twitter
    For Quick Alerts
    ALLOW NOTIFICATIONS  
    For Daily Alerts

    ‘ಪ್ರಣಯ ರಾಜ’ನಿಗೀಗ ಕೇವಲ 64 ಚಿತ್ರರಂಗದಲ್ಲಿ 40ವರ್ಷ.. ನಂಬೋಕೆ ಆಗುತ್ತಿಲ್ಲ.. -ಶ್ರೀನಾಥ್‌

    By Staff
    |


    ‘ಹೂವೊಂದು, ಬಳಿಬಂದು ...’, ‘ನಾಕೊಂದ್ಲ ನಾಕು ...’, ‘ನೀ ಸಾಕಿದಾ ಗಿಣಿ ... ’ --ಇಂಥ ಅಪರೂಪದ ಹಾಡು ಗುನುಗುವಾಗ, ಶ್ರೀನಾಥ್‌ ಚಿತ್ರ ಕಣ್ಣ ಮುಂದೆ ಇರುತ್ತದೆ. ಈ ಪ್ರಯಣರಾಜ ಕನ್ನಡ ಚಲನಚಿತ್ರಕ್ಕೆ ಕಾಲಿಟ್ಟು 40 ವರ್ಷ ಸಂದಿವೆ. ಇಷ್ಟು ವರ್ಷ ಆದವು ಎಂದು ಅವರೇ ನಂಬುವುದಿಲ್ಲ. ಶ್ರೀನಾಥ್‌ಗೆ 64 ವರ್ಷ ಎಂದರೆ ಅಭಿಮಾನಿಗಳಿಗೆ ಗುಮಾನಿ. ಈ ಸಂಭ್ರಮಾಚರಣೆಯಲ್ಲಿ ಪ್ರಣಯ ರಾಜ, ತಮ್ಮ ನೆನಪಿನ ಬುತ್ತಿ ಬಿಚ್ಚಿಟ್ಟರು.

    ‘ಈ ರಂಗದಲ್ಲಿ 40 ವರ್ಷ ಆಯ್ತು ಅಂತ ನನಗೇ ನಂಬೋಕೆ ಆಗುತ್ತಿಲ್ಲ.. ’ ತಮ್ಮ ಟ್ರೇಡ್‌ಮಾರ್ಕ್‌ ನಗೆ ನಕ್ಕರು ‘ಪ್ರಣಯರಾಜ’ ಶ್ರೀನಾಥ್‌.

    ಅವರೊಬ್ಬರಿಗೇ ಅಲ್ಲ, ಶ್ರೀನಾಥ್‌ ಕಳೆದ 40 ವರ್ಷಗಳಿಂದ ಚಿತ್ರರಂಗದಲ್ಲಿದ್ದಾರೆ ಎಂದರೆ ಬಹಳಷ್ಟು ಜನ ನಂಬುವುದಿಲ್ಲ. 40 ತುಂಬಿದೆ ಅಂತ ಇನ್ನೂ ಎಷ್ಟೋ ಮಂದಿ ಒಪ್ಪುವುದಿಲ್ಲ. ಆದರೂ ಕಾಲವನ್ನು ತಡೆಯೋರು ಯಾರೂ ಇಲ್ಲ.

    40 ವರ್ಷಗಳ ಹಿಂದೆ ಬಿಡುಗಡೆಯಾದ ‘ಲಗ್ನ ಪತ್ರಿಕೆ’ ಚಿತ್ರದಲ್ಲಿ ಸಣ್ಣದೊಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಯುವಕ ಚಿರಯುವಕರಾಗಿದ್ದಾರೆ. ಚಿತ್ರರಂಗದಲ್ಲಿನ 40 ವರ್ಷಗಳ ನೆನಪು ಇನ್ನಷ್ಟು ಹಸಿರಾಗಬೇಕೆಂದು ಶ್ರೀನಾಥ್‌ ಅಭಿಮಾನಿಗಳು ಕಾರ್ಯಕ್ರಮವೊಂದನ್ನು ರೂಪಿಸಿದ್ದಾರೆ.

    ಪ್ರಣಯ ಗೀತೆಗಳ ಸಂಜೆ :

    ಇದೇ 29ರ ಭಾನುವಾರ ಜಯನಗರ ಮೂರನೇ ಬ್ಲಾಕ್‌ನಲ್ಲಿರುವ ಕ್ರೀಡಾಂಗಣದಲ್ಲಿ ‘ಪ್ರಣಯ ಮಧುರಗೀತೆಗಳು’ ಎಂಬ ಸಂಗೀತ ಕಾರ್ಯಕ್ರಮ ಏರ್ಪಾಡಾಗಿದೆ. ಇದರಲ್ಲಿ ಎಸ್‌. ಪಿ.ಬಾಲಸುಬ್ರಹ್ಮಣ್ಯಂ ಮುಂತಾದವರು ಪ್ರಣಯರಾಜನ 21ಮಧುರಗೀತೆಗಳನ್ನು ಹಾಡಲಿದ್ದಾರೆ.

    ಇಂಥದೊಂದು ಕಾರ್ಯಕ್ರಮ ಯಾವತ್ತೋ ಆಗಬೇಕಿತ್ತು ಎನ್ನುತ್ತಾರೆ ಶ್ರೀನಾಥ್‌. ‘ಸುಮಾರು 15 ವರ್ಷಗಳ ಹಿಂದೆ ಅಂದರೆ ನಾನು ಚಿತ್ರರಂಗಕ್ಕೆ ಬಂದು ಕಾಲು ಶತಮಾನವಾದಾಗ, ಒಂದು ಕಾರ್ಯಕ್ರಮ ಅಂತ ಯೋಚಿಸಿದ್ದೆ. ನನ್ನನ್ನು ಬೆಳೆಸಿದವರನ್ನು ಗೌರವಿಸ ಬೇಕೆಂದುಕೊಂಡಿದ್ದೆ. ಈ ಬಗ್ಗೆ ನನ್ನ ಆಪ್ತರ ಜತೆ ಚರ್ಚೆ ಮಾಡಿದಾಗ ಎಲ್ಲರೂ ಐಡಿಯಾಗಳನ್ನು ಕೊಡುತ್ತಾ ಹೋದರು. ಕಾರ್ಯಕ್ರಮ ಮಾಡುವುದೇ ಪಂಚ ವಾರ್ಷಿಕ ಯೋಜನೆಯಾಯಿತು. ಹಾಗಾಗಿ ಸದ್ಯಕ್ಕೆ ಬೇಡವೆಂದು ಸುಮ್ಮನಿದ್ದೆ ಎನ್ನುತ್ತಾರೆ.

    ಸಮಾಜ ಸೇವೆ :

    ಈಗೊಂದು ಮೂರು ವರ್ಷಗಳ ಹಿಂದೆ ಮೊಮ್ಮಗಳ ಹೆಸರಲ್ಲಿ ದಿಯಾ ಆರ್ಟ್‌ ಫೌಂಡೇಷನ್‌ ಎಂಬ ಸಂಸ್ಥೆ ಆರಂಭಿಸಿ, ಹಲವು ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದೇನೆ. ಹಣ ಸಂಗ್ರಹಣೆಗೆ ದೊಡ್ಡದೊಂದು ಸಮಾರಂಭ ಮಾಡಬೇಕೆಂದುಕೊಂಡೆ. ನಾನು ಚಿತ್ರರಂಗಕ್ಕೆ ಬಂದು 40 ವರ್ಷಗಳಾಗಿವೆ. ಇದನ್ನೆಲ್ಲ ಒಟ್ಟಿಗೆ ಆಚರಿಸಬೇಕು ಎಂದುಕೊಂಡಾಗ ಹುಟ್ಟಿದ್ದೇ ‘ಪ್ರಣಯರಾಜನ ಮಧುರಗೀತೆಗಳು’.

    ಇದು ಕೇವಲ ಮೊದಲ ಹೆಜ್ಜೆ ಎನ್ನಲು ಅವರು ಮರೆಯುವುದಿಲ್ಲ. ಕಾರ್ಯಕ್ರಮದ ನಂತರ ಈ ವರ್ಷ ಅವರು ಇನ್ನಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದಾರಂತೆ. ಅದರಲ್ಲಿ ಪ್ರಮುಖವಾಗಿದ್ದು ಮಕ್ಕಳಿಗೊಂದು ಆಟದ ಶಿಬಿರ. ‘ಈಗಿನ ಮಕ್ಕಳಿಗೆ ಆಟವೇ ಮರೆತು ಹೋಗಿದೆ. ನಮ್ಮ ಕಾಲದಲ್ಲಿದ್ದ ವಾತಾವರಣ ಈಗಿಲ್ಲ. ಅದನ್ನು ಮತ್ತೆ ಸೃಷ್ಠಿಸುವ ಸಲುವಾಗಿ ಭೀಮನಕಟ್ಟೆ ಎಂಬಲ್ಲಿ ನಗರದ ಮಕ್ಕಳಿಗೆ ವಿಶೇಷ ಶಿಬಿರ ಯೋಚಿಸುತ್ತಿದ್ದೇನೆ.

    ಕೆಲವು ಶಾಲೆಗಳಿಂದ ಒಂದಿಷ್ಟು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ, ಅವರಿಗೆ ಆಟ-ಪಾಠಗಳ ಜತೆಗೆ ನಮ್ಮ ಸಂಸ್ಕೃತಿಯ ಬಗ್ಗೆ ಮಾಹಿತಿ ನೀಡುವಂಥ ಕಾರ್ಯಕ್ರಮಗಳೂ ಇರುತ್ತವೆ. ಈ ವರ್ಷದ ಬೇಸಿಗೆ ರಜೆ ಮುಗಿಯುತ್ತಾ ಬಂದಿರುವುದರಿಂದ ದಸರಾ ರಜೆಯಿಂದ ಆ ಶಿಬಿರ ಪ್ರಾರಂಭವಾಗುವ ಸಾಧ್ಯತೆಯಿದೆ ಎಂದು ತಮ್ಮ ಮುಂದಿನ ಕಾರ್ಯಯೋಜನೆಗಳ ಬಗ್ಗೆ ತಿಳಿಸುತ್ತಾರೆ ಶ್ರೀನಾಥ್‌.

    ಸಿಹಿ-ಕಹಿ ನೆನಪುಗಳು :

    ಇಷ್ಟು ವರ್ಷಗಳ ಚಿತ್ರಯಾತ್ರೆ ಯುಗಾದಿ ಹಬ್ಬದ ತರಹ ಇತ್ತು ಎಂದು ನೆನಪಿಸಿಕೊಳ್ಳುತ್ತಾರೆ ಅವರು. ‘ಇಷ್ಟು ವರ್ಷಗಳಲ್ಲಿ ಸಿಹಿ-ಕಹಿ ಎರಡೂ ಉಂಡಿದ್ದೇನೆ. ಅನೇಕ ಏಳು-ಬೀಳುಗಳನ್ನು ಕಂಡಿದ್ದೇನೆ. ಏನೇ ಕಹಿ ಅನುಭವಗಳಾದರೂ ಅದು ಪಾಠವಾಗಿ ತೆಗೆದುಕೊಂಡಿದ್ದೆ. ಅದು ಸಹ ಸಿಹಿನೆನಪಾಗಿದೆ.

    ಸಿನಿಮಾ ಬಗ್ಗೆ ಏನೂ ಗೊತ್ತಿಲ್ಲದ ಮಧ್ಯಮ ವರ್ಗದ ಹುಡುಗ, ದೊಡ್ಡ ಹೆಸರು ಮಾಡುವುದು ಅಷ್ಟು ಸುಲಭದ ಮಾತಲ್ಲ. ಅದಕ್ಕೆ ಕಾರಣ ದೈವ ಸಂಕಲ್ಪ, ಹಿರಿಯರ ಒತ್ತಾಸೆ. ಏೊತೆಗೆ ಉದ್ಯಮದವರ ಹಾಗೂ ಜನರ ಪ್ರೀತಿ, ವಿಶ್ವಾಸ, ಸ್ನೇಹ. ಅದಿಲ್ಲದಿದ್ದರೆ ಇವತ್ತು ಇಲ್ಲಿರುತ್ತಿರಲಿಲ್ಲ’ ಎನ್ನುತ್ತಾರೆ ಶ್ರೀನಾಥ್‌.

    ಪೋಷಕ ಪಾತ್ರಗಳ ಮೂಲಕವೂ ಗೆದ್ದೆ..

    ಒಂದು ಕಾಲದಲ್ಲಿ ಶ್ರೀನಾಥ್‌ ಪ್ರಣಯರಾಜರಾಗಿ ಮೆರೆದವರು. ಇದ್ದಕ್ಕಿದ್ದಂತೆ ಅದನ್ನು ಬಿಟ್ಟು ಅಪ್ಪ, ಮಾವನ ಪಾರ್ಟು ಮಾಡಬೇಕಾಗಿ ಬಂದಾಗ ‘ಧರ್ಮಸೆರೆ’ಯಲ್ಲಿ ಸಿಕ್ಕಂಗಾಗಲಿಲ್ಲವಾ? ‘ಛೇ, ಛೇ ಹಾಗೇನಿಲ್ಲ’ ಎನ್ನುತ್ತಾರೆ ಅವರು. ‘ನಾನು ನಾಯಕನಿಂದ ಪೋಷಕ ಪಾತ್ರಗಳತ್ತ ಮುಖ ಮಾಡಿದಾಗ ಆಗಲೇ ಚಿತ್ರರಂಗದಲ್ಲಿ 28 ವರ್ಷ ಮುಗಿಸಿದ್ದೆ. ನಾನು ಮನಸ್ಸು ಮಾಡಿದ್ದರೆ ಹೀರೋ ಆಗೋದು ಕಷ್ಟವಿರಲಿಲ್ಲ. ಬೇರೆಯವರು ಅವಕಾಶ ನೀಡದಿದ್ದರೆ ನಾನೇ ಚಿತ್ರ ನಿರ್ಮಿಸಬಹುದಿತ್ತು.

    ಆದರೆ, ನನಗೂ ಸಾಕಾಗಿತ್ತು. ಮನೆಯವರೂ ಅದಕ್ಕೆ ಸಹಕರಿಸಿದರು. ಸೋ, ನಾಯಕನ ಪಾತ್ರ ಬಿಟ್ಟು ಕ್ರಮೇಣ ಪೋಷಕ ಪಾತ್ರಗಳತ್ತ ಹೋದೆ. ನಾನು ಅಪ್ಪನ ಪಾತ್ರ ಮಾಡೋದಾ? ಅಂತ ಸುಮ್ಮನೆ ಕೂತಿದ್ದರೆ, ಹಾಗೇ ಕೂತಿರಬೇಕಾಗಿತ್ತು. ಸವಾಲನ್ನೂ ಸ್ವೀಕರಿಸಿದೆ. ಯಶಸ್ವಿಯಾದೆ’ ಎನ್ನುತ್ತಾರೆ ಅವರು.

    ಚಿತ್ರರಂಗದ ಸಮಸ್ಯೆ ಬಗೆಹರಿಸುತ್ತೇನೆ..

    ಅವರೆದುರು ಈಗಿರುವ ಇನ್ನೊಂದು ಸವಾಲು ಚಿತ್ರರಂಗದ ಸಮಸ್ಯೆಗಳನ್ನು ಬಗೆಹರಿಸುವುದು. ಅದರಲ್ಲೂ ಅವರು ಶಾಸಕ ಬೇರೆ! ವಿಧಾನಸೌಧಕ್ಕೆ ಹೋದವರು, ಚಿತ್ರರಂಗಕ್ಕೆ ಏನು ಮಾಡುವುದಿಲ್ಲವೆಂಬ ಅಪವಾದ ಇರುವಾಗ ಅವರು ಯಾವ ರೀತಿ ಚಿತ್ರರಂಗದ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ ಎನ್ನುವುದು ಮುಖ್ಯ.

    ‘ನಾನು ಚಿತ್ರರಂಗಕ್ಕೆ ಬಂದಾಗಿನಿಂದಲೂ ಇಲ್ಲಿ ಅನೇಕ ಸಮಸ್ಯೆಗಳಿವೆ. ಈಗ ಇನ್ನೊಂದಿಷ್ಟು ಹೊಸ ಸಮಸ್ಯೆಗಳಿವೆ. ಈ ಎಲ್ಲಾ ಸಮಸ್ಯೆಗಳನ್ನು ಗುಡ್ಡೆ ಮಾಡಿ ಸರಕಾರದ ಮುಂದೆ ಇಡುವ ಬದಲು, ಆದ್ಯತೆಯ ಮೇರೆಗೆ ಚಿತ್ರರಂಗವೇ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು. ಸದ್ಯಕ್ಕೆ ನಾನು ಚಿತ್ರರಂಗದ ಹಲವು ವಲಯಗಳ ಜತೆ ಮಾತಾಡುತ್ತಿದ್ದೇನೆ. ವಿಧಾನಸೌಧದಲ್ಲಿ ನನ್ನಿಂದ ಏನು ಕೆಲಸ ಸಾಧ್ಯವೋ ಅದನ್ನು ಮಾಡಿಸಿಕೊಡುವುದಕ್ಕೆ ಪ್ರಯತ್ನಿಸುತ್ತೇನೆ’ ಎಂದು ಮೀಸೆ ಮರೆಯಲ್ಲೇ ನಕ್ಕು ಮಾತು ಮುಗಿಸಿದರು ಶ್ರೀನಾಥ್‌.

    Thursday, April 25, 2024, 18:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X