»   » ಫಣಿ ಮೇಲೆ ಕೋರ್ಟಿನ ಮೂಲಕ ಪ್ರಯೋಗಿಸಿದ್ದಾರೆ

ಫಣಿ ಮೇಲೆ ಕೋರ್ಟಿನ ಮೂಲಕ ಪ್ರಯೋಗಿಸಿದ್ದಾರೆ

Posted By: Super
Subscribe to Filmibeat Kannada

'ದಂಡ ಪಿಂಡಗಳು" ಎಂಬ ಕೆಟ್ಟ ಮುಖದ ಧಾರಾವಾಹಿ ನೋಡಿ ಚಿಣ್ಣರು ನಕ್ಕಿದ್ದೇ ತಡ, ಅದೆಷ್ಟೋ ಔನ್ಸು ಬಲ ತಂದುಕೊಂಡರು ಫಣಿ ರಾಮಚಂದ್ರ. ಅದೇ ಫಾರ್ಮುಲಾಗೆ ಜೋತುಬಿದ್ದು ಹೆಂಗಸರನ್ನು ಟಾರ್ಗೆಟ್ಟಾಗಿಟ್ಟುಕೊಂಡು 'ದರಿದ್ರ ಲಕ್ಷ್ಮಿಯರು" ಎಂಬ ಇನ್ನೊಂದು ದೈನಿಕ ಧಾರಾವಾಹಿಯನ್ನು ಉದಯ ಟಿವಿಯಲ್ಲಿ ತೋರಿಸತೊಡಗಿದರು.

ಜನ ಸದಾ ಮರುಳರಲ್ಲ ಅನ್ನೋದು ಪಾಪ ಅವರಿಗೆ ಗೊತ್ತಿಲ್ಲ. ದಂಡ ಪಿಂಡಗಳು ಟೈಟಲ್‌ ಹಾಡಲ್ಲಿ ನಾರದನಾಗಿ ಚಿಟಿಕೆ ಆಡಿಸಿ ಪ್ರೇಕ್ಷಕರ ಮನ ಗೆದ್ದ ಮನೋಹರ್‌, ಅದೇ ಭಜನೆ ಶೈಲಿಯಲ್ಲಿ ದರಿದ್ರ ಲಕ್ಷ್ಮಿಯರಿಗೂ ಹಾಡು ಹೊಸೆದರು. ಆದರೆ ಅದರಲ್ಲಿ ದಂಡ ಪಿಂಡಗಳ ಹಾಡಿನ ಖದರಿಲ್ಲ. ಆದ ಕಾರಣ ಜನ ನಗಲಿಲ್ಲ. ಹಾಸ್ಯ ಹಾಸ್ಯಾಸ್ಪದವಾದರೆ ಹೀಗೆ ಅಲ್ವೇ ಆಗೋದು?

ಫಣಿ ಧಾರಾವಾಹಿಯಲ್ಲಿ ಮನೆಯಲ್ಲಿ ಕೂತ ಅದೃಷ್ಟವಿಲ್ಲದ ಹೆಂಗಳೆಯರೇ ಮುಖ್ಯ ಪಾತ್ರಗಳು. ಲತ್ತೆ ಲತಾ, ಪೀಡೆ ಪರಿಮಳಾ, ಅನಿಷ್ಟ ಅಶ್ವಿನಿ- ಹೀಗೆ ಪಾತ್ರಧಾರಿಗಳ ಹೆಸರಿನ ಹಿಂದೊಂದು ಕೀಟಲೆ ವಿಶೇಷಣ. 'ಸಾರಥಿ ಮಹಿಳಾ ಜಾಗೃತಿ ಸಂಸ್ಥೆ"ಯ ಲಲನಾ ಮಣಿಯರು ಈ ಧಾರಾವಾಹಿಯನ್ನು ನೋಡಿದ್ದೇ ತಡ ಕೆಂಡಾಮಂಡಲಾಗಿದ್ದಾರೆ. ಟಿವಿ ಮುಂದೆ ಮಾತ್ರ ಫಣಿಗೆ ಶಾಪ ಹಾಕಿ ಸುಮ್ಮನಾಗದೆ, ನೇರವಾಗಿ ಕೋರ್ಟಿನ ಕಟಕಟೆ ಹತ್ತಿದ್ದಾರೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿ ಗುಜರಾಯಿಸಿ, 'ದರಿದ್ರ ಲಕ್ಷ್ಮಿಯರು" ಎಂಬ ದಟಾ ದರಿದ್ರ ಧಾರಾವಾಹಿಯನ್ನು ನಿಲ್ಲಿಸಿ ಅಂತ ಫಿರ್ಯಾದು ಕೊಟ್ಟಿದ್ದಾರೆ. ಫಣಿಗೆ ಸದ್ಯದಲ್ಲೇ ಕೋರ್ಟಿನ ಫಣಿ ಭುಸ್ಸೆನ್ನಬಹುದು !

ಮಾಧ್ಯಮಗಳು ತೆಗಳಲಿ, ಸ್ಪರ್ಧಿಗಳು ಕಾಲೆಳೆಯಲಿ ತನಗೆ ಪ್ರೇಕ್ಷಕ ಮಹಾ ಪ್ರಭುವಿನ ಬೆಂಬಲವಿದೆ ಅಂತ ಈ ಹಿಂದೆ ಫಣಿ ಬೀಗುತ್ತಿದ್ದರು. ಆದರೆ, ಈ ಬಾರಿ ಪ್ರೇಕ್ಷಕ ಕೂಡ ಫಣಿ ಹೆಸರೆತ್ತಿದರೆ ಭುಸ್ಸೆನ್ನುತ್ತಿರುವುದು ಅವರಿಗೆ ನಾರದ ಮುನಿಯಿಂದೆರಗಿರುವ ನೇರ ಶಾಪವಿರಬಹುದೇನೋ?

'ದರಿದ್ರ ಲಕ್ಷ್ಮಿಯರ" ವಿಚಾರದಲ್ಲಿ ಫಣಿ ಪಾಪ, ಅದೃಷ್ಟ ವಂಚಿತರು !

English summary
Phani Ramachandra may get Court notice soon

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada