For Quick Alerts
  ALLOW NOTIFICATIONS  
  For Daily Alerts

  ಎಲ್ಲರಿಗೂ ಪ್ರಿಯವಾಗುತ್ತಾರಾ ಹರಿಪ್ರಿಯಾ?

  By Staff
  |

  ತಂಗಾಳಿ ಮೈಸೋಕಿದಂತ ನೋಟ. 'ಚಂದಕ್ಕಿಂತ ಚಂದ ನೀನೆ ಸುಂದರ...' ಎಂದು ಹಾಡಬೇಕು ಎನಿಸುವ ಮೊಗ. ನೋಟದಲ್ಲೇ ನಗೆ ಸೂಸುವ ಜೊತೆಗೆ ಒಂದಷ್ಟು ಸಿನೆಮಾ ಪ್ರೇಮ, ಪ್ರಣಯ ಗೀತೆಗಳೂ ಕಣ್ಮುಂದೆ ಬಂದು ನಿಲ್ಲುವಂತೆ ಮಾಡುವ ಮೈಮಾಟ. ಪ್ರಸ್ತುತ ಈಕೆ 'ಮನಸುಗಳ ಮಾತು ಮಧುರ', 'ವಸಂತಕಾಲ' ಹಾಗೂ 'ಮುಖ್ಯಮಂತ್ರಿ ಐ ಲವ್ ಯು' ಚಿತ್ರಗಳ ಬಿಡುವಿಲ್ಲದ ನಟಿ. ಈಕೆ ನಟಿಸಿರುವ 'ಮನಸುಗಳ ಮಾತು ಮಧುರ' ಬಿಡುಗಡೆಗೆ ಸಿದ್ಧವಾಗಿದ್ದರೆ, 'ವಸಂತಕಾಲ' ಧ್ವನಿ ಸುರುಳಿ ಬುಧವಾರ ಬಿಡುಗಡೆಯಾಗಿದೆ. ಇನ್ನು ರವಿ ಬೆಳಗೆರೆಯವರ 'ಮುಖ್ಯಮಂತ್ರಿ ಐ ಲವ್ ಯು' ಚಿತ್ರೀಕರಣ ಭರದಿಂದ ಸಾಗುತ್ತಿದೆ.

  ತ್ರಿಕೋನ ಪ್ರೇಮಕಥೆಯುಳ್ಳ 'ಮನಸುಗಳ ಮಾತು ಮಧುರ'ದಲ್ಲಿ ಈಕೆಯದು ಹಳ್ಳಿ ಬಾಲೆಯ ಪಾತ್ರವಂತೆ. ಭರತನಾಟ್ಯ ಹಾಗೂ ಚಿತ್ರಕಲಾವಿದೆಯಾಗಿರುವ ಹರಿಪ್ರಿಯಾ ಪ್ರಸ್ತುತ ದ್ವಿತೀಯ ಪಿಯುಸಿ ಓದುತ್ತಿದ್ದಾರೆ. ಹದಿಹರೆಯದಲ್ಲೇ ಚಿತ್ರರಂಗಕ್ಕೆ ಪ್ರವೇಶಿಸಿರುವ ಈಕೆಯನ್ನ್ನು ನಿಮ್ಮ ಸೌಂದರ್ಯ ರಹಸ್ಯದ ಸಾಬೂನು ಲಕ್ಸಾ ಅಂತ ಕೇಳಿದರೆ! ನಕ್ಕು ಅಲ್ಲವೇ ಅಲ್ಲ ಎಂದ ಹರಿಪ್ರಿಯಾ, ಕ್ಯಾರೆಟ್ ಹಾಗೂ ಕಿತ್ತಳೆ ರಸ ತನ್ನ ಸೌಂದರ್ಯವನ್ನು ಹೆಚ್ಚಿಸುವ ಟಾನಿಕ್‌ಗಳು ಎನ್ನುತ್ತಾರೆ. ಹರಿಪ್ರಿಯಾ ಬರೀ ಸುಂದರಿ ಅಷ್ಟೇ ಅಲ್ಲಾ, ಶಾಲಾ-ಕಾಲೇಜಿನ ದಿನಗಳಿಂದಲೂ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಗಳಿಸಿದ ಜಾಣೆ. ಮಲ್ಲೇಶ್ವರಂನ ಅಪ್ಪಟ ಕನ್ನಡ ಹುಡುಗಿ.

  ಬಿಡುವಿಲ್ಲದೆ 'ಮನಸುಗಳ ಮಾತು ಮಧುರ' ಹಾಗೂ 'ವಸಂತಕಾಲ' ಚಿತ್ರಗಳಲ್ಲಿ ನಟಿಸುತ್ತಿದ್ದಾಗಲೇ ರವಿ ಸಾರ್ ಮೇಲಿನ ಅಭಿಮಾನದಿಂದ 'ಮುಖ್ಯಮಂತ್ರಿ ಐ ಲವ್ ಯು' ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡೆ ಎನ್ನುತ್ತಾರೆ ಹದಿಹರೆಯದ ಹರಿಪ್ರಿಯಾ. ಸಾಲುಸಾಲಾಗಿ ಹಲವು ನಿರ್ಮಾಪಕರು ಕಾಲ್‌ಷೀಟ್ ಹಿಡಿದು ಬಂದರೂ ಅವರ ಚಿತ್ರಕಥೆಗಳು ಇಷ್ಟವಾಗದೆ ನಟಿಸಲು ಒಪ್ಪಿಕೊಳ್ಳಲಿಲ್ಲ ಎನ್ನುತ್ತಾರೆ. ಕಥೆ-ಚಿತ್ರಕಥೆಗಳನ್ನು ಅಳೆದು ತೂಗಿ ನೋಡುತ್ತಿರುವ ಹರಿಪ್ರಿಯಾ ಕನ್ನಡ ಚಿತ್ರರಂಗದಲ್ಲಿ ಒಂದಷ್ಟು ಕಾಲ ನೆಲೆ ನಿಲ್ಲುವ ಭರವಸೆ ಹುಟ್ಟಿಸುತ್ತಾರೆ.

  ಮಾ.7, 2008ರಂದು ಈಕೆಗೆ ಅಗ್ನಿಪರೀಕ್ಷೆ. ಕಾರಣ ಅಂದು ಈಕೆ ನಟಿಸಿದ 'ಮನಸುಗಳ ಮಾತು ಮಧುರ' ಬಿಡುಗಡೆಯಾಗುತ್ತಿದೆ. ಉದಯ ಟಿವಿಯ ಯು2 ವಾಹಿನಿ ನಿರೂಪಕನಾಗಿದ್ದ ಆನಂದ್ 'ಮನಸುಗಳ ಮಾತು ಮಧುರ' ಚಿತ್ರದ ನಾಯಕ. ತಿಂಗಳ ನಂತರ 'ವಸಂತ ಕಾಲ' ತೆರೆ ಕಾಣಲಿದೆ. ಹರಿಪ್ರಿಯಾ ಜೀವನ ಪಥದಲ್ಲಿ ಮಾವು ಚಿಗುರತ್ತದೋ ಇಲ್ಲವೋ ಕಾದು ನೋಡಬೇಕಾಗಿದೆ.

  (ದಟ್ಸ್‌ಕನ್ನಡಸಿನಿ ವಾರ್ತೆ)

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X