»   » ಕನ್ನಡವರು ಆದರಿಸದ ಬಗ್ಗೆ ಮೋಹನ್‌ಗೆ ಬೇಸರ

ಕನ್ನಡವರು ಆದರಿಸದ ಬಗ್ಗೆ ಮೋಹನ್‌ಗೆ ಬೇಸರ

Posted By: Super
Subscribe to Filmibeat Kannada

'ಕನ್ನಡದಲ್ಲಿ ಕತೆಗಾರರಿಗೆ ಪ್ರೋತ್ಸಾಹವೇ ಇಲ್ಲ . ಅದೇ ತಮಿಳು, ತೆಲುಗಿನಲ್ಲಿ ನೋಡಿ, ಒಬ್ಬ ನಟನಿಗೆ ಸಿಗಬೇಕಾದ ಸ್ಥಾನ ಮತ್ತು ಮರ್ಯಾದೆ ಕೊಡುತ್ತಾರೆ. ಯಾಕೆಂದರೆ ಇಡೀ ಚಿತ್ರದ ಬೆನ್ನೆಲುಬು ಕತೆ ಅನ್ನೋದು ಅವರಿಗೆ ಗೊತ್ತು . ಇಲ್ಲಿಯವರಿಗೆ ಅದರ ಮಹತ್ವವೇ ಗೊತ್ತಿಲ್ಲ ."
- ಇದು ಮೋಹನ್‌ ಎಂಬ ನಟನ ಅನುಭವದ ಮಾತು. ಮೂಲತಃ ಕತೆಗಾರರಾಗಿ ಚಿತ್ರರಂಗಕ್ಕೆ ಬಂದ ಇವರಿಗೆ ನಟನಾಗುವ ಅವಕಾಶ ಸಿಕ್ಕಿದ್ದು ಆಕಸ್ಮಿಕ.

ನಗಿಸುತ್ತಾನೆಂದು ಗೊತ್ತಾಗಿದ್ದೇ ತಡ ನಿರ್ಮಾಪಕರು ಅಂಥದೇ ಹಲವು ಪಾತ್ರಗಳನ್ನು ತಂದು ಇವರ ಕೊರಳಿಗೆ ಹಾಕಿದರು. ಎಲ್ಲಾದರೂ ಸರಿ ದುಡ್ಡು ಬಂದರೆ ಸಾಕೆಂದು ಮೋಹನ್‌ ಕೆಲವು ಕೆಟ್ಟ ಚಿತ್ರಗಳಲ್ಲಿ ನಟಿಸಿದ್ದೂ ಆಯಿತು. ಆದರೆ ಈಗೀಗ ಕಂಡಕಂಡವರಿಗೆ ಸಹಿ ಮಾಡುವುದನ್ನು ನಿಲ್ಲಿಸಿದ್ದಾರಂತೆ. ಸಾಧ್ಯವಾದಷ್ಟೂ ನಟನೆಗೆ ಅವಕಾಶವಿರುವ ಪಾತ್ರಗಳನ್ನು ಮಾತ್ರ ಒಪ್ಪಿಕೊಳ್ಳುತ್ತಿದ್ದಾರಂತೆ.

ಮೂಲತಃ ರಂಗಭೂಮಿಯಿಂದ ಬಂದು ಅಲ್ಲಿ ಗಂಭೀರ ಪಾತ್ರಗಳನ್ನು ನಿರ್ವಹಿಸುತ್ತಿದ್ದ ಮೋಹನ್‌ ಬಣ್ಣದ ಲೋಕದಲ್ಲಿ ಕಾಮಿಡಿ ಪಾತ್ರ ಮಾಡುತ್ತಿರೋದು ಅಯೋಮಯ. ಸದ್ಯಕ್ಕೆ ನಟನೆಯ ಜೊತೆಗೆ ಕತೆಗಾರಿಕೆಯನ್ನೂ ಮುಂದುವರಿಸಿದ್ದಾರೆ. ನಟಿ ಊರ್ವಶಿ ನಿರ್ಮಿಸ್ತುತಿರುವ ಚಿತ್ರವೊಂದಕ್ಕೆ ಕತೆ ಬರೆದು ಕೊಟ್ಟಿದ್ದಾರಂತೆ. ಅಂದಹಾಗೆ ಇವರು ಮಣಿರತ್ನಂ ನಿರ್ಮಿಸಿದ 'ಡುಮ್‌ ಡುಮ್‌ ಡುಮ್‌" ಚಿತ್ರಕ್ಕೆ ವಿರಾಮದವರೆಗೆ ಚಿತ್ರಕತೆ ಬರೆದಿದ್ದಾರಂತೆ.

ಮಣಿಯಂತಹ ದಿಗ್ದರ್ಶಕರೊಂದಿಗೆ ಕೆಲಸ ಮಾಡಿ ಬಂದರೂ ಇಲ್ಲಿನವರಿಗೆ ತಮ್ಮ ಮಹತ್ವ ಅರಿವಾಗಲಾರದ್ದರ ಬಗ್ಗೆ ಮೋಹನ್‌ಗೆ ಬೇಸರವಿದೆ. ಏನೇ ಆದರೂ ತೀರಾ ಕೆಟ್ಟ ಪಾತ್ರದಲ್ಲಿ ನಟಿಸುವುದಿಲ್ಲ ಎಂದು ಸೆಡ್ಡು ಹೊಡೆಯುತ್ತಾರೆ ಮೋಹನ್‌. ಕೆಲಸವಿಲ್ಲದೆ ಮನೆಯಲ್ಲಿ ಕುಂತರೂ ಪರವಾಗಿಲ್ಲ . ಜನ ಇಷ್ಟಪಡದ ಪಾತ್ರಗಳು ಬೇಡವೆನ್ನುವ ನಿಲುವು ಇವರದು.

'ಕಾಮಿಡಿ ಪಾತ್ರವಿದ್ದರೂ ಅಭಿನಯಕ್ಕೆ ಸವಾಲಿದ್ದರೆ ಚೆನ್ನ. ಚಿತ್ರ ಹಾಸ್ಯದ್ದಾದರೂ ಅದರಲ್ಲಿ ನಟಿಸಲು ಖುಷಿ ಅನ್ನಿಸುತ್ತಿತ್ತು . ಶೂಟಿಂಗ್‌ ಮುಗಿಸಿ ಮನೆಗೆ ಹೋದರೆ ಮನಸ್ಸಿನಲ್ಲಿ ತೃಪ್ತಿ ಇರುತ್ತಿತ್ತು . ಆತ್ಮತೃಪ್ತಿ ಇಲ್ಲದ ಯಾವುದೇ ಕೆಲಸ ಸಂತೋಷ ಕೊಡಲಾರದಲ್ವಾ?" ಹೀಗೆ ವಿಷಾದದಿಂದ ಪ್ರಶ್ನಿಸುವ ಮೋಹನ್‌ ಅವರನ್ನು ಚಿತ್ರರಂಗ ಕತೆಗಾರರನ್ನಾಗಿ ಬೆಳೆಸಿದರೆ ಅದ್ಭುತ ಕತೆಗಳು ಹುಟ್ಟಬಹುದು.

ಆದರೆ ರಿಮೇಕ್‌ ಪ್ರಿಯರಿಗೆ ಇಂಥವರು ಬೇಡವಾಗೋದು ನಿಜ. ಇನ್ನು ಮುಂದಾದರೂ ಇವರ ಪ್ರತಿಭೆ ಹೊರಬಂದೀತೆ? ಗಾಂಧಿನಗರಿಗರು ಇವರತ್ತ ಸ್ವಲ್ಪ ನೋಡಬೇಕು.

(ವಿಜಯ ಕರ್ನಾಟಕ)

English summary
Kannada Filmdom : Actor Mohan speeks out about his pains and prides

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada