ಹಳ್ಳಿ ಹೈದರ ಪ್ಯಾಟೆಗೆ ತಂದ ಪಂಡಿತೆ ರಾಧಿಕಾ
ಕೃಷ್ಣ ಲವ್ ಸ್ಟೋರಿ ಯಶಸ್ಸಿನೊಂದಿಗೆ ಗಾನಾ ಬಜಾನಾ ಮಾಡಿಕೊಂಡು ಮೋಜಿನಲ್ಲಿ ತೊಡಗಿದ್ದ ಪಂಡಿತರ ಹುಡ್ಗಿ ರಾಧಿಕಾಗೆ ಹೀಗೊಂದು ಅವಕಾಶ ಹುಡುಕಿ ಬರುತ್ತದೆ ಎಂದು ಅನಿಸಿರಲಿಲ್ಲ.
ಆದರೆ, ಕಿರುತೆರೆ ಮಾರುಕಟ್ಟೆ ಹಾಗೂ ರಿಯಾಲಿಟಿ ಷೋಗಳ ಗ್ರಾಫ್ ಅನ್ನು ಚೆನ್ನಾಗಿ ಅರಿತಿರುವ ಸುವರ್ಣ ವಾಹಿನಿಯ ಅನೂಪ್ ಚಂದ್ರಶೇಖರ್, ಸುದೀಪ್ ಸ್ಥಾನಕ್ಕೆ ರಾಧಿಕಾರನ್ನು ತಂದಿದ್ದಾರೆ.
ಇತ್ತೀಚೆಗೆ ಬಹು ಜನಪ್ರಿಯತೆ ಗಳಿಸಿದ ರಿಯಾಲಿಟಿ ಷೋ 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ನ ಮುಂದುವರಿದ ಭಾಗದಲ್ಲಿ ಸುದೀಪ್ ಬದಲಿಗೆ ರಾಧಿಕಾ ನಿರೂಪಣೆ ಹಾಗೂ ನಿರ್ವಹಣೆ ಹೊಣೆ ಹೊರಲಿದ್ದಾರೆ.
ಆದರೆ, ಈ ಬಾರಿ ಇದರಲ್ಲಿ ಪ್ಯಾಟೆ ಹುಡ್ಗೀರ್ ಬದಲಿಗೆ ಹಳ್ಳಿ ಹೈದರಿರುತ್ತಾರೆ. 'ಹಳ್ಳಿ ಹೈದ ಪೇಟೆಗೆ ಬಂದ' ಎಂಬ ಹೆಸರಿನಲ್ಲಿ ಮೂಡಿಬರುವ ಈ ಕಾರ್ಯಕ್ರಮದಲ್ಲಿ ಹಳ್ಳಿ ಹೈದರನ್ನು ಪ್ರತಿ ವಾರ ಎಲಿಮಿನೇಟ್ ಮಾಡುವ ಅಧಿಕಾರ ರಾಧಿಕಾರಿಗಿರುತ್ತದೆ.
ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಕಾರ್ಯಕ್ರಮದಲ್ಲಿ ಅಕುಲ್ ಬಾಲಾಜಿ ನಿರೂಪಣೆ ಹೊಣೆ ಹೊತ್ತಿದ್ದರು. ಹತ್ತು ಜನ ಪೇಟೆಯ ಹುಡುಗಿಯರು ಇದರಲ್ಲಿ ಪಾಲ್ಗೊಂಡು ಹಳ್ಳಿ ಜೀವನದ ಸವಿ ಉಂಡಿದ್ದರು. ಪುರದಾಳು ಗ್ರಾಮದಲ್ಲಿ ನಡೆದಿದ್ದ ಈ ರಿಯಾಲಿಟಿ ಷೋನಲ್ಲಿ ಅಂತಿಮವಾಗಿ ನಯನಾ ಜಯಗಳಿಸಿ ಜನಮನ ಗೆದ್ದಿದ್ದರು.
ಈಗ ಎಂಟು ಜನ ಹಳ್ಳಿ ಹುಡುಗರು ಸಿಟಿ ಲೈಫ್ ನ ವೇಗಕ್ಕೆ ಹೊಂದಿಕೊಳ್ಳಲು ಹೆಣಗಾಡಲಿದ್ದಾರೆ. ಈ ಪರಿಕಲ್ಪನೆ ಕಿರುತೆರೆ ಇತಿಹಾಸದಲ್ಲೇ ಹೊಸತು ಎನ್ನುತ್ತಾರೆ ಅನೂಪ್.
ರಿಯಾಲಿಟಿ ಷೋಗೆ ಅಧಿನಾಯಕಿಯಾಗುವ ಅವಕಾಶ ಸಿಕ್ಕಿದ್ದಕ್ಕೆ ಸಕತ್ ಖುಷಿಯಾಗಿರುವ ರಾಧಿಕಾ, ನಾನು ಪ್ಯಾಟೆ ಹುಡ್ಗೀರ್ ಷೋ ನೋಡ್ತಾ ಇದ್ದೆ. ಸುದೀಪ್ ,ಅಕುಲ್ ಅದ್ಭುತವಾಗಿ ನಡೆಸಿಕೊಟ್ಟರು.
ಈಗ ನನಗೆ ಹೆಚ್ಚಿನ ಹೊಣೆ ಸಿಕ್ಕಿದ್ದು ಸಂತೋಷ ತಂದಿದೆ ಎಂದರು. ರಾಧಿಕಾರ ಸಂತೋಷಕ್ಕೂ ಕಾರಣವಿದೆ. ಈ ರಿಯಾಲಿಟಿ ಷೋ ನಡೆಯುತ್ತಿರುವುದು ಬೆಂಗಳೂರಿನಲ್ಲಿ ಅಲ್ಲ. ಸುಂದರ ತೀರಗಳ ನಾಡು ಗೋವಾದಲ್ಲಿ.
ಹಿರಿತೆರೆಯಲ್ಲಿ ಮೆರೆಯುವುದಕ್ಕೂ ಮುನ್ನ ನಂದ ಗೋಕುಲ ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟಿದ್ದ ರಾಧಿಕಾ ಪಂಡಿತ್, ರಿಯಾಲಿಟಿ ಷೋದಲ್ಲಿ ಕಾಣಿಸಿಕೊಳ್ಳುವುದರಿಂದ ಸಿನಿಮಾ ವೃತ್ತಿಗೇನೂ ತೊಂದರೆಯಿಲ್ಲ. ನನ್ನ ಅಭಿಮಾನಿಗಳು ಒಂದಿಷ್ಟು ಹೆಚ್ಚಾಗಬಹುದು ಅಷ್ಟೇ ಎಂದು ಮುಗುಳ್ನಗುತ್ತಾರೆ.


Click it and Unblock the Notifications











