»   » ಪನೋರಮಾ ಅಂಗಳಕ್ಕೆ ‘ಮೌನಿ’

ಪನೋರಮಾ ಅಂಗಳಕ್ಕೆ ‘ಮೌನಿ’

Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೋ

ಕನ್ನಡದಲ್ಲಿ ಸದಭಿರುಚಿಯ ಚಿತ್ರಗಳು ಬರುತ್ತಿಲ್ಲ ಅಂತ ತಗಾದೆ ತೆಗೆವವರ ಬಾಯಿಮುಚ್ಚಿಸುವಂತಹ ಸುದ್ದಿಗಳು ಬಂದಿವೆ-

ಮೊದಲಿಗೆ ‘ಮೌನಿ’. ಡಾ.ಯು.ಆರ್‌.ಅನಂತಮೂರ್ತಿ ಕಥೆಯನ್ನು ಆಧರಿಸಿದ ಈ ಚಿತ್ರ ತೆರೆ ಕಾಣುವ ಮುನ್ನವೇ ಐಎಫ್‌ಎಫ್‌ಐನ ಪನೋರಮಾ ವಿಭಾಗಕ್ಕೆ ಆಯ್ಕೆಯಾಗಿದೆ.

ಮುಂದಿನ ವರ್ಷ 51ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಿಗೆ ನಡೆಯುವ ಸ್ಪರ್ಧೆಯಲ್ಲಿ ತೀವ್ರ ಪೋಟಿ ಕೊಡುವಷ್ಟು ಗುಣಮಟ್ಟದ ಚಿತ್ರ ‘ಮೌನಿ’ ಎಂದು 2002ನೇ ಇಸವಿಯ ತೀರ್ಪುಗಾರರ ಸಮಿತಿ ಸದಸ್ಯ ಕೆ.ಎಸ್‌.ಎಲ್‌.ಸ್ವಾಮಿ ಮಾತಿನ ಸರ್ಟಿಕೇಟ್‌ ಕೊಟ್ಟಿದ್ದಾರೆ. 2003, ಜನವರಿಯಲ್ಲಿ ಈ ಚಿತ್ರ ಸೆನ್ಸಾರ್‌ ಆದ ಕಾರಣ ಈ ಬಾರಿಯ ಪ್ರಶಸ್ತಿಗೆ ಚಿತ್ರವನ್ನು ಪರಿಗಣಿಸಲಾಗಲಿಲ್ಲ. ಕನ್ನಡ ಪ್ರಭ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಜಿ.ಎಸ್‌.ಸದಾಶಿವ ಚಿತ್ರಕಥೆ ಹೊಸೆದಿದ್ದಾರೆ. ಇದೇ ಪತ್ರಿಕೆಯ ಮ್ಯಾಗಜೀನ್‌ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಉದಯ ಮರಕಿಣಿ ಹಾಗೂ ಎಚ್‌. ಗಿರೀಶ್‌ ರಾವ್‌ ಸಂಭಾಷಣೆ ಬರೆದಿದ್ದಾರೆ. ಲಿಂಗದೇವರು ನಿರ್ದೇಶನದ ಚೊಚ್ಚಲ ಚಿತ್ರವಿದು.

ಎರಡನೆಯದಾಗಿ, ಸಿಂಗಾರೆವ್ವ ಮತ್ತು ಸ್ಟಂಬಲ್‌ಗೆ ಪ್ರಶಸ್ತಿ
ಚಂದ್ರಶೇಖರ ಕಂಬಾರರ ಕಥೆ ಆಧರಿಸಿದ ಟಿ.ಎಸ್‌.ನಾಗಾಭರಣ ನಿರ್ದೇಶನದ ‘ಸಿಂಗಾರೆವ್ವ ಮತ್ತು ಅರಮನೆ’ ಚಿತ್ರಕ್ಕೆ 2002ನೇ ಇಸವಿಯ ಅತ್ಯುತ್ತಮ ಕನ್ನಡ ಕಥಾ ಚಿತ್ರ ಪ್ರಶಸ್ತಿ ಲಭಿಸಿದೆ. 50ನೆಯ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯ ಪ್ರಾದೇಶಿಕ ಪ್ರಶಸ್ತಿ ಇದಾಗಿದೆ.

ಉತ್ತಮ ಇಂಗ್ಲಿಷ್‌ ಕಥಾ ಚಿತ್ರ ಪ್ರಶಸ್ತಿಯು ‘ಗರ್ವ’ ಧಾರಾವಾಹಿ ಖ್ಯಾತಿಯ ಪ್ರಕಾಶ್‌ ಬೆಳವಾಡಿಯವರ ‘ಸ್ಟಂಬಲ್‌’ ಚಿತ್ರಕ್ಕೆ ಲಭಿಸಿದೆ. ಕನ್ನಡಿಗ ಪ್ರಕಾಶ್‌ ರೈ ಉರುಫ್‌ ಪ್ರಕಾಶ್‌ ರಾಜ್‌ ಅವರಿಗೆ ವಿಶೇಷ ಜ್ಯೂರಿ ಪ್ರಶಸ್ತಿ ಸಂದಿದೆ.

ಕಳೆದ ಬಾರಿ ಗಿರೀಶ್‌ ಕಾಸರವಳ್ಳಿ ನಿರ್ದೇಶನದ ‘ದ್ವೀಪ’ ಸ್ವರ್ಣ ಕಮಲ ಪಡೆದಿದ್ದು. ಈ ಬಾರಿ ರಾಷ್ಟ್ರೀಯ ಪ್ರಶಸ್ತಿಗಳ ಪಟ್ಟಿಯನ್ನು ಯಾವುದೇ ಕನ್ನಡ ಚಿತ್ರ ತಲುಪಲಿಲ್ಲ.

ಸಂತೋಷವಾಗಿದೆ- ನಾಗಾಭರಣ : ಚಿತ್ರ ತೆಗೆಯುವ ಹಂತದಲ್ಲೇ ಪ್ರಶಸ್ತಿಯ ಭರವಸೆ ಹುಟ್ಟಿಸುವ ಜಾಯಮಾನದ ನಾಗಾಭರಣ ಅವರಿಗೆ ರಾಷ್ಟ್ರೀಯ ಪ್ರಶಸ್ತಿಯ ಅಂಗಳ ಸ್ವಲ್ಪ ಹಳತಾಗಿತ್ತು. ಬಿಡುಗಡೆಯಾಗಿಯೂ, ಅಷ್ಟೇನೂ ಸದ್ದು ಮಾಡದ ಈ ಚಿತ್ರಕ್ಕೆ ಈಗ ಪ್ರಶಸ್ತಿ ಬಂದಿರುವುದು ನಾಗಾಭರಣರಿಗೆ ಭರವಸೆಯನ್ನು ತಂದುಕೊಟ್ಟಿದೆ. ಬಹಳ ಸಂತೋಷವಾಗಿದೆ ಎಂದಷ್ಟೇ ಅವರು ಚುಟುಕಾಗಿ ಪ್ರತಿಕ್ರಿಯಿಸಿದರು.

ಸರಿಯಾದ ವಿಮರ್ಶೆ ಸಿಕ್ಕಿರಲಿಲ್ಲ- ಬೆಳವಾಡಿ : ಪ್ರಸ್ತುತ ಸಮಸ್ಯೆಗೆ ಕನ್ನಡಿ ಹಿಡಿಯುವ ಯತ್ನವನ್ನು ನಾನು ‘ಸ್ಟಂಬಲ್‌’ ಮೂಲಕ ಮಾಡಿದ್ದೆ. ಆದರೆ ಚಿತ್ರ ಕಮರ್ಶಿಯಲ್‌ ಅಲ್ಲ ಎಂಬ ಕಾರಣಕ್ಕೆ ಸರಿಯಾದ ವಿಮರ್ಶೆ ಸಿಕ್ಕಿರಲಿಲ್ಲ. ಹತ್ತಿರದವರು ಚೆನ್ನಾಗಿದೆ ಅಂತ ಹೇಳಿದ್ದಷ್ಟೇ ಸಂತೋಷ ಕೊಟ್ಟ ವಿಷಯವಾಗಿತ್ತು. ಈಗ ಪ್ರಕಾಶ್‌ ಝಾ ನೇತೃತ್ವದ ರಾಷ್ಟ್ರೀಯ ಚಲನಚಿತ್ರ ಸಮಿತಿಗೆ ‘ಸ್ಟಂಬಲ್‌’ ಕಥೆ ಹಿಡಿಸಿರುವುದು ಸಂತೋಷ ತಂದಿದೆ ಎಂದು ಪ್ರಕಾಶ್‌ ಬೆಳವಾಡಿ ನಗುನಗುತ್ತಾ ಹೇಳಿದರು.

ಮೌನಿ ನಿರ್ದೇಶಕ ಲಿಂಗದೇವರು ಚೊಚ್ಚಲ ಯತ್ನದಲ್ಲೇ ಪನೋರಮಾ ಅಂಗಳ ಹೊಕ್ಕಿದ್ದಾರೆ. ಮುಂದಿನ ವರ್ಷ ಪ್ರಶಸ್ತಿ ಪಡೆಯುವ ಕನಸು ಅವರ ಕಣ್ಣಲ್ಲಿ ಮನೆಮಾಡಿದೆ. ಆಲ್‌ ದಿ ಬೆಸ್ಟ್‌.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada