ಒರಟ ಪ್ರಶಾಂತ್ ತಂತ್ರಜ್ಞನಾಗುವ ಕನಸು ಚಿರಾಯು!
ಒರಟ ಪ್ರಶಾಂತ್ ಎಂದೇ ಖ್ಯಾತರಾಗಿರುವ ನಟ ಪ್ರಶಾಂತ್ ಈಗ ತೆರೆಯ ಮೇಲೆ ನಾಯಕನಾಗಿ ಅಭಿನಯಿಸುವುದರ ಜೊತೆಗೆ ತೆರೆಯ ಹಿಂದೆಯೂ ತನ್ನ ಕೈಚಳಕ ತೋರಿಸ ಹೊರಟಿದ್ದಾರೆ. ನಿರ್ದೇಶಕರಾಗುತ್ತಿದ್ದಾರೆ. ನಿರ್ಮಾಪಕರೂ ಆಗಿದ್ದಾರೆ. ವಿ.ವಿ.ಕ್ರಿಯೇಷನ್ಸ್ ಲಾಂಛನದಲ್ಲಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಚಿತ್ರ 'ಚಿರಾಯು'. ಐದಾರು ವರ್ಷಗಳ ಹಿಂದೆ ಸಿ.ಆರ್.ಮನೋಹರ್ ನಿರ್ಮಾಣದ 'ಒರಟ ಐ ಲವ್ ಯು' ಚಿತ್ರದ ನಾಯಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಪ್ರಶಾಂತ್ ತಾನೊಬ್ಬ ತಂತ್ರಜ್ಞನಾಗಬೇಕೆಂಬ 8 ವರ್ಷಗಳ ಬಯಕೆಯನ್ನು ಈಗ ಈಡೇರಿಸಿಕೊಳ್ಳುತ್ತಿದ್ದಾರೆ.
ಈಗಾಗಲ್ಲೇ ಚಿತ್ರಕಥೆ, ಸಂಭಾಷಣೆಗಳನ್ನು ಸಿದ್ದಪಡಿಸಿಕೊಂಡಿದ್ದು, ಏಪ್ರಿಲ್ ಕೊನೆಯವಾರದಲ್ಲಿ ಚಿತ್ರೀಕರಣ ಆರಂಭಿಸಲಿದ್ದಾರೆ. ತನ್ನ ಸಿನಿಮಾದ ಬಗ್ಗೆ ಉತ್ಸಾಹದಿಂದ ಹೇಳಿಕೊಳ್ಳುವ ಪ್ರಶಾಂತ್ ಬಹಳ ವಿಶೇಷವಾಗಿ ಸ್ಕ್ರಿಪ್ಟ್ ಸಿದ್ದಪಡಿಸಿಕೊಂಡಿದ್ದಾರಂತೆ. ಚಿತ್ರದಲ್ಲಿ ಡಬಲ್ ಓಪನಿಂಗ್, ಡಬಲ್ ಇಂಟರ್‌ವೆಲ್ ಇರುತ್ತದೆ. ಅಂದರೆ ಕಥೆ ಪ್ರಾರಂಭವಾಯ್ತು ಎಂದು ಕೊಂಡರೆ ಆಗಿರದೆ ನಂತರದ ದೃಶ್ಯಗಳಲ್ಲಿ ಪ್ರಾರಂಭವಾಗತ್ತೆ. ಇನ್ನೇನು ಮಧ್ಯಂತರ ಬಂತು ಎಂದು ಕೊಂಡರೆ ಮಗದೊಂದು ದೃಶ್ಯಕ್ಕೆ ಇಂಟರ್‌ವೆಲ್ ಇರುತ್ತಂತೆ. ನಾವು ಮುಂದೆ ಏನಾಗುತ್ತದೆ ಅಂದುಕೊಳ್ಳುತ್ತೇವೊ ಆಗುವುದಿಲ್ಲ ಎಂಬುದು ನಿರ್ದೇಶಕ ಪ್ರಶಾಂತ್ ವಿವರಣೆ.
ಹಾಗಂತ ಖಂಡಿತಾ ಇದೊಂದು ಪ್ರಯೋಗಾತ್ಮಕ ಆಗಿರದೆ ಪಕ್ಕಾ ಕಮರ್ಷಿಯಲ್ ಚಿತ್ರವಾಗಿರುತ್ತದೆ. ಮಾಸ್, ಕ್ಲಾಸ್, ಕಾಮಿಡಿ, ಸೆಂಟಿಮೆಂಟ್ ಮತ್ತು ಲವ್ ಹೀಗೆ ಎಲ್ಲಾ ಅಂಶಗಳೂ ಆಯಸ್ಕಾಂತದಂತೆ ಸೆಳೆಯಲಿದೆ ಎನ್ನುತಾರವರು. ಚಿತ್ರದಲ್ಲಿ ಎಲ್ಲಾ ಥರಹದ 6ಹಾಡುಗಳಿದ್ದು, ಜಯಂತ್ ಕಾಯ್ಕಿಣಿ, ಕೆ.ಕಲ್ಯಾಣ್ ಹಾಗೂ ಹೇಮಂತ್ ಸಾಹಿತ್ಯ ರಚಿಸಿದ್ದಾರೆ. ಈಗಾಗಲೇ ಹಾಡುಗಳ ಧ್ವನಿಮುದ್ರಣ ಕೂಡ ಪ್ರಾರಂಭವಾಗಿದೆ.
ಸುಮಾರು 50ದಿನಗಳ ಕಾಲ ಬೆಂಗಳೂರು, ಮಂಡ್ಯ ಹಾಗೂ ಕುಂದಾಪುರದ ಸುತ್ತಮುತ್ತ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಯಲಿದೆ. ಒರಟ ಚಿತ್ರದಿಂದ ಕನ್ನಡ ಚಿತ್ರರಂಗ ಪ್ರವೇಶಿಸಿದ್ದ ಮುಮೈತ್‌ಖಾನ್‌ರನ್ನು ಕರೆಸುವ ಪ್ಲಾನ್ ಇದೆಯಂತೆ. ಜಿ.ಆರ್.ಶಂಕರ್ ಸಂಗೀತ ಸಂಯೋಜನೆ, ಸಿನಿಟೆಕ್ ಸೂರಿ ಛಾಯಾಗ್ರಹಣ, ನಾಗೇಂದ್ರ ಅರಸ್ ಸಂಕಲನ, ಆನಂದ್, ಮಹೇಶ್, ಅರವಿಂದ್, ಹೈಟ್‌ಮಂಜು ನೃತ್ಯ ನಿರ್ದೇಶನ ಈ ಚಿತ್ರಕ್ಕಿದ್ದು ಹಿರಿಯ ನಟ ರಾಮಕೃಷ್ಣ, 'ಕೋಟೆ' ರವಿಶಂಕರ್, ನೀನಾಸಂ ಆಶ್ವಥ್, ತಾರಾಗಣದಲ್ಲಿದ್ದಾರೆ. ಸೂಕ್ತ ನಾಯಕಿಯ ಹುಡುಕಾಟ ನಡೆಯುತ್ತಿದೆ.


Click it and Unblock the Notifications











