»   » ಸುಳ್ಸುಳ್ಳೇ ವಿವಾದ ಹೊತ್ತ 'ಪ್ರೀತಿ' ಇಂದು ತೆರೆಯಮೇಲೆ

ಸುಳ್ಸುಳ್ಳೇ ವಿವಾದ ಹೊತ್ತ 'ಪ್ರೀತಿ' ಇಂದು ತೆರೆಯಮೇಲೆ

Subscribe to Filmibeat Kannada

ಸುಳ್ಸುಳ್ಳೇ 'ಸುಳ್ಳೇ ಸುಳ್ಳು' ಹಾಡಿನ ವಿವಾದವನ್ನು ಮೈಮೇಲೆ ಹೊತ್ತುಕೊಂಡು ಪ್ರೇಮ್ ಅತ್ಯಂತ ಪ್ರೀತಿಯಿಂದ ನಿರ್ದೇಶಿಸಿರುವ 'ಪ್ರೀತಿ ಏಕೆ ಭೂಮಿ ಮೇಲಿದೆ' ಚಿತ್ರ ಇಂದು ರಾಜ್ಯಾದ್ಯಂತ ತೆರೆಕಂಡಿದೆ.

ಅವನು ಹೇಳಿದ್ದು ಸುಳ್ಳಿರಬಹುದು, ಇವನು ಹೇಳಿದ್ದು ಸುಳ್ಳಿರಬಹುದು. ಮಲ್ಲಿಕಾ ಶೇರಾವತ್‌ಗೆ 75 ಲಕ್ಷ ಸುರಿದಿದ್ದೂ ಸುಳ್ಳಿರಬಹುದು. ನಡೆಸಬೇಕಾದ ಶೂಟಿಂಗ್ ನಡೆಸಲಾಗದೇ ಐವತ್ತು ಲಕ್ಷ ಕೈಬಿಟ್ಟ ಸುದ್ದಿ ಸುಳ್ಳಿರಬಹುದು. ಹೋಗಲಿ ಜನರಿಗೆ ಪ್ರೇಮ್ ಮೇಲಿರುವ ಪ್ರೀತಿ ಕೂಡ ಸುಳ್ಳಾಗಿರಬಹುದು. ಆದರೆ, ಪ್ರೇಮ್‌ಗೆ ತನ್ನ ಚಿತ್ರದ ಮೇಲಿರುವ ಅಪಾರ ಭರವಸೆ, ಅದರ ಮೇಲಿರುವ ಪ್ರೀತಿ ಸುಳ್ಳಾಗಿರಲಿಕ್ಕಿಲ್ಲ.

ತಾವೇ ನಾಯಕರಾಗುವುದರಿಂದ ಹಿಡಿದು ಚಿತ್ರ ಸೆಟ್ಟೇರಿ ಮುಗಿಯುವರೆಗೆ ಪ್ರೇಮ್ ಅಪಾರ ಬೆವರು ಸುರಿಸಿದ್ದಾರೆ, ನಿರ್ಮಾಪಕ ಅಶ್ವಿನಿ ರಾಮ್‌ಪ್ರಸಾದ್‌ರಿಂದ ಅಪಾರ ಹಣವನ್ನೂ ಸುರಿಯುವಹಾಗೆ ಮಾಡಿದ್ದಾರೆ. ಈಗ ಜೈರಾಮ್‌ಜೀಕಿ ಅಂತ ಹೇಳಿಕೊಂಡು ಪ್ರೇಕ್ಷಕರ ಮುಂದೆ ಚಿತ್ರ ಬಿಡುಗಡೆ ಮಾಡಿ ಕೈಕಟ್ಟಿ ನಿಂತಿದ್ದಾರೆ.

ಪ್ರೇಮ್‌ರ ಮೊದಲ ಮೂರೂ ಚಿತ್ರಗಳು ಸಿಲ್ವರ್ ಜ್ಯೂಬಿಲಿ ಆಚರಿಸಿಕೊಂಡಿವೆ. ಎಲ್ಲರ ಅನಿಸಿಕೆಗಳನ್ನು ಹುಸಿ ಮಾಡಿ ಮೊದಲ ಚಿತ್ರ 'ಕರಿಯ' ಜಯಭೇರಿ ಬಾರಿಸಿತ್ತು. ದರ್ಶನ್‌ರಲ್ಲಿ ಸ್ಟಾರ್ ಹುಟ್ಟಿಕೊಂಡಿದ್ದ. ಎರಡನೇ ಚಿತ್ರ ಕೇವಲ ಹೊಸಬರನ್ನೇ ಹಾಕಿಕೊಂಡು ನಿರ್ದೇಶಿಸಿದ 'ಎಕ್ಸ್‌ಕ್ಯೂಸ್ ಮಿ' 25 ವಾರ ಓಡಿ ಪ್ರೇಮ್ ಹುಸಿಯಲ್ಲ ಎಂಬುದು ಸಾಬೀತುಪಡಿಸಿತ್ತು. ಮೂರನೇ ಚಿತ್ರ ಶಿವರಾಜ್‌ಕುಮಾರ್ ನಟನೆಯ 'ಜೋಗಿ' ತನ್ನ ಮುಂದೆ ಬಂದಿದ್ದ ಎಲ್ಲ ಚಿತ್ರಗಳನ್ನು ಧೂಳಿಪಟ ಮಾಡಿತ್ತು ಮತ್ತು ಪ್ರೇಮ್‌ಗೇ ಸ್ಟಾರ್ ನಿರ್ದೇಶಕ ಪಟ್ಟ ದಕ್ಕಿಸಿಕೊಟ್ಟಿತ್ತು.

ತಮ್ಮ ನಾಲ್ಕನೇ ಚಿತ್ರ 'ಪ್ರೀತಿ ಏಕೆ ಭೂಮಿ ಮೇಲಿದೆ?' ಕೂಡ ಕೈಬಿಡುವುದಿಲ್ಲ ಮೊದಲ ಮೂರು ಚಿತ್ರಗಳಂತೆ ಗೆದ್ದೇಗೆಲ್ಲುತ್ತದೆ ಎಂದು ಪ್ರೇಮ್ ನಂಬಿದ್ದಾರೆ. ಕೇವಲ ಒಂದು ಹಾಡಿಗಾಗಿ 75 ಲಕ್ಷ ಸುರಿದು ಮಲ್ಲಿಕಾ ಶೇರಾವತ್‌ರನ್ನು ಕರಿಸಿ ಅವರ ಎಲ್ಲಾ ಶರಾರತ್‌ಗಳನ್ನು ಸಹಿಸಿಕೊಂಡಿದ್ದಾರೆ. ಮತ್ತೊಬ್ಬ ಹಿಂದಿಯ ಮಾಡೆಲ್ ರೋಹಿಣಿ ಸಾಹ್ನಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಒಂದು ಹಾಡಿನ ಚಿತ್ರೀಕರಣಕ್ಕಾಗಿ ಈಜಿಪ್ಟ್ ತೆರಳಿ ವಿಪರೀತ ವಾತಾವರಣದಲ್ಲೂ ಚಿತ್ರೀಕರಣ ನಡೆಸಿದೆ.

ದಾವಣಗೆರೆಯಲ್ಲಿ ಲಾಠಿಪ್ರಹಾರ : ವಿವಾದದ ಕೇಂದ್ರಬಿಂದುವಾಗಿರುವ 'ಸುಳ್ಳೇ ಸುಳ್ಳು' ಹಾಡಿನಿಂದ ರೊಚ್ಚಿಗೆದ್ದಿರುವ ರಾಮಸೇನೆ ಸಂಘಟನೆ ಗುರುವಾರ ನಿರ್ಮಾಪಕ ಅಶ್ವಿನಿ ರಾಮ್‌ಪ್ರಸಾದ್ ಸ್ಟುಡಿಯೋ ಮೇಲೆ ದಾಳಿ ನಡೆಸಿತ್ತು. ಶುಕ್ರವಾರ ಚಿತ್ರ ಬಿಡುಗಡೆ ನಿಲ್ಲಬೇಕೆಂದು ಅನೇಕ ಕಡೆ ತಡೆಯೊಡ್ಡಿದೆ. ದಾವಣಗೆರೆ ಚಿತ್ರಮಂದಿರದಲ್ಲಿ ಚಿತ್ರ ಬಿಡುಗಡೆಗೆ ಅಡ್ಡಿಪಡಿಸಿದ್ದಕ್ಕಾಗಿ ಪೊಲೀಸರು ಲಘು ಲಾಠಿ ಪ್ರಹಾರ ಕೂಡ ಮಾಡಿದರು. ಬೆಂಗಳೂರಿನ ಕಪಾಲಿ ಚಿತ್ರಮಂದಿರದಲ್ಲೂ ರಾಮಸೇನೆ ತಡೆಯೊಡ್ಡಿದರೂ ಸ್ವತಃ ಪ್ರೇಮ್ ಅಲ್ಲಿದ್ದು ಸಮಜಾಯಿಷಿ ನೀಡಿದ್ದರಿಂದ ಚಿತ್ರ ನಿರ್ವಿಘ್ನವಾಗಿ ಬಿಡುಗಡೆಯಾಗಿದೆ.

ಮೊದಲು ಚಿತ್ರ ನೋಡಿ ನಂತರ ಚಿತ್ರದಲ್ಲಿ ಏನಾದರೂ ಆಕ್ಷೇಪಾರ್ಹ ಪದಗಳಿವೆಯೋ ನೀವೇ ನಿರ್ಧರಿಸಿ. ಹಾಡಿನಲ್ಲಿ ಆಕ್ಷೇಪಾರ್ಹ ಪದಗಳಿದ್ದರೆ ನಂತರ ತೆಗೆದುಹಾಕುತ್ತೇನೆ ಎಂದು ಸ್ವತಃ ಪ್ರೇಮ್ ಹೇಳಿಕೆ ನೀಡಿದ್ದಾರೆ. ಸುಳ್ಳೇ ಸುಳ್ಳು ಹಾಡಿನಲ್ಲಿ ರಾಮ ಸುಳ್ಳು, ರಾಮಾಯಣ ಸುಳ್ಳು, ಹರಿಶ್ಚಂದ್ರ ಹೇಳಿದ್ದು ಸುಳ್ಳು ಎಂಬ ಕೆಲ ಪದಗಳಿರುವುದು ರಾಮಸೇನೆಯನ್ನು ಕೆರಳಿಸಿವೆ. ಪ್ರೇಮ್ ರಕ್ಷಣೆಗೆ ಕನ್ನಡ ರಕ್ಷಣಾ ವೇದಿಕೆ ಕೂಡ ಧಾವಿಸಿದ್ದು, ರಾಜ್ಯಾಧ್ಯಕ್ಷ ನಾರಾಯಣ ಗೌಡ ಕಪಾಲಿ ಚಿತ್ರಮಂದಿರಕ್ಕೆ ಬಂದು ರಾಮಸೇನೆ ಸೇವಕರನ್ನು ಶಾಂತಪಡಿಸಿದರು.

ಜೊತೆಗೆ ಸೆನ್ಸಾರ್ ಮಂಡಳಿ ಕೂಡ ವಿವಾದ ಎದ್ದಿದ್ದರಿಂದ ತಾನೇ ಮುಂದಾಗಿ ಮೂವರು ಪತ್ರಕರ್ತರಿಗೆ ಮತ್ತೆ ಚಿತ್ರ ತೋರಿಸಿ ಚಿತ್ರದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡುವ ಯಾವುದೇ ಅಂಶಗಳಿಲ್ಲ ಎಂದು ಹೇಳಿ ವಿವಾದಕ್ಕೆ ಮಂಗಳ ಹಾಡಿದೆ.

ಯಾವುದು ಸುಳ್ಳು, ಯಾವುದು ನಿಜ ಎಂಬ ಪ್ರಶ್ನೆಗೆ ಇಂದು ಉತ್ತರ ದೊರೆಯಲಿದೆ.

ಪ್ರೀತಿಯ ಹುಡುಕಾಟದಲ್ಲಿ ಭಾಗಿಯಾಗಿರುವ ಪಾತ್ರಗಳು ಇಲ್ಲಿವೆ
ಮುದ್ದುಮುಖದ ನಾಯಕಿ ರೋಹಿಣಿ ಸಾಹ್ನಿ ಗ್ಯಾಲರಿ
ಪ್ರೇಮ್‌ರ 'ಸುಳ್ಳೇ ಸುಳ್ಳು' ಹಾಡಿಗೆ ವಿರೋಧ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada