ಫೇಸ್‌ಬುಕ್‌ನಲ್ಲಿ ಕತ್ತಿ ಝಳಪಿಸಿದ ಚಾಲೆಂಜಿಂಗ್ ಸ್ಟಾರ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ಗೆ ಲಗ್ಗೆ ಹಾಕಿ ಕತ್ತಿ ಝಳಪಿಸಿದ್ದಾರೆ. ದರ್ಶನ್ ವರಸೆಗೆ ಅವರ ಶತ್ರುಗಳು ಬೆಚ್ಚಬೀಳುವಂತಿದೆ. ಆದರೆ ದರ್ಶನ್ ಕತ್ತಿ ಬೀಸಿರುವುದು ನಿಜವಾಗಿಯೂ ಅಲ್ಲ. ಇದು 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ವರಸೆ. 'ರಾಯಣ್ಣ' ಚಿತ್ರೀಕರಣ ವಿವರಗಳು ಬೇಕಿದ್ದರೆ ನೀವೂ ಫೇಸ್‌ಬುಕ್‌ಗೆ ಲಗ್ಗೆ ಹಾಕಿ ನೋಡಿ.
ಐತಿಹಾಸಿಕ ಚಿತ್ರವಾಗಿರುವ ಸಂಗೊಳ್ಳಿ ರಾಯಣ್ಣ ಚಿತ್ರದ ವಿವರಗಳು ಫೇಸ್‌ಬುಕ್‌ಗೆ ಹಾಕುವ ಮೂಲಕ ದರ್ಶನ್ ತಮ್ಮ ಅಭಿಮಾನಿಗಳಿಗೆ ಇನ್ನೂ ಹತ್ತಿರವಾಗಿದ್ದಾರೆ. ಆದರೆ ಸಂಗೊಳ್ಳಿ ರಾಯಣ್ಣ ಫೇಸ್‍ಬುಕ್ ಅಕೌಂಟ್ ಬಗ್ಗೆ ಇನ್ನೂ ಹೆಚ್ಚಿನ ಮಂದಿ ಅಭಿಮಾನಿಗಳಿಗೆ ಮಾಹಿತಿ ಇಲ್ಲದಿರುವುದರಿಂದ ಅಭಿಮಾನಿಗಳ ಕಲರವ ಅಷ್ಟಾಗಿ ಇಲ್ಲಿ ಕಾಣಸಿಗುವುದಿಲ್ಲ.
'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರದ ಪೋಸ್ಟರ್‌ಗಳು ಒಂದಕ್ಕಿಂತ ಒಂದು ಅದ್ಭುತವಾಗಿ ಮೂಡಿಬಂದಿದ್ದು ಅಂತಾರಾಷ್ಟ್ರೀಯ ಪೋಸ್ಟರ್ ಪ್ರಶಸ್ತಿಯೂ ಲಭಿಸಿದೆ. ನಾಗಣ್ಣ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರಕ್ಕೆ ಕೇಶವಾದಿತ್ಯ ಕತೆ, ಚಿತ್ರಕತೆ ರಚಿಸಿದ್ದಾರೆ. ಕಿತ್ತೂರು ರಾಣಿ ಚೆನ್ನಮ್ಮನ ಬಲಗೈ ಬಂಟನಾದ ಸಂಗೊಳ್ಳಿ ರಾಯಣ್ಣ ಅಪ್ರತಿಮ ಯೋಧ. ಬ್ರಿಟೀಷರ ವಿರುದ್ಧ ಹೋರಾಡಿ ಅವರಲ್ಲಿ ನಡುಕ ಹುಟ್ಟಿಸಿದ ಸಾಹಸಿ.
ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನಲ್ಲಿರುವ ಗಣೇಶವಾಡಿ ಗ್ರಾಮವು ಸಂಗೊಳ್ಳಿ ರಾಯಣ್ಣನ ತಾಯಿ ಕೆಂಚವ್ವನ ತವರುಮನೆ. ಅಲ್ಲಿಯೆ ಸಂಗೊಳ್ಳಿ ರಾಯಣ್ಣನು ಜನಿಸಿದನು. ಬ್ರಿಟಿಷರ ವಿರುದ್ಧದ ಯುದ್ಧದಲ್ಲಿ ಚನ್ನಮ್ಮ ಹಾಗು ರಾಯಣ್ಣ ಇಬ್ಬರೂ ಸೆರೆಯಾಳಾದರು. ಬ್ರಿಟಿಷರು ಚನ್ನಮ್ಮನನ್ನು ಬೈಲಹೊಂಗಲದಲ್ಲಿ ಸೆರೆಯಲ್ಲಿಟ್ಟರು. ಸಂಗೊಳ್ಳಿ ರಾಯಣ್ಣನನ್ನು ಗಲ್ಲಿಗೇರಿಸಿದರು. (ಒನ್‌ಇಂಡಿಯಾ ಕನ್ನಡ)


Click it and Unblock the Notifications











