»   » ತಪ್ಪಿತಸ್ಥ ಸಂಜಯ್‌ದತ್‌ಗೆ ಕನಿಷ್ಠ ಮೂರು ವರ್ಷ ಜೈಲು?

ತಪ್ಪಿತಸ್ಥ ಸಂಜಯ್‌ದತ್‌ಗೆ ಕನಿಷ್ಠ ಮೂರು ವರ್ಷ ಜೈಲು?

Subscribe to Filmibeat Kannada


ಮುಂಬಯಿ : 1993ರ ಮುಂಬೈ ಸರಣಿ ಬಾಂಬ್‌ ಸ್ಫೋಟದ ವಿಚಾರಣೆ ನಡೆಸುತ್ತಿರುವ ಟಾಡಾ ನ್ಯಾಯಾಲಯ, ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿದ್ದ ಬಾಲಿವುಡ್‌ ನಟ ಸಂಜಯ್‌ದತ್‌ರನ್ನು ದೋಷಿ ಎಂದು ಮಂಗಳವಾರ ತೀರ್ಪು ನೀಡಿದೆ. ಜೊತೆಗೆ ಮುಂಬೈ ಸರಣಿ ಬಾಂಬ್‌ ಸ್ಫೋ ಟದ ಸಂಚಿನಲ್ಲಿ ಸಂಜಯ್‌ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದೆ.

ತಕ್ಷಣವೇ ಅವರನ್ನು ಪೊಲೀಸ್‌ ಬಂಧನಕ್ಕೆ ಒಪ್ಪಿಸಬೇಕೋ ಅಥವಾ ಬಂಧನಕ್ಕೂ ಮೊದಲು ನೋಟಿಸ್‌ ಜಾರಿ ಮಾಡಬೇಕೋ ಎಂಬುದು ನಿರ್ಧಾರವಾಗಿಲ್ಲ. ಈ ತಪ್ಪಿಗೆ ಸಂಜಯ್‌ ಕನಿಷ್ಠ ಮೂರು ವರ್ಷಕಾಲ ಸೆರೆಮನೆ ವಾಸ ಅನುಭವಿಸಬೇಕಾಗುತ್ತದೆ. ಆದರೆ ಈಗಾಗಲೇ ಅವರು 18ತಿಂಗಳು ಸೆರೆಮನೆಯಲ್ಲಿ ಕಳೆದಿರುವುದರಿಂದ, ಆ ಅವಧಿ ಕಡಿತಗೊಳಿಸುವ ಸಾಧ್ಯತೆ ಇದೆ.

ಪ್ರಕರಣದ 117ನೇ ಆರೋಪಿ ಸಂಜಯ್‌ದತ್‌ ತಮ್ಮ ಮನೆಯಲ್ಲಿ ಎಕೆ-56 ಬಂದೂಕು, 9ಎಂಎಂ ಪಿಸ್ತೂಲು ಹಾಗೂ ಗ್ರೆನೇಡುಗಳನ್ನು ಅಕ್ರಮವಾಗಿ ಹೊಂದಿದ್ದರು. ಮಾರ್ಚ್‌ 12, 1993ರಂದು ಮುಂಬಯಿನಲ್ಲಿ ಸರಣಿ ಸ್ಫೋಟ ನಡೆಸಲು, ಟೈಗರ್‌ ಮೆಮೋನ್‌ ಅಕ್ರಮವಾಗಿ ಸಂಗ್ರಹಿಸಿದ್ದ ಶಸ್ತ್ರಾಸ್ತ್ರಗಳ ಪೈಕಿ ಇವೂ ಸೇರಿದ್ದವು ಎಂದು ತೀರ್ಪಿನಲ್ಲಿ ಹೇಳಲಾಗಿದೆ.

ಶಿಕ್ಷೆ ಪ್ರಕಟವಾದ ನಂತರ ಸಂಜಯ್‌ದತ್‌ ಪರ ವಕೀಲರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ. ಪ್ರಕರಣದ ಇತರ ಯಾವುದೇ ಆರೋಪಿಗಳಿಗೆ ನ್ಯಾಯಾಲಯ ಇನ್ನೂ ಶಿಕ್ಷೆ ವಿಧಿಸಿಲ್ಲ.

ಭಾರೀ ಭದ್ರತೆಯ ಮಧ್ಯೆ, ಸಂಜಯ್‌ದತ್‌ ತಮ್ಮ ಸೋದರಿ ನಮ್ರತಾ ಹಾಗೂ ಮಹಾರಾಷ್ಟ್ರದ ನಾಗರಿಕ ಸರಬರಾಜು ಸಚಿವ ಬಾಬಾ ಸಿದ್ದಿಕ್‌ ಅವರೊಂದಿಗೆ ನ್ಯಾಯಾಲಯಕ್ಕೆ ಹಾಜರಾದರು. (ಯುಎನ್‌ಐ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada