»   » ದೋಣಿ ಸಾಗಲಿ, ಯಾವ ಜನ್ಮದ ಮೈತ್ರಿ, ನಾನೇ ವೀಣೆ ನೀನೇ ತಂತಿ

ದೋಣಿ ಸಾಗಲಿ, ಯಾವ ಜನ್ಮದ ಮೈತ್ರಿ, ನಾನೇ ವೀಣೆ ನೀನೇ ತಂತಿ

By: *ಚೇತನ್‌ ನಾಡಿಗೇರ್‌
Subscribe to Filmibeat Kannada

ಜನ ನನ್ನನ್ನು ಮರೆತರೂ 'ದೋಣಿ ಸಾಗಲಿ' ಹಾಡು ಮರೆಯೋದಿಲ್ಲ. ಜಾನಕಿ ನಿಜವಾದ ನಟಿ. ಮುಖ ಖಾಲಿಯಾಗಿ ಕಂಡರೂ ಅವರು ತನ್ಮಯತೆಯಿಂದ ಹಾಡುತ್ತಾರೆ. ಅಂತಹ ಮಹಾನ್‌ ಗಾಯಕಿಗೆ ಪದ್ಮಶ್ರೀ ಪ್ರಶಸ್ತಿ ಕೊಡಬೇಕು ಎಂದು ನಟಿ ಜಯಂತಿ ಶಿಫಾರಸ್ಸು ಮಾಡಿದಾಗ ಅಭಿಮಾನಿಗಳಿಂದ ಶಿಳ್ಳೆ.

ಮಂಗಳವಾರ ನಡೆದದ್ದು ಚಿಕ್ಕ ಚೊಕ್ಕ ಸಮಾರಂಭ. ಸ್ಥಳ- ರವೀಂದ್ರ ಕಲಾಕ್ಷೇತ್ರ. ಸಂದರ್ಭ- ಎಸ್‌.ಜಾನಕಿ ಅವರಿಗೆ ನಟಿ ಜಯಂತಿಯವರಿಂದ ಸಂಗೀತ ಗಂಗಾ ಪ್ರಶಸ್ತಿ ಪ್ರದಾನ. ಚಪ್ಪಾಳೆ ತಟ್ಟಲು ಅಭಿಮಾನಿಗಳಿದ್ದರು. ಅದನ್ನು ಕಣ್ತುಂಬಿಕೊಳ್ಳಲು ವೇದಿಕೆ ಮೇಲೆ ವಿಧಾನ ಪರಿಷತ್‌ ಸಭಾಪತಿ ಬಿ.ಎಲ್‌.ಶಂಕರ್‌, ಪಂಡಿತ್‌ ಶೇಷಾದ್ರಿ ಗವಾಯಿ, ಸಾಹಿತಿ ಸಿದ್ಧಲಿಂಗ ಪಟ್ಟಣಶೆಟ್ಟಿ, ಕವಿ ಎಚ್‌.ಎಸ್‌.ವೆಂಕಟೇಶಮೂರ್ತಿ ಇದ್ದರು.

ಜಿ.ವಿ.ಅತ್ರಿ ಅವರ ಪುತ್ಥಳಿಯನ್ನು ಬಿ.ಎಲ್‌.ಶಂಕರ್‌ ಅನಾವರಣಗೊಳಿಸಿದರು. ಇದೇ ಸಂದರ್ಭದಲ್ಲಿ ಗಂಧರ್ವ ಗಾನ ಕೋಗಿಲೆ ಎಂಬ ಬಿರುದಿಗೂ ಜಾನಕಿ ಭಾಜನರಾದರು. ಜಯಶ್ರೀ ಅರವಿಂದ್‌ ಬರೆದಿರುವ ನಾದಯೋಗಿ ಪದ್ಮ ಚರಣ್‌ ಪುಸ್ತಕವನ್ನು ಕವಿ ವೆಂಕಟೇಶ ಮೂರ್ತಿ ಬಿಡುಗಡೆ ಮಾಡಿದರು.

ಇವಳು ಯಾರು ಬಲ್ಲೆಯೇನು?
ಇವಳ ಪ್ರತಿಭೆ ಕಾಮಧೇನು
ಈ ಗೆಳತಿಯ ಗೆಳೆಯ ನಾನು...

ಜಾನಕಿಯವರ ಪ್ರತಿಭೆಗೆ ಕನ್ನಡಿ ಹಿಡಿಯಲು ತಾವೇ ಬರೆದ ಕವನವನ್ನು ಪಿ.ಬಿ.ಶ್ರೀನಿವಾಸ್‌ ಹಾಡಾಗಿಸಿದರು. ಅವರ ಕಂಠಕ್ಕೆ ಮೊದಲಿನ ಖದರಿಲ್ಲದಿದ್ದರೂ, ಉತ್ಸಾಹ ಮಾತ್ರ ಬತ್ತದ ಚಿಲುಮೆಯಂತಿತ್ತು.

ಜಾನಕಿ ಹಾಡಿನ ನೆನಪಿನ ಹೂವಿನ ಪಕಳೆಗಳು ಸಹೃದಯರ ಸವರುವಂತೆ ಮಾಡಿದ್ದು ಚಂದ್ರಿಕ ಗುರುರಾಜ್‌, ಹೇಮ ಪ್ರಸಾದ್‌, ಶಮಿತ, ಮಂಗಳ, ಶಶಿಧರ್‌ ಹಾಗೂ ಅಜಯ್‌ ವಾರಿಯರ್‌. ದೋಣಿ ಸಾಗಲಿ, ಯಾವ ಜನ್ಮದ ಮೈತ್ರಿ, ನಾನೇ ವೀಣೆ ನೀನೇ ತಂತಿ, ಪಂಚಮ ವೇದ ಪ್ರೇಮದ ನಾದ, ಚಂದ್ರಮುಖಿ ಪ್ರಾಣಸಖಿ, ನೋಡು ಬಾ ನೋಡು ಬಾ ನಮ್ಮೂರ, ಮೂಡಲ ಮನೆಯಾ ಮುತ್ತಿನ ನೀರಿನ... ಹಾಡುಗಳು ಪುಂಖಾನುಪುಂಖ ಬಿಚ್ಚಿಕೊಂಡವು. ಯಾವುದೋ ರಾಗ ಜಾನಕಿಯವರ ಕಣ್ಣನ್ನೂ ತೇವಗೊಳಿಸಿತ್ತು. ಹಸಿರು ನೆನಪಿನ ಸೆಳಕೇ ಹಾಗಲ್ಲವೇ?

ಎಸ್‌.ಜಾನಕಿ ಮಾತಿಗೆ ಮೊದಲೇ ಗದ್ಗದಿತರಾಗಿದ್ದರು. 'ಕನ್ನಡದಲ್ಲಿ ಒಳ್ಳೆಯ ಸಂಗೀತ ನಿರ್ದೇಶಕರು, ಗೀತರಚನೆಕಾರರಿದ್ದಾರೆ. ಅವರೆಲ್ಲ ಕನ್ನಡಕ್ಕೆ ಸಾಕಷ್ಟು ಕೊಟ್ಟಿದ್ದಾರೆ. ಅವರನ್ನು ಮರೆಯಲು ಸಾಧ್ಯವಿಲ್ಲ. ನಾನು ಏನೂ ಹೆಚ್ಚಿಗೆ ಮಾಡಿಲ್ಲ. ಅವರು ಹೇಳಿದ ಕೆಲಸ ಮಾಡಿದ್ದೇನೆ ಅಷ್ಟೆ' ಎಂದು ಹೇಳುವಷ್ಟರಲ್ಲಿ ಕಂಠ ತುಂಬಿಬಂತು. ಪ್ರೇಕ್ಷಕರೆಡೆಯಿಂದ ಹಾಡಿನ ಬೇಡಿಕೆ ಎರಗಿತು.

'ಕರೆಯೇ ಕೋಗಿಲೆ ಮಾಧವನ..' ಜಾನಕಿ ಹಾಡು ಹೊಮ್ಮಿದಾಗ ಅರೆ ಕ್ಷಣ ನಿಶ್ಶಬ್ದ. ತದ ನಂತರ ಆಸೆಯ ಭಾವ ತುಂಬುತ ಜೀವ..' ಎಂಬ ಮಾಂಗಲ್ಯ ಭಾಗ್ಯ ಚಿತ್ರದ ಇನ್ನೊಂದು ಹಾಡು.

ಮನಸಿನ ಭಿತ್ತಿಯಲ್ಲಿ ಪದೇಪದೇ ಗುನುಗುಟ್ಟುವ ಹಾಡುಗಳ ಮೂಟೆ ಹೊತ್ತು ಹೊರ ನಡೆದ ಪ್ರೇಕ್ಷಕರಲ್ಲಿ ಏನೋ ಮೊಗೆದುಕೊಂಡ ಮುದವಿತ್ತು. ನಗು ಮುಖ ಹೊತ್ತ ಜಾನಕಿ ಕಣ್ಣಂಚಲ್ಲಿ ಹೊಳೆವಂಥಾ ತೇವವಿತ್ತು !ಪೂರಕ ಓದಿಗೆ-

English summary
Play back singer S.Janaki is a Kamadhenu : P.B.Srinivas

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada