For Quick Alerts
  ALLOW NOTIFICATIONS  
  For Daily Alerts

  ‘ಕನ್ನಡ ಚಿತ್ರರಂಗವೇ, ನಾಗೇಂದ್ರರ ಕುಟುಂಬವ ಕಣ್ತೆರೆದು ನೋಡು’

  By Staff
  |

  *ಹ.ಗು. ಅಂಜನ್‌ ಕುಮಾರ್‌
  anjanhg@huawei.com

  ಒಂದಷ್ಟು ಮಾತುಗಳಿದ್ದವು. ಅವರನ್ನೇ ಕೇಳಬೇಕಿದ್ದ ಒಂದಷ್ಟು ಪ್ರಶ್ನೆಗಳು ಬಾಕಿಯಿದ್ದವು. ಕೇಳೋಣವೆಂದರೆ ನಾಗೇಂದ್ರ ಅವರೇ ಇಲ್ಲವಲ್ಲ ?

  ಮನುಷ್ಯ ಇಷ್ಟೊಂದು ನಿಸ್ವಾರ್ಥಿಯಾಗಿರಲು ಸಾಧ್ಯವೇ? ತನ್ನ ಬಗ್ಗೆ, ತನ್ನವರ ಬಗ್ಗೆ, ಅವರ ಬದುಕಿನ ಕುರಿತು ಯೋಚಿಸದೆ ಕೇವಲ ಸಂಗೀತವೊಂದನ್ನೇ ಆಹಾರ-ನೀರನ್ನಾಗಿ ಮಾಡಿಕೊಂಡಿರಲು ಸಾಧ್ಯವೆ ? ಅದು ನಿಸ್ವಾರ್ಥವೆ ಅಥವಾ ಅದು ಕೂಡ ಸ್ವಾರ್ಥವೆ? ಇದು ಮುಗ್ಧತೆಯೇ, ಸಂಗೀತದ ತಪಸ್ಸೇ? ಯಾವುದೂ ಅಲ್ಲವೆ? ಅಥವಾ ಎಲ್ಲವೂ ಹೌದೆ ? ಈ ಎಲ್ಲಾ ಪ್ರಶ್ನೆಗಳನ್ನೂ ನಾಗೇಂದ್ರರವರ ಹತ್ತಿರ ಕೇಳಬೇಕೆಂದು ಬಹಳ ಸಲ ಅನ್ನಿಸುತ್ತದೆ. ಆದರೆ, ಅವರು ಬದುಕಿದ್ದಾಗ ನನಗೆ ಅವರ ಹೊರ ಪ್ರಪಂಚದ ಪರಿಚಯವಿತ್ತೇ ಹೊರತು ಅವರ ಒಳ ಪ್ರಪಂಚ ಗೊತ್ತಿರಲಿಲ್ಲ. ಅವರ ಕುಟುಂಬದವರ ಬಗೆಗೆ ತಿಳಿದಿರಲಿಲ್ಲ. ಈಗ ಕೇಳೋಣವೆಂದರೆ ಅವರಿಲ್ಲ . ದಿವಂಗತ ನಾಗೇಂದ್ರ ಮತ್ತವರ ಕುಟುಂಬವನ್ನು ನೆನೆದರೆ ಪ್ರಶ್ನೆಗಳ ಸರಮಾಲೆಯೇ ನನ್ನೆದುರಾಗುತ್ತವೆ.

  ಸಂಗೀತವನ್ನೇ ಹಗಲಿರುಳೂ ಧ್ಯಾನಿಸಿದ ನಾಗೇಂದ್ರ ಅವರಿಗೆ ಸಿಕ್ಕಿದ್ದಾದರೂ ಏನು? ಈ ಪ್ರಶ್ನೆಗೆ ಉತ್ತರ ಬೇಕೆಂದರೆ ಅವರ ಕುಟುಂಬ ವರ್ಗವನ್ನು ನೋಡೇಬೇಕು. ಆ ಕುಟುಂಬದ ದುಸ್ಥಿತಿಯನ್ನು ಕಾಣಬೇಕು.

  ನಾಗೇಂದ್ರ ಕನ್ನಡ ಸಿನಿಮಾರಂಗದ ಜನಪ್ರಿಯ ಸಂಗೀತ ನಿರ್ದೇಶಕರಲ್ಲೊಬ್ಬರು. ರಾಜನ್‌-ನಾಗೇಂದ್ರ ಸೋದರರ ಜೋಡಿ ಖ್ಯಾತಿಯ ತುತ್ತತುದಿಯೇರಿತ್ತು . ಸಿನಿ ರಸಿಕರಿಗೆ ಅನೇಕ ಅಮರ ಗೀತೆಗಳನ್ನು ನೀಡಿರುವ ನಾಗೇಂದ್ರ ಮನೆಮಂದಿಯ ಪಾಲಿಗೆ ಬಿಟ್ಟುಹೋಗಿರುವುದು ವಿಷಾದ ಗೀತೆಯೆಂದರೆ ನೀವು ನಂಬುತ್ತೀರಾ ?

  ಬದುಕಿದ್ದಾಗ ನಾಗೇಂದ್ರ ತಮ್ಮ ಬಗೆಗೆ ಯೋಚಿಸಿದ್ದರೋ ಇಲ್ಲವೋ? ಆದರೆ, ಕುಟುಂಬದ ಬಗ್ಗೆ ಯೋಚಿಸಿದಂತಿಲ್ಲ. ತಾನಿಲ್ಲದಿದ್ದರೆ ತನ್ನನ್ನು ನಂಬಿಕೊಂಡವರ ಬದುಕು ಏನಾಗಬಹುದು ಎಂದು ಸ್ವಲ್ಪವೂ ಯೋಚನೆ ಮಾಡದೆ ಬದುಕಿದವರು ನಾಗೇಂದ್ರ. ಬದುಕಿದಷ್ಟೂ ದಿನ ಮನೆಯ ಖರ್ಚಿಗೆ ತಮ್ಮ ಶ್ರೀಮತಿಗೆ ನಾಗೇಂದ್ರ ಅವರು ಕೊಡುತ್ತಿದ್ದುದು ದಿನಕ್ಕೆ ಕೇವಲ 5 ರೂಪಾಯಿಗಳು. ಅದು ಅವರ ತಪ್ಪೆನ್ನುತ್ತೀರಾ ? ಉಹುಂ, ಪ್ರತಿಭೆ, ತನ್ನ ಶಕ್ತಿಯೆಲ್ಲವನ್ನೂ ಚಿತ್ರರಂಗಕ್ಕೆ ಮೀಸಲಾಗಿಟ್ಟ ಸಂಗೀತಕರ್ಮಿಯ ಜೀವನದ ದುಸ್ಥಿತಿಯಿದು. ವಿಧಿ ವಿಲಾಸವೆನೆ ಇದೇನಾ ?

  ಹೊಸ ಆಯಾಮ ನೀಡುವ ಮೂಲಕ ಚಿತ್ರಸಂಗೀತವನ್ನು ಜನಪ್ರಿಯಗೊಳಿಸಿದವರು ನಾಗೇಂದ್ರ. ಇಂದಿಗೂ ಅವರ ನೂರಾರು ಹಾಡುಗಳು ಕನ್ನಡಿಗರ ನಾಲಿಗೆಯಲ್ಲಿ ನಲಿದಾಡುತ್ತಿವೆ. ಆದರೆ ಅದರ ಫಲಶೃತಿ ಅವರಿಗೆ ದಕ್ಕಿತೆ? ಅವರ ಹಾಡುಗಳನ್ನು ಗುನುಗುವ ಯಾವ ಕನ್ನಡಿಗರಿಗೂ ಅವರ ಕುಟುಂಬದ ಈಗಿನ ಸ್ಥಿತಿ ಗೊತ್ತಿರಲಿಕ್ಕಿಲ್ಲ. ಅವರ ಕುಟುಂಬದ ಪರದಾಟದ ಬೇಗೆ ಅವರನ್ನು ತಟ್ಟುವುದಿಲ್ಲ. ಇದೆಲ್ಲ ವಿಧಿ ವಿಪರೀತದ ಅರಿವಿರುವ ವ್ಯಕ್ತಿಗಳು ಮಾತ್ರ ಕಣ್ಮುಚ್ಚಿ, ಕಿವಿ ಮುಚ್ಚಿ ಕೂತಿದ್ದಾರೆ, ಬಾಯಿಯಾಂದನ್ನು ಬಿಟ್ಟುಕೊಂಡು.

  ಇದು ನಮ್ಮ ಬಣ್ಣದ ಲೋಕದ ಸ್ಥಿತಿ.

  ನಮ್ಮ ಚಿತ್ರರಂಗದ ಪಿಶಾಚಿ ಮನೋಭಾವ ತೋರಲು ನಾಗೇಂದ್ರರವರ ಕುಟುಂಬದ ಸ್ಥಿತಿಯಾಂದೇ ಸಾಕು. ಈ ಮಾಯಾ ಬಜಾರಿನಲ್ಲಿ ಕೇವಲ ಹಣ, ಹೆಸರು ಮಾತ್ರ ಮಾತಾಡುತ್ತೆ . ಪ್ರತಿಭೆ ಹಾಗೂ ಸಾಧನೆ ಪಕ್ಕಕ್ಕೆ ಸರಿಯುತ್ತದೆ. ನಾಗೇಂದ್ರ ಅವರು ಬದುಕಿದ್ದಾಗ ಅವರ ಮುಂದೆ ಸಾವಿರಾರು ಬಣ್ಣದ ಮಾತನ್ನು ಆಡಿದ ಜನ ಈಗ ಎಲ್ಲವನ್ನೂ ಮರೆತು ಹಣ ಮಾಡುವುದರಲ್ಲಿ ತಲ್ಲೀನರಾಗಿದ್ದಾರೆ.

  ನಾಗೇಂದ್ರ ಸಂಗೀತ ಕೊಟ್ಟರು. ಆ ಗೀತೆಗಳಿಗೆ ಅಭಿನಯಿಸಿ ನಾಯಕ ನಟರು ಜನಪ್ರಿಯರಾದರು. ಆ ಹಾಡುಗಳನ್ನು ಒಮ್ಮೆ ಹಾಡಿ, ಮತ್ತೊಮ್ಮೆ ಹಾಡಿ, ಎದೆತುಂಬಿ ಹಾಡಿ ಗಾಯಕರು ಜನಪ್ರಿಯರಾದರು. ವೈಪರೀತ್ಯ ನೋಡಿ- ನಾಗೇಂದ್ರ ಅವರ ಗೀತೆಗಳ ಋಣ ತಮ್ಮ ಮೇಲಿದೆ ಎಂದು ಇವರಾರಿಗೂ ಎಂದೂ ಅನ್ನಿಸುವುದೇ ಇಲ್ಲ ? ಕಲಿಯುಗ ಕರ್ಣ, ಕರುಣಾಮಯಿ, ಆಪದ್ಭಾಂದವ, ಕನ್ನಡಿಗರ ಕಣ್ಮಣಿ ಇವೆಲ್ಲಾ ಬಿರುದು ಬಾವಲಿ ತೆರೆಯ ಮೇಲೆ ಮಾತ್ರ. ಹಣಕ್ಕಾಗಿಯೇ ಬದುಕಿ ಅದಕ್ಕಾಗಿಯೇ ನೆಗೆದು ಬೀಳುವ ಮಂದಿಯಿವರು. ಅಬ್ಬಬ್ಬಾ ಎಷ್ಟು ಘೋರ.... ಕಣ್ಣ ಮುಂದೆ ಬಣ್ಣ ಬಣ್ಣಗಳಲ್ಲಿ ಕಾಣುವವರ ಹಿಂದೆ ಎಂತಹ ಕಗ್ಗತ್ತಲು?

  ಕನ್ನಡ ಚಿತ್ರರಂಗಕ್ಕೆ ನಾಗೇಂದ್ರರವರ ಕುಟುಂಬದ ಬಗೆಗೆ ಗೊತ್ತಿದ್ದೂ ಏಕಿಷ್ಟು ನಿಕೃಷ್ಟತೆ? ನಾಗೇಂದ್ರ ಅವರನ್ನು ಕಳೆದುಕೊಂಡು ಚಿತ್ರರಂಗಕ್ಕೆ ಏನೂ ನಷ್ಟವಿಲ್ಲದಿರಬಹುದು. ಅವರ ಸ್ಥಾನವನ್ನು ಬೇರೆಯವರು ತುಂಬಿರಬಹುದು. ಆದರೆ ಅವರ ಕುಟುಂಬದತ್ತ ಒಮ್ಮೆ ಕಣ್ಣು ಹರಿಸಿ ಸ್ವಾಮಿ: ಕುಟುಂಬದ ಶಕ್ತಿಕೇಂದ್ರವಾಗಿದ್ದ ನಾಗೇಂದ್ರ ಅವರನ್ನು ಕಳಕೊಂಡಿರುವ ಕುಟುಂಬವೀಗ ಯಾರ ಬಳಿ ಹೋಗಬೇಕು, ನಿಮ್ಮನ್ನು ಬಿಟ್ಟು. ನಿಮಗೇಕೆ ಇವರ ಕೂಗು ಕೇಳುತ್ತಿಲ್ಲ. ಇರಲು ಒಂದು ಸಣ್ಣ ಮನೆಯಿಲ್ಲದೆ ಬೇಯುತ್ತಿರುವ ನಾಗೇಂದ್ರರ ಕುಟುಂಬದ ಕುರಿತು- ಸಂಗೀತ ಸಾಮ್ರಾಟ್‌ರವರ ಕುಟುಂಬ ಎಂಬ ಅನುಕಂಪ ಬೇಡ, ತುಸು ಅಂತಃಕರಣ ತೋರಿ. ಅಭಿಮಾನದಿಂದ ನೀವೇನೂ ಸಹಾಯ ಮಾಡದಿದ್ದರೂ, ಕನಿಷ್ಟ ಪಕ್ಷ ಮನುಷ್ಯತ್ವದಿಂದಲಾದರೂ ಸಹಾಯ ಮಾಡಿ. ಅವರಿಗೆ ಬದುಕಲೊಂದು ದಾರಿ ಮಾಡಿಕೊಡಿ. ನಾಗೆಂದ್ರರವರ ಮಗ ಸರಿಯಾದ ಶಿಕ್ಷಣವಿಲ್ಲದೆ ಕೊರಗುತ್ತಿದ್ದಾನೆ. ಅವನ ಮುಖವನ್ನಾದರೂ ನೋಡಿ ಸ್ವಾಮಿ.

  ಕನ್ನಡ ಚಿತ್ರರಸಿಕರಾದ ನಾವು ಎಷ್ಟೆಂದು ಸಹಾಯ ಮಾಡಬಹುದು ? ಸಮರ್ಪಕ ನೆರವೇನಿದ್ದರೂ ಚಿತ್ರರಂಗದಿಂದಲೇ ಬರಬೇಕು. ಚಿತ್ರರಸಿಕರ ನೆರವು ನಾಗೇಂದ್ರ ಪತ್ನಿ-ಪುತ್ರರ ಕಣ್ಣಿನಲ್ಲಿ ತುಂಬಿರುವ ಒಂದು ಹನಿಯನ್ನು ಒರೆಸಬಹುದು. ಆದರೆ ಕಣ್ಣೀರಿನ ಮೂಲವನ್ನು ಅಳಿಸುವ ನೆರವಿಗೆ ಚಿತ್ರರಂಗವೇ ಮುಂದಾಗಬೇಕಿದೆ.

  ಜನರೇ ದೇವರು. ಜನರಿಂದಲೇ ಎಲ್ಲಾ . ನಿಮ್ಮದೇ ಎಲ್ಲ . ನಮ್ಮದೇನಿದೆ, ಎಲ್ಲಾ ಆ ಮೇಲಿನವನದು ಎಂದು ದಾರ್ಶನಿಕವಾಗಿ, ಆಧ್ಯಾತ್ಮಿಕವಾಗಿ ಮಾತಾಡುವ ಚಿತ್ರರಂಗದ ಮಂದಿ ನಾಗೇಂದ್ರ ಅವರ ಕುಟುಂಬಕ್ಕೆ ನೆರವು ನೀಡಬೇಕು. ಈ ನೆರವು ಸಹಾಯವಲ್ಲ , ಕರ್ತವ್ಯ.

  ನಾಗೇಂದ್ರ ಅವರ ಕುಟುಂಬಕ್ಕೆ ನೆರವು ನೀಡಿ ಎಂದು ಕನ್ನಡ ಚಿತ್ರರಂಗವನ್ನು ಕೇಳುವ ಒತ್ತಾಯಿಸುವ ಹಕ್ಕು ಓರ್ವ ಚಿತ್ರ ರಸಿಕನಗಾ ನನಗಿದೆ, ನನ್ನಂಥ ಎಲ್ಲ ಚಿತ್ರರಸಿಕರಿಗಿದೆ. ಯಾಕೆಂದರೆ ಇವತ್ತು ಇಂದಿನ ಸಿನಿಮಾ ಶ್ರೀಮಂತರ ಖ್ಯಾತಿಗೆ ಹಾಗೂ ಸಿರಿ ಸಂಪತ್ತಿಗೆ ಕಾರಣವಾಗಿರುವ ಪಂಚಕೋಟಿ ಕನ್ನಡಿಗರಲ್ಲಿ ನನ್ನಂಥ ಚಿತ್ರರಸಿಕನೂ ಒಬ್ಬ.


  ವಾರ್ತಾ ಸಂಚಯ
  ನಾಗೇಂದ್ರ ಪತ್ನಿಯ ಕಣ್ಣೊರೆಸಿದ ಓದುಗ ಅಂಜನ್‌ಗೆ ಧನ್ಯವಾದ
  ಬಾಡಿಹೋದ ಬಳ್ಳಿಯಿಂದ ಹೂವು ಅರಳಬಲ್ಲದೆ?-ನಾಗೇಂದ್ರ ಪತ್ನಿಯ ಅಳಲು
  ನಾಗೇಂದ್ರ ಅವರಿಗೆ ಇಂಥಾ ಪರಿಸ್ಥಿತಿ ಯಾಕೆ ಬಂತು?
  ನಾಗೇಂದ್ರ ಯಾಕೆ ಸತ್ತರು, ಹೇಗೆ ಸತ್ತರು?
  ರಾಜನ್‌ - ನಾಗೇಂದ್ರ ಸಂಗೀತ ಜೋಡಿಯ ನಾಗೇಂದ್ರ ನಿಧನ


  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X