twitter
    For Quick Alerts
    ALLOW NOTIFICATIONS  
    For Daily Alerts

    ನಟ ಶ್ರೀನಿವಾಸ ಮೂರ್ತಿ ಅವರಿಗೊಂದು ಪತ್ರ

    By Staff
    |

    ನನ್ನ ಪೂರ್ತಾ ಹೆಸರು- ಜಿ.ಕೆ. ಶ್ರೀನಿವಾಸ ಮೂರ್ತಿ. ‘ಜೆ’ ಅಂದ್ರೆ ಜಡಲತಿಮ್ಮನಹಳ್ಳಿ. ‘ಕೆ’ ಅಂದ್ರೆ ಕೃಷ್ಣಪ್ಪ. ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ನಮ್ಮ ಊರಿದೆ. ಚಿಕ್ಕಬಳ್ಳಾಪುರದಲ್ಲೇ ನಾನು ಎಸ್ಸೆಸ್ಸೆಲ್ಸಿ ಮುಗಿಸ್ದೆ. ಆಗಿನ ಕಾಲದಲ್ಲಿ ಸರಕಾರಿ ನೌಕರಿ ಹಿಡೀಲಿಕ್ಕೆ ಅಷ್ಟು ಸಾಕಿತ್ತು. ಓದು ಮುಗಿದ ತಕ್ಷಣ- ಎಚ್‌.ಕೆ.ಯೋಗಾನರಸಿಂಹ ಅವರ ನಾಟಕ ಕಂಪನಿಯಲ್ಲಿ ಕೆಲಸ ಸಿಕ್ತು. ಅಲ್ಲಿ ಎಲ್ಲ ಪಾತ್ರಗಳಲ್ಲೂ ಅಭಿನಯಿಸಿದೆ. 1967ರಿಂದ 72ರವರೆಗೆ, ಬರಾಬರ್‌ 5 ವರ್ಷಗಳ ಕಾಲ ನಟನಾಗಿದ್ದೆ. ನಾಟ್ಕ ಮಾಡಿದೆ. ನಾಡು ಸುತ್ತಿದೆ!

    ನಾಟಕ ಕಂಪನಿ ಬಿಟ್ಟು 1972ರಲ್ಲಿ ಬೆಂಗ್ಳೂರಿಗೆ ಬಂದೆ. ಕೆಲಸ ಇರಲಿಲ್ಲ. ಬದುಕು ನಡೀಬೇಕಿತ್ತಲ್ಲ-(ಈಗಿನ ರಾಜ್‌ಕುಮಾರ್‌ ರಸ್ತೆಯಲ್ಲಿರೋ) ನವರಂಗ್‌ ಬಾರ್‌ನಲ್ಲಿ ಕೆಲ್ಸಕ್ಕೆ ಸೇರ್ಕೊಂಡೆ. ಕಡು ಕಷ್ಟದ ದಿನಗಳು ಅವು. ಆಗೆಲ್ಲ ಪ್ರಜಾವಾಣಿ ಪೇಪರ್‌ನ ಹಾಸಿ-ಹೊದ್ಕೊಂಡು ದಿನ ಕಳೆದದ್ದೂಯಿದೆ. 1974ರಲ್ಲಿ ಸಿದ್ಧಲಿಂಗಯ್ಯ ನಿರ್ದೇಶನದ ಹೇಮಾವತಿ ಸಿನಿಮಾದಲ್ಲಿ ಹೀರೋ ಪಾತ್ರವೇ ಸಿಕ್ತು. ಅದು ನನ್ನ ಮೊದಲ ಚಿತ್ರ. ಆಮೇಲೆ ನಾನು ಆ ಕಡೆ ಸರಕಾರಿ ನೌಕರಿ- ಈ ಕಡೆ ಸಿನಿಮಾ ಎರಡು ದೋಣಿಯ ಮೇಲೆ ಖುಷಿಯಿಂದಲೇ ಪಯಣ ಮಾಡ್ತಾ ಬಂದೆ.

    1989ರಲ್ಲಿ ನಾನು ಯಾಕೆ ಹಾಗೆ ಮಾಡಿದೆನೋ ಗೊತ್ತಿಲ್ಲ. ರಾಜಕೀಯಕ್ಕೆ ಬಂದೆ. ದೇವೇಗೌಡರ ಜನತಾಪಕ್ಷದ ಅಭ್ಯರ್ಥಿಯಾಗಿ ದೊಡ್ಡಬಳ್ಳಾಪುರದಿಂದ ಎಂ.ಎಲ್‌.ಎ ಸ್ಥಾನಕ್ಕೆ ಸ್ಪರ್ಧಿಸ್ದೆ. ನನ್ನ ಎದುರಾಳಿ ಆಗಿದ್ದವರು ಆರ್‌.ಎಲ್‌.ಜಾಲಪ್ಪ. ರಾಜಕೀಯ ನಂಗೆ ಆಗಿ ಬರಲಿಲ್ಲ. ಸೋತೆ. ಅವತ್ತೇ ಕೊನೆ. ಮತ್ತೆ ರಾಜಕೀಯದ ಕಡೆ ನಾನು ತಿರುಗಿ ನೋಡಲಿಲ್ಲ. ಆಮೇಲೆ ನಾನೇ ನಿರ್ಮಾಪಕನಾದೆ. ಸದಭಿರುಚಿಯ, ಅದರಲ್ಲೂ ಅತ್ಯುತ್ತಮ ಮಕ್ಕಳ ಚಿತ್ರ ಮಾಡ್ಬೋಕು ಅನ್ನಿಸ್ತು . ‘ದೇವರ ಮಕ್ಕಳು’ ಸಿನಿಮಾ ನಿರ್ದೇಶಿಸಿದ್ದೆ. ಆದ್ರೆ ಬ್ಯಾಡ್‌ಲಕ್‌. ವಿಪರೀತ ನಷ್ಟ ಆಯ್ತು. ಕಲಾವಿದನಾಗಿ ಸಂಪಾದನೆ ಮಾಡಿದ್ದನ್ನ ನಿರ್ಮಾಪಕನಾಗಿ ಕಳೆದುಕೊಂಡೆ. ಆದ್ರೂ ಬೇಸರ ಇಲ್ಲ. ಯಾಕೆ ಅಂದ್ರೆ-ಬೆಂಗಳೂರಿಗೆ ಬಂದಾಗ ನನ್ನಲ್ಲಿ ಏನಂದ್ರೆ ಏನೂ ಇರಲಿಲ್ಲ...

    ***

    ಮೂರ್ತಿಗಳೇ, ಎಲ್ಲವೂ ನಿಮ್ಮ ಊಹೆಯಂತೆಯೇ ನಡೆದಿದ್ರೆ- ಈ ಹೊತ್ತಿಗೆ ‘ಸರ್ದಾರ’ ಸಿನಿಮಾ 50ನೇ ದಿನ ದಾಟಿರ್ತಾ ಇತ್ತು ! ಆಗೇನಾದ್ರೂ ಆಗಿದ್ದಿದ್ರೆ ಗಾಂಧಿನಗರದ ಮಂದಿ ಅರ್ಧ ಖುಷಿ, ಇನ್ನರ್ಧ ಮತ್ಸರದಿಂದ -ಶ್ರೀನಿವಾಸಮೂರ್ತಿ ಗಳು ಅದ್ಭುತವಾಗಿ ನಟಿಸಿದ್ದಾರೆ ಕಣ್ರೀ. ಸರ್ದಾರನ ತುಂಬ ಅವರ ಬಿಂಬವೇ ಇದೆ. ಅವರ ಗತ್ತು , ಗೈರತ್ತು , ಕಂಗಳಲ್ಲೇ ಧಗಧಗಿಸುವ ಕ್ರೌರ್ಯ, ಹುಲಿಯನ್ನೇ ನಾಚಿಸುವ ಹಾವ ಭಾವ... ಅಬ್ಬಾಬ್ಬ, ಅವರು ಅದ್ಭುತ ನಟ, ಅಪರೂಪದ ನಟ, ಅನುರೂಪದ ನಟ... ಎಂದೆಲ್ಲ ಹೇಳುತ್ತಿದ್ದರು. ಆದ್ರೆ ಈಗೇನಾಗಿದೆ ಹೇಳಿ? ‘ಸರ್ದಾರ’ ಬಿದ್ದು ಹೋಗಿದ್ದಾನೆ! ಈ ಹಿಂದೆ ನಿಮ್ಮನ್ನ ಇಂದ್ರ-ಚಂದ್ರ ಎಂದೆಲ್ಲ ಹೊಗಳಿದ ಜನ ಈಗ ನಿಮ್ಮನ್ನ ಮರೆತೇ ಬಿಟ್ಟಿದ್ದಾರೆ.

    ಆದ್ರೆ ಮೂರ್ತಿಗಳೇ, ನಮ್ಮ ಜನ ನಿಮ್ಮನ್ನು ಮರೆತಿಲ್ಲ ! ಶ್ರೀನಿವಾಸಮೂರ್ತಿ ಎಂದಾಕ್ಷಣ ಅವರೆಲ್ಲ-‘ಬಿಳಿಗಿರಿಯ ಬನ’ದಲ್ಲಿಯ ಮಮತಾಮಯಿ ತಂದೆಯನ್ನ, ‘ಮುಂಗಾರಿನ ಮಿಂಚು’ ಚಿತ್ರದ ಮಲೆನಾಡಿನ ಗೌಡನನ್ನ, ‘ವಸಂತಗೀತಾ’ದಲ್ಲಿ ಉತ್ತರಕುಮಾರನಂತೆ ಮೆರೆದಾಡುವ ಸೆಕೆಂಡ್‌ ಹೀರೋನನ್ನ, ‘ಜಮೀನ್ದಾರ’ನ ಮೀಸೆ ಗೌಡಪ್ಪ ನನ್ನ ನೆನಪು ಮಾಡಿಕೊಳ್ಳುತ್ತಾರೆ. ‘ಕವಿರತ್ನ ಕಾಳಿದಾಸ’ವನ್ನ ನೆನೆದು-ಅದರಲ್ಲಿ ಮೂರ್ತಿಗಳು, ಭೋಜರಾಜನ ಪಾತ್ರ ಮಾಡಿಲ್ಲ. ಅವರೇ ಪಾತ್ರವಾಗಿದ್ದಾರೆ. ಸಾಕ್ಷಾತ್‌ ಭೋಜರಾಜನೇ ನಾಚುವ ಹಾಗೆ ಅಭಿನಯಿಸಿದ್ದಾರೆ ಅಂದುಬಿಡ್ತಾರೆ. ಹಿಂದೆಯೇ-ಅಣ್ಣ ಬಸವಣ್ಣದ ಪಾತ್ರ ನೆನಪಾಗಿ-ನಿಂತಲ್ಲೇ ಕೈಮುಗೀತಾರೆ. ಶ್ರೀನಿವಾಸಮೂರ್ತಿ ಅಂದ್ರೆ ತಮಾಷೆ ಅಲ್ಲಾರೀ- ಅವ್ರು ಅಣ್ಣ ಬಸವಣ್ಣ ಅಂತ ಖುಷಿಯಿಂದ ಹೇಳ್ತಾರೆ. ಸಾಕಲ್ವ?

    ಮೂರ್ತಿಗಳೇ ನಿಮ್ಮ ಅಸ್ಖಲಿತ ಕನ್ನಡವನ್ನ, ಸ್ವಾಭಿಮಾನವನ್ನ, ಛಲವನ್ನ, ಅದ್ಭುತ ನಟನೆಯನ್ನ ಒಪ್ತೀವಲ್ಲ-ಅದೇ ಸಂದರ್ಭದಲ್ಲಿ ಒಂದೊಂದೇ ಪ್ರಶ್ನೆ ಕೇಳಬೇಕು ಅನ್ನಿಸುತ್ತೆ , ಹೇಳಿ- ಕಾಳಿದಾಸನ ಭೋಜರಾಜನನ್ನ ನಾವಷ್ಟೇ ಅಲ್ಲ- ನೀವೂ ಕಂಡಿಲ್ಲ. ಅವನು ಹೀಗೇ ಇದ್ದ ಅನ್ನೋ ಕಲ್ಪನೆ ಕೂಡಾ ಯಾರಿಗೂ ಇಲ್ಲ. ಅಂಥ ಪಾತ್ರವನ್ನ, ಸಾಕ್ಷಾತ್‌ ಭೋಜರಾಜನೇ ಬೆರಗಾಗುವ ಹಾಗೆ ನಟಿಸಿದ್ರಲ್ಲ- ಅದು ಹೇಗೆ ಸಾಧ್ಯವಾಯ್ತು? ಕಲ್ಯಾಣವಲ್ಲ, ಕರುನಾಡೇ ಒಪ್ಪುವ ಹಾಗೆ ಬಸವಣ್ಣನಾಗಿ ಮಿರಮಿರಮಿರ ಮಿಂಚಿದಿರಲ್ಲ, ಯಾವ ಮಾಯೆ ಈ ಜಾದು ಹಿಂದಿತ್ತು? ನೀವು ಆ ಪಾತ್ರಗಳ ಗುಂಗಲ್ಲಿದ್ದಾಗ ಭೋಜರಾಜ/ಬಸವಣ್ಣ ಕನಸಿಗೆ ಬರ್ತಾ ಇದ್ರ? ಹಾಗೆ ಬಂದವರು-ನಾಳೆ ಹೀಗೆ ನಟಿಸ್ಬೇಕು. ಹೀಗೆ ಹೆಜ್ಜೆ ಹಾಕಬೇಕು, ಗಂಭೀರವಾಗೇ ನಗಬೇಕು. ಸಿಟ್ಟು ಬಂದಾಗ ಮೂಗಿನ ಹೊಳ್ಳೆ, ಕಣ್ಣ ರೆಪ್ಪೆ, ಕೆನ್ನೆಯ ಮಾಂಸ ಎಲ್ಲವನ್ನು ಅದುರಿಸಬೇಕು. ಹೆಚ್ಚಾಗಿ ಶಾಂತಿಯಿಂದಲೇ ಇರಬೇಕು ಎಂದೆಲ್ಲ ಹೇಳಿಕೊಟ್ರ? ಹಾಗೇನೂ ಇಲ್ಲ ಅನ್ನೋದಾದ್ರೆಅಂಥ ಅನುಪಮ ಅಭಿನಯ ನೀಡಲು ಹ್ಯಾಗೆ ಸಾಧ್ಯವಾಯ್ತು ಸಾರ್‌?

    ನೇರವಾಗಿ ಹೇಳ್ತಿದೀನಿ: ನಮಗಂತೂ ಅಣ್ಣ ಬಸವಣ್ಣ ಅಂದ್ರೆ- ಬಸವಣ್ಣ ಅವರ ಸರಳತೆ, ತ್ಯಾಗ, ದೂರದೃಷ್ಟಿ, ಮೃದು-ಮಧುರ ಮಂದಹಾಸ ಮಾತ್ರ ನೆನಪಾಗುತ್ತೆ. ನಿಜ ಹೇಳಿ- ಬಸವಣ್ಣ ಅಂದ್ರೆ ನಿಮಗೆ ಕೈ ಕೊಟ್ಟ ಮೂಗು ನೆನಪಾಗುತ್ತಾ? ಅಥವಾ...

    ***

    ಮೂರ್ತಿಗಳೇ ನಿಮ್ಗೆ ಗೊತ್ತಿರೋ ಹಾಗೆ-ನೀವು ರೂಪುವಂತರು. ಒಂದು ಕಾಲದಲ್ಲಿ ಹೀರೋ ಆಗಿ ಮೆರೆದವರು. ಪ್ರತಿಭೆಗೆ ಬೆಲೆ ಕೊಡ್ಬೇಕು ಅನ್ನೋ ಹಾಗಿದ್ದಿದ್ರೆ- ಈಗ ಸೈತ ನೀವು ಹೀರೋ ಆಗಿ ಇರ್ಬೇಕಿತ್ತು. ಆದ್ರೆ ಏನಾಗಿದೆ ಹೇಳಿ? ತೆರೆಯ ಮೇಲೆ ಮಾತ್ರ ಅಲ್ಲ- ತೆರೆಯ ಹಿಂದೆ ಕೂಡ ನಟನೆಯನ್ನೇ ಗಾಂಧಿನಗರದ ಜನ ಬಯಸ್ತಿದಾರೆ. ನೀವೋ ಯಾವ/ಯಾರ ಮುಲಾಜಿಗೂ ಸಿಗದೆ ಇದ್ದುದನ್ನ ಇದ್ದ ಹಾಗೆ- ಖುಲ್ಲಂ ಖುಲ್ಲ ಹೇಳಿಬಿಡ್ತೀರಲ್ಲ- ಅದನ್ನೇ ನೆಪ ಮಾಡ್ಕೋಂಡು ದೂರ ಇಟ್ಟಿದ್ದಾರೆ! ಕೆಲವರಂತೂ ನಿಮ್ಮ ಮುಂದೆ ಡಲ್‌ ಹೊಡೀತೀವಿ ಅಂದ್ಕೊಂಡು ನಿಮಗೆ ಪಾತ್ರವೇ ಸಿಗದ ಹಾಗೆ ಮಾಡ್ತಿದಾರೆ! ಹೇಳಿ: ಇದನ್ನೆಲ್ಲ ನೋಡಿ ಸಿಟ್ಟು , ಸಂಕಟ, ದುಃಖ ಎಲ್ಲವೂ ಏಕಕಾಲಕ್ಕೆ ಬಂದ್ಬಿಡುತ್ತಾ?

    ಮೂರ್ತಿಗಳೇ, ದಶಕಗಳಿಂದ ಚಿತ್ರರಂಗದಲ್ಲಿದೀರ. ಅಂಥ ನೀವೂ-ಮಗನನ್ನ ಈಗಿಂದೀಗ್ಲೇ ಹೀರೋ ಮಾಡಬೇಕು ಅಂತ ತುದಿಗಾಲಲ್ಲಿ ನಿಂತಿದೀರಲ್ಲ? ಅವನ ಪ್ರತಿಭೆಗೆ ಬೆಲೆ ಸಿಗ್ತಿಲ್ಲ ಅಂತ ಕೊರಗ್ತಾ ಇದೀರಂತಲ್ಲ ಯಾಕೆ? ಅವ ಇನ್ನೂ ಚಿಕ್ಕವ. ಅವರಿಗಿನ್ನೂ ವಯಸ್ಸಿದೆ. ಒಳ್ಳೆ ದಿನಗಳು ಬಂದೇ ಬರ್ತವೆ. ನೀವು ಸಾಧಿಸದೇ ಬಿಟ್ಟಿದ್ದನ್ನ ನಿಮ್ಮ ಮಗ ಜಯಿಸಿ ತೋರ್ತಾನೆ. ಆ ಚಿಂತೆ ಬಿಟ್ಹಾಕಿ.

    ಏನ್‌ ಗೊತ್ತ ? ಕನ್ನಡಿಗರದ್ದು ಒಂದೇ ಆಸೆ. ಅವರೆಲ್ಲ ಭೋಜರಾಜ, ಬಸವಣ್ಣನ ಥರದ ಪಾತ್ರಗಳಲ್ಲಿ ನಿಮ್ಮನ್ನು ಇನ್ನೊಂದ್ಸಲ ನೋಡ್ಬೇಕು ಅಂತ ಕನಸು ಕಾಣ್ತಿದಾರೆ. ನಿಮ್ಮ ಅಸ್ಖಲಿತ ಕನ್ನಡವನ್ನು ಮತ್ತೆ ಮತ್ತೆ ಕೇಳಬೇಕು ಅಂತ ಆಸೆ ಪಡ್ತಿದಾರೆ. ನೀವು ಸಿನಿಮಾ ಮಡೋದೇ ಆದ್ರೆ ಒಂದು ಐತಿಹಾಸಿಕ ಸಿನಿಮಾ ತಯಾರಿಸಿ. ಅದರಲ್ಲಿ ರಾಜ/ಮಂತ್ರಿ/ಮಮತಾಮಯಿ ಅಪ್ಪನ ಪಾತ್ರದಲ್ಲಿ ನಡೆದು ಬನ್ನಿ. ಆಗ-ಬೊಂಬಾಟ್‌ ಕನ್ನಡ ಕೇಳುವ ಖುಷಿ ನಮ್ಮದಾಗಲಿ. ಒಂದು ಪಾತ್ರದಿಂದ, ಪಂಚಿಂಗ್‌ ಮಾತಿನಿಂದ ಎಲ್ಲರ ಮನಗೆಲ್ಲುವ ಸರದಿ ನಿಮ್ಮದಾಗಲಿ. ಆ ಸಿನಿಮಾದಿಂದ ನಮಗೆ ಖುಷಿ, ನಿಮ್ಮ ಕುಟುಂಬಕ್ಕೆ ನೆಮ್ಮದಿ, ನಿಮಗೆ ರಾಶಿ ಕಾಸು ದಂಡಿಯಾಗಿ ಸಿಗಲಿ. ಅಷ್ಟಾಗಿ ಬಿಟ್ರೆ ಸಾಕು, ಸಾಕು...

    ನಿಮ್ಮ ಮನೆಯವರಿಗೆ ಈ ಪತ್ರವನ್ನು ಬಸವಣ್ಣನ ಗೆಟಪ್‌ನಲ್ಲಿ ನಿಂತು ತೋರಿಸಿ-ಖುಷಿಯಿಂದ ನಕ್ಕು ಬಿಡಿ. ಹಾಗೆ... ಹಾಗೆ... ಹಾಗೆ...

    ಎಲ್ಲ ಸಂತಸವೂ ನಿಮ್ಮದಾಗಲಿ ಎನ್ನುತ್ತ- ನಮಸ್ಕಾರ.

    ಪ್ರೀತಿ ಮತ್ತು ಪ್ರೀತಿಯಿಂದ...

    -ಎ.ಆರ್‌.ಮಣಿಕಾಂತ್‌

    ತಾಜಾ ಸುದ್ದಿ : ಶ್ರೀನಿವಾಸಮೂರ್ತಿಗೆ 7ವರ್ಷ ಜೈಲು!

    (ಸ್ನೇಹಸೇತು: ವಿಜಯಕರ್ನಾಟಕ)

    Wednesday, April 24, 2024, 0:27
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X