»   » ದುನಿಯಾದ 'ಲೂಸ್ ಮಾದನ' ಬಗ್ಗೆ ಒಂದಿಷ್ಟು

ದುನಿಯಾದ 'ಲೂಸ್ ಮಾದನ' ಬಗ್ಗೆ ಒಂದಿಷ್ಟು

Subscribe to Filmibeat Kannada


ಹಳೆ ಮುಖಗಳಿಗಿಂತ ಹೊಸ ಮುಖಗಳನ್ನು ಹಾಕಿಕೊಂಡು ಸಿನಿಮಾ ಮಾಡಿದರೆ ಜನ ಬರ್ತಾರೆ ಅನ್ನುವ ಹೊಸ ಫಾರ್ಮುಲಾ ಕಂಡುಹಿಡಿದುಕೊಂಡಿದ್ದಾರೆ ಗಾಂಧಿನಗರದ ನಿರ್ಮಾಪಕರು. ಹಾಗಾಗಿ ಈಗ ಬರುತ್ತಿರುವ ಬಹುತೇಕ ಸಿನಿಮಾಗಳಲ್ಲಿ ಹೊಸಬರ ದಂಡೇ ಇದೆ. 'ದುನಿಯಾ' ಚಿತ್ರದ ಭೂಗತ ಪಾತಕಿಯಾಗಿ ಲೂಸ್ ಮಾದನ ಪಾತ್ರವನ್ನು ನೀವು ಮರೆತಿರಲ್ಲ. ಕಣ್ಣುಗಳಲ್ಲಿ ಭೂಗತ ಲೋಕದ ಕ್ರೌರ್ಯವನ್ನು ತುಂಬಿಕೊಂಡ ಲೂಸ್ ಮಾದನ ಪಾತ್ರ ಗಮನಸೆಳೆದಿತ್ತು. ಈಗ ಅದೇ 'ಲೂಸ್ ಮಾದ' ಯೋಗೀಶ್ ಯಾನೆ ಮಿಸ್ಟರ್ ಯೋಗಿ 'ನಂದ ಲವ್ಸ್ ನಂದಿತಾ" ಚಿತ್ರದ ನಾಯಕ.

ದಟ್ಸ್‌ಕನ್ನಡ ಸಿನಿ ತಂಡ

ಆಗ ತಾನೇ 'ದುನಿಯಾ' ಚಿತ್ರೀಕರಣ ಶುರುವಾಗಿತ್ತು. ಆ ಚಿತ್ರದಲ್ಲಿ ಲೂಸ್ ಮಾದನ ಪಾತ್ರ ಮಾಡಿರುವ ಹುಡುಗನನ್ನು ನೋಡಿ ''ಎಲ್ಲಿಂದ ಕರ್ಕೊಂಡು ಬಂದ್ರಪ್ಪಾ. ಸಖತ್ತಾಗಿ ಸೂಟ್ ಆಗ್ತಾನೆ ಈ ಪಾತ್ರಕ್ಕೆ'' ಎಂದು ಪ್ರತಿಕ್ರಿಯಿಸಿದ್ದರು ನಟ, ನಿರ್ದೇಶಕ ಪ್ರೇಮ್. 'ದುನಿಯಾ'ದಲ್ಲಿ ಲೂಸ್ ಮಾದನ ಪಾತ್ರ ಗಮನಸೆಳೆದದ್ದೇ ತಡ ಅಭಿಮಾನಿಗಳು ಹುಟ್ಟಿಕೊಂಡರು. ನಟ ಶಿವರಾಜ್ ಕುಮಾರ್ ಸಹಾ ಯಾರೀ ಹುಡುಗ ಚೆನ್ನಾಗಿ ಮಾಡಿದ್ದಾನೆ ಎಂದು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಪಾಟಿ ಪ್ರತಿಕ್ರಿಯೆಗಳು ಬರುತ್ತಿರುವುದನ್ನು ನೋಡಿ ಅವರ ತಂದೆ ಸಿದ್ಧರಾಜು(ದುನಿಯಾ ಚಿತ್ರದ ನಿರ್ಮಾಪಕರು) ಮಗನನ್ನು ಹಾಕಿಕೊಂಡು ಸಿನಿಮಾ ಮಾಡುವುದಾಗಿ ಪ್ರಕಟಿಸಿದರು. ನಿರ್ಮಾಪಕ ರಮೇಶ್ ಕಶ್ಯಪ್ ಕೂಡ ಯೋಗಿಯನ್ನು ಹೀರೋ ಮಾಡಲು ಮುಂದೆ ಬಂದರು. ಹಾಗಾಗಿ ಯೋಗೀಶ್ 'ನಂದ ಲವ್ಸ್ ನಂದಿತಾ' ಚಿತ್ರದ ಹೀರೋ ಆದ.

ಹೆಸರು ಯೋಗೀಶ್ ಅಲಿಯಾಸ್ ಲೂಸ್ ಮಾದ ಎಂದು. ವಿದ್ಯಾಭ್ಯಾಸ ಖಾಸಗಿಯಾಗಿ ದ್ವಿತೀಯ ಪಿಯುಸಿ ಮಾಡುತ್ತಿದ್ದಾನೆ. ಇಂಗ್ಲಿಷ್ ಮ್ಯೂಸಿಕ್ ಕೇಳೋದು, ವಾಲಿಬಾಲ್ ಆಡುವ ಹವ್ಯಾಸಗಳಿವೆ. ಸದ್ಯಕ್ಕೆ ಪಿ2 ಪ್ರೊಡಕ್ಷನ್‌ನ 'ಅಂಬಾರಿ', ನಿರ್ದೇಶಕ ಅರ್ಜುನ್, ವೇಣುಗೋಪಿಯವರ ಒಂದೊಂದು ಚಿತ್ರಗಳಲ್ಲಿ ನಟಿಸಬೇಕಾಗಿದೆ.

ಶಿವರಾಜ್ ಕುಮಾರ್‌ರ ಸ್ಟೈಲ್, ಬಾಡಿ ಲಾಂಗ್ವೇಜ್ ಅಂದ್ರೆ ನಂಗಿಷ್ಟ ಅನ್ನುವ ಯೋಗೀಶ್ ನಾಯಕಿಯರಲ್ಲಿ ಶ್ರೇಯ, ಜೆನಿಲಿಯಾ ಜೊತೆ ನಟಿಸುವ ಇಂಗಿತ ವ್ಯಕ್ತಪಡಿಸುತ್ತಾರೆ! ಪ್ರಸ್ತುತ ನಟಿಸುತ್ತಿರುವ 'ನಂದ ಲವ್ಸ್ ನಂದಿತಾ" ಚಿತ್ರಕ್ಕೆ ಬಿ.ಎನ್.ವಿಜಯ್ ಕುಮಾರ್ ನಿರ್ದೇಶನ, ಅಜಯ್‌ಕುಮಾರ್ ಕತೆ-ಚಿತ್ರಕತೆಯಿದೆ. ಎಮಿಲ್ ಎಂಬ ಹೊಸ ಸಂಗೀತ ನಿರ್ದೇಶಕ ಈ ಚಿತ್ರದ ಮುಖಾಂತರ ಪರಿಚಯವಾಗುತ್ತಿದ್ದಾರೆ.

ಜನ ನನ್ನನ್ನು ಲೂಸ್ ಮಾದ ಅಂತ ಗುರ್ತಿಸಿ, ಪ್ರೀತಿಯಿಂದ ಮಾತನಾಡಬೇಕಾದರೆ ತುಂಬಾ ಖುಷಿಯಾಗುತ್ತದೆ. ಸೂರಿ ಸಾರ್ ನನ್ನಲ್ಲಿ ವಿಶ್ವಾಸ ತುಂಬದೇ ಹೋಗಿದ್ದರೆ ನಾನು ದುನಿಯಾದಲ್ಲಿ ಆ ಪಾತ್ರ ಮಾಡಲು ಆಗುತ್ತಿರಲಿಲ್ಲ. ಎತ್ತರದ ನಿಲುವಿನ ಹದಿನೇಳರ ಹರೆಯದ ಯೋಗಿಶ್ ಹೀಗೆ ಹೇಳಿಕೊಂಡಾಗ ಆತನ ಕಣ್ಣಲ್ಲಿ ಮಿಂಚೊಂದು ಮಿನುಗಿತು.

Please Wait while comments are loading...