»   » ರವಿ ‘ಸಾಹುಕಾರ’, ಅಪ್ಪನಾಗಿ ವಿಷ್ಣು !

ರವಿ ‘ಸಾಹುಕಾರ’, ಅಪ್ಪನಾಗಿ ವಿಷ್ಣು !

Posted By: Staff
Subscribe to Filmibeat Kannada

ರವಿಚಂದ್ರನ್‌ 'ಸಾಹುಕಾರ"ರಾಗುತ್ತಿದ್ದಾರೆ ! ಅವರು ಬಡವರಾಗಿದ್ದುದು ಯಾವಾಗ ಎಂದು ಕೇಳುವಂತಿಲ್ಲ . ಇದು ಸಿನಿಮಾ ವಾರ್ತೆ. ಹಾಗೆ ನೋಡಿದರೆ ಬಡತನವೆನ್ನುವುದು ರವಿಚಂದ್ರನ್‌ ಅವರ ಅಪ್ಪಾಜಿ ವೀರಸ್ವಾಮಿ ಅವರ ತಾರುಣ್ಯದ ಆರಂಭಗಳಿಗೇ ಕೊನೆಗೊಂಡಿತ್ತು . ರವಿಚಂದ್ರನ್‌ ಕಣ್ಣುಬಿಡುವ ಹೊತ್ತಿಗೆ ವೀರಸ್ವಾಮಿ ಮುಟ್ಟುವುದೆಲ್ಲ ಚಿನ್ನವಾಗುವ ಸಮಯ ಬಂದಾಗಿತ್ತು . ರವಿಚಂದ್ರನ್‌ ಆಗರ್ಭ 'ಸಾಹುಕಾರ"! ಈಗ ಸಿನಿಮಾ 'ಸಾಹುಕಾರ" ಆಗುತ್ತಿದ್ದಾರೆ.

'ಸಾಹುಕಾರ" ರಿಮೇಕ್‌ ಎಂದು ಬೇರೆ ಹೇಳಬೇಕಿಲ್ಲ ವಲ್ಲ ; ಹೇಳಿಕೇಳಿ ಇದು ರಿಮೇಕ್‌ ಸಮಯ. ತಮಿಳಿನ ತೆಲುಗಿನ ಹಿಟ್‌ ಚಿತ್ರಗಳು ಕನ್ನಡಕ್ಕೆ ಬರುತ್ತಿರುವ ಸಮಯ. ಒಂದಾನೊಂದು ಕಾಲದ ಕಮಲಹಾಸನ್‌, ರಜನಿಕಾಂತ್‌ರ ಹಿಟ್‌ ಚಿತ್ರಗಳು ಈಗ ಕನ್ನಡದಲ್ಲಿ ಕಣ್ಣುಬಿಡುತ್ತಿವೆ. ಧನ್ಯ ಧನ್ಯ ಕನ್ನಡಿಗ !

'ಸಾಹುಕಾರ"ನ ವಿಷಯವನ್ನಷ್ಟೇ ಮಾತನಾಡುವುದಾದರೆ- ಇದು ಮಲಯಾಳಂ ಚಿತ್ರವೊಂದರ ರಿಮೇಕ್‌. ಈ ಮಲಯಾಳಂ ಚಿತ್ರ 'ಮುತ್ತು" ಎನ್ನುವ ಹೆಸರಿನಲ್ಲಿ ತಮಿಳಿನಲ್ಲಿ ನಿರ್ಮಾಣವಾಗಿತ್ತು . ರಜನಿಕಾಂತ್‌ ಹಾಗೂ ಮೀನಾ ಅಭಿನಯದ 'ಮುತ್ತು" ಅದ್ದೂರಿ ಯಶಸ್ಸಿನ ಚಿತ್ರ. ಮೀನಾ ಹಾಗೂ ಆಕೆಯ ಕಣ್ಣುಗಳು ಜಪಾನಿಗರಿಗೆ ಹುಚ್ಚು ಹಿಡಿಸಿದುದು 'ಮುತ್ತು" ಚಿತ್ರದ ಮೂಲಕವೇ.

ರವಿಚಂದ್ರನ್‌ರ 'ಸಾಹುಕಾರ" ಚಿತ್ರಕ್ಕೆ ರಂಭಾ ನಾಯಕಿ. ವಿಷ್ಣುವರ್ಧನ್‌ರ ಗಳಸ್ಯಕಂಠಸ್ಯ ಗೆಳೆಯರಲ್ಲೊಬ್ಬರಾದ ಕೆ.ಮಂಜು 'ಸಾಹುಕಾರ" ಚಿತ್ರದ ನಿರ್ಮಾಪಕರು. ರಿಮೇಕ್‌ ಚಿತ್ರಗಳನ್ನು ಕನ್ನಡೀಕರಿಸುವುದರಲ್ಲಿ ಪಳಗಿರುವ ಓಂಪ್ರಕಾಶ್‌ ರಾವ್‌ ಅವರ ಕೈಗೆ ನಿರ್ದೇಶನದ ಸಾರಥ್ಯ ಸಿಕ್ಕಿದೆ. ಇನ್ನೊಬ್ಬ ಮಕ್ಕಿಕಾಮಕ್ಕಿ ಪರಿಣಿತ ರಾಜೇಶ್‌ ರಾಮನಾಥನ್‌ ಸಂಗೀತ ಸೂತ್ರ ಹಿಡಿದಿದ್ದಾರೆ. ಕೃಷ್ಣಸುಂದರಿ ಅನು ಪ್ರಭಾಕರ್‌ಗೆ 'ಸಾಹುಕಾರ" ಚಿತ್ರದಲ್ಲಿ ಗಮನಾರ್ಹ ಪಾತ್ರವೊಂದಿದೆಯಂತೆ.

ರವಿಚಂದ್ರನ್‌ಗೆ 'ಸಾಹುಕಾರ" ಚಿತ್ರದ ಬಗ್ಗೆ ಅಪಾರ ವಿಶ್ವಾಸವಿದೆ. ಗಡಿಬಿಡಿ ಗಂಡ ಹಾಗೂ ಅಣ್ಣಯ್ಯ ಚಿತ್ರಗಳ ಪಂಕ್ತಿಯಲ್ಲಿ ನಿಲ್ಲುವ ಚಿತ್ರ ಇದು ರವಿ ಪುಳಕಿತರಾದರು. ಅಂದರೆ, ಹೀರೋಯಿಸಂ ವಿಜೃಂಭಿಸುವ ಚಿತ್ರ !

ಕಳೆದ ವರ್ಷ ನಾನು ಸಾಲಗಾರನಾಗಿದ್ದೆ , ಈಗ ಸಾಹುಕಾರನಾಗುತ್ತಿದ್ದೇನೆ ಎಂದು ರವಿ 'ಸಾಹುಕಾರ" ಚಿತ್ರದ ಕುರಿತು ಚಟಾಕಿ ಹಾರಿಸುತ್ತಾರೆ. ಅವರ ನಗೆಯ ಹಿಂದೆ 'ಏಕಾಂಗಿ" ಚಿತ್ರದ ಸೋಲು ಕಾಣಿಸುತ್ತದೆ. ಅವರಿಗೀಗ ಅರ್ಜೆಂಟಾಗಿ ಒಂದು ಹಿಟ್‌ ಚಿತ್ರ ಬೇಕಾಗಿದೆ. ಬಿಡುಗಡೆಗೆ ಸಿದ್ಧವಾಗಿರುವ 'ಮಲ್ಲ" ಚಿತ್ರದ ಬಗ್ಗೆ ರವಿಗೆ ವಿಶ್ವಾಸವಿದೆ. ಮಲ್ಲಪ್ಪ ಗೆದ್ದರೆ 'ಸಾಹುಕಾರ"ನಿಗೂ ಅನುಕೂಲವಾಗುತ್ತದೆ.

ರವಿಗೆ ಅಪ್ಪನಾಗಿ ವಿಷ್ಣು : ಈಶ್ವರಿ ಪ್ರೊಡಕ್ಷನ್‌ ಚಿತ್ರಗಳೆಂದರೆ ಮುಂಚಿನಿಂದಲೂ ವಿಷ್ಣುವರ್ಧನ್‌ಗೆ ಒಂಥರಾ ಪ್ರೀತಿ. ಆ ಕಾರಣದಿಂದಲೇ ರವಿಚಂದ್ರನ್‌ರ ಮಹತ್ವಾಕಾಂಕ್ಷೆಯ ಚಿತ್ರ ಪ್ರೇಮಲೋಕದಲ್ಲಿ ವಿಷ್ಣು ಪುಟ್ಟ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು. ಆನಂತರ ಯಾರೇ ನೀನು ಚೆಲುವೆ ಚಿತ್ರದ ಪಾತ್ರವೊಂದರಲ್ಲೂ ವಿಷ್ಣು ಕಾಣಿಸಿಕೊಂಡಿದ್ದರು ; ಈ ಜೋಡಿ ಸಾಹುಕಾರ ಚಿತ್ರದ ಮೂಲಕ ಮುಂದುವರೆದಿದೆ.

ಸಾಹುಕಾರ ಚಿತ್ರದಲ್ಲಿ ವಿಷ್ಣುಗೆ ರವಿಚಂದ್ರನ್‌ ಅಪ್ಪನ ಪಾತ್ರ. ತಮಿಳಿನ ಮುತ್ತು ಚಿತ್ರದಲ್ಲಿ ಅಪ್ಪ-ಮಗ ಎರಡೂ ಪಾತ್ರಗಳನ್ನು ರಜನಿಕಾಂತ್‌ ಪೋಷಿಸಿದ್ದರು. ರಜನಿ ಪೋಷಿಸಿದ ಅಪ್ಪನ ಪಾತ್ರವನ್ನು ಕನ್ನಡದಲ್ಲಿ ವಿಷ್ಣು ಪೋಷಿಸುತ್ತಿದ್ದಾರೆ. ವಿಷ್ಣು ಸೇರ್ಪಡೆ 'ಸಾಹುಕಾರ" ಚಿತ್ರದ ಗೆಲುವಿಗೆ ನೆರವಾಗಬೇಕೆನ್ನುವುದು ನಿರ್ಮಾಪಕರ ಲೆಕ್ಕಾಚಾರ.

English summary
Ravichandran in the lead role in Saahukaara

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada