twitter
    For Quick Alerts
    ALLOW NOTIFICATIONS  
    For Daily Alerts

    ರಾಷ್ಟ್ರ ಪ್ರಶಸ್ತಿ ರೇಸಿನಲ್ಲಿ ಯಾಕೆ ಗೆಲ್ಲಲಿಲ್ಲ ?

    By Staff
    |

    *ದೆಹಲಿ ಪ್ರತಿನಿಧಿ

    ಈ ಬಾರಿಯ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಯಾವುದೇ ಕಂಪನ ಮೂಡಿಸಲು ಕನ್ನಡದ ಚಲನಚಿತ್ರಗಳು ವಿಫಲವಾಗಿವೆ.

    ರಾಷ್ಟ್ರೀಯ ತೀರ್ಪು ಮಂಡಳಿಯ ಕೆಲವು ಸದಸ್ಯರ ಪ್ರಕಾರ ನಿರೀಕ್ಷೆಗಿಂತ ಕಡಿಮೆ ಗುಣಮಟ್ಟದ ಚಲನಚಿತ್ರಗಳು ಪ್ರಶಸ್ತಿಗೆ ಬಂದಿದ್ದವು. ಚಿತ್ರಮಂದಿರದಲ್ಲಿ ಓಡದ, ದುಡ್ಡು ಮಾಡದ ಚಿತ್ರಗಳೇ ಪ್ರಶಸ್ತಿಗೆ ಲಾಯಕ್ಕು ಎಂಬ ಮಾನದಂಡ ಇಟ್ಟುಕೊಂಡು ಚಿತ್ರಗಳನ್ನು ಸ್ಪರ್ಧೆಗೆ ಕಳಿಸಿದಂತಿರುವುದು ಮುಖ್ಯ ಕಾರಣ. ಇತರ ಭಾಷೆಗಳ ಚಿತ್ರಗಳು ಕನ್ನಡದ ಚಿತ್ರಗಳನ್ನು ಬಹುದೂರ ದೂಡಿ ಮುಂದೆಸಾಗಿವೆ.

    ಇದ್ದುದರಲ್ಲಿ ಕೋಮು ಸೌಹಾರ್ದತೆ ವಿಭಾಗದಲ್ಲಿ ನೀಡುವ ನರ್ಗೀಸ್‌ ದತ್‌ ಪ್ರಶಸ್ತಿಗೆ ‘ಅರ್ಥ’ (ನಿರ್ದೇಶಕ ಸುರೇಶ) ತನ್ನ ದೋಷಗಳ ನಡುವೆಯೂ ಸ್ಪರ್ಧೆ ಕೊಟ್ಟಿದೆ.

    ಆದರೆ, ಸೌಮ್ಯವಾಗಿ ಕೋಮು ಸೌಹಾರ್ದತೆಯನ್ನು ಸಾರುವ ಮಿಸ್ಟರ್‌ ಅಂಡ್‌ ಮಿಸೆಸ್‌ ಅಯ್ಯರ್‌ ಮುಂದೆ ಕೋಮು ಸೌಹಾರ್ದತೆಯ ಅಬ್ಬರ ತುಂಬಿಕೊಂಡು, ಹಲವು ಸಾಮಾಜಿಕ ಸಮಸ್ಯೆಗಳೊಂದಿಗೆ ಸೆಣೆಸುತ್ತಾ ಗೊಂದಲಕ್ಕೀಡಾಗುವ ‘ಅರ್ಥ’ ಸೋತಿದೆ.

    ಮತೀಯ ಶಕ್ತಿಗಳನ್ನು, ಸಂಘಟನೆಗಳನ್ನು ಬೆತ್ತಲು ಗೊಳಿಸುವ ‘ಅರ್ಥ’ ಮಹಿಳಾ ನಿರ್ಮಾಪಕಿಯ ಸಾಹಸದ ಪ್ರಯತ್ನ. ಈ ಕಾರಣದಿಂದಲೇ ತೀರ್ಪುಗಾರರ ಮಂಡಳಿ ಈ ಚಿತ್ರವನ್ನು ಮೂರು ಬಾರಿ ಪ್ರಶಸ್ತಿಗೆ ಪರಿಶೀಲಿಸಿದೆ.

    ಆದರೆ, ಅಪರ್ಣಾ ಸೇನ್‌ ನಿರ್ದೇಶನದ ಮಿಸ್ಟರ್‌ ಅಂಡ್‌ ಮಿಸೆಸ್‌ ಅಯ್ಯರ್‌ ಕೋಮು ಸೌಹಾರ್ದತೆಯ ಸಹಜ ಕತೆಯಾಂದನ್ನು ಆವೇಶಕ್ಕೊಳಗಾಗದೆ ಸರಳವಾಗಿ ಹೇಳಿ ಗೆದ್ದಿದೆ.

    ತೀರ್ಪುಗಾರರ ಪ್ರಕಾರ : ‘ಅರ್ಥ’ವು ಮಿಸ್ಟರ್‌ ಅಂಡ್‌ ಮಿಸೆಸ್‌ ಅಯ್ಯರ್‌ನ ಒರಟು ರೂಪ. ಕಂಬಾರರ ಕತೆ ಆಧರಿಸಿದ ಟಿ.ಎಸ್‌.ನಾಗಾಭರಣ ನಿರ್ದೇಶನದ ಸಿಂಗಾರೆವ್ವ ಕನ್ನಡದ ಉತ್ತಮ ಚಿತ್ರ ಪ್ರಶಸ್ತಿ ಪಡೆದಿದೆ. ನಿರೂಪಣೆ ಮತ್ತಷ್ಟು ಗಂಭೀರವಾಗಿದ್ದರೆ ಚಿತ್ರ ಇನ್ನೂ ಹೆಚ್ಚಿನ ಮಾನ್ಯತೆ ಪಡೆಯುತ್ತಿತ್ತು.

    ಆದರೆ, ಇಷ್ಟಕ್ಕೆ ಕನ್ನಡಿಗರು ನಿರಾಶೆ ಪಡಬೇಕಿಲ್ಲ. ಪ್ರಕಾಶ್‌ ಬೆಳವಾಡಿ ನಿರ್ದೇಶನದ ‘ಸ್ಟಂಬಲ್‌’ಗೆ ಅತ್ಯುತ್ತಮ ಇಂಗ್ಲೀಷ್‌ ಚಲನಚಿತ್ರ ಪ್ರಶಸ್ತಿ ದೊರೆತಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ತುಂಬಿರುವ ಭ್ರಷ್ಟಾಚಾರ ‘ಸ್ಟಂಬಲ್‌’ನ ವಿಷಯ. ಯುವ ಜನಾಂಗದ ಹೊಸ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಹಲವು ಚಲನಚಿತ್ರಗಳ ಪ್ರವೇಶ ಈ ಬಾರಿಯ ರಾಷ್ಟ್ರೀಯ ಚಲನಚಿತ್ರ ಸ್ಪರ್ಧೆಯ ವಿಶೇಷ.

    ಭಾರತೀಯ ಪನೋರಮಾಗೆ ಬಂದಿದ್ದ ಬಿ.ಎಸ್‌.ಲಿಂಗದೇವರು ಅವರ ‘ಮೌನಿ’ ತೀರ್ಪು ಮಂಡಳಿಯ ಹಲವು ಸದಸ್ಯರನ್ನು ನಿಬ್ಬೆರಗಾಗಿಸಿದೆ. ಚಿತ್ರದಲ್ಲಿನ ಹಲವರ ಪಾತ್ರಗಳು ಸದಸ್ಯರ ಮನ ಗೆದ್ದಿದೆ.

    ಮುಂದಿನ ವರ್ಷ ಈ ಚಿತ್ರ ರಾಷ್ಟ್ರೀಯ ಚಲನಚಿತ್ರ ಸ್ಪರ್ಧೆಗೆ ಬರುತ್ತಿದೆ. ಉಳಿದ ಚಿತ್ರಗಳಿಗೆ ಇದು ತೀವ್ರ ಸ್ಪರ್ಧೆ ನೀಡಲಿದೆ ಎಂದು ಈಗಾಗಲೇ ಹಲವರು ಭವಿಷ್ಯ ನುಡಿಯುತ್ತಿದ್ದಾರೆ.

    ಕವಿತಾ ಲಂಕೇಶ್‌ ಅವರ ‘ಬಿಂಬ’, ಜೆ.ಕೆ.ಶ್ರೀನಿವಾಸಮೂರ್ತಿ ಅವರ ‘ದೇವರ ಮಕ್ಕಳು’, ಸುಧಾಕರ ಬನ್ನಂಜೆ ಅವರ ‘ಧರ್ಮ ಯೋಧರು’, ಎಸ್‌.ಆದರ್ಶ ಅವರ ‘ದುಂಬಿ’, ವೆಂಕಟೇಶ್‌ ಪ್ರಸಾದ್‌ ಅವರ ‘ಕಾರ್ಮುಗಿಲು’, ಬರಗೂರು ರಾಮಚಂದ್ರಪ್ಪ ಅವರ ‘ಕ್ಷಾಮ’, ಕೆ.ಗಣೇಶನ್‌ ಅವರ ‘ಮಾನವೀಯತೆ’, ಎಸ್‌.ಮಹೇಶ್‌ ಸುಖಧರೆ ಅವರ ‘ಸೈನಿಕ’, ಸಾಯಿ ಪ್ರಕಾಶ್‌ ಅವರ ‘ತವರಿಗೆ ಬಾ ತಂಗಿ’, ಎನ್‌.ಎಸ್‌.ಶಂಕರ್‌ ಅವರ ‘ರಾಂಗ್‌ ನಂಬರ್‌’ ಪ್ರಶಸ್ತಿಗೆ ಸೆಣಸಿದ ಇತರ ಚಿತ್ರಗಳು.

    ‘ಕ್ಷಾಮ’ ಕತೆ ಉತ್ತಮವಾಗಿದ್ದರೂ ನಿರೂಪಣೆಯಲ್ಲಿ ಎಡವಿ ಪ್ರಶಸ್ತಿ ಕಳಕೊಂಡಿದೆ. ಭಾರತೀಯ ಪನೋರಮಗೆ ಬಂದಿದ್ದ ನಾಗತೀಹಳ್ಳಿ ಚಂದ್ರಶೇಖರ ಅವರ ‘ಪ್ಯಾರಿಸ್‌ ಪ್ರಣಯ’ ಅವರದೇ ‘ಅಮೆರಿಕ ಅಮೆರಿಕ’ದಲ್ಲಿ ಕಂಡುಬಂದ, ಸಂಸ್ಕೃತಿ, ನಾಡು- ನುಡಿಯಲ್ಲಿನ ಸಂಘರ್ಷದ ಸ್ಪರ್ಶ ಇಲ್ಲದ ಕಾರಣ ಸೋತಿದೆ.

    ತೀರ್ಪುಗಾರರ ಮಂಡಳಿಯಲ್ಲಿ ಕನ್ನಡದ ಕೆ.ಎಸ್‌.ಎಲ್‌.ಸ್ವಾಮಿ ಸದಸ್ಯರಾಗಿದ್ದರು.

    (ಸ್ನೇಹಸೇತು- ವಿಜಯ ಕರ್ನಾಟಕ)

    Post your views

    ಪೂರಕ ಓದಿಗೆ-
    ಪನೋರಮಾ ಅಂಗಳಕ್ಕೆ ‘ಮೌನಿ’

    ಮುಖಪುಟ / ಸ್ಯಾಂಡಲ್‌ವುಡ್‌

    Wednesday, April 24, 2024, 4:06
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X