»   » ದೆಹಲಿಯಲ್ಲಿ ಕನ್ನಡ ಚಿತ್ರ ವೀಕ್ಷಿಸಿ ಖುಷಿಪಟ್ಟ ಜನ

ದೆಹಲಿಯಲ್ಲಿ ಕನ್ನಡ ಚಿತ್ರ ವೀಕ್ಷಿಸಿ ಖುಷಿಪಟ್ಟ ಜನ

Subscribe to Filmibeat Kannada

ನವದೆಹಲಿ, ಸೆ.29 : ಕರ್ನಾಟಕ ರಾಜ್ಯ ಸರ್ಕಾರದ ವಾರ್ತಾ ಇಲಾಖೆಯ ಕರ್ನಾಟಕ ವಾರ್ತಾ ಕೇಂದ್ರ ಹಾಗೂ ನವದೆಹಲಿಯ ಕರ್ನಾಟಕ ಭವನಗಳ ಸಂಯುಕ್ತ ಆಶ್ರಯದಲ್ಲಿ ಸೆ.28 ರಂದು ಇಲ್ಲಿ ಏರ್ಪಡಿಸಲಾಗಿದ್ದ 2ನೇ ಕನ್ನಡ ಚಲನಚಿತ್ರೋತ್ಸವ ಅಭೂತಪೂರ್ವ ಯಶಸ್ಸು ಕಂಡಿತು.

ಆರ್.ಕೆ. ಪುರಂನ 12ನೇ ಸೆಕ್ಟರ್‌ನಲ್ಲಿರುವ ದೆಹಲಿ ಕರ್ನಾಟಕ ಸಂಘದ ಸಭಾಂಗಣದಲ್ಲಿ ಸೆ. 28ರಂದು ಭಾನುವಾರ ಮಧ್ಯಾಹ್ನ 3.30ಕ್ಕೆ ಅಗ್ನಿ ಶ್ರೀಧರ್ ಅವರ 'ದಾದಾಗಿರಿಯ ದಿನಗಳು' ಕೃತಿ ಆಧಾರಿತ 'ಆ ದಿನಗಳು' ಚಿತ್ರ ಮತ್ತು ಅದೇ ದಿನ ಸಂಜೆ 6.30ಕ್ಕೆ ಡಾ.ಎಸ್.ಎಲ್ ಭೈರಪ್ಪ ಅವರ ಕೃತಿ ಆಧಾರಿತ ಗಿರೀಶ್ ಕಾಸರವಳ್ಳಿ ನಿರ್ದೇಶನದ 'ನಾಯಿ ನೆರಳು' ಚಿತ್ರವನ್ನು ಪ್ರದರ್ಶಿಸಲಾಯಿತು.

ಎರಡು ವಿಭಿನ್ನ ಕಾಲಘಟ್ಟದ ಮತ್ತು ಎರಡು ವಿಭಿನ್ನ ವಿಚಾರಗಳುಳ್ಳ ಈ ಚಿತ್ರಗಳನ್ನು ದೆಹಲಿ ಕನ್ನಡಿಗರು ಅಪೂರ್ವ ಆಸಕ್ತಿಯಿಂದ ವೀಕ್ಷಿಸಿದರಲ್ಲದೇ, ಅವುಗಳ ಬಗ್ಗೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದರು ಮತ್ತು ವಾರ್ತಾ ಇಲಾಖೆಯ ಈ ಕ್ರಮವನ್ನು ತುಂಬು ಮನದಿಂದ ಶ್ಲಾಘಿಸಿದರು.

ದೆಹಲಿಯ ಕರ್ನಾಟಕ ಭವನದ ನಿವಾಸಿ ಆಯುಕ್ತ ಅರವಿಂದ್ ರಿಸಬುಡ್ ಮತ್ತು ಕೇಂದ್ರ ಸರ್ಕಾರದ ಸೇವೆಯಲ್ಲಿರುವ ಕರ್ನಾಟಕ ಕೇಡರ್‌ನ ಹಿರಿಯ ಐಎಎಸ್ ಅಧಿಕಾರಿ ತ.ಮ. ವಿಜಯಭಾಸ್ಕರ್ ಅವರುಗಳು ಕುಟುಂಬ ಸಮೇತ ಆಗಮಿಸಿ ಈ ಚಿತ್ರಗಳನ್ನು ವೀಕ್ಷಿಸಿ, ಕಾರ್ಯಕ್ರಮ ಸಂಘಟಿಸಿದ ಕರ್ನಾಟಕ ವಾರ್ತಾ ಕೇಂದ್ರದ ಪ್ರಯತ್ನವನ್ನು ಅಭಿನಂದಿಸಿದರು.

ಸತತವಾಗಿ ಮತ್ತು ಪ್ರತಿಬಾರಿಯೂ ಸದಭಿರುಚಿಯ ಹಾಗೂ ಅತ್ಯುತ್ತಮ ಚಿತ್ರಗಳನ್ನು ದೆಹಲಿ ಕನ್ನಡಿಗರಿಗೆ ಪ್ರದರ್ಶಿಸಬೇಕು ಎಂಬ ಉದ್ದೇಶದಿಂದ ದೆಹಲಿಯ ಕರ್ನಾಟಕ ಭವನದ ಉಪ ನಿವಾಸಿ ಆಯುಕ್ತ ಜಿ.ಆರ್. ಮಂಜೇಶ್ ಅವರು ಅತೀವ ಆಸಕ್ತಿ ವಹಿಸಿ ಈ ಚಿತ್ರಗಳನ್ನು ವಾರ್ತಾ ಇಲಾಖೆಯ ನಿರ್ದೇಶಕ ಎನ್.ಆರ್. ವಿಶುಕುಮಾರ್ ಅವರಿಂದ ತರಿಸಿಕೊಂಡಿದ್ದರು. ಅವುಗಳನ್ನು ಪ್ರದರ್ಶನ ಮಾಡುವಂತೆ ಸಂಬಂಧಿಸಿದ ಅಧಿಕಾರಿಗೆ ಸೂಚಿಸಿ, ಅವುಗಳನ್ನು ಯಶಸ್ವಿಯಾಗಿ ಪ್ರದರ್ಶನವಾಗುವಂತೆ ನೋಡಿಕೊಂಡರು.

ಬೆಂಗಳೂರಿನ ಭೂಗತ ಜಗತ್ತಿನ ಹಳೆಯ ಘಟನೆಗಳನ್ನು ಮೆಲಕು ಹಾಕುವ ಮತ್ತು ಭೂಗತ ಜಗತ್ತಿನಲ್ಲಿ ಪ್ರೇಮಿಗಳ ಜೋಡಿಯೊಂದು ಸಿಕ್ಕಿಹಾಕಿಕೊಳ್ಳುವ ಹೃದಯಂಗಮ ಕಥಾನಕವನ್ನು 'ಆ ದಿನಗಳು' ಹೊಂದಿದೆ. ಇದೊಂದು ನೈಜ ಘಟನೆ ಎಂದು ನಿರ್ದೇಶಕರು ಹೇಳಿಕೊಂಡಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ಪುನರ್‌ಜನ್ಮದ ಸುತ್ತ ಸುತ್ತುವ ಹಾಗೂ ಅದರಿಂದ ವಿಧವೆಯೊಬ್ಬಳ ಬದುಕಿನಲ್ಲಿ ಆಗುವ ತವಕ ತಲ್ಲಣಗಳು ಮತ್ತು ಬದಲಾವಣೆಗಳನ್ನು ಹೊಂದಿರುವ ಅತ್ಯಂತ ಸೂಕ್ಷ್ಮ ಕಥೆ- 'ನಾಯಿ ನೆರಳು' ಚಿತ್ರದ್ದು. ಅದನ್ನು ಗಿರೀಶ್ ಕಾಸರವಳ್ಳಿ ತುಂಬ ಉತ್ತಮವಾಗಿ ನಿರ್ವಹಿಸಿದ್ದಾರೆ. ಇಂಥ ಎರಡು ವಿಭಿನ್ನ ಕಥೆಗಳ ಸಿನಿಮಾಗಳನ್ನು ನವದೆಹಲಿಯಲ್ಲಿರುವ ಕರ್ನಾಟಕ ವಾರ್ತಾ ಕೇಂದ್ರ ದೆಹಲಿ ಕನ್ನಡಿಗರಿಗಾಗಿ ಸಾದರಪಡಿಸಿತು.

ಪ್ರತಿ ತಿಂಗಳ ಎರಡನೇ ಶನಿವಾರದಂದು (ಒಂದು) ಕನ್ನಡ ಚಲನಚಿತ್ರ ಪ್ರದರ್ಶನ ಮಾಡಬೇಕು ಎಂಬ ಸಲಹೆಯನ್ನು ಕೆಲವು ದೆಹಲಿ ಕನ್ನಡಿಗರು ವ್ಯಕ್ತಪಡಿಸಿದರು.
ನಾಯಿನೆರಳು, ಆದಿನಗಳು ದೆಹಲಿಯಲ್ಲಿ ಪ್ರದರ್ಶನ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada