»   » ಸಿಲ್ಲಿಲಲ್ಲಿ ಧಾರಾವಾಹಿಯ ಡಾಕ್ಟರ್ ವಿಠಲರಾವ್ ಬೆಳ್ಳಿತೆರೆಗೆ

ಸಿಲ್ಲಿಲಲ್ಲಿ ಧಾರಾವಾಹಿಯ ಡಾಕ್ಟರ್ ವಿಠಲರಾವ್ ಬೆಳ್ಳಿತೆರೆಗೆ

Posted By:
Subscribe to Filmibeat Kannada


ನಟ ಮತ್ತು ಹಿನ್ನೆಲೆ ಗಾಯಕ ರವಿಶಂಕರ್, ಅದೇ ಸ್ವಾಮಿ ಸಿಲ್ಲಿಲಲ್ಲಿಸೀರಿಯಲ್ ನ ಡಾಕ್ಟರ್ ವಿಠಲರಾವ್ ನಿಮಗೆ ಗೊತ್ತಿರಬೇಕು. ಅವರೀಗ ಕಿರುತೆರೆಯಿಂದ ಬೆಳ್ಳಿತೆರೆ ಪ್ರವೇಶಿಸುತ್ತಿದ್ದಾರೆ.

ರೂಪಾ ಪ್ರಭಾಕರ್, ಮಂಜು ಭಾಷಿಣಿ ಜೊತೆ ವಿಠಲರಾವ್ ಪಾತ್ರದಲ್ಲಿ ಎಲ್ಲರ ನಗಿಸಿದ ರವಿಶಂಕರ್, ಸಿಲ್ಲಿಲಲ್ಲಿ ಧಾರಾವಾಹಿಯ ಸುಮಾರು 1000 ಕಂತುಗಳಲ್ಲಿ ನಟಿಸಿದ್ದಾರೆ. ಅವರು ಬಂದ್ರೆ ಸಾಕು, ವೀಕ್ಷಕರು ಬಿದ್ದು ಬಿದ್ದು ನಗುತ್ತಿದ್ದರು. ಮಕ್ಕಳಿಗಂತೂ ವಿಠಲರಾವ್ ಅಚ್ಚುಮೆಚ್ಚು. ಈ ಜನಪ್ರಿಯತೆ ವಿಠಲರಾವ್ ಅವರನ್ನು ಬೆಳ್ಳಿತೆರೆವರೆಗೂ ಕರೆತಂದಿದೆ.

ಸಿಲ್ಲಿಲಲ್ಲಿ ತಂಡದ ಪ್ರಮುಖ ಪಾತ್ರಧಾರಿಗಳನ್ನು ಹೊರಗಟ್ಟಿ, ಸಿಹಿಚಂದ್ರು ಹೊಸ ತಂಡ ಕಟ್ಟಿದ್ದಾರೆ. ಕಿರುತೆರೆಯಲ್ಲಿ ಹೊಸ ಪಾತ್ರಗಳ ಸಿಲ್ಲಿಲಲ್ಲಿ ಸೀರಿಯಲ್ ಮುಂದುವರೆದಿದೆ ಎಂಬ ಮಾತುಗಳಿವೆ. ಈ ಹಿಂದೆ ಚಂದ್ರು, ಪಾಪ ಪಾಂಡುಖ್ಯಾತಿಯ ಚಿದಾನಂದ್ ಗೆ ಗೇಟ್ ಪಾಸ್ ಕೊಟ್ಟ ಕತೆ ಎಲ್ಲರಿಗೂ ಗೊತ್ತಿದೆ. ಹೀಗಾಗಿ ಇದು ಇನ್ನೊಂದು ಗೇಟ್ ಪಾಸಿನ ಕತೆಯಿರಬಹುದು ಎನ್ನಲಾಗಿದೆ. ಆದರೆ ರವಿಶಂಕರ್ ಹೇಳುವುದೇ ಬೇರೆ. ಕತೆ ಮತ್ತು ಪಾತ್ರದ ಏಕತಾನತೆ ತಪ್ಪಿಸಲು ತಾವೇ ಸಿಲ್ಲಿಲಲ್ಲಿಯಿಂದ ಹೊರಬಂದದ್ದಾಗಿ ಅವರು ಹೇಳುತ್ತಾರೆ.

ಅದೇನೇ ಇರಲಿ, ರವಿಶಂಕರ್ ಬದುಕಲ್ಲಿ ಮಿಂಚು ಕಾಣಿಸುತ್ತಿದೆ. ಅವರು ನಾಯಕರಾಗಿ ಅಭಿನಯಿಸಲಿರುವ ಹೊಸ ಚಿತ್ರ ಆಗಸ್ಟ್ ನಲ್ಲಿ ಸೆಟ್ಟೇರಲಿದೆ. ಈ ವಿಚಾರ ರವಿಶಂಕರ್ ಪತ್ನಿ ಸಂಗೀತಾ(ಮಂಜುಳಾ ಗುರುರಾಜ್ ಪುತ್ರಿ)ಅವರಿಗೆ ಖುಷಿ ತಂದಿದೆ. ಅಂದ ಹಾಗೆ ಪ್ರಣಯ ರಾಜನ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರಂತೆ. ಜೊತೆಗೆ ಪಾತ್ರಕ್ಕೆ ಹಾಸ್ಯದ ಒಗ್ಗರಣೆ ಸಹಾ ಇದೆ.

ಕಿರಣ್ ಗೋಯಿ ಚಿತ್ರದ ನಿರ್ದೇಶಕರು. ದೊಡ್ಡಮನೆ ವೆಂಕಟೇಶ್, ರವಿಶಂಕರ್ ಜನಪ್ರಿಯತೆ ನಂಬಿ ದುಡ್ಡು ಹಾಕಲು ಮುಂದೆ ಬಂದಿದ್ದಾರೆ.

ಈಟೀವಿಯ ಹಾಡಿಗೊಂದು ಹಾಡು ಕಾರ್ಯಕ್ರಮದ ನಿರೂಪಕರಾಗಿ ರವಿಶಂಕರ್ ಮಿಂಚುತ್ತಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada