ಡರ್ಟಿ ಪಿಕ್ಚರ್ ನಲ್ಲಿ ಕಾಣಿಸಿಕೊಳ್ಳಲಿರುವ ನಿಖಿತಾ
ಬಾಲಿವುಡ್ ನಲ್ಲಿ ಮಿಂಚಿನ ಸಂಚಲನ ಸೃಷ್ಟಿಸಿ ಬಾಕ್ಸ್ ಆಫೀಸ್ ನಲ್ಲಿಯೂ ಜಯಭೇರಿ ಭಾರಿಸಿರುವ 'ದಿ ಡರ್ಟಿ ಪಿಕ್ಚರ್' ಕನ್ನಡಕ್ಕೆ ರೀಮೇಕ್ ಆಗಲಿದೆ. ಡರ್ಟಿ ಚಿತ್ರದ ನಂತರ ಅದರಲ್ಲಿ ನಾಯಕಿಯಾಗಿ ನಟಿಸಿದ್ದ ನಟಿ ವಿದ್ಯಾ ಬಾಲನ್ ಈಗ ಅದೆಷ್ಟು ಹಾಟ್ ಫೇವರೆಟ್ ನಟಿ ಎನಿಸಿದ್ದಾರೆಂಬುದು ಎಲ್ಲರಿಗೂ ಗೊತ್ತಿದೆ.
ಇದೀಗ ಕನ್ನಡದಲ್ಲಿ ಬರಲಿರುವ ಡರ್ಟಿಗೆ ನಾಯಕಿಯಾಗಿ ನಿಖಿತಾ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ನಿರ್ದೇಶಕರು, ನಿರ್ಮಾಪಕರು ಯಾರು ಎಂಬ ವಿಷಯಗಳೆಲ್ಲವೂ ಸದ್ಯದಲ್ಲೇ ಹೊರಬೀಳಲಿದೆ. ಆದರೂ 'ದಿ ಡರ್ಟಿ ಪಿಕ್ಚರ್' ಕನ್ನಡದಲ್ಲಿ ನಿರ್ಮಾಣವಾಗುತ್ತಿದೆ ಮತ್ತು ಅದಕ್ಕೆ ನಿಖಿತಾರನ್ನು ಸಂಪರ್ಕಿಸಲಾಗಿದೆ.
ಇದನ್ನು ಸ್ವತಃ ನಿಖಿತಾರೇ ಖಚಿತಪಡಿಸಿದ್ದಾರೆ. ಚಿತ್ರದಲ್ಲಿನ ತನ್ನ ಪಾತ್ರದ ಬಗ್ಗೆ ತಿಳಿದುಕೊಳ್ಳುತ್ತಿರುವ ನಿಖಿತಾಗೆ, ಇದು ಕನಸಿನ ಪಾತ್ರವಂತೆ. ಇದೀಗ ನಿಖಿತಾಗೆ ದೊರಕಿರುವ ಬಹುದೊಡ್ಡ ಅದೃಷ್ಟ ದಿ ಡರ್ಟಿ ಪಿಕ್ಚರ್. "ಒಬ್ಬ ನಟಿಯಾದವಳಿಗೆ ಜೀವನದಲ್ಲಿ ಇನ್ನೊಮ್ಮೆ ಸಿಗಲಾರದ ಪಾತ್ರ" ಎಂದಿದ್ದಾರೆ ನಿಖಿತಾ.
ನಿಖಿತಾ ನಟನೆಗಿಂತ ವಿವಾದಗಳಿಂದಲೇ ಸುದ್ದಿಯಲ್ಲಿರುವುದು ಹೆಚ್ಚಾಗಿತ್ತು. ದರ್ಶನ್, ಓಂ ಪ್ರಕಾಶ್ ರಾವ್ ಮುಂತಾದವರ ಹೆಸರುಗಳ ಜೊತೆ ಸಿಕ್ಕಿಹಾಕಿಕೊಂಡಿದ್ದೇ ಹೆಚ್ಚು. ಆದರೆ ಈಗ ಕಾಲ ಬದಲಾಗುತ್ತಿದೆ. ಒಂದಾದ ನಂತರ ಇನ್ನೊಂದರಂತೆ ನಿಖಿತಾ ಒಳ್ಳೊಳ್ಳೆಯ ಅವಕಾಶಗಳನ್ನು ಪಡೆಯುತ್ತಿದ್ದಾರೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











