»   » ಸೆಟ್ಟೇರಲಿದೆ ಲಾಲೂ ಲೈಫ್‌ಸ್ಟೈಲಿನ ಹಿಂದಿ ಚಿತ್ರ

ಸೆಟ್ಟೇರಲಿದೆ ಲಾಲೂ ಲೈಫ್‌ಸ್ಟೈಲಿನ ಹಿಂದಿ ಚಿತ್ರ

Posted By: Staff
Subscribe to Filmibeat Kannada

ಲಾಲೂ ಅಂದರೆ ಸಮೋಸಾದಲ್ಲಿನ ಆಲುವಿನಷ್ಟೇ ಮಜಾ !
ದೇಶದ ಉತ್ತರ ದಿಕ್ಕಿನಲ್ಲೊಮ್ಮೆ ಸುತ್ತಿ ಬಂದರೆ ಅಷ್ಟೋ ಜನರ ಬಾಯಲ್ಲಿ ಈ ಮಾತು ಕೇಳುತ್ತದೆ. ಕೆದರಿದ ಬಿಳಿ ಕೂದಲು, ಗತ್ತು ಗಾಂಭೀರ್ಯವನ್ನು ಪಕ್ಕಕ್ಕಿಟ್ಟ ಉಡಾಫೆಯೆಂಬಂತೆ ತೋರುವ ಮಾತು, ಟೀಕೆಯಲ್ಲಿ ತಮ್ಮದೇ ಆದ ಖದರು, ಮೋಚಿ ಮನೆಗೆ ಹೋಗಿ ಮಜ್ಜಿಗೆ ಕುಡಿದು ಆತನ ಮನೆಯ ಜಗುಲಿ ಮೇಲೇ ನಿದ್ರಿಸಿ ಎದ್ದಿ ಬರುವ ಸರಳತನ (?)- ಹೀಗೆ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್‌ ಯಾದವ್‌ ಬಹುತೇಕರಿಗೆ ಜೋಕರ್‌ ಪರಿಯಲ್ಲೋ, ಮಜಾ ಮನುಷ್ಯನ ಪರಿಯಲ್ಲೋ ಮನರಂಜನೆಯ ಪಾತ್ರವಾಗಿ ಕಣ್ಣೆದುರಿಗೆ ಬಂದುಬಿಡುತ್ತಾರೆ.

ಈ ಕಾರಣಕ್ಕೇ ಬಾಲಿವುಡ್‌ ನಿರ್ದೇಶಕ ಮಹೇಶ್‌ ಮಂಜ್ರೇಕರ್‌ಗೂ ಲಾಲೂ ಅಂದರೆ ತುಂಬಾ ಇಷ್ಟ . ಈ ಇಷ್ಟ ಎಷ್ಟರ ಮಟ್ಟಿಗೆ ಘನೀರ್ಭವಿಸಿದೆಯೆಂದರೆ, ಲಾಲೂ ಜೀವನ ಶೈಲಿಯನ್ನೇ ಪಾತ್ರಗಳನ್ನಾಗಿಸಿ ಹೊಸ ಸಿನಿಮಾ ತೆಗೆಯಲು ಹೊರಟಿದ್ದಾರೆ ಮಂಜ್ರೇಕರ್‌. 'ಪದ್ಮಶ್ರೀ ಲಾಲೂ ಪ್ರಸಾದ್‌ ಯಾದವ್‌" ಅನ್ನೋದು ಚಿತ್ರದ ಶೀರ್ಷಿಕೆ. ಡಿಸೆಂಬರ್‌ನಲ್ಲಿ ಸೆಟ್ಟೇರಲಿರುವ ಈ ಚಿತ್ರಕ್ಕೆ 5-6 ಕೋಟಿ ರುಪಾಯಿ ಬಂಡವಾಳ ಹರಿಯಲಿದೆ. 2003ನೇ ಇಸವಿ ಮೇ ತಿಂಗಳ ಹೊತ್ತಿಗೆ ಸಿನಿಮಾ ತೆರೆ ಕಾಣಲಿದೆ.

ದಿಯಾ ಮಿರ್ಜಾ ಈ ಚಿತ್ರದ ನಾಯಕಿಯಾಗಿ ಗೊತ್ತಾಗಿದ್ದಾಳೆ. ಲಾಲೂ, ಪ್ರಸಾದ್‌ ಹಾಗೂ ಯಾದವ್‌ ಎಂಬ ಮೂರು ಪಾತ್ರಗಳನ್ನು ಮಂಜ್ರೇಕರ್‌ ಚಿತ್ರದಲ್ಲಿ ಮೂಡಿಸಲಿದ್ದು, ಖುದ್ದು ಇವರೇ ಯಾದವ್‌ ಪಾತ್ರ ವಹಿಸಲಿದ್ದಾರೆ. ಲಾಲೂ ಪಾತ್ರದಲ್ಲಿ ಸುನಿಲ್‌ ಶೆಟ್ಟಿ ಅಭಿನಯಿಸಲಿದ್ದಾರೆ. ಪ್ರಸಾದ್‌ ಪಾತ್ರಧಾರಿಯ ಹುಡುಕಾಟ ನಡೆದಿದೆ.

ಸಗೂನ್‌ ವಾ ಮತ್ತು ಶ್ಯಾಮ್‌ ರಜಾಕ್‌ ಎಂಬುವರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಖುದ್ದು ಲಾಲೂ ಹಸಿರು ನಿಶಾನೆ ತೋರಿಸಿರುವುದು ಅಚ್ಚರಿಯ ಸಂಗತಿ. ಈ ಹಿಂದೆ ತಮ್ಮ ತರಹ ಕಾಣುವ ಪಾತ್ರವೊಂದನ್ನು ಹೊತ್ತ ಧಾರಾವಾಹಿಯಾಂದಕ್ಕೆ ಲಾಲೂ ಕೆಂಪಗೆ ಪ್ರತಿಕ್ರಿಯೆ ಕೊಟ್ಟಿದ್ದರು. ಆದರೆ ಬುದ್ಧಿವಂತ ಮಂಜ್ರೇಕರ್‌ ಮೊದಲೇ ಲಾಲೂ ಅನುಮತಿ ಪಡೆದುಕೊಂಡು ಬಂದಿದ್ದಾರೆ. ಚಿತ್ರ ಕಚಗುಳಿಯಿಡುವ ಏಕೈಕ ಉದ್ದೇಶ ಹೊಂದಿದ್ದು, ರಾಜಕೀಯ ವಿಡಂಬನೆಯ ಯಾವುದೇ ಎಳೆ ಅದರಲ್ಲಿ ಇರುವುದಿಲ್ಲ ಎಂದು ಮಂಜ್ರೇಕರ್‌ ಮೊದಲೇ ಶ್ವೇತ ಮಾತು ಕೊಟ್ಟಿದ್ದಾರೆ.

ಅಂದಹಾಗೆ, ಈ ಚಿತ್ರದಲ್ಲಿ ಲಾಲೂ ಪ್ರಸಾದ್‌ ಯಾದವ್‌ ಆಗಲೀ, ರಾಬ್ಡಿ ದೇವಿಯಾಗಲಿ ಅಭಿನಯಿಸುತ್ತಿಲ್ಲ !

English summary
Mahesh Manjrekar to make film on Laloo Prasad Yadavs life style

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada