»   » ಪ್ರೇಕ್ಷಕರ ಮುಂದೆ 'ಮಾದೇಶ'ನ ಆಟ ಶುರು

ಪ್ರೇಕ್ಷಕರ ಮುಂದೆ 'ಮಾದೇಶ'ನ ಆಟ ಶುರು

Subscribe to Filmibeat Kannada

ವಿವಾದಾತ್ಮಕ ನಿರ್ದೇಶಕ ರವಿ ಶ್ರೀವತ್ಸಾ ಅವರ ನಾಲ್ಕನೆಯ ಚಿತ್ರ 'ಮಾದೇಶ' ಪರಿಷ್ಕೃತ 'ಎ' ಪ್ರಮಾಣ ಪತ್ರದೊಂದಿಗೆ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾಗಿದೆ. 'ಮಾದೇಶ' ಪ್ರಮಾಣ ಪತ್ರ ಪಡೆಯಲು ಸೆನ್ಸಾರ್‌ನೊಂದಿಗೆ ಸಾಕಷ್ಟು ಹೆಣಗಾಡ ಬೇಕಾಯಿತು. ಚಿತ್ರದ ಕ್ಲೈಮ್ಯಾಕ್ಸ್ ಸನ್ನಿವೇಶದಲ್ಲಿನ ಹಲವಾರು ದೃಶ್ಯಗಳು ಹಾಗೂ ಧ್ವನಿಗಳನ್ನು ತೆಗೆದು ಹಾಕುವಂತೆ ಪ್ರಾದೇಶಿಕ ಸೆನ್ಸಾರ್ ಮಂಡಳಿ ನಿರ್ದೇಶಕರಿಗೆ ಸೂಚಿಸಿತ್ತು. ಸಾಕಷ್ಟು ಬದಲಾವಣೆಗಳ ನಂತರ ಶಿವರಾಜ್ ಕುಮಾರ್ ಅವರನ್ನು ಕರೆಸಿ ಮಾತಿನ ಮರು ಜೋಡಣೆ ಮಾಡಿ ಸೆನ್ಸಾರ್ ಮಂಡಳಿ ಮುಂದಿಟ್ಟ್ಟು ಪ್ರಮಾಣ ಪತ್ರ ಪಡೆದು ಪಾಸಾಯಿತು. ಈಗ ಉಳಿದಿರುವುದು ಪ್ರೇಕ್ಷಕ ಪ್ರಭುಗಳಿಂದ ಪ್ರಮಾಣ ಪತ್ರ ಪಡೆಯುವುದು.

'ಮಾದೇಶ'ನ ಗುಣಗಾನದ ಬಗ್ಗೆ ಕೊಂಚ ಗಮನ ಹರಿಸಿದರೆ, 92 ಕೇಂದ್ರಗಳಲ್ಲಿ ತೆರೆ ಕಾಣುತ್ತಿರುವ ಮಾದೇಶ ದಿನವೊಂದಕ್ಕೆ 372 ಆಟಗಳ ಪ್ರದರ್ಶನ ಕಾಣಲಿದೆ. ಚಿತ್ರವನ್ನು ಗೋವರ್ಧನ ಮೂರ್ತಿ ಎಂಬುವರು ಎಲ್‌ಜಿ ಅನುಪಮಾ ಫಿಲ್ಮ್ ಸಿಟಿ ಬ್ಯಾನರಿನಡಿ ನಿರ್ಮಿಸಿದ್ದಾರೆ. ಚಿತ್ರದ ಪ್ಲಸ್ ಪಾಯಿಂಟ್ ಎಂದರೆ ಮನೋಮೂರ್ತಿ ಸಂಗೀತ. ಚಿತ್ರದ ತಾರಾ ಬಳಗದಲ್ಲಿ ಸೋನು ಭಾಟಿಯಾ, ರವಿ ಬೆಳಗೆರೆ, ರವಿ ಕಾಳೆ, ರಮೇಶ್ ಪಂಡಿತ್, ಹರೀಶ್ ರೈ, ಪದ್ಮಜಾ ರಾವ್, ದತ್ತಣ್ಣ, ಬುಲ್ಲೆಟ್ ಪ್ರಕಾಶ್, ಕೋಟೆ ಪ್ರಭಾಕರ್ ಮುಂತಾದವರಿದ್ದಾರೆ. ಜಗ್ಗೇಶರ ಪುತ್ರ ಯತಿ ಸಹ ಚಿತ್ರದಲ್ಲಿ ನಟಿಸಿದ್ದಾರೆ.

'ಸಂತ' ಚಿತ್ರದ ನಂತರ ಶಿವರಾಜ್ ಕುಮಾರ್ ಇಲ್ಲಿ ಮತ್ತೊಮ್ಮೆ ಭೂಗತ ಲೋಕದ ವ್ಯಕ್ತಿಯಾಗಿ ಅವತಾರವೆತ್ತಿದ್ದಾರೆ. ಚಿತ್ರಕ್ಕಾಗಿ ಅವರ ಚಹರೆ ಸಹ ಬದಲಾಗಿದೆ. ಸಾಕಷ್ಟು ವಿವಾದಗಳು ಚಿತ್ರಕ್ಕೆ ಸುತ್ತಿಕೊಂಡು ಬಿಡುಗಡೆಯಾಗುತ್ತಿದೆ. ನಮಗೆ ಕೊನೆಗೂ ಕಾಡುವ ಪ್ರಶ್ನೆ ಎಂದರೆ, ಪ್ರೇಕ್ಷಕರು ಈ ಚಿತ್ರವನ್ನು ಹೇಗೆ ಸ್ವೀಕರಿಸುತ್ತಾರೆ ಎನ್ನುವುದು.

(ದಟ್ಸ್‌ಕನ್ನಡ ವಾರ್ತೆ)
ಮಾದೇಶನಿಗೆ ಸೆನ್ಸಾರ್ ಮಂಗಳಾರತಿ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada