»   » ‘ವೀರ ಕನ್ನಡಿಗ’ನ ಸಿನಿಮಾ ಡಿಂಡಿಮ

‘ವೀರ ಕನ್ನಡಿಗ’ನ ಸಿನಿಮಾ ಡಿಂಡಿಮ

Posted By:
Subscribe to Filmibeat Kannada
  • ವಿಘ್ನೕಶ್ವರ ಕುಂದಾಪುರ
‘ಪಾತ್ರಕ್ಕೆ ಚಾಲೆಂಜ್‌ ಹಾಕುವಷ್ಟು ನಾನು ಬೆಳೆದಿಲ್ಲ. ವರ್ಷಕ್ಕೆ ಒಂದು ಅಂದ್ಕೊಂಡಿದ್ದೆ. ಈಗ ಎರಡು ಚಿತ್ರದಲ್ಲಿ ಮಾಡಿದ್ದೀನಿ. ಎರಡನ್ನು ಖಂಡಿತ ಮೀರಲ್ಲ. ಫ್ಯಾಮಿಲಿ ಜೊತೆ ಕಳೆಯೋಕೆ ನನಗೆ ಟೈಂ ಬೇಕು. ನಾನು ಸಿಕ್ಕಾಪಟ್ಟೆ ಸಿನಿಮಾಗಳನ್ನು ನೋಡುತ್ತೇನೆ’- ಕುರುಚಲು ಗಡ್ಡದ ಮೇಲೆ ಕೈಯಾಡಿಸುತ್ತಾ ಪುನೀತ್‌ ತಮ್ಮ ಸಿನಿ ಪ್ರೀತಿ ತೋಡಿಕೊಂಡಿದ್ದು ಹೀಗೆ. ಅವರು ಥೇಟ್‌ ‘ವೀರ ಕನ್ನಡಿಗ’ನ ಹಾಗೆಯೇ ಮಾತಾಡುತ್ತಿದ್ದರು. ಅವರ ಮೂರನೆಯ ಚಿತ್ರದ ಹೆಸರೂ ಇದೇ.

ಅವರ ಮೂರನೇ ಚಿತ್ರಕ್ಕೆ ಇಟ್ಟಿರುವ ಹೆಸರನ್ನು ಬಹಿರಂಗ ಪಡಿಸಲು ನಿರ್ಮಾಪಕ ರಾಮರಾವ್‌ ಕರೆದಿದ್ದ ಗೋಷ್ಠಿ ಅದು. ಎಲ್ಲರಿಗಿಂತ ಲೇಟಾಗಿ ಬಂದ ಪುನೀತ್‌ಗೆ ಚಿತ್ರಪ್ರೀತಿಗಿಂತ ಸಂಸಾರ ಪ್ರೀತಿ ಜಾಸ್ತಿ. ಅದನ್ನು ಅವರು ಮುಕ್ತವಾಗಿ ಒಪ್ಪಿಕೊಳ್ಳುತ್ತಾರೆ. ದುಡ್ಡಿನ ಹಿಂದೆ ಬೀಳುವ ದರ್ದು ಅವರಿಗಿಲ್ಲ. ಅನೇಕ ಭಾಷೆಗಳ ಚಿತ್ರಗಳನ್ನು ನೋಡುವ ಒಳ್ಳೆ ಅಭ್ಯಾಸ ಇಟ್ಟುಕೊಂಡಿರುವ ಪುನೀತ್‌ಗೆ ಒಂದಲ್ಲ ಒಂದು ದಿನ ತಾಂತ್ರಿಕವಾಗಿ ಕನ್ನಡ ಚಿತ್ರಗಳೂ ಬೆಳೆಯಬೇಕು ಎಂಬ ಕನಸು.

‘ಚಂದ್ರಚಕೋರಿ’ ಮತ್ತು ‘ರಕ್ತ ಕಣ್ಣೀರು’ ಚಿತ್ರಗಳನ್ನು ಬಾಯಿತುಂಬಾ ಹೊಗಳಿದ ಪುನೀತ್‌ ಒಳ್ಳೊಳ್ಳೆಯ ಕನ್ನಡ ಚಿತ್ರಗಳು ಬರುತ್ತಿರುವುದಕ್ಕೆ ಖುಷಿಯಾದರು. ಮುಂದಿನ ವರ್ಷ ಮಾರ್ಚ್‌ ಹೊತ್ತಿಗೆ ಎಸ್‌.ನಾರಾಯಣ್‌ ನಿರ್ದೇಶನದ ಚಿತ್ರದಲ್ಲಿ ನಟಿಸುವ ಸಾಧ್ಯತೆಯಿದೆ. ರಾಕ್‌ಲೈನ್‌ ಕೂಡ ಒಂದು ಚಿತ್ರದ ಆಫರ್‌ ಕೊಟ್ಟಿದ್ದಾರೆ. ಆದರೆ, ಯಾವುದೂ ಫೈನಲೈಸ್‌ ಆಗಿಲ್ಲ ಅನ್ನುವ ಪುನೀತ್‌, ಕಥೆಗಳನ್ನು ಕೇಳಿದ ಹಾಗೂ ನಿರ್ದೇಶಕರನ್ನು ನೋಡಿದ ನಂತರವೇ ಓಕೆ ಅಥವಾ ನಾಟ್‌ ಓಕೆ ಹೇಳುವುದು.

ಅನೇಕ ನಿರ್ದೇಶಕ- ನಿರ್ಮಾಪಕರು ಸದಾಶಿವನಗರದ ಮನೆಗೆ ಎಡತಾಕುತ್ತಿದ್ದು, ಅವರೆಲ್ಲರು ಹೇಳುವ ಚಿತ್ರಕತೆಯನ್ನು ಪುನೀತ್‌ ಕೇಳಿಸಿಕೊಳ್ಳುವುದೀಗ ನಿತ್ಯ ಕಾಯಕವಾಗಿದೆ.

ತೆಲುಗಿನ ‘ಆಂಧ್ರಾವಾಲ’ ಕನ್ನಡದಲ್ಲಿ ‘ವೀರ ಕನ್ನಡಿಗ’ ! ಇದೇನು ‘ವೀರ ಕೇಸರಿ’ಯಂಥಾ ಚಿತ್ರವೇ ಅಂತ ಪುನೀತ್‌ ಅವರನ್ನು ಕೆಣಕಿದಾಗ, ನಗುತ್ತಾ ಅಷ್ಟೊಂದು ದೊಡ್ಡ ಹೋಲಿಕೆಗೆ ಹೋಗಬೇಡಿ ಎಂದರು. ವೀರ ಕನ್ನಡಿಗ ಗೆಲ್ಲುವ ಕನ್ನಡಿಗನ ಕಥೆ. ಮೊದಲೆರಡು ಚಿತ್ರಗಳು ಕಾಲೇಜ್‌ ಹುಡುಗರನ್ನು ನೋಡುಗರಾಗಿ ಗುರಿಯಿಟ್ಟುಕೊಂಡಿದ್ದವು. ಈ ಚಿತ್ರ ಎಲ್ಲರಿಗಾಗಿ ಇರುವಂಥದ್ದು ಎಂದು ನಕ್ಕರು.

ಗೋಷ್ಠಿಗೆ ಪುನೀತ್‌ಗಿಂತ ಸ್ವಲ್ಪ ಮುಂಚೆ ಬಂದ ನಾಯಕಿ ಅನಿತಾ ಮಾತಿಗಿಂತ ನಕ್ಕಿದ್ದೇ ಹೆಚ್ಚು. ತನ್ನ ತೆಲುಗು ಚಿತ್ರದ ಸಾಧನೆಗಳನ್ನು ಹೇಳಿಕೊಂಡು, ಕನ್ನಡದ ಸಿನಿಮಾ ಮಂದಿ ನಡೆಸಿಕೊಂಡ ರೀತಿಯನ್ನು ಅನಿತಾ ಹೊಗಳಿ ಹೊಗಳಿ ಅಟ್ಟಕ್ಕೇರಿಸಿದರು.

ಚಿತ್ರದ ಕ್ಯಾಸೆಟ್ಟು ಡಿಸೆಂಬರ್‌ ತಿಂಗಳಲ್ಲಿ ಮಾರುಕಟ್ಟೆಗೆ ಬರಲಿದೆ. ತೆಲುಗಿನಲ್ಲಿ ಬಲು ಹೆಸರು ಮಾಡಿರುವ ಚಕ್ರಿ ಹಾಡುಗಳಿಗೆ ಮಟ್ಟು ಹಾಕಿರುವುದು ವಿಶೇಷ. ಸುದ್ದಿಗಾರರ ಒತ್ತಾಯದ ಮೇರೆಗೆ ರೆಕಾರ್ಡೆಡ್‌ ಸಂದೇಶದ ತರಹ ಇಷ್ಟನ್ನು ಹೇಳಿದ್ದು ನಿರ್ಮಾಪಕ ರಾಮರಾವ್‌.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada