»   » ಪಂಡರಿಬಾಯಿಯಂಥ ವ್ಯಕ್ತೀನ ಕಂಡೇ ಇಲ್ಲ : ರಾಜ್‌

ಪಂಡರಿಬಾಯಿಯಂಥ ವ್ಯಕ್ತೀನ ಕಂಡೇ ಇಲ್ಲ : ರಾಜ್‌

Posted By:
Subscribe to Filmibeat Kannada

ಶರಣರ ಸಾವನ್ನು ಮರಣದಲ್ಲಿ ನೋಡು ಅನ್ನುವ ಹಾಗಿದೆ ಪಂಡರಿಬಾಯಿ ಅವರ ಸಾವು. ಗಂಧದ ಕೊರಡಿನಂತೆ ಅವರು ಸವೆದು ಹೋದರು. ಚಿತ್ರರಂಗದ ಇತಿಹಾಸದಲ್ಲೇ ಅಂಥ ಅಪರೂಪದ ವ್ಯಕ್ತಿತ್ವ ಇದ್ದವರನ್ನು ನಾನು ಕಂಡಿರಲಿಲ್ಲ ಎಂದು ವರನಟ ರಾಜ್‌ಕುಮಾರ್‌ ಗದ್ಗದಿತರಾದರು.

ನೆನಕೆ-
‘ಬೇಡರ ಕಣ್ಣಪ್ಪ ಚಿತ್ರದಲ್ಲಿ ನನ್ನ ಜೊತೆ ಅವರು ಮೊದಲ ಬಾರಿ ನಾಯಕಿಯಾಗಿ ನಟಿಸಿದರು. ಆ ದಿನಗಳಲ್ಲಿ ಅವಿದ್ಯಾವಂತನಾದ ನನಗೆ ಇಂಗ್ಲಿಷ್‌ ಅರ್ಥವಾಗುತ್ತಿರಲಿಲ್ಲ. ಛಾಯಾಗ್ರಾಹಕರು ಇಂಗ್ಲೀಷಲ್ಲಿ ಹೇಳುತ್ತಿದ್ದ ಮಾತುಗಳನ್ನು, ಪಂಡರಿಬಾಯಿ ನನ್ನ ಕಿವಿಯಲ್ಲಿ ಕನ್ನಡದಲ್ಲಿ ಹೇಳುತ್ತಿದ್ದರು. ನನಗೆ ಇಂಗ್ಲಿಷ್‌ ಬರೋದಿಲ್ಲ, ನಾನು ಅವಿದ್ಯಾವಂತ ಅನ್ನೋದು ಬೇರೆಯವರಿಗೆ ಗೊತ್ತಾಗಬಾರದು ಎಂಬ ಮನೋಭಾವ ಅವರಲ್ಲಿತ್ತು ’ ಎಂದು ರಾಜ್‌ ಸ್ಮೃತಿಪಟಲ ಕೆದಕಿದರು.

ನಾಯಕಿಯಾಗಿ, ತಾಯಿಯಾಗಿ, ಪೋಷಕ ನಟಿಯಾಗಿ, ಮೇಲಾಗಿ ಮಾರ್ಗದರ್ಶಕಿಯಾಗಿ ಚಿತ್ರರಂಗಕ್ಕೆ ಅವರು ಸಲ್ಲಿಸಿರುವ ಸೇವೆ ಅಪಾರ ಎಂದು ಅಣ್ಣಾವ್ರು ಪಂಡರಿಬಾಯಿಯವರ ಸಾಧನೆಯನ್ನು ಬಾಯಿತುಂಬಾ ಹೊಗಳಿದರು.

ಕೃಷ್ಣ- ಜಯಾ ಸಂತಾಪ : ತಮ್ಮ ನಟನಾ ಕೌಶಲ್ಯದಿಂದ ಅನೇಕ ಅಭಿಮಾನಿಗಳ ಮನಸೂರೆಗೊಂಡ ಮಹಾನ್‌ ನಟಿ ಪಂಡರಿಬಾಯಿ. ಭಾರತದ ಬಹು ಭಾಷಾ ನಾಯಕಿಯಾಗಿ ಹಾಗೂ ಮಾರ್ಗದರ್ಶಕಿಯಾಗಿ ಅವರ ಸೇವೆ ಅಪಾರ. ಚಿತ್ರೋದ್ಯಮಕ್ಕೆ ಅವರ ಸಾವು ತುಂಬಲಾರದ ನಷ್ಟ ಎಂದು ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಸಂತಾಪ ಸೂಚಿಸಿದರು.

ಖುದ್ದು ಸುಮಾರು 40 ಚಿತ್ರಗಳಲ್ಲಿ ಪಂಡರಿಬಾಯಿ ಅವರ ಜೊತೆ ನಟಿಸಿರುವ ಹಾಗೂ ಕೊನೆ ಕಾಲದಲ್ಲಿ ಅವರಿಗೆ ಸಹಾಯ ಹಸ್ತ ಚಾಚಿದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಪಂಡರಿಬಾಯಿ ಚಿತ್ರ ಲೋಕದ ಅನರ್ಘ್ಯ ರತ್ನ ಎಂದು ತಮ್ಮ ಸಂತಾಪ ಸಂದೇಶದಲ್ಲಿ ಹೇಳಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada