ತೆಲುಗು ಚಿತ್ರಕ್ಕೆ ಆಕ್ಷನ್, ಕಟ್ ಹೇಳಲಿದ್ದಾರೆ ಉಪೇಂದ್ರ
ತೆಲುಗಿನಲ್ಲಿ 'ಸೂಪರ್' ಚಿತ್ರಕ್ಕೆ ಉತ್ತಮ ಪ್ರಶಂಸೆ ವ್ಯಕ್ತವಾದ ಹಿನ್ನೆಲೆಯಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ತೆಲುಗಿನಲ್ಲೇ ಚಿತ್ರವೊಂದನ್ನು ಯಾಕೆ ನಿರ್ದೇಶಿಸಬಾರದು ಎಂಬ ಆಲೋಚನೆ ಬಂದಿದೆಯಂತೆ. ಈ ಹಿಂದೆ 'ಓಂ' ತೆಲುಗು ರೀಮೇಕ್ ಚಿತ್ರವನ್ನು ಉಪ್ಪಿ ನಿರ್ದೇಶಿಸಿದ್ದರು. ಈಗ ಅವರು ಟಾಲಿವುಡ್‌ನಲ್ಲಿ ಮತ್ತೊಂದು ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ಸ್ವತಃ ತಾವೇ ಅಭಿನಯಿಸಲು ಮುಂದಾಗಿದ್ದಾರೆ.
ಸದ್ಯಕ್ಕೆ ಚಿತ್ರಕತೆ ರಚನೆಯಲ್ಲಿದ್ದಾರೆ ಉಪೇಂದ್ರ ಬ್ಯುಸಿಯಾಗಿದ್ದಾರೆ ಎನ್ನುತ್ತವೆ ಮೂಲಗಳು. ಈ ಬಗ್ಗೆ ತೆಲುಗು ಮಾಧ್ಯಮಗಳಲ್ಲೂ ಪುಂಕಾನು ಪುಂಕ ವರದಿಗಳು ಬರುತ್ತಿದ್ದು ಉಪೇಂದ್ರ ಟಾಲಿವುಡ್ ಚಿತ್ರವೊಂದನ್ನು ನಿರ್ದೇಶಿಸುವುದು ಬಹುತೇಕ ಖಚಿತವಾಗಿದೆ. ಈ ಚಿತ್ರಕ್ಕೆ ಸಂಬಂಧಿಸಿದ ವಿವರಗಳು ಶೀಘ್ರದಲ್ಲೆ ಬಿಡುಗಡೆಯಾಗಲಿವೆ.
ಸದಾ ಹೊಸತನಕ್ಕೆ ಹೆಸರಾಗಿರುವ ಉಪೇಂದ್ರ ಈ ಬಾರಿಯೂ ಅಂಥಹದ್ದೇ ಕತೆಯಲ್ಲಿ ತೊಡಗಿದ್ದಾರೆ. ಈ ಚಿತ್ರವನ್ನು ಕನ್ನಡ ಹಾಗೂ ತೆಲುಗು ಎರಡು ಭಾಷೆಗಳಲ್ಲಿ ನಿರ್ದೇಶಿಸಲಿದ್ದಾರೆ ಎಂಬ ಮಾತುಗಳು ಉಪೇಂದ್ರ ಆಪ್ತ ವಲಯದಿಂದಲೂ ಕೇಳಿಬಂದಿವೆ. ಒಟ್ಟಿನಲ್ಲಿ ಉಪೇಂದ್ರ ನಟನೆಯಿಂದ ಕೊಂಚ ಬ್ರೇಕ್ ತೆಗೆದುಕೊಂಡು ಮತ್ತೆ ನಿರ್ದೇಶನಕ್ಕೆ ಮರಳಿರುವುದು ಅವರ ಅಭಿಮಾನಿಗಳ ಪಾಲಿಗೆ ಸಂತಸದ ವಿಚಾರ.


Click it and Unblock the Notifications











