»   » ಜಗ್ಗೇಶ್‌ ಎಂಬ ಭಂಡನ ‘ಬಕ್ರಾ’ವತಾರ

ಜಗ್ಗೇಶ್‌ ಎಂಬ ಭಂಡನ ‘ಬಕ್ರಾ’ವತಾರ

Subscribe to Filmibeat Kannada
  • ಚೈತನ್ಯ
ಜಗ್ಗೇಶ್‌ ಮತ್ತೆ ಫೀಲ್ಡಿಗಿಳಿದಿದ್ದಾರೆ. ರಾಮಕೃಷ್ಣ ನಂತರ ಸುಮಾರು ಎಂಟು ತಿಂಗಳ ಕಾಲ ಬಣ್ಣದ ಲೋಕದಿಂದ ದೂರವಿದ್ದ ಅವರು, ‘ಮಿಸ್ಟರ್‌ಬಕ್ರ’ಚಿತ್ರದಲ್ಲಿ ಮತ್ತೊಮ್ಮೆ ಬಣ್ಣ ಹಚ್ಚಿದ್ದಾರೆ. ಭಂಡ ನನ್ನ ಗಂಡ ಚಿತ್ರದ ಮೂಲಕ ನಾಯಕನಾಗಿ ಮೇಕಪ್‌ ಹಚ್ಚಿದ ಜಗ್ಗೇಶ್‌ಗೆ ಇದು ಸೆಕೆಂಡ್‌ ಇನ್ನಿಂಗ್ಸ್‌ ಎಂದಾದರೂ ಹೇಳಿ, ಇಲ್ಲ ರೀ ಎಂಟ್ರಿ ಎಂದಾದರೂ ಅನ್ನಿ. ಒಟ್ಟಿನಲ್ಲಿ ಜಗ್ಗೇಶ್‌ ಮತ್ತೊಮ್ಮೆ ತಮ್ಮ ಜಾದೂ ತೋರಿಸಲು ತೆರೆಯ ಮೇಲೆ ಬರುತ್ತಿದ್ದಾರೆ. ಅವರ ವನವಾಸದ ಬಗ್ಗೆ ಒಂದು ಸಣ್ಣ ಮಾತು-ಕತೆ.
  • ಈ ಏಳೆಂಟು ತಿಂಗಳು ಜಗ್ಗೇಶ್‌ ಎಲ್ಲಿದ್ದರು?
ರಾಜಕೀಯವನ್ನ ಹೆಂಡ್ತಿ ಅಂಥ ಒಪ್ಪಿಕೊಂಡಿದ್ದೆನಲ್ಲಾ , ಹಾಗಾಗಿ ಅಲ್ಲಿ ಸ್ವಲ್ಪ ಕಮಿಟ್‌ ಆಗಿದ್ದೆ. ನಾನು ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಸಮಯದಲ್ಲಿ ಬಹಳಷ್ಟು ಜನ, ಬಣ್ಣ ಹಚ್ಚುವ ಮಂದಿಗೆ ಓಟು ಹಾಕಿದರೆ ಅವರು ಹೆಚ್ಚು ದಿನ ಇಲ್ಲಿರುವುದಿಲ್ಲ ಎಂದು ಅಪಪ್ರಚಾರ ಮಾಡಿದ್ದರು. ಅದೇ ರೀತಿ ಜನ ಕೂಡಾ ನಂಬಿ ನನ್ನನ್ನು ಸೋಲಿಸಿದರು. ನನ್ನ ವಿರುದ್ಧ ಮಾಡಿದ್ದ ಅಪಪ್ರಚಾರಕ್ಕೆ ತಕ್ಕ ಉತ್ತರ ಕೊಡಬೇಕಾಗಿತ್ತು. ಹಾಗಾಗಿ ಚಿತ್ರರಂಗದಿಂದ ಸ್ವಲ್ಪ ದೂರುವುಳಿದು ನನ್ನ ಕ್ಷೇತ್ರದ ಪ್ರತಿ ಹಳ್ಳಿ ಹಳ್ಳಿಯೂ ಸುತ್ತಿದ್ದೇವೆ.

ಎರಡು ಅಂಬ್ಯುಲೆನ್ಸ್‌ ವ್ಯಾನ್‌ಗಳನ್ನು ನೀಡಿದ್ದೇನೆ. ನನ್ನದೇ ಸ್ವಂತ ದುಡ್ಡಿನಲ್ಲಿ ಸುಮಾರು 18ಕಿ.ಮಿ.ರಸ್ತೆಗೆ ಟಾರ್‌ ಹಾಕಿಸಿದ್ದೇನೆ. ಇದೆಲ್ಲದರ ಪ್ರತಿಫಲವಾಗಿ ಇತ್ತೀಚೆಗೆ ನೆಡೆದ ಗ್ರಾಮ ಪಂಚಾಯ್ತಿ ಚುನಾವಣೆಗಳಲ್ಲಿ ಕಾಂಗ್ರೆಸ್‌ 414 ಸೀಟುಗಳಲ್ಲಿ 205ರಲ್ಲಿ ಗೆದ್ದಿವೆ. ಜೆಡಿಎಸ್‌ ಹಾಗೂ ಬಿಜೆಪಿಯ ವಶವಾಗಿದ್ದ ಎರಡು ಹೋಬಳಿಗಳು ಇಂದು ನಮ್ಮ ಕೈಯಲ್ಲಿದೆ. ನಮ್ಮ ಜಿಲ್ಲೆಯಲ್ಲಿ ಕಳೆದ 15 ವರ್ಷಗಳಲ್ಲಿ ಕಾಂಗ್ರೆಸ್‌ ಮೂಲೆ ಗುಂಪಾಗಿತ್ತು. ಈಗ ಶೇ.65ರಷ್ಟು ಜಿಲ್ಲೆ ನಮ್ಮ ಕೈವಶವಾಗಿದೆ. ಇದೆಲ್ಲ ನಾನು ಚಿತ್ರರಂಗದಿಂದ ಸ್ವಲ್ಪ ಕಾಲ ದೂರ ಉಳಿದಿದ್ದರಿಂದ ಸಾಧ್ಯವಾಯಿತು.

  • ನೀವು ರಾಜಕೀಯದಲ್ಲಿ ಸಕ್ರಿಯರಾಗಿದ್ದಾಗ ನಿಮ್ಮ ಅಭಿಮಾನಿಗಳು ಸುಮ್ಮನಿದ್ದರೇ?
ಚಿತ್ರಗಳಲ್ಲಿ ಅಭಿನಯಿಸಬೇಕು ಎಂದು ಪ್ರತಿದಿನ ಸುಮಾರು ಎಂಟರಿಂದ ಹತ್ತು ಕರೆಗಳು ಬರುತ್ತಿದ್ದವು. ಹೋದಲ್ಲೆಲ್ಲಾ ಯಾವಾಗ ಹೊಸ ಚಿತ್ರ ಪ್ರಾರಂಭ ಎಂದು ಕೇಳುತ್ತಿದ್ದರು. ಅಭಿನಯ ಮಾಡಬೇಕೆಂದು ಪತ್ರ ಬರೆದು ಒತ್ತಾಯಿಸುತ್ತಿದ್ದರು. ಇತ್ತೀಚೆಗೆ ಅಭಿಮಾನಿಯಾಬ್ಬ ನಾನು ಇಲ್ಲಿಯವರೆಗೆ ನಟಿಸಿರುವ ಎಲ್ಲ ಚಿತ್ರಗಳ ಹೆಸರನ್ನು ಪಟ್ಟಿ ಮಾಡಿ ಕಳಿಸಿದ್ದ. ನೂರು ಸಾಲದು, ಐನೂರು ಚಿತ್ರಗಳಲ್ಲಿ ಅಭಿನಯಿಸಬೇಕೆಂದು ಪ್ರೀತಿಯಿಂದ ಬರೆದಿದ್ದ. ನನಗೆ ಸಂಖ್ಯೆ ಮುಖ್ಯವಲ್ಲ. ಜನ ನನ್ನ ಚಿತ್ರ ನೋಡುತ್ತಾರಾ?ನನ್ನನ್ನು ಪ್ರೀತಿಸುತ್ತಾರಾ? ಅಷ್ಟು ಮುಖ್ಯ.
  • ವಿಶಿಷ್ಟ ಮ್ಯಾನರಿಸಂನಿಂದ ಒಂದು ಹೊಸ ಟ್ರೆಂಡ್‌ ಹುಟ್ಟು ಹಾಕಿದವರು ನೀವು. ನಂತರ ಒಂದೇ ತರಹದ ಪಾತ್ರಗಳನ್ನು ಮಾಡಿದಿರಿ. ಎಲ್ಲೋ ಒಂದು ಕಡೆ ನಿಮ್ಮ ಅಭಿನಯ ನಿಂತ ನೀರಾಗಿದೆ ಎಂದೆನಿಸಿದೆಯೇ?
ನನಗೂ ಬೇರೆ ಬೇರೆ ರೀತಿಯ ಪಾತ್ರಗಳನ್ನು ಮಾಡಬೇಕೆಂಬ ಆಸೆಯಿದೆ. ಆದರೆ ಜನ ನನ್ನನ್ನು ಕಾಮಿಡಿ ಪಾತ್ರಗಳಲ್ಲೇ ನೋಡಲು ಬಯಸುತ್ತಾರೆ. ಕಳೆದ ವರ್ಷ ‘ನಿಜ’ ಚಿತ್ರದಲ್ಲಿ ಅಭಿನಯಿಸಿದೆ. ಅದೊಂದು ಗಂಭೀರವಾದ ಪಾತ್ರ. ಆದರೆ ಜನ ಇಷ್ಟಪಡಲಿಲ್ಲ. ಕಾಮಿಡಿ ಮಾಡಬೇಕೆಂದು ಒತ್ತಾಯಿಸುತ್ತಾರೆ. ಸಾಮಾನ್ಯವಾಗಿ ನಟರು ತಾವು ಜನಪ್ರಿಯರಾಗುವ ಪಾತ್ರಗಳಿಗೇ ಹೆಚ್ಚು ಬ್ರಾಂಡ್‌ ಆಗುತ್ತಾರೆ. ಇದೊಂದು ಸುಳಿ ಇದ್ದ ಹಾಗೆ. ನನಗೂ ಆಕಾಂಕ್ಷೆಯಿದೆ. ಆದರೆ ಬೇರೆಯವರ ಚಿತ್ರದಲ್ಲಿ ರಿಸ್ಕ್‌ ಮಾಡಲಾಗುವುದಿಲ್ಲ. ನಾನೇ ನಿರ್ಮಾಪಕನಾಗಿ ಏನಾದರೂ ಮಾಡಬೇಕು.
  • ಸದ್ಯಕ್ಕೆ ಡಿಫರೆಂಟ್‌ ಆಗಿ ಏನಾದರೂ ಮಾಡಬೇಕೆಂಬ ಯೋಜನೆಯಿದೆಯೇ ?
ನಮ್ಮಲ್ಲಿ ಈಗಲೂ ದಲಿತರೆಂದರೆ ತಾತ್ಸಾರ ಮಾಡುತ್ತಾರೆ. ಆ ಜನಾಂಗದ ಬಗ್ಗೆ ಒಂದು ಚಿತ್ರ ಮಾಡಬೇಕು ಎಂದು ಬಹಳ ಆಸೆಯಿದೆ. ಗಾಂಧಿಯಿಂದ ಇಂದಿನ ರಾಜಕಾರಣಿಗಳವರೆಗೆ ಎಲ್ಲರೂ ಈ ಅಸಮಾನತೆ ಓಡಿಸಲು ಕಷ್ಟಪಟ್ಟರು. ಆದರೆ ಆಗಲಿಲ್ಲ. ಇದರಿಂದ ಬಹಳಷ್ಟು ಪ್ರತಿಭಾವಂತರು ಕಷ್ಟಪಡುತ್ತಿದ್ದಾರೆ.ಅಂಥವರ ಬದುಕು- ಬವಣೆ ಬಿಂಬಿಸುವ ಒಂದು ಕಲಾತ್ಮಕ ಚಿತ್ರ ಮಾಡಬೇಕೆಂಬ ಆಸೆಯಿದೆ. ಈಗಾಗಲೇ ಸ್ವಲ್ಪ ಪೂರ್ವಸಿದ್ಧತೆ ಮಾಡಿಕೊಂಡಿದ್ದೇವೆ. ಆದರೆ ಯಾವಾಗ ಪ್ರಾರಂಭವಾಗುತ್ತದೆ ಹೇಳುವುದಕ್ಕಾಗಲ್ಲ. ಇನ್ನೊಂದೈದು ವರ್ಷಗಳಲ್ಲಿ ಆ ಚಿತ್ರ ಬರಬಹುದು.
  • ಚಿತ್ರರಂಗದ ಸದ್ಯದ ಪರಿಸ್ಥಿತಿಯ ಬಗ್ಗೆ ಏನಂತೀರಿ ?
ಇಂದು ಜನರಿಗೆ ಕನ್ನಡ ಚಿತ್ರ ನೋಡಬೇಕೆಂಬ ಆಸಕ್ತಿ ಬಹಳ ಕಡಿಮೆಯಾಗುತ್ತಿದೆ. ಜತೆಗೆ ಪರಭಾಷಾ ಚಿತ್ರಗಳ ಹಾವಳಿ ಹೆಚ್ಚಿದೆ. ಹಾಗಾಗಿ ನಮ್ಮ ಪ್ರೇಕ್ಷಕರು ಡಿವೈಡ್‌ ಆಗುತ್ತಿದ್ದಾರೆ. ಬೇರೆ ಭಾಷೆ ಚಿತ್ರಗಳಿಗೆ ಅಂತಾರಾಷ್ಟ್ರಿಯ ಮಾರುಕಟ್ಟೆಯಿದೆ. ಆದರೆ ನಮ್ಮಲ್ಲಿ ಗಡಿ ಪ್ರದೇಶಗಳಲ್ಲೇ ಕನ್ನಡ ಚಿತ್ರಗಳನ್ನು ನೋಡುವವರಿಲ್ಲ.ಇಂಥ ಸಂದರ್ಭದಲ್ಲಿ ಕನ್ನಡ ಚಿತ್ರ ಮಾಡಿ, ಜನರಿಗೆ ತಲುಪಿಸುತ್ತಿದ್ದಾರೆ ಎಂದರೆ ಅವರಿಗೆ ಹ್ಯಾಟ್ಸ್‌ ಆಫ್‌. ಈಗಾಗಲೇ ಮರಾಠಿ ಹಾಗೂ ಗುಜರಾತಿ ಚಿತ್ರರಂಗಗಳು ತೊಂದರೆಯಲ್ಲಿವೆ. ನಾವು ಕೂಡಾ ಅದೇ ರೀತಿಯ ಸಮಸ್ಯೆ ಎದುರಿಸುತ್ತಿದ್ದೇವೆ. ಇಲ್ಲಿ ಯಾವ ಚಿತ್ರ ಯಶಸ್ವಿಯಾಗುತ್ತೆ , ಯಾವ ಚಿತ್ರ ಸೋಲುತ್ತೆ ಎನ್ನುವುದು ಕಷ್ಟ. ಬೇರೆ ವ್ಯಾಪಾರದಲ್ಲಿ ಸ್ವಲ್ಪ ಪರವಾಗಿಲ್ಲ . ಚಿತ್ರ ಮಾಡುವುದು ಬಹಳ ಕಷ್ಟ . ಇಲ್ಲಿ ಸಾಗರದಷ್ಟು ಸಮಸ್ಯೆಯಿದೆ.

(ಸ್ನೇಹಸೇತು : ವಿಜಯಕರ್ನಾಟಕ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada