»   » ಪುಟ್ಟಣ್ಣನೆಂಬ ‘ಸಾರ್ವಭೌಮ’ !

ಪುಟ್ಟಣ್ಣನೆಂಬ ‘ಸಾರ್ವಭೌಮ’ !

Posted By: Staff
Subscribe to Filmibeat Kannada

ಮೊನ್ನೆ ಉದಯ ಟೀವಿಯಲ್ಲಿ ದಿವಂಗತ ನಟ ಗಂಗಾಧರ್‌ ಅವರ ಸಂದರ್ಶನವನ್ನಾಧರಿಸಿದ ಕಾರ್ಯಕ್ರಮವೊಂದು ಮರು ಪ್ರಸಾರವಾಯಿತು. ಗಂಗಾಧರ್‌ ಸಾಯುವ ಮುನ್ನ ಚಿತ್ರೀಕರಿಸಿದ್ದ ಸಂದರ್ಶನವದು. ಮಾತಿನ ನಡುವೆ ಗಂಗಾಧರ್‌ ಹೇಳಿದ ಒಂದು ಮಾತು :

'ಸಂಭಾಷಣೆಯನ್ನು ತಪ್ಪು ಹೇಳಿದರೆ ಅಥವಾ ಪದಗಳಲ್ಲಿನ ಭಾವನೆ ಮಾತಿನಲ್ಲಿ ಹೊರಹೊಮ್ಮದಿದ್ದರೆ ಪುಟ್ಟಣ್ಣ ಸಿಟ್ಟಾಗುತ್ತಿದ್ದರು. ಮುಖ ಕಿವಿಚಿಕೊಳ್ಳುತ್ತಿದ್ದರು. ಈ ಸಂಭಾಷಣೆ ಬರೆಯಲಿಕ್ಕೆ ಪಟ್ಟ ಕಷ್ಟ ನಿಮಗೇನು ಗೊತ್ತು ಎಂದು ಬಯ್ಯುತ್ತಿದ್ದರು.."

ಪುಟ್ಟಣ್ಣ ಕಣಗಾಲರನ್ನು ನೆನೆಸಿಕೊಂಡು ಗಂಗಾಧರ್‌ ಭಾವುಕರಾದರು. ಗಂಗಾಧರ್‌ ಹೇಳಿದುದರಲ್ಲಿ ಕಿಂಚಿತ್ತೂ ಉತ್ಪ್ರೇಕ್ಷೆಯಿಲ್ಲ . ಕಣಗಾಲರು ಇದ್ದುದೇ ಹಾಗೆ ; ಅವರಿಗೆ ಅವರೇ ಸಾಟಿ. 'ಕನ್ನಡಕ್ಕೊಬ್ಬರೇ ಪುಟ್ಟಣ್ಣ !"

ಪುಟ್ಟಣ್ಣ ಕಣಗಾಲ್‌ರಂತೆ ಸಿನಿಮಾ ಮಾಧ್ಯಮದ ಮೇಲೆ ಛಾಪು ಹಾಕಿದ ಮತ್ತೊಬ್ಬ ನಿರ್ದೇಶಕನನ್ನು ಕನ್ನಡ ಚಿತ್ರರಂಗ ಕಂಡಿದ್ದೇ ಇಲ್ಲ . ಸೋಲು ಗೆಲುವುಗಳನ್ನು ಪುಟ್ಟಣ್ಣ ಕೂಡಾ ಅನುಭವಿಸಿದ್ದಾರಾದರೂ, ಚಿತ್ರದ ಗುಣಮಟ್ಟದ ಬಗ್ಗೆ ಮಾತ್ರ ಪುಟ್ಟಣ್ಣ ಯಾವತ್ತೂ ರಾಜಿಯಾದವರಲ್ಲ . ಸಂಭಾಷಣೆ, ಗೀತೆ, ಚಿತ್ರೀಕರಣದ ಸ್ಥಳ ಪ್ರತಿಯಾಂದರ ಬಗ್ಗೆಯೂ ಪುಟ್ಟಣ್ಣ ಇನ್ನಿಲ್ಲದ ಆಸ್ಥೆ ವಹಿಸುತ್ತಿದ್ದರು.

ಶರಪಂಜರ ಚಿತ್ರದ ಒಂದು ಗೀತೆಯ ಚಿತ್ರೀಕರಣಕ್ಕೆ ಪುಟ್ಟಣ್ಣ ಒಂದು ಲಾರಿಯ ತುಂಬಾ ಕಿತ್ತಳೆ ಹಣ್ಣು ತರಿಸಿದ್ದರಂತೆ. ಆ ಗೀತೆಯ ದೃಶ್ಯೀಕರಣಕ್ಕೆ 10 ಸಾವಿರ ರುಪಾಯಿ ಖರ್ಚಾಗಿತ್ತಂತೆ. ಆ ಕಾಲದಲ್ಲಿ ಅದು ದುಬಾರಿ ಮೊತ್ತ . ನಿರ್ಮಾಪಕರಂತೂ ಕಂಗಾಲಾಗಿದ್ದರು. ನಿರ್ಮಾಪಕರು ಸಮಾಧಾನದ ಉಸಿರು ಬಿಟ್ಟಿದ್ದು 'ಶರ ಪಂಜರ" ಬಿಡುಗಡೆಯಾದ ನಂತರ ; 'ಕೊಡಗಿನ ಕಾವೇರಿ" ಹಾಡು ಯದ್ವಾತದ್ವಾ ಜನಪ್ರಿಯ ಆದ ನಂತರ.

ಪುಟ್ಟಣ್ಣ ಈಗ ನೆನಪಾಗಲಿಕ್ಕೆ ಕಾರಣ ಶಿವರಾಜ್‌ಕುಮಾರ್‌ ನಾಯಕರಾಗಿ ಅಭಿನಯಿಸುತ್ತಿರುವ 'ಸಾರ್ವಭೌಮ" ಚಿತ್ರದ ಚಿತ್ರೀಕರಣ. ಮೊನ್ನೆ ಶ್ರೀರಂಗಪಟ್ಟಣದಲ್ಲಿ ನಡೆದ ಚಿತ್ರೀಕರಣದಲ್ಲಿ , ಗೀತೆಯಾಂದರ ದೃಶ್ಯಕ್ಕಾಗಿ ಮಿನಿ ಲಾರಿಯಾಂದರ ತುಂಬಾ ಕಿತ್ತಳೆ ತರಿಸಿದಾಗ ಕೆಲವರು ಪುಟ್ಟಣ್ಣನವರನ್ನು ನೆನಪಿಸಿಕೊಂಡರು. ಹೋಲಿಕೆ ಆ ಸಂದರ್ಭದ್ದು ಮಾತ್ರ!

ಕಿತ್ತಳೆಯಷ್ಟೇ ಅಲ್ಲ , ಅನೇಕ ತರಕಾರಿಗಳನ್ನು ಗೀತೆಯ ಚಿತ್ರೀಕರಣಕ್ಕೆ ಬಳಸಲಾಯಿತು. ಶಿವರಾಜ್‌ ಹಾಗೂ ಶಿಲ್ಪಾ ಶಿವಾನಂದ್‌ ಹಾಡಿ ಕುಣಿದರು. ಚಿತ್ರದ ನಿರ್ದೇಶನ 'ಸೈನಿಕ" ಮಹೇಶ್‌ ಸುಖಧರೆಯದು.

ಫೆಬ್ರವರಿ ತಿಂಗಳಲ್ಲಿ 'ಸಾರ್ವಭೌಮ" ತೆರೆ ಕಾಣುತ್ತದಂತೆ. ಪಾಕಿಸ್ತಾನದ ಜೈಲಿನಲ್ಲಿ ಯೌವನ ಕಳೆದು ಬಂದ ನಾರಾಯಣ ಎನ್ನುವ ವ್ಯಕ್ತಿಯ ಕಥೆ ಗೊತ್ತಲ್ಲ ; ಆ ಪ್ರಕರಣದ ಎಳೆಯನ್ನು 'ಸಾರ್ವಭೌಮ" ಚಿತ್ರಕ್ಕಾಗಿ ಕಥೆಯನ್ನಾಗಿ ಬಳಸಿಕೊಳ್ಳಲಾಗಿದೆ. ಸುಖಧರೆ ಹಾಗೂ ಶಿವರಾಜ್‌ ಇಬ್ಬರಿಗೂ 'ಸಾರ್ವಭೌಮ" ಚಿತ್ರದ ಬಗ್ಗೆ ಅಪಾರ ನಿರೀಕ್ಷೆಗಳಿವೆ. ಆ ನಿರೀಕ್ಷೆಗಳು ಹುಸಿಯಾಗದಿರಲಿ.

English summary
On the sets : Sarvabhowma, Shivaraj Kumar starer Kannada Movie shooting in Srirangapattana

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada