»   » ಭಕ್ತ ಅಂಬರೀಷ : ರಾಜ್‌ ಬಣ್ಣ ಹಚ್ಚುತ್ತಾರಾ?

ಭಕ್ತ ಅಂಬರೀಷ : ರಾಜ್‌ ಬಣ್ಣ ಹಚ್ಚುತ್ತಾರಾ?

Subscribe to Filmibeat Kannada

ಸಿನಿ ಡೆಸ್ಕ್‌, ದಟ್ಸ್‌ಕನ್ನಡ

‘ರಾಜ್‌ಕುಮಾರ್‌ ಮತ್ತೆ ಮುಖಕ್ಕೆ ಬಣ್ಣ ಹಚ್ತಾರ?’ -ಈ ಪ್ರಶ್ನೆ ರಾಜ್‌ ಒಳಗೊಂಡಂತೆ, ಅವರೆಲ್ಲ ಅಭಿಮಾನಿಗಳಲ್ಲೂ ಕಾಡುತ್ತಿದೆ. ಈ ಮಧ್ಯೆ ರಾಜ್‌ ಮನಸ್ಸು ಮಾಡಬೇಕು... ಅವರು ಒಪ್ಪಿದರೆ, ಭಕ್ತ ಅಂಬರೀಷ ನಿರ್ಮಾಣ ಮಾಡುವುದಾಗಿ ನಿರ್ಮಾಪಕ ಪಟ್ಟಾಭಿರಾಮ್‌ ಹೇಳುತ್ತಿದ್ದಾರೆ.

‘ಗಂಡುಗಲಿ ಕುಮಾರರಾಮ’ ಚಿತ್ರದ ನಿರ್ಮಾಣದ ಮೂಲಕ ಹೆಮ್ಮೆಯ ನಿರ್ಮಾಪಕರೆಂದು ಗುರ್ತಿಸಲ್ಪಡುವ ಪಟ್ಟಾಭಿರಾಮ್‌, ‘ರಾಜ್‌ ಅವರ ಆರೋಗ್ಯ ಮೊದಲಿನಂತಿಲ್ಲ. ಆದರೆ ಅಭಿನಯಿಸಲು ಅವರು ಗಟ್ಟಿ ಮನಸ್ಸು ಮಾಡಬೇಕಷ್ಟೆ ’ ಎಂದು ಅಭಿಪ್ರಾಯಪಡುತ್ತಾರೆ.

ಗುಬ್ಬಿವೀರಣ್ಣ ನಾಟಕ ಕಂಪನಿಯಲ್ಲಿ ರಾಜ್‌ಕುಮಾರ್‌ ಅವರನ್ನು ಸೆಳೆದ ನಾಟಕಗಳಲ್ಲಿ ‘ಭಕ್ತ ಅಂಬರೀಷ’ವೂ ಒಂದು. ಈ ನಾಟಕವನ್ನು ನೆನೆದು ಈಗಲೂ ಅವರು ಪುಳಕಿತರಾಗುತ್ತಾರೆ. ಭಕ್ತ ಅಂಬರೀಷನಾಗಿ ಚಲನಚಿತ್ರದಲ್ಲಿ ಅಭಿನಯಿಸಬೇಕು. ಅದು ನನ್ನ ಮಹದಾಸೆ ಎಂದು ಕಳೆದ ಕೆಲವು ವರ್ಷಗಳಿಂದ ರಾಜ್‌ ಹೇಳುತ್ತಲೇ ಬಂದಿದ್ದಾರೆ. ಆದರೆ ಆರೋಗ್ಯ ಅವರ ಬಯಕೆಗೆ ನೆರವಾಗಬಲ್ಲದೇ?

ವೀರಪ್ಪನ್‌ ಅಪಹರಣ ಪ್ರಕರಣದ ನಂತರ ರಾಜ್‌ ಆರೋಗ್ಯದಲ್ಲಿ ಸ್ವಲ್ಪ ಏರಿಳಿತವಾಗಿದ್ದರಿಂದ, ‘ಭಕ್ತ ಅಂಬರೀಷ’ನ ವಿಚಾರ ದಿನೇ ದಿನೇ ಮುಂದೂಡಲ್ಪಟ್ಟಿತು. ಮಂಡಿ ನೋವು ಜಾಸ್ತಿಯಾಗಿ ಅದಕ್ಕೆ ಚಿಕಿತ್ಸೆ ಮಾಡಿಸಿದ ಕೆಲದಿನಗಳ ನಂತರ ಹೃದಯದಲ್ಲಿ ಸಣ್ಣ ಚಿಕಿತ್ಸೆಯು ಆಯಿತು. ಆನಂತರವೂ ರಾಜ್‌ ಚೇತರಿಸಿಕೊಂಡಂತೆ ಕಾಣುತ್ತಿಲ್ಲ. ಮತ್ತೊಂದು ಕಡೆ ವೃದ್ಧಾಪ್ಯವೂ ಅವರನ್ನು ಕಂಗೆಡಿಸಿದೆ.

ಅವರ ಸ್ಥಿರ ಆತ್ಮವಿಶ್ವಾಸ, ರಾಜ್‌ರಲ್ಲಿ ತುಸು ಲವಲವಿಕೆ ತಂದಿದೆ. ರಾಜ್‌ಕುಟುಂಬದ ಆಪ್ತ ಮೂಲಗಳು ಹೇಳುವ ಪ್ರಕಾರ ‘ಭಕ್ತ ಅಂಬರೀಷ’ ಎಂಬ ‘ಕನಸು’ ನನಸಾಗುವ ಸಾಧ್ಯತೆ ಅತಿ ಕಡಿಮೆ. ಈ ಬಗ್ಗೆ ರಾಜ್‌ ಹಿಂದೊಮ್ಮೆ ಹೇಳಿದಂತೆ - ‘ಎಲ್ಲವೂ ದೈವೆಚ್ಛೆ...’

ಕ್ಯಾಸೆಟ್‌ ಸಿಗುತ್ತಾ? : ‘ಮಳೆ ನಿಂತರೂ ಮರದ ಹನಿ ನಿಲ್ಲದು’ ಎಂಬಂತೆ, ರಾಜ್‌ಗೆ ಬಣ್ಣದ ಗೀಳು ಇನ್ನೂ ಹೋಗಿಲ್ಲ. ತಮ್ಮ ಮನೆಯಲ್ಲಿ ಇತ್ತೀಚೆಗೆ ರಂಗಗೀತೆಗಳನ್ನು ಗೊಣಗುವುದನ್ನು ಅವರು ಆರಂಭಿಸಿದ್ದಾರೆ. ಆ ರಂಗಗೀತೆಗಳನ್ನು ಧ್ವನಿಸುರುಳಿ ರೂಪದಲ್ಲಿ ಹೊರತರುವ ಬಯಕೆಯನ್ನು ಪಾರ್ವತಮ್ಮ ರಾಜ್‌ಕುಮಾರ್‌ ಹೊಂದಿದ್ದಾರೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada