ಜೋಗಯ್ಯನಿಗೆ ಸಡ್ಡು ಹೊಡೆದ "ಭದ್ರ"ಯ್ಯ !!
ಹೌದು ನಂಬಿದ್ರೆ ನಂಬಿ ಬಿಟ್ರೆ ಬಿಡಿ. ರಾಜ್ಯದಾದ್ಯಂತ 'ಜೋಗಯ್ಯ'ನಿಗೆ ಸಡ್ಡು ಹೊಡೆದು ನಿಂತಿದೆ ಪ್ರಜ್ವಲ್ ದೇವರಾಜ್ ಅಭಿನಯದ 'ಭದ್ರ'. ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟಿಸಿದ್ದ ಶಿವರಾಜ್ ಕುಮಾರ್ ಅಭಿನಯದ 'ಜೋಗಯ್ಯ' ಚಿತ್ರದ ಮುಂದೆ ಇತರ ಚಿತ್ರಗಳು ನೆಲಕಚ್ಚುತ್ತವೆ ಎಂಬ ಗಾಂಧಿನಗರದ ಲೆಕ್ಕಾಚಾರ ಉಲ್ಟಾ ಆಗಿದೆ.
ಕೇವಲ ಎರಡೇ ವಾರದ ಪ್ರದರ್ಶನದ ನಂತರ ಕೆ ಜಿ ರಸ್ತೆಯ ಸಂತೋಷ್ ಚಿತ್ರಮಂದಿರದಲ್ಲಿ ಈ ವಾರದಿಂದ(ಸೆ.3) ಸಾಧು ಕೋಕಿಲಾ ನಿರ್ಮಾಣದ 'ನೈಂಟಿ' ಚಿತ್ರ ಬಿಡುಗಡೆ ಆಗುತ್ತಿದೆ.ಜೋಗಯ್ಯನಿಗಾಗಿ 'ಭದ್ರ'ಚಿತ್ರ ಎತ್ತಂಗಡಿ ಮಾಡಿದ್ದ ಚಿತ್ರಮಂದಿರಗಳು ಮತ್ತೆ 'ಭದ್ರ' ಸ್ಕ್ರೀನಿಂಗ್ ಆರಂಭಿಸಿವೆ.
ಬೆಂಗಳೂರು ಸೇರಿದಂತೆ ಮೈಸೂರು, ಹುಬ್ಬಳ್ಳಿ ಮುಂತಾದ ನಗರಗಳಲ್ಲಿ 'ಜೋಗಯ್ಯ' ಚಿತ್ರಕ್ಕಾಗಿ ಉತ್ತಮ ಗಳಿಕೆ ಕಾಣುತ್ತಿದ್ದ ಭದ್ರ ಚಿತ್ರವನ್ನು ಖಾಲಿ ಮಾಡಿಸಿದ್ದವು . ಭದ್ರ ಚಿತ್ರತಂಡ ಇದಕ್ಕೆ ಬೇಸರ ಕೂಡ ವ್ಯಕ್ತ ಪಡಿಸಿತ್ತು. ಮೊದಲ ಮೂರು ದಿನದ ಅಬ್ಬರದ ನಂತರ 'ಜೋಗಯ್ಯ'ನ ಗಳಿಕೆ ಯಲ್ಲಿ ಯಾವಾಗ ಕಮ್ಮಿ ಆಯಿತೋ ಒಂದು ವಾರದ ಪ್ರದರ್ಶನದ ನಂತರ ಅದೇ ಚಿತ್ರಮಂದಿರಗಳು ಮತ್ತೆ ಭದ್ರ ಚಿತ್ರ ಪ್ರದರ್ಶಿಸುತ್ತಿದೆ.
ಗಮನಿಸಬೇಕಾದ ಸಂಗತಿಯೆಂದರೆ ಉತ್ತರ ಕರ್ನಾಟಕ ಮತ್ತು ಮೈಸೂರು ಭಾಗದಲ್ಲಿ ಭದ್ರನ ಗಳಿಕೆ 'ಜೋಗಯ್ಯ'ನಿಗಿಂತ ಮುಂದಿದೆ. ಪ್ರಜ್ವಲ್ ಅಭಿನಯದ 'ಕೋಟೆ' ಚಿತ್ರ ಕೂಡ ಉತ್ತರ ಕರ್ನಾಟಕ ಭಾಗದಲ್ಲಿ ನಿರ್ಮಾಪಕರಿಗೆ/ಹಂಚಿಕೆದಾರರಿಗೆ ಉತ್ತಮ ಲಾಭ ತಂದು ಕೊಟ್ಟಿತ್ತು.
ಯಾವಾಗ 'ಜೋಗಯ್ಯ' ಚಿತ್ರದ ಕಲೆಕ್ಷನ್ ಕಮ್ಮಿ ಆಗಲು ಶುರುವಾಯಿತೋ ಚಿತ್ರಮಂದಿರದ ಮಾಲೀಕರು ಮತ್ತೆ 'ಭದ್ರ'ನ ಮೊರೆ ಹೋಗಿದ್ದಾರೆ. ನಿಮಗೆ ತಿಳಿದಂತೆ ಉತ್ತಮ ಪ್ರದರ್ಶನ ಕಾಣುತ್ತಿದ್ದ 'ಕಿರಾತಕ' ಚಿತ್ರವನ್ನು 'ಜೋಗಯ್ಯ'ನಿಗಾಗಿ ಕಪಾಲಿ ಚಿತ್ರಮಂದಿರದಿಂದ ಎತ್ತಂಗಡಿ ಮಾಡಲಾಗಿತ್ತು.


Click it and Unblock the Notifications











