»   » ಕಲ್ಯಾಣ್‌ ಕುಮಾರ್‌ ಎಂಬ 555 ಸೊಗಸುಗಾರ!

ಕಲ್ಯಾಣ್‌ ಕುಮಾರ್‌ ಎಂಬ 555 ಸೊಗಸುಗಾರ!

By Staff
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ವಾಣಿ ರಾಮದಾಸ್‌, ಸಿಂಗಾಪುರ
  sosale@singnet.com.sg
  ಇತ್ತೀಚೆಗೆ ಬೆಂಗಳೂರಿಗೆ ಹೋಗಿದ್ದಾಗ ಬಿ.ಟಿ.ಎಂ. ಲೇಔಟಿಗೆ ಹೋಗಿದ್ದೆ. ಗಂಟೆ ಐದಾಯ್ತೆಂದು ತಡಬಡಿಸುತ್ತಾ ಸಿಕ್ಕ ಸಿಕ್ಕ ರಿಕ್ಷಾಗಳಿಗೆ ಕೈತೋರಿಸುತ್ತಾ ಬೇಗ ಬೇಗ ಹೆಜ್ಜೆ ಹಾಕುತ್ತಿದ್ದೆ. ಅಲ್ಲಿನ ಟ್ರಾಫಿಕ್‌ ಕೂಪದಲ್ಲಿ ಸಿಕ್ಕಿ ಬೀಳುವೆನೆಂಬ ಭಯ ನನಗೆ. ಅದರಲ್ಲಿ ಸಿಕ್ಕಿಕೊಂಡರಂತೂ ತ್ರಿಶಂಕು ಸ್ವರ್ಗ. ಅಲ್ಲೂ ಇಲ್ಲ ಎಲ್ಲೂ ಸಲ್ಲ. ಬೇಗ ಮುನ್ನಡೆಯುತ್ತಿದ್ದ ನನ್ನ ಕಂಡು ‘ನಿಲ್ಲು ನೀ...ನಿಲ್ಲು ನೀ’ ಎಂದು ಗುನುಗಿದರು ಹಿಂಬಾಲಿಸುತಿದ್ದ ನನ್ನ ಪತಿದೇವರು ರಾಮದಾಸರು.

  ‘ಕರ್ಮ, ರೀ..ನೀಳವಾಗಿದ್ದ ವೇಣಿ ಕಟ್‌ ಮಾಡಿಸಿಕೊಂಡು ತುಂಬಾ ವರ್ಷ ಆಯಿತು. ಈಗ ಬರೀ ನೀಳ-ವಾಣಿನೇ ಇರೋದು. ಯಾವುದಾದ್ರು ಆಟೋ ನಿಲ್ಸಿ, ಟ್ರಾಫಿಕ್‌ನಲ್ಲಿ ಸಿಕ್ಕಿಕೊಂಡರೆ ಅಧೋಗತಿ’ ಎನ್ನುತ್ತಾ ಖಾಲಿ ಬರುತ್ತಿದ್ದ ರಿಕ್ಷಾದವನ್ನು ಕೂಗಿದೆ.

  ನಾನೆಂದ ಮಾತಿಗೆ ಜೋರಾಗಿ ನಗುತ್ತಾ ‘ಅಯ್ಯೋ ರಾಮ, ಹೆಂಗಸರಿಗೆ ಚಾಟಿ ಮಾತಿನ ಏಟು ಕೊಡುವ ಮಾತಿನ ನೈಪುಣ್ಯವನ್ನು ಯಾವ ದೇವನು ಕೊಟ್ಟನೋ, ಛಟ್‌ ಅಂತ ಉತ್ತರ ಯಾವಾಗ್ಲೂ ರೆಡಿ’ ಎಂದು ಅವರನ್ನುತ್ತಿದ್ದಂತೇ ಆಟೋ ಸಿಕ್ಕಿತು.

  ಆಟೋ ಮುಂದುವರೆದರೂ ಮನೆ ತಲುಪುವವರೆಗೂ ಅವರ ‘ನಿಲ್ಲು ನೀ..ನಿಲ್ಲು ನೀ..ಗುನುಗು’ ರಿಪೀಟ್‌ ಆಗುತ್ತಲೇ ಇತ್ತು. ನನಗೆ ಬರೆಯಲು ಸಿಕ್ಕಿತು ಹೊಸ ಟಾನಿಕ್‌ ಹಳೆ ಟಾಪಿಕ್‌ ... ಕಲ್ಯಾಣ್‌ಕುಮಾರ್‌.

  ಮನೆಗೆ ಬಂದದ್ದೇ ‘ಅಮ್ಮಾ, ನಿಂಗೆ ಕಲ್ಯಾಣ್‌ಕುಮಾರ್‌ ಬಗ್ಗೆ ಏನಾದ್ರು ಗೊತ್ತಾ ?’ ಎಂದೆ, ಈ ಅಯ್ಯಂಗಾರ್‌ಗಳಿಗೆ ಎಲ್ಲಿಲ್ಲದ ಬಾದರಾಯಣ ಸಂಬಂಧಾ ಇದ್ದೇ ಇರುತ್ತೆ ಎನ್ನುವ ಧೃಡ ನಂಬಿಕೆಯಿಂದ. ‘ಅದೇ ಪಿಕ್ಚರಿನವನು ತಾನೇ’ ಎನ್ನುತ್ತಾ ಅಮ್ಮಾ, ಪಟಪಟನೆ ‘ಅವನು ಅಯ್ಯಂಗಾರಿ. ಅವನ ತಾಯಿಯ ಹೆಸರು ಚೊಕ್ಕಮ್ಮ. ಅವನ ಹೆಸರು ಸಂಪತ್‌ಕುಮಾರ್‌. ಮನೆಯಲ್ಲಿ ಚೊಕ್ಕಣ್ಣ ಎಂದು ಕರೆಯೋವ್ರು. ಅದೇ ಡಿ.ವಿ.ಜಿ. ರೋಡಿನಲ್ಲಿ ಅವರದೊಂದು ಬಿಳಿಗಿರಿ ಅಂತ ಗಿರಣಿ ಇತ್ತು. ಮೂರು ಹೊತ್ತೂ ಸಿಗರೇಟ್‌ ಸೇದುತ್ತಿದ್ದ. ಅವನ ಸುಬ್ಬಾಶಾಸ್ತ್ರಿ ಪಿಕ್ಚರ್‌ ಸಿಕ್ಕಿದ್ರೆ ನೋಡು ತುಂಬಾ ಚೆನ್ನಾಗಿದೆ. ಮೊದಲೆಲ್ಲಾ ತುಂಬಾ ದುಡ್ಡು ಮಾಡಿದ ಆಮೇಲೆ ಎಲ್ಲಾ ಕಳಕೊಂಡ ಕಣೆ. ವೀರಪ್ಪನ್‌-ರಾಜ್‌ಕುಮಾರ್‌ ಗಲಾಟೆ ಆಯ್ತಲ್ಲಾ ಆ ಟೈಮ್‌ನಲ್ಲಿ ತೀರಿಕೊಂಡ ’ ಎಂದು ಉತ್ತರವಿತ್ತರು.

  ನನ್ನ ಅಮ್ಮನಂತೇ ಅಂದಿನ ಹಿರಿಯರ ಜ್ಞಾಪಕ ಶಕ್ತಿಗೆ ಮೆಚ್ಚಬೇಕು. ಅಂದು ಇದ್ದದ್ದು ಬರೀ ರೇಡಿಯೋ, ದಿನಪತ್ರಿಕೆ ಮಾತ್ರ. ಇಂದು ಇನ್‌ಫರ್‌ಮೇಶನ್‌ ಟೆಕ್ನಾಲಜಿ ಕಾಲ. ಗೂಗಲ್‌, ಡಾಟ್‌ಕಾಂ, ವೆಬ್‌ ಹೀಗೆ ವಿವರ ನೀಡುವ ಸೈಟುಗಳು ನೂರಾರು. ಯಾವ ಕಾಂ, ಯಾವ ವೆಬ್‌ ಇದ್ದರೂ ನಮಗಂತೂ ಕನ್ನಡದ ಅಂದಿನ ಬಾಲಕೃಷ್ಣ, ಕಲ್ಪನಾ, ನರಸಿಂಹರಾಜು, ಅಶ್ವಥ್‌ ಅವರಲ್ಲದೆ ಇನ್ನೂ ಅನೇಕ ಉತ್ತಮ ನಟರ, ನಿರ್ದೇಶಕರ ವಿವರ, ಮಾಹಿತಿಗಳಂತೂ ಲಭ್ಯವಿಲ್ಲ. ಇದು ವಿಷಾದನೀಯ. ಸಿಕ್ಕಷ್ಟು ಮಾಹಿತಿಗಳನ್ನು ಲೇಖನಕ್ಕೆ ಇಳಿಸುವುದು ಕಷ್ಟಸಾಧ್ಯವೇ ಸರಿ. ಇನ್ನು ಪುಸ್ತಕ? ಅದನ್ನು ಕೊಂಡು ಓದೋವ್ರು ಯಾರ್ರೀ? ಈ ವಿಷಯದಲ್ಲಿ ಹೊರತಾಗಿರುವುದು ವರನಟ ಡಾ.ರಾಜ್‌ ಒಬ್ಬರೇ ಎನ್ನಬಹುದು.

  ಬೆಳ್ಳಿತೆರೆಯಲ್ಲಿ ‘ನಟಶೇಖರ’

  ಕಲ್ಯಾಣ್‌ಕುಮಾರ್‌ ಅವರ ಜನನ 1936ರಲ್ಲಿ(ನಿಖರವಾಗಿ ಗೊತ್ತಿಲ್ಲ). ಸಂಪತ್‌ಕುಮಾರ್‌ ಅವರ ಹೆಸರು. ಅವರ ತಂದೆ-ತಾಯಿಗಳಿಗೆ ಮಗ ಡಾಕ್ಟರ್‌ ಆಗಬೇಕೆಂದು ಅಭಿಲಾಷೆ ಇತ್ತು. ಮಗನಿಗೆ ಬಣ್ಣದ ಗೀಳು ಹಿಡಿದಿತ್ತು. 1954ರಲ್ಲಿ ತೆರೆಕಂಡ ನಟಶೇಖರ ಕಲ್ಯಾಣ್‌ಕುಮಾರ್‌ ಅವರ ಮೊದಲ ಚಿತ್ರ.

  ಇಂದು ಹಿಂದಿ ಚಿತ್ರರಂಗದಲ್ಲಿ ಖಾನ್‌ತ್ರಯರು ಹೆಸರುವಾಸಿಯಾದಂತೆ ದಶಕಗಳ ಹಿಂದೆ ಕನ್ನಡ ಚಿತ್ರರಂಗದಲಿ ಕುಮಾರ ತ್ರಯರು ಪ್ರಖ್ಯಾತರಾಗಿದ್ದರು. ಕನ್ನಡದ ಕಣ್ಮಣಿ ರಾಜ್‌ಕುಮಾರ್‌, ಅಭಿನಯ ಚತುರ ಉದಯಕುಮಾರ್‌, ನಟಶೇಖರದಲ್ಲಿ ಅಭಿನಯಿಸಿ ಅದೇ ಬಿರುದು ಪಡೆದ ಕಲ್ಯಾಣ್‌ಕುಮಾರ್‌.

  ಕಲ್ಯಾಣ್‌ಕುಮಾರ್‌ ಎಂದೊಡನೆ ನೆನಪಾಗುವುದು 1964ರಲ್ಲಿ ತೆರೆಕಂಡ ಮೊಟ್ಟ ಮೊದಲ ಕನ್ನಡ ಕಲರ್‌ ಚಿತ್ರ ‘ಅಮರಶಿಲ್ಪಿ ಜಕಣಾಚಾರಿ’. ಹಾಗೆಯೇ ಅಂದಿನ ಉತ್ತಮ ಚಿತ್ರಗಳಾದ ಮತ್ತು ಒಳ್ಳೆಯ ಅಭಿನಯ ನೀಡಿದ ಸುಬ್ಬಾಶಾಸ್ತ್ರಿ, ಬೆಳ್ಳಿಮೋಡ, ರಾಯರಸೊಸೆ, ಕಥಾಸಂಗಮ, ಸದಾರಮೆ, ಮುಗ್ಧಮಾನವ, ಬದುಕುವ ದಾರಿ, ಮಾವನ ಮಗಳು, ಭೂದಾನ, ಆನಂದಕಂದ, ಪ್ರೇಮಕ್ಕೂ ಪರ್ಮಿಟ್ಟೇ, ಅರಿಶಿನ ಕುಂಕುಮ, ಕಾಲೇಜುರಂಗ, ಬೇಡಿ ಬಂದವಳು ಹೀಗೆ ಇನ್ನೂ ಹಲವಾರು ಚಿತ್ರಗಳು.

  ಸುಮಾರು 200 ಚಿತ್ರಗಳಿಗೂ ಮೇಲ್ಪಟ್ಟು ಚಿತ್ರಗಳಲ್ಲಿ ನಟಿಸಿದ ಕಲ್ಯಾಣ್‌ ನೆನಪಿನಲ್ಲಿ ಉಳಿದದ್ದು ಅತ್ಯಂತ ಭಾವಪೂರ್ಣ ಅಭಿನಯ ನೀಡಿದ್ದು ಅಮರಶಿಲ್ಪಿಯ ಜಕಣಾಚಾರಿ, ಬೆಳ್ಳಿಮೋಡ, ಬೇಡಿ ಬಂದವಳು, ಕಥಾಸಂಗಮ, ಕಾಲೇಜುರಂಗದ ಪ್ರೊಫೆಸರ್‌, ತಮಿಳಿನ ನೆಂಜಿಲ್‌ ಒರು ಆಲಯಂ ಚಿತ್ರದಲ್ಲಿ. ಇವರ ಮನೋಜ್ಞ ಅಭಿನಯ ಮೆಚ್ಚುವಂತಹುದು.

  ಮರೆಯಲಾಗದ ಹಾಡುಗಳು..

  ನಿನ್ನ ಒಗಟಿಗೆ ಉತ್ತರಾ, ಬೆಳ್ಳಿಮೋಡದ ಅಂಚಿನಿಂದ, ಒಡೆಯಿತು ಒಲವಿನ ಕನ್ನಡಿ(ಬೆಳ್ಳಿಮೋಡ), ನೀರಿನಲ್ಲಿ ಅಲೆಯ ಉಂಗುರ (ಬೇಡಿ ಬಂದವಳು), ನಿಲ್ಲು ನೀ (ಅಮರಶಿಲ್ಪಿ ಜಕಣಾಚಾರಿ), ಇಳಿದು ಬಾ ತಾಯಿ(ಅರಿಶಿನ ಕುಂಕುಮ), ಕಾಳಿದಾಸನ ಕಾವ್ಯ ಲಹರಿಗೆ ಕಾರಣ ಹೆಣ್ಣಿನ ಅಂದ(ಕಥಾಸಂಗಮ) ಪಿ.ಬಿ.ಎಸ್‌ ಕಂಠದಲಿ ಉಲಿದಿರುವ ಈ ಸುಮಧುರ ಹಾಡುಗಳ ಗುನುಗಿನಲ್ಲಿ ಮನದಂಗಳದಲಿ ಇಣುಕುವರು ಕಲ್ಯಾಣ್‌.

  ಬಿ.ಸರೋಜಾದೇವಿ, ಸಾಹುಕಾರ್‌ ಜಾನಕಿ, ಕಲ್ಪನಾ, ಜಯಂತಿ, ಚಂದ್ರಕಲಾ, ಭಾರತಿ, ಆರತಿ, ಮೈನಾವತಿ, ಕೆ.ಆರ್‌.ವಿಜಯಾ, ಬಿ.ವಿ.ರಾಧ, ಚಂದ್ರಕಲಾ, ರೂಪಾದೇವಿ, ಗಾಯತ್ರಿ ಅಲ್ಲದೆ ಎಜಿಡಿಎಂಕೆ ಸುಪ್ರಿಮೋ ಜಯಲಲಿತಾ ಅವರೊಂದಿಗೆ 1965 ಮತ್ತು 1966ರಲ್ಲಿ ಮಾವನಮಗಳು ಮತ್ತು ಬದುಕುವದಾರಿ ಚಿತ್ರದಲ್ಲಿ ನಟಿಸಿದ ಕೀರ್ತಿ ಕಲ್ಯಾಣ್‌ ಅವರದ್ದು. ಕನ್ನಡವೇ ಅಲ್ಲದೆ ತಮಿಳು, ತೆಲುಗು ಚಿತ್ರಗಳಲ್ಲೂ ಅಭಿನಯ ನೀಡಿದ ಕೀರ್ತಿ ಕಲ್ಯಾಣ್‌ ಅವರದಾಗಿತ್ತು.

  1960ರ ದಶಕಗಳಲ್ಲಿ ಹೀರೋ ಎನಿಸಿದ್ದ ಕಲ್ಯಾಣ್‌ ಜಿ.ವಿ. ಅಯ್ಯರ್‌ ಚಿತ್ರಗಳಾದ ಭೂದಾನ, ತಾಯಿಕರುಳು, ಲಾಯರ್‌ಮಗಳು, ಬಂಗಾರಿ ಚಿತ್ರಗಳಲ್ಲಿ ನಟಿಸಿದ್ದರು. ಅವರ ಪತ್ನಿ ರೇವತಿ ಅವರು ಬರೆದ ರಾಮು ನನ್ನ ತಮ್ಮ, ಚಿಕ್ಕಮ್ಮ ಎಂಬ ನಾಟಕಗಳಿಗೆ ನಿರ್ದೇಶನ ನೀಡಿದ್ದರು.

  ಕಲ್ಲು-ಸಕ್ಕರೆ

  ಚಿತ್ರ ನಟರುಗಳ ಜೀವನದಲ್ಲಿ ಹಣಕಾಸಿನ ಏರಿಳಿತಗಳು ಹೆಚ್ಚಾಗಿ ಇರುವಂತೆ ಕಲ್ಯಾಣ್‌ ಅವರ ಜೀವನದಲ್ಲೂ ಇತ್ತು. ಚಿತ್ರರಂಗಕ್ಕೆ ಪದಾರ್ಪಣ ಮಾಡಿದ ಹೊಸತರಲ್ಲಿ ಅವರ ಆರ್ಥಿಕ ಪರಿಸ್ಥಿತಿ ಉತ್ತುಂಗ ಶಿಖರದಲ್ಲಿತ್ತು.

  ನಟನೆಯ ಜೊತೆಗೆ ತಮ್ಮ ನಿಜ ನಾಮಧೇಯ ಸಂಪತ್‌ಕುಮಾರ್‌ ಹೆಸರಿನಲ್ಲಿ ‘ಲವ್‌ ಇನ್‌ ಬ್ಯಾಂಗಲೂರ್‌’ ಎಂಬ ಚಿತ್ರ ನಿರ್ಮಾಣಕ್ಕೆ ಕೈ ಇಟ್ಟರು. ಈ ಚಿತ್ರ ಭಾರತಿಯವರ ಮೊದಲ ಚಿತ್ರವಾಗಿತ್ತು. ನಂತರ ಎಂದೆಂದೂ ನಿನ್ನವನೇ, ಕಲ್ಲುಸಕ್ಕರೆ ಚಿತ್ರಗಳಿಗೆ ನಿರ್ದೇಶಕತ್ವ ವಹಿಸಿದರು. ನಿರ್ಮಾಣ, ನಿರ್ದೇಶನ ಎರಡೂ ಹಣ ತರಲಿಲ್ಲ. ಕೈಯಲ್ಲಿದ್ದ ಹಣ ಕರಗಿಹೋಯಿತು. ನಂತರದ ದಿನಗಳಲ್ಲಿ ಚಿತ್ರರಂಗ ಅವರನ್ನು ದೂರವಿಟ್ಟಿತ್ತು. ಅವರ ಆರ್ಥಿಕ ಪರಿಸ್ಥಿತಿ ಮುಗ್ಗರಿಸಿತ್ತು. ಯಾವುದೇ ಪರಿಸ್ಥಿತಿಯಲ್ಲೂ ತ್ರಿಬ್ಬಲ್‌ ಫೈವ್‌ ಸಿಗರೇಟ್‌, ಮಿನರಲ್‌ ವಾಟರಿನ ಶೋಕಿ ಮಾತ್ರ ಕಲ್ಯಾಣ್‌ ಅವರಿಂದ ದೂರವಾಗಲಿಲ್ಲ.

  ಅನೇಕ ಉದ್ಯಮಗಳಿಗೆ ಕೈ ಇಟ್ಟ ಕಲ್ಯಾಣ್‌ ಹೊಟೇಲ್‌ ಉದ್ಯಮಕ್ಕೂ ಹಣ ಹಾಕಿದರು. ದುರ್ಗತಿ ಅವರನ್ನು ಬೆಂಬಲಿಸಿತ್ತು. ನಟನೆಯನ್ನು ಶೇಖರಿಸಿದ್ದ ನಟಶೇಖರ ಕಲ್ಯಾಣ್‌ಗೆ ಹಣ ಶೇಖರಣೆ ಆಗಲಿಲ್ಲವೋ ಏನೋ? ಇದೇ ನರಸಿಂಹರಾಜು, ಬಾಲಕೃಷ್ಣ ಅವರ ಪಾಡು ಆಗಿತ್ತು. ತೆರೆಯ ಮೇಲೆ ನಗಿಸಿ, ನೋವು ಮರೆವಂತೆ ಮಾಡುತ್ತಿದ್ದ ಆ ಹಿರಿಯರ ತೆರೆಯ ಮರೆಯ ನೋವು, ವ್ಯಥೆ ಬೇರೆಯೇ ಆಗಿತ್ತು.

  ಆರ್ಥಿಕ ಪರಿಸ್ಥಿತಿ ಹೀಗಿರುವಲ್ಲಿ ಮತ್ತೆ ಕಲ್ಯಾಣ್‌ ಅವರಿಗೆ ಅಭಯ, ಅವರ ನಟನೆಗೆ ಮರುಜೀವ ಕೊಟ್ಟವರು ‘ತಾಯಿ’ ಹೆಸರಿನ ಆಧಾರಿತ ಚಿತ್ರ ಮಾಡುತ್ತಿದ್ದ ಅಬ್ಬಾಯಿ ನಾಯ್ಡು. 80ರ ದಶಕಗಳಲ್ಲಿ ಆ ವಯಸ್ಸಿಗೆ ತಕ್ಕಂತೆ ಹಿರಿಯ ಪಾತ್ರ ನಿರ್ವಹಿಸಿದ ಕಲ್ಯಾಣ್‌ ತಮ್ಮ ನಟನೆಯ ಮೂಲಕ ತಮ್ಮ ಅಭಿನಯ ಕುಗ್ಗಿಲ್ಲ, ಅದೇ ಭಾವಪೂರ್ಣತೆ, ಗಾಂಭೀರ್ಯ, ಲಘು ಹಾಸ್ಯದ ಪಾತ್ರಗಳಿಗೆ ನಾನು ಸಿದ್ಧ ಎಂದು ಸಾಬೀತು ಪಡಿಸಿದರು. ಕನ್ನಡ ಚಿತ್ರ ರಸಿಕರ ಹೃದಯಗೆದ್ದರು. ’ತಾಯಿ’ ಆಶೀರ್ವಾದವೋ ಏನೋ ರಸಿಕರ ಮನದಿಂದ ಅಲ್ಪ ಕಾಲ ಮರೆಯಾಗಿದ್ದ ಕಲ್ಯಾಣ್‌ ಮತ್ತೆ ಚಿತ್ರಗಳಲ್ಲಿ ಹೀರೊ ಆಗದಿದ್ದರೂ ಹಿರಿಯ ಪಾತ್ರಗಳಲ್ಲಿ ಮಿಂಚಿದರು. ಅವರ ಆರ್ಥಿಕ ಸ್ಥಿತಿ ಸುಧಾರಿಸಿತು, ಚಿತ್ರರಂಗ ಅವರನ್ನು ಒಪ್ಪಿಕೊಂಡಿತು ಜೊತೆಗೆ ತಾರಾಮೌಲ್ಯ ಮತ್ತೆ ಏರಿತು.

  ದೂರದರ್ಶನದಲ್ಲಿ ‘ಮನೆತನ’

  ದೂರದರ್ಶನ ಕೂಡ ಅವರನ್ನು ಕೈ ಬೀಸಿ ಕರೆಯಿತು. ಬೆಟ್ಟದ ಕಳ್ಳ ಚಿತ್ರದಲ್ಲಿ ಮೈನಾವತಿಯೊಂದಿಗೆ ನಟಿಸಿದ್ದ ಕಲ್ಯಾಣ್‌ ಕಿರುತೆರೆಯಲ್ಲಿ ಮೆಗಾ ಧಾರವಾಹಿ ‘ಮನೆತನ’ ದಲ್ಲಿ ಶಂಕರ್‌ ಪಾತ್ರದಲ್ಲಿ ಮತ್ತೆ ಮೈನಾವತಿ ಅವರೊಂದಿಗೆ ಮಿಂಚಿದರು. ರಸಿಕರ ಗಮನ ಸೆಳೆದರು. ದುರ್ಗತಿ ದೂರವಾಯ್ತು. ಹಣ ಶೇಖರವಾಯ್ತು ಆದರೆ ವಿಧಿಯಾಟ ಬಲ್ಲವರಾರು. ಹತ್ತಿರ ಹತ್ತಿರ 70 ವಸಂತಗಳ ಏರಿಳಿತ ಕಂಡ ಜೀವ ಟಿ.ವಿ.ಸೀರಿಯಲ್‌ ‘ಮನೆತನ’ದ ಶೂಟಿಂಗ್‌ ನಡೆಯುತ್ತಿದ್ದಾಗ ಕುಸಿಯಿತು. ಜುಲೈ 31, 1999ರಂದು ನಿನ್ನ ಒಗಟಿಗೇ ಉತ್ತರಾ ಕೊಡುವೆ ಬಾರೆ ಹತ್ತಿರಾ, ಕೊಡುವೆ ಬಾರೇ ಹತ್ತಿರಾ ಎಂದು ಕನ್ನಡಿಗರನ್ನು ತಮ್ಮ ನಟನಾ ಕೌಶಲ್ಯದಿಂದ ಹತ್ತಿರ ಕರೆದಿದ್ದ ಕಲ್ಯಾಣ್‌ ನಮ್ಮಿಂದ ದೂರವಾಗಿ ಹೋದರು.

  ಇಂದಿನ ಯುವ ಜನಾಂಗಕ್ಕೆ ಹಿಂದಿ ಚಿತ್ರರಂಗದ ಖಾನ್‌ ತ್ರಯರು ಹೀರೋ, ರೋಲ್‌ ಮಾಡೆಲ್‌ ಎನಿಸಿದ್ದರೆ, ದಶಕಗಳ ಹಿಂದೆಯೇ ಕರ್ನಾಟಕದ ಯುವ ಜನತೆಗೆ ಕುಮಾರ ತ್ರಯರು ಹೀರೋ, ರೋಲ್‌ ಮಾಡೆಲ್‌ಗಳಾಗಿದ್ದರು. ರಾಜ್‌, ಕಲ್ಯಾಣ್‌ ಮತ್ತೆ ಉದಯರು 1962ರಲ್ಲಿ ಒಟ್ಟಿಗೇ ಭೂದಾನ ಚಿತ್ರದಲ್ಲಿ ನಟಿಸಿದ್ದರು. ಇದೀಗ ಈ ಮೂವರು ಕನ್ನಡದ ಕುಮಾರತ್ರಯರು ನಮ್ಮೊಡನಿಲ್ಲ. ಅವರದೇ ಆದ ರೂಪು, ರೇಖೆಗಳಲ್ಲಿ ಮಿಂಚಿ ಕನ್ನಡ ಚಿತ್ರ ರಸಿಕರ ನೆನಪಿನ ಅಂಗಳದಲ್ಲಿ ಅಚ್ಚಳಿಯದ ಅಭಿನಯದ ಛಾಯೆಯನ್ನು ಸ್ಥಿರವಾಗಿಸಿದ್ದಾರೆ.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more