»   » ಸತ್ಯ ಇನ್ ಲವ್ ಚಿತ್ರದ ಲವಲಿ ಲವಲಿ ಹಾಡಿದ್ದು ಯಾರು?

ಸತ್ಯ ಇನ್ ಲವ್ ಚಿತ್ರದ ಲವಲಿ ಲವಲಿ ಹಾಡಿದ್ದು ಯಾರು?

Subscribe to Filmibeat Kannada

ಸತ್ಯ ಇನ್ ಲವ್ ಚಿತ್ರದಲ್ಲಿ ಪಡ್ಡೆಹುಡುಗರನ್ನು ಹುಚ್ಚೆಬ್ಬಿಸುವಂತೆ ಮಾಡಿ ಚಿತ್ರಮಂದಿರದಾಚೆಯೂ ಬೆನ್ನತ್ತಿ ಬರುವಂತೆ ಮಾಡಿರುವ 'ನೋಡವಳು ಲವಲಿ ಲವಲಿ' ಗೀತೆಯನ್ನು ಮಾಂತ್ರಿಕ ಕಂಠದಲ್ಲಿ ಹಾಡಿದವರು ಯಾರು?

ಕನ್ನಡ ಚಿತ್ರರಂಗಕ್ಕೆ ಹಿಂದಿ ಚಿತ್ರರಂಗದಿಂದ ಇತ್ತೀಚೆಗೆ ಗಾಯಕರು ಸುನಾಮಿಯಂತೆ ನುಗ್ಗಿ ಬಂದಿದ್ದಾರೆ. ಅಲ್ಲಲ್ಲಿ ಕೆಲ ಕನ್ನಡ ಪದಗಳನ್ನು ಉಚ್ಚರಿಸುವಲ್ಲಿ ಎಡವುತ್ತಿದ್ದರೂ ಹೆಚ್ಚು ಕಡಿಮೆ ಪ್ರತಿ ಚಿತ್ರಗಳಲ್ಲಿಯೂ ಹಾಡುತ್ತಿದ್ದಾರೆ. ತಪ್ಪುತಪ್ಪಾಗಿ ಹಾಡುತ್ತಿರುವ ಇವರಿಗೆ ಚಾನ್ಸ್ ನೀಡಬಾರದೆಂದು ಕೂಗು ಎದ್ದಿದ್ದರೂ ಇಲ್ಲಿನ ನಿರ್ಮಾಪಕರು, ನಿರ್ದೇಶಕರು ಅವರ ಮಧುರ ಕಂಠದಿಂದಲೇ ಹಾಡಿಸುತ್ತಿದ್ದಾರೆ. ಸ್ಥಳೀಯ ಪ್ರತಿಭೆಗಳು ಮೂಲೆಗುಂಪಾಗುತ್ತಿದ್ದಾರೆ. ಹಿತ್ತಲ ಗಿಡ ಮದ್ದಲ್ಲ ಅಲ್ಲವೆ? ಈ ಖ್ಯಾತ ಹಿಂದಿ ಗಾಯಕರ ಕಂಠದ ಪರಿಚಯವಿಲ್ಲದವರಿಗೆ ಇವರು ಕನ್ನಡವರೋ ಹಿಂದಿಯವರೋ ಎನ್ನುವಷ್ಟರ ಮಟ್ಟಿಗೆ ಕನ್ನಡ ಚಿತ್ರಗೀತೆಗಳಲ್ಲಿ ಇವರು ಆವರಿಸಿಕೊಂಡಿದ್ದಾರೆ.

ಇಂಥ ಸಮಯದಲ್ಲಿ ಈ ಮೇಲಿನ ಚಿತ್ರ ಹಾಡಿದವರ್ಯಾರು? ಎಂದರೆ ಎಂಥವರೂ ಕಕ್ಕಾಬಿಕ್ಕಿಯಾಗುವುದು ಸಹಜ. ಕುಮಾರ್ ಸಾನು, ಸೋನು ನಿಗಂ, ಉದಿತ್ ನಾರಾಯಣ್, ಕುನಾಲ್ ಗಾಂಜಾವಾಲಾ, ಶಂಕರ್ ಮಹಾದೇವನ್, ಶಾನ್? ಸೂಪರ್ ಸ್ಟಾರ್ ಚಿತ್ರದ ಒಂದು ಗೀತೆಯನ್ನು ಕೇಳಿದವರಿಗೆ ಈತ ಫಾಸ್ಟ್ ಫಿಂಗರ್ಸ್ ಅದ್ನಾನ್ ಸಾಮಿ ಇದ್ದರೂ ಇರಬಹುದು ಎಂಬ ಸಂಶಯವೇನಾದರೂ ಬಂದರೆ ಬೇಸ್ತು ಬಿದ್ದೀರಿ ಜೋಕೆ!

ಹೌದು, ಹೆಚ್ಚು ಕಡಿಮೆ ಅವರದೇ ಕಂಠ, ಅದೇ ಏರಿಳಿತ, ಅದೇ ಸ್ಟೈಲ್‌ನಲ್ಲಿ ಹಾಡಿರುವುದು ಕನ್ನಡ ಚಿತ್ರಗೀತೆಗಳಿಗೆ ಪಾಶ್ಚಿಮಾತ್ಯ ಟಚ್ ನೀಡಿ ಹೊಸ ಟ್ರೆಂಡ್ ಸೆಟ್ ಮಾಡಿರುವ ನಮ್ಮವರೇ ಆದ ಗುರುಕಿರಣ್ ಎಂದರೆ ಆಶ್ಚರ್ಯವಾಗುವ ಪಾಳಿ ಈ ಬಾರಿ ನಿಮ್ಮದು. ಈ ಹಾಡು ಹಾಡಿದ್ದು ಯಾರು ಅಂದು ಕೇಳಿದಾಗ ಗುರು ಅಂದದ್ದು 'ಅದು ನಾನ್ ಸಾಮಿ'!

ಗುರುಕಿರಣ್ ಅದ್ನಾನ್ ಶೈಲಿಯಲ್ಲಿ ಹಾಡಿರುವುದಕ್ಕೆ ಒಂದು ಹಿನ್ನೆಲೆಯೂ ಇದೆ. ಈ ವಿಚಿತ್ರ ಸ್ಟೈಲಿನ ಹಾಡನ್ನು ಗುರುತು ಸಿಗಲಾರದಷ್ಟು ತೆಳ್ಳಗಾಗಿರುವ ಅದ್ನಾನ್ ಸಾಮಿ ಅವರೇ ಹಾಡಬೇಕೆಂದು ಗುರು ಬಯಸಿದ್ದರು. ಈಗ ತೆಳ್ಳಗಾಗಿದ್ದರೂ ಕೇಳಿದ್ದು ಮೊದಲು ತಾವಿದ್ದ ಸೈಜಿನಷ್ಟೇ ಹಣವನ್ನ. ಒಂದೂವರೆಲಕ್ಷ ರುಪಾಯಿ. ಹೌಹಾರಿದ ಗುರು ಈ ಹಾಡನ್ನು ಸಾಮಿ ಸ್ಟೈಲಿನಲ್ಲಿ ತಮ್ಮ ಧ್ವನಿಯಲ್ಲಿ ಹಾಡಬೇಕೆಂದು ಪಣತೊಟ್ಟು ಹಾಡೇಬಿಟ್ಟರು. ವಿ.ಮನೋಹರ್ ಬರೆದಿರುವ ಈ ಹಾಡು ಚಿತ್ರದ ಹೈಲೈಟುಗಳಲ್ಲಿ ಒಂದಾಗಿದೆ.

(ದಟ್ಸ್ ಕನ್ನಡ ಸಿನಿ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada