿತು ಅನ್ನುವುದೂ ಗೊತ್ತಾಗಲಿಲ್ಲ. ನಡುವೆ ಬಂದ ‘ಕೋದಂಡ ರಾಮ’ ಕೂಡ ಉದ್ದಂಡ ಮಲಗಿತು. ಹೀಗಾಗಿ ರವಿಗೆ 2002ನೇ ಇಸವಿ ಸರಿಹೋಗಲಿಲ್ಲ.

ಈಗ ತಾವು ಜಾಗೃತರಾಗಿರುವುದಾಗಿ ಖುದ್ದು ರವಿ ಹೇಳಿಕೊಂಡಿದ್ದಾರೆ. ಅದಕ್ಕೇ ಆತುರ ಬೀಳುತ್ತಿಲ್ಲವಂತೆ. ಹೀಗಾಗಿ ಸದ್ಯಕ್ಕೆ ತಮ್ಮದೇ ದುಡ್ಡಿನ ಚಿತ್ರಗಳ ಕೆಲಸಕ್ಕೆ ಅಲ್ಪ ವಿರಾಮ. ಈ ಅಲ್ಪವಿರಾಮವನ್ನೇ ಎನ್‌ಕ್ಯಾಷ್‌ ಮಾಡಿಕೊಳ್ಳಲು ಮಕ್ಕಾಡೆ ಮಲಗಿದ ‘ದೇವರ ಮಗ’ ಎಂಬ ಚಿತ್ರದ ನಿರ್ಮಾಪಕ ಗಣೇಶ್‌ ಹಾಗೂ ‘ರಂಗೇನ ಹಳ್ಳಿಯಾಗ ರಂಗಾದ ರಂಗೇಗೌಡ’ ಎಂಬ ಸಾಧಾರಣ ಯಶಸ್ಸಿನ ಸವಿಯುಂಡ ಪ್ರವೀಣ್‌ಕುಮಾರ್‌ ನಿರ್ಧರಿಸಿದರು. ರವಿಚಂದ್ರನ್‌ ಕಾಲ್‌ಷೀಟು ಈ ನಿರ್ಮಾಪಕರಿಗೆ ಸಿಕ್ಕಿದೆ. ಹಳೆಯ ಯಶಸ್ಸಿನ ಹಿಂದೆ ಕೆಲಸ ಮಾಡಿದ್ದ ಡಿ.ರಾ.ಬಾಬು ಈ ಚಿತ್ರವನ್ನು ನಿರ್ದೇಶಿಸುತ್ತಿರುವುದು ರವಿಚಂದ್ರನ್‌ಗೂ ಖುಷಿ ತಂದಿದೆ.

ಅಂದಹಾಗೆ, ರವಿ ಅಭಿನಯಿಸಲಿರುವ ಈ ಚಿತ್ರಕ್ಕೆ ಇನ್ನೂ ನಾಮಕರಣವಾಗಿಲ್ಲ . ಹಾಡುಗಳ ರೆಕಾರ್ಡಿಂಗ್‌ ಕೆಲಸ ಈ ವಾರವೋ ಮುಂದಿನ ವಾರವೋ ಶುರುವಾಗಲಿದೆ. ರವಿಚಂದ್ರನ್‌ ಕೈಲೇ ಮಟ್ಟು ಹಾಕಿಸುವುದೋ, ಇನ್ಯಾರಾದರೂ ಸಂಗೀತಗಾರರನ್ನು ಹಿಡಿಯುವುದೋ ಎಂಬ ಗೊಂದಲದಲ್ಲಿ ಡಿ.ರಾ.ಬಾಬು ಇದ್ದಾರೆ. ಏಕಾಂಗಿ ಸಂಗೀತದ ಯಶಸ್ಸು ರವಿಗೇ ಮಟ್ಟು ಹಾಕುವ ಅವಕಾಶ ಕೊಡುವಂತೆ ಮಾಡಿದರೂ ಅಚ್ಚರಿಯಿಲ್ಲ.

ಈ ಹೊಸ ಸಿನಿಮಾದಲ್ಲಿ ಹಳ್ಳಿ ಕತೆ ಇರುತ್ತದೆ ಅಂತಷ್ಟೇ ಹೇಳುವ ಡಿ.ರಾ.ಬಾಬು ಉಳಿದ ಪಾತ್ರಗಳ ಆಯ್ಕೆ ನಡೆಯುತ್ತಿದೆ ಎಂದು ನಕ್ಕರು.

Post your views

ಮುಖಪುಟ / ಸ್ಯಾಂಡಲ್‌ವುಡ್‌
Please Wait while comments are loading...