»   » ಹಾಡುಹಕ್ಕಿಗೆ ಮಟ್ಟು ಹಾಕುವಾಸೆ

ಹಾಡುಹಕ್ಕಿಗೆ ಮಟ್ಟು ಹಾಕುವಾಸೆ

Subscribe to Filmibeat Kannada

*ಶರಣ್ಯ

ಈಕೆ ತಣ್ಣನೆಯ ಹುಡುಗಿ. ನೋಟದಲ್ಲಿ ಯಾವುದೋ ದಿಟ್ಟ ಗುರಿಯ ಅಭಿವ್ಯಕ್ತಿ. ನಟನೆಗೆ ಒಗ್ಗಿಕೊಳ್ಳಬಹುದಾದ ನೋಟ. ಹಾಗಿದ್ದೂ, ನಟಿಸುವ ಆಫರ್‌ಗಳನ್ನೆಲ್ಲಾ ಪಕ್ಕಕ್ಕಿರಿಸಿ, ಕೈಗೆ ಮೈಕೆತ್ತಿಕೊಂಡು ನಗುನಗುತ್ತಾ ಹಾಡುತ್ತಾರೆ.

ಸ್ಯಾಂಡಲ್‌ವುಡ್‌ನ ಇವತ್ತಿನ ನಂಬರ್‌ ಒನ್‌ ಗಾಯಕಿ ಯಾರು ಅಂತೇನಾದರೂ ಪ್ರಶ್ನೆ ಹಾಕಿಕೊಂಡು ಹುಡುಕಿದರೆ ಥಟ್ಟನೆ ನಂದಿತಾ ಹೆಸರು ಮುಂದೆ ಬಂದು ನಿಲ್ಲುತ್ತದೆ. ಈಕೆಗೆ ಅತ್ಯುತ್ತಮ ಗಾಯಕಿ ಎಂಬ ರಾಜ್ಯ ಪ್ರಶಸ್ತಿ ಸಂದಿದೆ. ಸಂಗೀತ ಕ್ಷೇತ್ರದ ಸಾಧನೆ ಗುರ್ತಿಸಿ ಕೊಡುವ ಸುರ್‌ತರಂಗ್‌ ಪ್ರಶಸ್ತಿಯೂ ಬುಟ್ಟಿಗೆ ಬಂದು ಬಿದ್ದಿದೆ. 2003ನೇ ಇಸವಿಯ ಆರಂಭವೇ ಇಷ್ಟೊಂದು ಸೊಗಸಾಗಿರಬೇಕಾದರೆ, ಮುಂದೆ ಇನ್ನಷ್ಟು ಸಿಹಿ ನಿಮ್ಮ ಬಾಯಿಗೆ ಬೀಳಬಹುದಲ್ಲವೇ ಎಂದು ಕೇಳಿದರೆ, ‘ಗೊತ್ತಿಲ್ಲ’ ಅಂತ ಮುಗ್ಧ ನಗೆ ನಗುತ್ತಾರೆ.

ನಂದಿತಾಗೆ ಇರುವ ಚಾರ್ಮ್‌ ನೋಟ ನೋಡಿ ಸಿನಿಮಾದಲ್ಲಿ ನಟಿಸುವ ಆಫರುಗಳನ್ನು ಕೊಟ್ಟವರು ಅದೆಷ್ಟೋ. ಅವನ್ನೆಲ್ಲಾ, ಪಕ್ಕಕ್ಕೆ ತಳ್ಳಿ ಹಾಡನ್ನೇ ಕಣ್ಣಿಗೊತ್ತಿಕೊಂಡ ಈಕೆಗೆ ವೀಣಾ ಆಲ್ಬಂ ತರುವ ಕನಸಿದೆ. ಹಿಂದಿ ಚಿತ್ರದಲ್ಲಿ ಹಾಡಿ, ಭೇಷ್‌ ಅನಿಸಿಕೊಳ್ಳಬೇಕೆಂಬ ಅದಮ್ಯ ಆಸೆಯಿದೆ. ಕನ್ನಡದಲ್ಲಿ ತಮ್ಮವೇ ಸ್ವಂತ ಆಲ್ಬಂಗಳನ್ನು ತರುವ ಗುರಿಯಿದೆ.

ಮೊದಲು ಈಕೆಯನ್ನು ಯಾರೂ ಕ್ಯಾರೇ ಅನ್ನುತ್ತಿರಲಿಲ್ಲವಂತೆ. ಉದಯ ಟೀವಿಯ ‘ಕುಹೂ ಕುಹೂ’ ಕಾರ್ಯಕ್ರಮದಲ್ಲಿ ಪದೇಪದೇ ಕಾಣಿಸಿಕೊಂಡು ಹಾಡುವುದರಿಂದ ಕರ್ನಾಟಕದ ಮನೆಮಂದಿಗೆ ಈ ಮುಖ ಚಿರ ಪರಿಚಿತವಾಯಿತು. ಈಗ ನಂದಿತಾ ಸಲೀಸಾಗಿ ಕಾರಿಂದ ಇಳಿಯುವ ಹಾಗಿಲ್ಲ. ಇಳಿದರೆ, ಅಭಿಮಾನಿಗಳ ದಂಡು ಜಮಾಯಿಸುವುದು ಗ್ಯಾರಂಟಿ. ಅವರಿಗೆ ಆಟೋಗ್ರಾಫ್‌ ಕೊಡುತ್ತಾ ನಿಂತರೆ, ಅರ್ಧ ತಾಸಾದರೂ ಖೋತಾ ಆಗತ್ತೆ. ಡೈರಿ ತುಂಬಾ ಅಸೈನ್‌ಮೆಂಟುಗಳನ್ನು ತುಂಬಿಕೊಂಡಿರುವ ನಂದಿತಾಗೆ ಅರ್ಧ ತಾಸು ಸಣ್ಣ ಅವಧಿಯ ಸಮಯವೇನೂ ಅಲ್ಲ.

‘ಯುವರಾಜ’ ಸಿನಿಮಾಗೆ ಮಟ್ಟು ಹಾಕಿದ ತೆಲುಗು ಸಂಗೀತ ಸಂಯೋಜಕ ರಮಣ ಗೋಕುಲ, ಪವನ್‌ ಕಲ್ಯಾಣ್‌ ಅಭಿನಯದ ಚಿತ್ರಕ್ಕೆ ಈಕೆಯ ಕೈಲಿ ತೆಲುಗು ಹಾಡೊಂದನ್ನು ಹಾಡಿಸಿದ್ದಾರೆ. ಆ ಮೂಲಕ ನಂದಿತಾಗೆ ಪಕ್ಕದ ಮನೆಯ ಬಾಗಿಲೂ ತೆರೆದಿದೆ.

ತಾನೇ ಹಾಡುಗಳಿಗೆ ಮಟ್ಟುಗಳನ್ನು ಹಾಕುವಷ್ಟು ಪ್ರತಿಭೆಯನ್ನು ಹುದುಗಿಸಿಟ್ಟುಕೊಂಡಿರುವ ನಂದಿತಾ, ಸಂಗೀತ ಸಂಯೋಜಕಿಯಾಗಲು ಬೇಕಾದ ಸಕಲ ಸಿದ್ಧತೆಗಳನ್ನೂ ಮಾಡಿಕೊಂಡಿದ್ದಾರೆ. ಅವಕಾಶ ಕೊಡುವವರು ಬೇಕಷ್ಟೆ .

ಅಂದಹಾಗೆ, ನಂದಿತಾ ಇಂಟರ್ನೆಟ್‌ ಸ್ಯಾವಿಯೂ ಹೌದು.

Post your views

ಮುಖಪುಟ / ಸ್ಯಾಂಡಲ್‌ವುಡ್‌
Please Wait while comments are loading...