twitter
    For Quick Alerts
    ALLOW NOTIFICATIONS  
    For Daily Alerts

    ನಮ್ಮ ಸಿನಿಮಾ : 2006ನೇ ಸಾಲಿನ ಏಳು-ಬೀ ೕ ೕ ೕ ೕ ೕ ಳುಗಳು!

    By Staff
    |


    2006ರಲ್ಲಾದ ಗಾಯಗಳಿಂದ ಕನ್ನಡ ಚಿತ್ರೋದ್ಯಮ ಚೇತರಿಸಿಕೊಳ್ಳಲು ಇನ್ನೆಷ್ಟು ಕಾಲ ಬೇಕೋ? ಈ ವರ್ಷ ಪಡೆದದ್ದಕ್ಕಿಂತಲೂ ಕಳೆದುಕೊಂಡದ್ದೇ ಹೆಚ್ಚು. ಸೋಲು-ಗೆಲುವಿನ ಮಾತಿರಲಿ, ಕನ್ನಡ ಚಿತ್ರರಂಗದ ಸಂಕೇತದಂತಿದ್ದ ವರನಟ ಡಾ.ರಾಜ್‌ಕುಮಾರ್‌ ಕಣ್ಮರೆಯಾದ ವರ್ಷವಿದು!

    ಏ.12ರಂದು ವರನಟ ಕಣ್‌ಮುಚ್ಚಿದರು. ಅವರ ನೆರಳಿಲ್ಲದ ಕನ್ನಡ ಚಿತ್ರರಂಗ, ದಾರಿತಪ್ಪಿದಂತೆ ವರ್ತಿಸುತ್ತಲೇ ಬರುತ್ತಿದೆ. ಕಳೆದ ಮೂರು ತಿಂಗಳಿಂದ ನಿರ್ಮಾಪಕರು ಮತ್ತು ಕಾರ್ಮಿಕರು ಮುನಿಸಿಕೊಂಡಿದ್ದಾರೆ. ‘ನಷ್ಟದ ಮೇಲೆ ನಷ್ಟ ಸಂಭವಿಸಿದ್ದು, ಇನ್ಮುಂದೆ ಹೊಸ ಸಿನಿಮಾಗಳನ್ನು ನಿರ್ಮಾಣಮಾಡುವುದಿಲ್ಲ’ ಎಂದು ನಿರ್ಮಾಪಕರು ಮನೆಯಲ್ಲಿ ಕುಳಿತಿದ್ದಾರೆ. ಈ ಮಧ್ಯೆ ಒಂದೆರಡು ಸಿನಿಮಾಗಳು ಸೆಟ್ಟೇರಿರಬಹುದು. ಆದರೆ ಅದು ಅಂತಹ ಗಂಭೀರ ಬೆಳವಣಿಗೆಯೇನಲ್ಲ...

    ರಾಜ್‌ ನಂತರ ಮುಂದೆ ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಅಂಬರೀಷ್‌, ವಿಷ್ಣುರಂತಹ ದಿಗ್ಗಜರಿದ್ದರೂ ಚಿತ್ರೋದ್ಯಮದ ಬಿಕ್ಕಟ್ಟು ಬಗೆಹರಿದಿಲ್ಲ. ದಿನಕ್ಕೊಂದು ಗಲಾಟೆ, ದಿನಕ್ಕೊಂದು ವಿವಾದ. ನಿರ್ಮಾಪಕ ಮತ್ತು ಕಾರ್ಮಿಕರ ಹಗ್ಗ ಜಗ್ಗಾಟದಲ್ಲಿ ಚಿತ್ರೋದ್ಯಮದ ಎಲೆಗಳು ಉದುರುತ್ತಿವೆ. ಹೊಸ ಹೂವುಗಳು ಅರಳಲು ಕಷ್ಟವಾಗುತ್ತಿದೆ.

    ಈ ವರ್ಷ ನಟ ಅಂಬರೀಷ್‌ಗೆ ಲಾಟರಿ ಹೊಡೆದಂತೆ, ಕೇಂದ್ರದಲ್ಲಿ ಸಚಿವ ಸ್ಥಾನ ದೊರೆಯಿತು. ಬಹು ವರ್ಷಗಳ ನಂತರ ಬಂದ ಐತಿಹಾಸಿಕ ಚಿತ್ರ ‘ಕುಮಾರರಾಮ’ ಮುಗ್ಗರಿಸಿದ್ದು, ಮತ್ತೊಂದು ಕಡೆ ನಿರ್ದೇಶಕ ಟಿ.ಎಸ್‌. ನಾಗಾಭರಣ ವರ್ಷದ ಇನ್ನೊಂದು ಐತಿಹಾಸಿಕ ಚಿತ್ರ ‘ಕಲ್ಲರಳಿ ಹೂವಾಗಿ’ ನಿರ್ದೇಶನ ಮಾಡಿದ್ದು, ಬಿಡುಗಡೆ ಮಾಡಿದ್ದು ಈ ವರ್ಷವೇ.

    ಗೆದ್ದವರ್ಯಾರು-ಸೋತವರ್ಯಾರು?

    • 2006ರಲ್ಲಿ ಬಿಡುಗಡೆಯಾದದ್ದು ಸುಮಾರು 70ಚಿತ್ರ. ಅವುಗಳಲ್ಲಿ 20ರೀಮೇಕ್‌ ಸಿನಿಮಾಗಳು. ಯಶಸ್ಸಿನ ಬಗ್ಗೆ ಹೇಳುವುದಾದರೆ ನಿಲ್ಲುವುದು ಎರಡೇ ಚಿತ್ರಗಳು. ಒಂದು ‘ಮೈ ಆಟೋಗ್ರಾಫ್‌’, ಇನ್ನೊಂದು ‘ನೆನಪಿರಲಿ’.
    • ಹಾಕಿದ ಬಂಡವಾಳ ವಾಪಸ್ಸು ಮಾಡಿದ ಚಿತ್ರಗಳು ಏಳೆಂಟು ಮಾತ್ರ. ಆದರೆ 2005ರಲ್ಲಿ ಪರಿಸ್ಥಿತಿ ಆಶಾದಾಯಕವಾಗಿತ್ತು. ‘ ಕನ್ನಡ ಚಿತ್ರರಂಗ ಪ್ರಕಾಶಿಸುತ್ತಿದೆ’ ಎಂಬ ಮಾತಿತ್ತು. ಬಿಡುಗಡೆಯಾಗಿದ್ದ 75ಸಿನಿಮಾಗಳಲ್ಲಿ ಸುಮಾರು ಸಿನಿಮಾಗಳು ದುಡ್ಡು ಮಾಡಿದ್ದವು. ನಿರ್ಮಾಪಕರು ಜೇಬು ತುಂಬಿಸಿಕೊಂಡಿದ್ದರು.
    • ಈ ವರ್ಷ ಲೆಕ್ಕಾಚಾರವೆಲ್ಲ ಉಲ್ಟಾಪಲ್ಟಾ. ಸ್ಟಾರ್‌ಗಳ ಚಿತ್ರಗಳು ಮುಗ್ಗರಿಸಿವೆ. ರೀಮೇಕ್‌ ಸಿನಿಮಾಗಳು ಟಾಕೀಸಿಗೆ ಬಂದಷ್ಟೇ ವೇಗವಾಗಿ ವಾಪಸ್‌ ಮರಳಿವೆ... ಒಂದು ಸಮಾಧಾನದ ಸಂಗತಿಯೆಂದರೆ ‘ಜೊತೆಜೊತೆಯಲಿ’, ‘ನೆನಪಿರಲಿ’ಯಂತಹ ಸ್ವಮೇಕ್‌ ಸಿನಿಮಾಗಳು ಗೆದ್ದಿವೆ.
    • ಮೈ ಆಟೋಗ್ರಾಫ್‌, ಜೊತೆಜೊತೆಯಲಿ, ಸೇವಂತಿ ಸೇವಂತಿ, ಚೆಲ್ಲಾಟ, ಅಜಯ್‌, ತವರಿನ ಸಿರಿ, ಹನಿಮೂನ್‌ ಎಕ್ಸ್‌ಪ್ರೆಸ್‌, ಸೈನೈಡ್‌, ಸಿರಿವಂತ, ಹುಬ್ಬಳ್ಳಿ, ಸುಂಟರಗಾಳಿ, ಕನ್ನಡದ ಕಂದ ಚಿತ್ರಗಳು ಗೆದ್ದಿವೆ ಎಂದು ಹೇಳಲಾಗುತ್ತಿದ್ದರು, ಕೆಲವು ನಿರ್ಮಾಪಕರು, ‘ನಾವು ಮುಳುಗಿ ಹೋಗಿದ್ದೇವೆ’ ಎನ್ನುತ್ತಿದ್ದಾರೆ. ಸತ್ಯ ಭಗವಂತನಿಗೆ ಗೊತ್ತು.
    • ಈ ವರ್ಷ ದೇವರ ಚಿತ್ರ(?)ಗಳದೇ ಕಾರುಬಾರು. ದಾಮಿನಿ ಮತ್ತಿತರರಿದ್ದ ‘ಭಾ-ರತಿ’ ಪರವಾಗಿಲ್ಲ ಎಂಬಂತೆ ಹೋದರೆ, ‘ರಂಭಾ’ ದುಡ್ಡಿನ ನದಿಯನ್ನೇ ಹರಿಸುತ್ತಿದೆ. ಸಾಲದಿಂದ ಸಾಯಬೇಕೆಂದಿದ್ದ ನಿರ್ಮಾಪಕ ರಾಮಮೂರ್ತಿ, ಈ ಚಿತ್ರದಿಂದ ಬದುಕನ್ನು ಸುಂದರಗೊಳಿಸುತ್ತಿದ್ದಾರೆ!
    • ಮಠ, ಶಿಷ್ಯಾ, ಮೋಹಿನಿ, ತನನಂ ತನನಂ, ತೆನಾಲಿರಾಮ ನಿರ್ಮಾಪಕರ ಕೈ ಕಚ್ಚಿಲ್ಲ.
    • ‘ಗಂಡುಗಲಿ ಕುಮಾರರಾಮ’ದಿಂದ ನಿರ್ಮಾಪಕ ಪಟ್ಟಾಭಿರಾಮ್‌ ಕೋಟ್ಯಂತರ ರೂಪಾಯಿಗಳನ್ನು ಕಳೆದುಕೊಂಡರು. ಇಷ್ಟು ಸಾಲದು ಎಂಬಂತೆ ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್‌ರ ಮಾತಿಗೆ ಆಹಾರವಾದರು!
    • ಏನೇನೋ ಕಸರತ್ತು ಮಾಡಿದರೂ ‘ಶ್ರೀ’ ಚಿತ್ರ, ವಿಜಯರಾಘವೇಂದ್ರರಿಗೆ ಗೆಲುವು ತರಲಿಲ್ಲ. , ಉಪ್ಪಿದಾದಾ ಎಂಬಿಬಿಎಸ್‌, ಸೆವೆನ್‌ ಓ ಕ್ಲಾಕ್‌, ಹಠವಾದಿ, ಅಂಬಿ, ಜೂಲಿ, ಮಿ.ಕ್ಯಾಲಿಫೋರ್ನಿಯಾ, ಜಾಕ್‌ಪಾಟ್‌, ಸಾವಿರ ಮೆಟ್ಟಿಲು, ಪಾಂಡವರು, ತಿರುಪತಿ ನೆಲಕಚ್ಚಿದವು.
    • ಬಹುಕಾಲ ಸುಮ್ಮನಿದ್ದ ನಿರ್ದೇಶಕ ಸುನೀಲ್‌ ಕುಮಾರ್‌ ದೇಸಾಯಿ, ಶುದ್ಧ ತಲೆನೋವಿನ ‘ರಮ್ಯ ಚೈತ್ರಕಾಲ’ ಚಿತ್ರದ ರೀಲ್‌ ಸುತ್ತಿದರು. ಪ್ರೇಕ್ಷಕರು ಮೂಲಾಜಿಲ್ಲದೇ ‘ನೆಕ್ಸ್ಟ್‌ ’ ಎಂದರು. ಈಗ ‘ಕ್ಷಣ ಕ್ಷಣ’ಕ್ಕೆ ಕೈ ಹಾಕಿದ್ದಾರೆ!
    ವರ್ಷದ ನಾಯಕರು :
    • ವರ್ಷದ ನಾಯಕ ಯಾರು ಎಂಬ ಆಯ್ಕೆ ಬಂದಾಗ ಸುದೀಪ್‌ ಹೆಸರು ನೆನಪಾಗುತ್ತದೆ. ತಮ್ಮ ಚೊಚ್ಚಲ ನಿರ್ದೇಶನದಲ್ಲಿಯೇ ಗೆದ್ದಿದ್ದಾರೆ. ನಟರಾಗಿ ಅವರು ಸೋತಿದ್ದಾರೆ. ಹೀಗಾಗಿ ಅವರನ್ನು ವರ್ಷದ ನಾಯಕರೆಂದರೆ ಕೆಲವರಿಗೆ ಅಸಮಾಧಾನ.
    • ಪುನೀತ್‌ ಮತ್ತು ದರ್ಶನ್‌ರ ಪೋರ್ಸ್‌ ಕಡಿಮೆಯಾಯಿತು ಎನ್ನಿಸಿದರೂ, ಮಾರುಕಟ್ಟೆಯೇನು ಕದಲಿಲ್ಲ. ದರ್ಶನ್‌ರ ಮಂಡ್ಯ, ಸುಂಟರಗಾಳಿ, ದತ್ತ, ತಂಗಿಗಾಗಿ ಬಾಕ್ಸಾಫೀಸ್‌ನಲ್ಲಿ ನೆಲಕಚ್ಚಿದ್ದರೂ, ದರ್ಶನ್‌ ಬಗ್ಗೆ ನಿರ್ಮಾಪಕರಿಗೆ ವಿಶ್ವಾಸ ಕಡಿಮೆಯಾಗಿಲ್ಲ. ಕಾಲ್‌ಶೀಟ್‌ಗಾಗಿ ಕಾಯುತ್ತಲೇ ಇದ್ದಾರೆ.
    • ಹೊಸ ಹುಡುಗ ಪ್ರೇಮ್‌ರ ಎರಡನೇ ಚಿತ್ರ ‘ಜೊತೆಜೊತೆಯಲಿ’ ಗೆದ್ದಿದೆ. ಪಲ್ಲಕ್ಕಿ, ಸವಿಸವಿ ನೆನಪು ನಂತರ ಸ್ವಮೇಕ್‌ ಚಿತ್ರಗಳನ್ನು ಆತ ಒಪ್ಪಿಕೊಂಡಿದ್ದಾರೆ. ರೀಮೇಕ್‌ನಿಂದ ದೂರ ಇರುವುದಾಗಿ ಉಗ್ರ ಪ್ರತಿಜ್ಞೆ ಮಾಡಿದ್ದಾರೆ.
    • ಜಗ್ಗೇಶ್‌ರ ಮೂರು ಸಿನಿಮಾಗಳು ಈ ವರ್ಷ ತೆರೆಕಂಡಿದ್ದು, ಕೊಟ್ಟ ದುಡ್ಡಿಗೆ ಮೋಸವಾಗಿಲ್ಲ.
    • ಉಪೇಂದ್ರ ಪಾಲಿಗಂತೂ 2006 ಶಾಪದ ವರ್ಷ. ಉಪ್ಪಿ ದಾದ ಎಂಬಿಬಿಎಸ್‌, ತಂದೆಗೆ ತಕ್ಕ ಮಗ, ಐಶ್ವರ್ಯ -ಹೀಗೆ ಸೋಲಿನ ಮೇಲೆ ಸೋಲು.
    • ಶಿವರಾಜ್‌ಕುಮಾರ್‌ರ ಗಂಡುಗಲಿ ಕುಮಾರರಾಮ, ಅಶೋಕ, ತವರಿನ ಸಿರಿ ನಿರ್ಮಾಪಕರ ನಡುಬೀದಿಯಲ್ಲಿ ನಿಲ್ಲಿಸಿವೆ.
    • ರವಿಚಂದ್ರನ್‌ ಏನು ಮಾಡಿದರೂ, ಪ್ರೇಕ್ಷಕರು ಸಿನಿಮಾಕ್ಕೆ ಬರುತ್ತಿಲ್ಲ. ಪಾಪ ಅವರ ಹಟವಾದಿ, ಒಡಹುಟ್ಟಿದವಳು, ರವಿಶಾಸ್ತ್ರಿ ಗೆ ಎಷ್ಟು ಮಸಾಲೆ ಬೆರೆಸಿದರೂ, ಅಭಿಮಾನಿ ದೇವರಿಗೆ ರುಚಿ ಸಿಕ್ಕಿಲ್ಲ.
    ವರ್ಷದ ನಾಯಕಿ :
    • ವರ್ಷದ ನಾಯಕ ಯಾರೆಂದು ಹೇಗೆ ಹೇಳಲಾಗುತ್ತಿಲ್ಲವೋ, ಅದೇ ರೀತಿ ವರ್ಷದ ನಾಯಕಿ ಪಟ್ಟ ಘೋಷಿಸುವುದು ತುಸು ಕಷ್ಟವೇ. ಆದರೆ ರಮ್ಯಾ ಪಾಲಿಗಿದು ಶುಭವರ್ಷ. ರಕ್ಷಿತಾ ಪಾಲಿಗೆ ವೈಫಲ್ಯದ ವರ್ಷ, ಕಿರಿಕಿರಿ ಮತ್ತು ವಿವಾದಗಳ ವರ್ಷ. ಪ್ರೇಮ್‌ರೊಂದಿಗೆ ಲವ್‌ ಕುದುರಿದ ವರ್ಷ.
    • ಜೊತೆಜೊತೆಯಲಿ, ತನನಂ ತನನಂ, ಸೇವಂತಿ ಸೇವಂತಿ, ದತ್ತ, ಜೂಲಿ ಮೂಲಕ ರಮ್ಯಾ ಮಿಂಚಿದರು. ಇವುಗಳಲ್ಲಿ ಒಂದೆರಡು ಹೊರತು ಪಡಿಸಿ, ಉಳಿದ ಚಿತ್ರಗಳು ನಿರ್ಮಾಪಕರಿಗೆ ಮೋಸ ಮಾಡಲಿಲ್ಲ.
    • ರಕ್ಷಿತಾಳ ಮಂಡ್ಯ, ಒಡಹುಟ್ಟಿದವಳು, ನೀನೆಲ್ಲೋ ನಾನಲ್ಲೇ, ಸುಂಟರಗಾಳಿ ಬಂದವು ಹೋದವು. ಹುಬ್ಬಳ್ಳಿ ಚಿತ್ರ ಗೆದ್ದಿದಾದರೂ, ಅದರ ಯಶಸ್ಸು, ರಕ್ಷಿತಾ ಖಾತೆಗೆ ಜಮಾ ಆಗುವುದಿಲ್ಲ.
    • ಪಾಪದ ಹುಡುಗಿ ರಾಧಿಕಾರ ವಸ್ತ್ರ ತ್ಯಾಗ ಕೆಲಸಕ್ಕೆ ಬಂದಿಲ್ಲ. ಅವರ ಐದು ಚಿತ್ರಗಳು ಸೋತಿದ್ದು, ಹೊಸ ಅವಕಾಶಗಳಿಗಾಗಿ ಆಕಾಶ ನೋಡುತ್ತಿದ್ದಾರೆ.
    • ಡೈಸಿ ಬೋಪಣ್ಣ, ಹೊಸ ಹುಡುಗಿ ದೀಪಿಕಾ ಪಡುಕೋಣೆ ಈ ವರ್ಷ ತುಸು ಹೆಸರು ಮಾಡಿದರು.
    ಹೊಸಬರು ಬಂದರು ದಾರಿ ಬಿಡಿ...
    • ಉದಯ ಟೀವಿಯಲ್ಲಿ ಕಾಮಿಡಿ ಟೈಂ ಮೂಲಕ, ಕರ್ನಾಟಕಕ್ಕೆ ಪರಿಚಿತನಾದ ಗಣೇಶ್‌, ‘ಚೆಲ್ಲಾಟ’ ವಾಡಿ ಹೀರೋ ಆದರು.
    • ಶಂಕರ್‌ನಾಗ್‌ನಂತೆಯೇ ಕಾಣಿಸುವ ದೀಪಕ್‌, ‘ಶಿಷ್ಯಾ’ದಲ್ಲಿ ನಾಯಕನಾಗಿ ಮಚ್ಚು ಹಿಡಿದರು.
    • ದರ್ಶನ್‌ ಸಹೋದರ ದಿನಕರ್‌ ಜೊತೆಜೊತೆಯಲಿ ಚಿತ್ರಕ್ಕೆ ಆ್ಯಕ್ಷನ್‌-ಕಟ್‌ ಹೇಳಿ ನಿರ್ದೇಶಕರಾದರು.
    • ‘ಮಠ’ದ ಮೂಲಕ ಗುರುಪ್ರಸಾದ್‌ ನಿರ್ದೇಶಕರಾದರು. ಸಿನಿಮಾರಂಗದಲ್ಲಿ ಹೊಸ ಪ್ರಯೋಗಗಳಿಗೆ ಬಾಗಿಲು ತೆರೆದರು.
    • ದುಡ್ಡಿರೋ ರಾಜೇಂದ್ರ ಸಿಂಗ್‌ ಬಾಬು, ಜೈ ಜಗದೀಶ್‌, ರಾಮ್‌ಕುಮಾರ್‌, ಮೀನಾ ತೂಗುದೀಪ ಶ್ರೀನಿವಾಸ ನಿರ್ಮಾಪಕರಾದರು.
    ಈವರ್ಷ ಕಂಡದ್ದು :
    • ಪ್ರೇಮ್‌ ನಟನೆ ಮತ್ತು ನಿರ್ದೇಶನದ ಪ್ರೀತಿ ಏಕೆ ಭೂಮಿ ಮೇಲಿದೆ ಚಿತ್ರದ ಐಟಂ ಸಾಂಗ್‌ನಲ್ಲಿ ಚುಂಬಕ ತಾರೆ ಮಲ್ಲಿಕಾ ಶೆರಾವತ್‌... ಬೆಂಗಳೂರಿನ ರಸ್ತೆಗಳಲ್ಲಿ ಹಾಡು-ಪಾಡು...
    • ಗೋವಾದಲ್ಲಿನ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕನ್ನಡಕ್ಕೆ ಅವಮಾನ.
    • ವಿಜಯಲಕ್ಷ್ಮಿ ಆತ್ಮಹತ್ಯೆ ಪ್ರಯತ್ನ, ನಂತರ ಸೃಜನ್‌ ಜೊತೆ ಮದುವೆಗೆ ಸಿದ್ಧತೆ...
    • ಲೀಲಾವತಿ-ವಿನೋದ್‌ರಾಜ್‌ರ ಹೊಸ ಚಿತ್ರ ‘ಕನ್ನಡದಕಂದ’ ಕೊನೆಗೂ ಪ್ರೇಕ್ಷಕರ ತಲುಪಿತು!

    Saturday, April 20, 2024, 18:37
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X