ಕೆಸರಿನ ಕಮಲ ಒಲ್ಲೆಯೆಂದ ಜಗದೀಶ್ ಶೆಟ್ಟರ್

ಪ್ರಸ್ತುತ ಶ್ರೀನಿವಾಸ ಎಂಟರ್ ಟೈನರ್ಸ್ ಸಂಸ್ಥೆ ತನ್ನ ನಿರ್ಮಾಣದ ಚಿತ್ರಕ್ಕೂ ಇದೇ ಶೀರ್ಷಿಕೆಯನ್ನು ಮರು ನಾಮಕರಣ ಮಾಡಿದೆ. ಆದರೆ 2008ರ ಕೆಸರಿನ ಕಮಲ ಶುದ್ದ ಸಾಕ್ಷರತಾ ಚಿತ್ರವಾಗಿ ಹೊರಹೊಮ್ಮಲಿದೆ ಎನ್ನುತ್ತಾರೆ ಚಿತ್ರದ ನಿರ್ಮಾಪಕರಾದ ಸಂಗಯ್ಯ, ಪಂಚಕಟ್ಟಿಮಠ್ ಹಾಗೂ ರಮೇಶ್.ಬಿ.ಹಿರೇರೆಡ್ಡಿ. ಕಳೆದವಾರ ಶ್ರೀಕಂಠೀರವ ಸ್ಟೂಡಿಯೋದಲ್ಲಿ ಕೆಸರಿನ ಕಮಲ ಆರಂಭವಾಯಿತು. ಬಾಲಕನೊಬ್ಬ ದೇವರ ಬಳಿ ಪ್ರಾರ್ಥಿಸುವ ಪ್ರಥಮ ಸನ್ನಿವೇಶಕ್ಕೆ ವಿಧಾನ ಸಭಾಧ್ಯಕ್ಷ ಜಗದೀಶ್ ಶೆಟ್ಟರ್ ಆರಂಭ ಫಲಕ ತೋರಿದರೆ ಶಾಸಕ ಮುನಿರಾಜು ಕ್ಯಾಮೆರಾ ಚಾಲನೆ ಮಾಡಿದರು.
'ಕಮಲ' ಒಲ್ಲೆಯೆಂದ ಶೆಟ್ಟರ್ : ಚಿತ್ರೀಕರಣ ಪ್ರರಂಭವಾಗುವ ಮುನ್ನ ಜಗದೀಶ್ ಶೆಟ್ಟರ್ ಕೂಡ ಚಿತ್ರದಲ್ಲಿ ಪಾತ್ರ ಮಾಡುವ ಮಾತುಕತೆಯಾಗಿತ್ತು. ಅದರಲ್ಲಿ ಅವರ ಪಾತ್ರ ಮುಖ್ಯಮಂತ್ರಿಯದೆಂದು ತಿಳಿದ ತಕ್ಷಣ ಶೆಟ್ಟರ್ 'ಕೆಸರಿನ ಕಮಲ' ನಾವೊಲ್ಲೆ ಅಂದಿದ್ದಾರೆ. ರಿಯಲ್ ಮುಖ್ಯಮಂತ್ರಿ ಪಟ್ಟದ ಮೇಲೆ ಕಣ್ಣಿಟ್ಟಿರುವ ಶೆಟ್ಟರ್ ರೀಲ್ ಮುಖ್ಯಮಂತ್ರಿ ಪಟ್ಟ ಬೇಡವೆಂದಿದ್ದಾರೋ ಅಥವಾ ಪಾತ್ರ ಅವರಿಗೆ ಹಿಡಿಸಿಲ್ಲವೋ? ಸದ್ಯಕ್ಕೆ ಬಗೆಹರಿಯದ ಪ್ರಶ್ನೆ. ನಿರ್ಮಾಪಕರು ನಂತರ ಅವರನ್ನು ನಟಿಸಲು ಬಲವಂತವನ್ನಂತೂ ಮಾಡಿಲ್ಲ.
ಬಂಡೆ ಒಡೆದು ಜೀವನ ಸಾಗಿಸುವ ಸಮುದಾಯವೊಂದರಲ್ಲಿ ಜನಿಸಿ, ಕುಡುಕ ಅಪ್ಪ ಹಾಗೂ ಬಂಡೆ ಒಡೆದು ಕಷ್ಟಪಡುವ ತಾಯಿಯನ್ನು ಪಡೆದ ಬಾಲಕನೊಬ್ಬ ಶಿಕ್ಷಣವೇ ಮುಖ್ಯ ಎಂದು ತಿಳಿದು ಕೆಲಸಕ್ಕೆ ದೂಡುವ ಅಪ್ಪನ ಆಸೆಯ ವಿರುದ್ದ ಅಕ್ಷರಸ್ಥನಾಗಿ ಬೆಳೆದು ತನ್ನ ಸಮುದಾಯದ ಇತರರಿಗೂ ಅಕ್ಷರ ದಾಸೋಹ ನೀಡಿದ ಕಾರಣಕ್ಕಾಗಿ ಸರ್ಕಾರದಿಂದ ಕಲಿಕಾ ಕಲಿ ಪ್ರಶಸ್ತಿ ಪಡೆಯುವ ಕಥಾ ಹಂದರವನ್ನು ಈ ಚಿತ್ರ ಹೊಂದಿದೆ ಎಂದು ತಿಳಿಸಿದ ಸಿದ್ದರಾಜು ಕೆಸರಿನ ಕಮಲ ನಮಗೆ ಪ್ರಶಸ್ತಿ ತಂದುಕೊಡುವುದರಲ್ಲಿ ಸಂಶಯವೇ ಇಲ್ಲ ಎನ್ನುತ್ತಾರೆ. ನಿರ್ದೇಶಕ ಸಿದ್ದರಾಜು ಈ ಹಿಂದೆ ಪ್ರೀತಿಸು ಹಾಗೂ ಅರಳಿದ ಹೂ ಚಿತ್ರವನ್ನು ನಿರ್ದೇಶಿಸಿ ಅನುಭವವಿರುವವರು.
30 ದಿನಗಳಲ್ಲಿ ತಾವರೆಕೆರೆಯ ಸುತ್ತಲಲ್ಲೇ ಬಹುತೇಕ ಚಿತ್ರೀಕರಣ ನಡೆಯುವ ಈ ಚಿತ್ರಕ್ಕೆ ಶ್ರೀಹರ್ಷ ಸಂಗೀತ, ಮಂಜು ಛಾಯಾಗ್ರಹಣವಿದೆ. ಪ್ರಧಾನ ನಾಯಕಿಯ ಆಯ್ಕೆ ನಡೆಯುತ್ತಿದ್ದು ಅರಳಿದ ಹೂ ಚಿತ್ರದಲ್ಲಿ ಅಭಿನಯಿಸಿದ ರಾಮದುರ್ಗದ ಶ್ರೀನಿವಾಸರಾಜು ಈ ಚಿತ್ರದಲ್ಲೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾನೆ. ಶೋಭರಾಜ್, ರಾಮಕೃಷ್ಣ, ಬ್ಯಾಂಕ್ ಜನಾರ್ಧನ್, ಕರಿಬಸವಯ್ಯ, ಬಿರಾದರ್ ಮುಂತಾದವರು ಕೆಸರಿನ ಕಮಲದಲಿದ್ದಾರೆ.


Click it and Unblock the Notifications