»   » ಪ್ರಣಾಳಿಕೆಗಳಲ್ಲಿ ಕಾಣೆಯಾದ ಡಾ.ರಾಜ್ ಸ್ಮಾರಕ

ಪ್ರಣಾಳಿಕೆಗಳಲ್ಲಿ ಕಾಣೆಯಾದ ಡಾ.ರಾಜ್ ಸ್ಮಾರಕ

Subscribe to Filmibeat Kannada

ರಾಜ್ ಸಮಾಧಿಯನ್ನು ಸ್ಮಾರಕವನ್ನಾಗಿಸುವ ಕಾಯಕಕ್ಕೆ ಕಂಠೀರವ ಸ್ಟುಡಿಯೋ ಮನಸ್ಸು ಮಾಡಿರುವುದು ಅಣ್ಣಾವ್ರ ಅಭಿಮಾನಿಗಳಲ್ಲಿ ಅತೀವ ಸಂತೋಷ ಉಂಟು ಮಾಡಿದೆ. ಡಾ.ರಾಜ್ ಸಮಾಧಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಯತಿರಾಜ್ ವೈಯಕ್ತಿಯ ಕಾರಣಗಳಿಂದ ದೂರ ಸರಿದಿದ್ದಾರೆ. ಈಗ ಅಲ್ಲಿ ಹೇಳುವವರು ಕೇಳುವವರು ಯಾರೂ ಇಲ್ಲ. ಡಾ.ರಾಜ್ ಸಮಾಧಿ ಆಸುಪಾಸಿನಲ್ಲಿ ನೀತಿಬಾಹಿರ ಚಟುವಟಿಕೆಗಳು ಎಗ್ಗಿಲ್ಲದಂತೆ ಸಾಗುತ್ತಿವೆ. ಈ ಸಮಸ್ಯೆಗಳಿಗೆ ಪರಿಹಾರ ಸಿಗಬೇಕಾದರೆ, ಕರ್ನಾಟಕದಲ್ಲಿ ಅಸ್ತಿತ್ವಕ್ಕೆ ಬರುವ ಹೊಸ ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು. ಆದರೆ ಬಹುತೇಕ ಪಕ್ಷದ ಪ್ರಣಾಳಿಕೆಯಲ್ಲಿ ಡಾ.ರಾಜ್ ಸ್ಮಾರಕದ ಪ್ರಸ್ತಾಪವೇ ಇಲ್ಲ!

ಕಂಠೀರವ ಸ್ಟುಡಿಯೋ ನ ವ್ಯವಸ್ಥಾಪಕ ನಿರ್ದೇಶಕ ಎನ್.ಆರ್.ವಿಶುಕುಮಾರ್ ಮತ್ತೊಮ್ಮೆ ಸ್ಟುಡಿಯೋಗೆ ಲಾಭ ತಂದುಕೊಟ್ಟಿದ್ದಾರೆ. ಸರ್ಕಾರಿ ಒಡೆತನದ ಕಂಠೀರವ ಸ್ಟುಡಿಯೋ ಕಳೆದ ಆರ್ಥಿಕ ವರ್ಷಕ್ಕಿಂತ ಈ ಬಾರಿ 40 ಲಕ್ಷ ರು.ಗಳಷ್ಟು ಅಧಿಕ ಲಾಭ ಗಳಿಸಿದೆ. ಸ್ಟುಡಿಯೋ ಈಗ 40 ಕೋಟಿ ರು.ಗಳ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಹಾಗೆಯೇ ಡಾ.ರಾಜ್‌ಕುಮಾರ್ ಸಮಾಧಿಯನ್ನು ಒಂದು ಸುಂದರ ಸ್ಮಾರಕವಾಗಿ ರೂಪಿಸಲು ಪಣತೊಟ್ಟಿದೆ.

ದೇಶದಲ್ಲೇ ಮೊದಲು ಎನ್ನಬಹುದಾದ ತ್ರಿಡಿ ಚಿತ್ರಮಂದಿರವನ್ನು ಕಂಠೀರವ ಸ್ಟುಡಿಯೋದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ. ಹಾಗೆಯೇ ಮೂರು ಮಲ್ಟಿಫ್ಲೆಕ್ಸ್ ಚಿತ್ರಮಂದಿರಗಳನ್ನು ಕಂಠೀರವ ಸ್ಟುಡಿಯೋದಲ್ಲಿ ತೆರೆಯಲು ವಿಶುಕುಮಾರ್ ಆಸಕ್ತಿ ವಹಿಸಿದ್ದಾರೆ. ಇದೆಕ್ಕೆಲ್ಲಾ ಬರೋಬ್ಬರಿ 40 ರಿಂದ 45 ಕೋಟಿ ರು.ಗಳು ಖರ್ಚಾಗಲಿದೆ. ಈ ಯೋಜನೆ ಜಾರಿಯಾಗಬೇಕಾದರೆ ಕರ್ನಾಟಕದಲ್ಲಿ ಚುನಾವಣೆಗಳು ಮುಗೀಬೇಕು. ಜನಪ್ರಿಯ ಸರ್ಕಾರ ಅಸ್ತಿತ್ವಕ್ಕೆ ಬರಬೇಕು. ಆಗಷ್ಟೆ ಈ ಕನಸು ನನಸಾಗಲು ಸಾಧ್ಯ. 2.5 ಎಕರೆಯಷ್ಟು ವಿಸ್ತೀರ್ಣದಲ್ಲಿರುವ ಡಾ.ರಾಜ್‌ಕುಮಾರ್ ಸಮಾಧಿಗೆ ಮೊದಲ ಹಂತದ ವಿನ್ಯಾಸವನ್ನು ಖಾಸಗಿ ಒಡೆತನದ ಸ್ಟುಡಿಯೋ-69 ಈಗಾಗಲೇ ಸಿದ್ಧಪಡಿಸಿದೆ. ಆದರೆ ಸರ್ಕಾರ ಇಲ್ಲದ ಕಾರಣ ಕೈಕಟ್ಟಿ ಕೂರಬೇಕಾಗಿದೆ.

(ದಟ್ಸ್‌ಕನ್ನಡ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada